ADVERTISEMENT

ಬಗೆ ಬಗೆ ಅಡಿಕೆಪುಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 19:30 IST
Last Updated 31 ಜನವರಿ 2020, 19:30 IST
ಅಡಿಕೆ ಪುಡಿ
ಅಡಿಕೆ ಪುಡಿ   

ಸಿಹಿ ಅಡಿಕೆಪುಡಿ

ಬೇಕಾಗುವ ಸಾಮಗ್ರಿಗಳು: ಒಣಗಿಸಿದ ಅಡಿಕೆಪುಡಿ – 1/4 ಕೆ.ಜಿ, ಸಕ್ಕರೆ – 150 ಗ್ರಾಂ, ಲವಂಗ – 4, ಏಲಕ್ಕಿ – 2 ,ಕೆಂಪು ಗುಲಾಬಿ ಹೂ – 2 , ವೀಳ್ಯದೆಲೆ – 8 , ತುಪ್ಪ – 2 ಚಮಚ, ಚಿಟಿಕೆ ಸುಣ್ಣ, ಸೋಂಪು – 4 ಚಮಚ.

ತಯಾರಿಸುವ ವಿಧಾನ: ಅಡಿಕೆಪುಡಿಯನ್ನು ದಪ್ಪ ಬಾಣಲೆಗೆ ಹಾಕಿ ಒಂದು ಚಮಚ ತುಪ್ಪ ಸೇರಿಸಿ ಕಪ್ಪಾಗದಂತೆ ಹುರಿದು ಇಡಬೇಕು. ಲವಂಗ, ಏಲಕ್ಕಿ ಪುಡಿ ಮಾಡಿ ಸೇರಿಸಬೇಕು. ವೀಳ್ಯದೆಲೆ ಸಣ್ಣಗೆ ಕತ್ತರಿಸಿ ತುಪ್ಪದಲ್ಲಿ ಹುರಿದಿಟ್ಟು, ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಕುದಿಸಿ ಎಳೆ ಪಾಕ ಮಾಡಿ. ಇದಕ್ಕೆ ಗುಲಾಬಿ ಹೂವನ್ನು ಸಣ್ಣಗೆ ಕತ್ತರಿಸಿ ಹಾಕಬೇಕು. ನಂತರ ಈ ಪಾಕಕ್ಕೆ ಹುರಿದ ಅಡಿಕೆ ಪುಡಿ, ಸುಣ್ಣ, ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಿದರೆ,ಊಟದ ನಂತರ ತಿನ್ನುವ ಸಿಹಿ ಅಡಿಕೆಪುಡಿ ಸಿದ್ಧ.

ADVERTISEMENT

ಗುಲ್ಕನ್ ಅಡಿಕೆಪುಡಿ

‌‌‌ಬೇಕಾಗುವ ಸಾಮಗ್ರಿಗಳು: ಒಣಗಿಸಿದ ಅಡಿಕೆಪುಡಿ–1/4 ಕೆ.ಜಿ, ವೀಳ್ಯದೆಲೆ –5, ಲವಂಗ – 4 ,ಏಲಕ್ಕಿ – 2, ತುಪ್ಪ – 2 ಚಮಚ, ಗುಲ್ಕನ್ – 5 ಚಮಚ, ಚಿಟಿಕೆ ಸುಣ್ಣ, ಸಿಹಿಗುಂಬಳ ಬೀಜ – 50 ಗ್ರಾಂ, ಒಣಕೊಬ್ಬರಿ ಚೂರು – 1/2 ಕಪ್, ಸೋಂಪು – 4 ಚಮಚ.

ತಯಾರಿಸುವ ವಿಧಾನ: ಅಡಿಕೆಪುಡಿಯನ್ನು ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಹುರಿದು, ವೀಳ್ಯದೆಲೆ ಸಣ್ಣಗೆ ಹೆಚ್ಚಿ ತುಪ್ಪದಲ್ಲಿ ಹುರಿದುಕೊಳ್ಳಬೇಕು. ಲವಂಗ, ಏಲಕ್ಕಿ ಪುಡಿ ಮಾಡಿ ಗುಲ್ಕನ್ ಸೇರಿಸಿ, ಸುಣ್ಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಳಿದ ಸಾಮಗ್ರಿಗಳನ್ನು ಸೇರಿಸಿ ಕಲೆಸಿದರೆ ರುಚಿಯಾದ ಗುಲ್ಕನ್ ಅಡಿಕೆಪುಡಿ ರೆಡಿ.

ಮಸಾಲೆ ಅಡಿಕೆಪುಡಿ

ಬೇಕಾಗುವ ಸಾಮಗ್ರಿಗಳು: ಒಣಗಿಸಿದ ಅಡಿಕೆಪುಡಿ –1/4 ಕೆ.ಜಿ, ಲವಂಗ – 4, ಏಲಕ್ಕಿ – 2, ಚಿಟಿಕೆ ಸುಣ್ಣ, ಅಂಗಡಿಯಲ್ಲಿ ಸಿಗುವ ಮಿಕ್ಸ್ಚರ್‌ ಮಸಾಲ (ಇದರಲ್ಲಿ ಸಿಹಿಕಾಳು, ಸೋಂಪು, ಪತ್ತಾ, ಸೌತೆ ಬೀಜ, ಇತ್ಯಾದಿ ಇರುತ್ತದೆ.) 200 ಗ್ರಾಂ, ಸಕ್ಕರೆಪುಡಿ – 50 ಗ್ರಾಂ.

ತಯಾರಿಸುವ ವಿಧಾನ: ಮೊದಲಿನಂತೆ ಅಡಿಕೆಪುಡಿ ಹುರಿದು ಲವಂಗ, ಏಲಕ್ಕಿ, ಸಕ್ಕರೆ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ನಂತರ ಈ ರೆಡಿ ಮಸಾಲ ಮಿಶ್ರಣ ಮಾಡಿ ಡಬ್ಬದಲ್ಲಿ ತುಂಬಿ ಇಟ್ಟರೆ ತಿಂಗಳಾದರೂ ಕೆಡುವುದಿಲ್ಲ. ಈ ಪುಡಿಯನ್ನು ಎಲೆ ಮಧ್ಯೆ ಹಾಕಿ ಮಡಚಿ ಲವಂಗ ಚುಚ್ಚಿದರೆ ಪಾನ್ (ಸಿಹಿ ಕವಳ) ರೆಡಿಯಾಗುತ್ತದೆ.

ಅಡಿಕೆಯನ್ನು ಪುಡಿ ಮಾಡುವ ವಿಧಾನ

1/4 ಕೆ.ಜಿ ಕೆಂಪು ಅಡಿಕೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿಟ್ಟು, ಮಾರನೆ ದಿನ ನೀರು ಬಸಿದು, ಅಡಿಕೆಯನ್ನು ಕುಟ್ಟಿ ಒಡೆದು, ಮಿಕ್ಸರ್‌ಗೆ ಹಾಕಿ ಬೇಕಾದ ಅಳತೆಗೆ ಪುಡಿ ಮಾಡಬೇಕು. ಇದನ್ನು ಎರಡು ದಿನ ಒಣಗಿಸಿದರೆ ಒಣಗಿದ ಅಡಿಕೆಪುಡಿ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.