ಕೊಳುಕಟ್ಟ
ಗಣೇಶನ ನೈವೇದ್ಯದ ತಿಂಡಿಗಳಲ್ಲಿ ಸಿಹಿ ಹೂರಣ ತುಂಬಿದ ಅರ್ಧ ಚಂದ್ರಾಕಾರದ ಕಡುಬು ಮತ್ತು ತಲೆ ತಿರುಚಿದ ಚೆಂಡಿನಾಕಾರದ ಮೋದಕಕ್ಕೆ ಅಗ್ರಸ್ಥಾನ. ಗಣೇಶನಿಗೆ ಪ್ರಿಯವಾದ ಕಡುಬು ಕ್ರೈಸ್ತರ ಧಾರ್ಮಿಕ ಆಚರಣೆಯಲ್ಲೂ ಸೇರಿರುವುದು ಅಚ್ಚರಿ ಮತ್ತು ಆಸಕ್ತಿಕರ. ಯುರೋಪಿನ ಪೌರಾತ್ಯ ಸಂಪ್ರದಾಯದ ಕ್ರೈಸ್ತರು, ಗರಿಗಳ ಭಾನುವಾರದ ಹಿಂದಿನ ದಿನ ಶನಿವಾರವನ್ನು ಸಂತ ಲಾಸರನ ಶನಿವಾರವೆಂದು ಆಚರಿಸುತ್ತಾರೆ. ಅಂದು ಸಿಹಿ ಹೂರಣ ತುಂಬಿದ ‘ಲಾಸರಿಕ’ ಬನ್ನುಗಳನ್ನು ಸವಿಯುತ್ತಾರೆ. ಸಿರಿಯನ್ ಸಂಪ್ರದಾಯದ ಕೇರಳದ ಸಿರಿಯನ್ ಕ್ರೈಸ್ತರು, ಇಂಥ ಬನ್ನುಗಳ ಬದಲು ಸಿಹಿ ಕಡುಬಿನೊಂದಿಗೆ ‘ಲಾಸರನ ಶನಿವಾರ’ವನ್ನು ಆಚರಿಸುತ್ತಾರೆ!
ಕ್ರೈಸ್ತರಿಗೆ ಯೇಸುಕ್ರಿಸ್ತರ ಜನ್ಮೋತ್ಸವದ ಕ್ರಿಸ್ಮಸ್ ನಂತರದ ಎರಡನೇ ದೊಡ್ಡ ಹಬ್ಬ ಎಂದರೆ ಈಸ್ಟರ್. ಈ ಈಸ್ಟರ್ ಹಬ್ಬವು ಯೇಸು ಸಾವಿನ ಮೇಲೆ ಜಯ ಸಾಧಿಸಿ ಮೃತ್ಯುಂಜಯನಾದುದನ್ನು ಸಾರುವ ಸಂಭ್ರಮದ ಹಬ್ಬ. ಯೇಸು ಪುನರುತ್ಥಾನದ ಈ ಈಸ್ಟರ್ ಹಬ್ಬದ ಮೊದಲು ಬರುವ ವಿಭೂತಿ ಬುಧವಾರದಿಂದ ಗರಿಗಳ ಭಾನುವಾರದವರೆಗಿನ ಹಿಂದಿನ ನಲವತ್ತು ದಿನ ಕ್ರೈಸ್ತರು ತಪಸ್ಸು (ಲೆಂಟ್) ಕಾಲವನ್ನು ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬವಾದ ಮೇಲೆ ಸಾಧಾರಣ ಕಾಲದ ಕೆಲವು ವಾರಗಳ ನಂತರ ಬರುವ ಈ ತಪಸ್ಸು ಕಾಲದಲ್ಲಿ, ಯೇಸು ತನ್ನ ಜೀವಿತದ ಕೊನೆಯ ಅವಧಿಯಲ್ಲಿ ಪಟ್ಟಪಾಡು, ಶಿಲುಬೆ ಮರಣ ಮತ್ತು ಮರಣದ ಮೇಲೆ ಸಾಧಿಸಿದ ವಿಜಯದ ಧ್ಯಾನ ನಡೆಯುತ್ತದೆ. ಇದು ಯೇಸುವಿನ ಪುನರುತ್ಥಾನದ ಹಬ್ಬದ ಆಚರಣೆಯ ಆಧ್ಯಾತ್ಮಿಕ ಸಿದ್ಧತೆಯ ಕಾಲ. ಶುಭ ಶುಕ್ರವಾರ ಯೇಸುವಿನ ಶಿಲುಬೆ ಮರಣದ ನಂತರ ಸಮಾಧಿ ಮಾಡಲಾಗುತ್ತದೆ. ಮೂರನೇಯ ದಿನ ಯೇಸು ಸಮಾಧಿಯಿಂದ ಎದ್ದು ಬರುತ್ತಾರೆ. ಅದರ ಆಚರಣೆಯೇ ಈಸ್ಟರ್. ಶುಭ ಶುಕ್ರವಾರದ ವಾರವನ್ನು ಪವಿತ್ರ ವಾರವೆಂದು ಪರಿಗಣಿಸಲಾಗುತ್ತದೆ. ಆ ವಾರದ ಆರಂಭದ ಭಾನುವಾರವನ್ನು ಗರಿಗಳ ಭಾನುವಾರವೆನ್ನುತ್ತಾರೆ.
ರೋಮನ್ ಆಡಳಿತಗಾರರ ದಬ್ಬಾಳಿಕೆ, ಧಾರ್ಮಿಕ ಮುಖಂಡರ ಶೋಷಣೆಗಳಿಂದ ನಲುಗಿದ್ದ ಸಾಮಾನ್ಯ ಯಹೂದಿಗಳಿಗೆ, ‘ನಾವೆಲ್ಲಾ ಸೋದರರು, ದೇವರ ಮಕ್ಕಳು ಹಾಗೂ ತನ್ನಂತೆಯೇ ಪರರನ್ನು ಪ್ರೀತಿಸಬೇಕು’ ಎಂದು ಬೋಧಿಸಿದ ಯೇಸು ಅರಸನಂತೆ ಕಂಡಿದ್ದ. ಶಿಲುಬೆ ಮರಣದ ಮೊದಲು ಯೇಸು ಜೆರುಸಲೇಮಿಗೆ ಬಂದಾಗ ಖರ್ಜೂರದ ಮರದ ಗರಿಗಳನ್ನು ಹಿಡಿದುಕೊಂಡು ‘ಅರಸನಿಗೆ ಶುಭವಾಗಲಿ’ ಎಂದು ಜನ ಅವರನ್ನು ಆದರಿಸಿದ ಘಟನೆಯ ಸ್ಮರಣೆಯಲ್ಲಿ, ಗರಿಗಳ ಭಾನುವಾರ ದಂದು ತೆಂಗಿನಗರಿಗಳನ್ನು ಹಿಡಿದುಕೊಂಡು ಕ್ರೈಸ್ತರು ಚರ್ಚಿನ ಆವರಣದಲ್ಲಿ ಮೆರವಣಿಗೆ ಮಾಡುತ್ತಾರೆ.
ಜುಡಾಯದ ಬೆಥಾನಿಯ ಊರಿನ ಮರಿಯ ಮತ್ತು ಮಾರ್ತ ಹಾಗೂ ಲಾಸರ್ ಎಂಬುವವರು ಯೇಸುವಿಗೆ ಆಪ್ತರಾಗಿದ್ದರು. ಅಸ್ವಸ್ಥ ಲಾಸರ್ ಮೃತಪಟ್ಟಿದ್ದ. ಅವನನ್ನು ಸಮಾಧಿ ಮಾಡಲಾಗಿತ್ತು. ಸಮಾಧಿಯ ಹತ್ತಿರ ಬಂದ ಯೇಸು ದೇವರಿಗೆ ಪ್ರಾರ್ಥನೆ ಸಲ್ಲಿಸಿ ‘ಲಾಸರನೆ ಹೊರಗೆ ಬಾ’ ಎಂದು ಕೂಗಿದರು. ಆಗ ಆತ ಎದ್ದು ಬಂದಿದ್ದ. ಈ ಪ್ರಸಂಗದ ಸ್ಮರಣೆಯಲ್ಲಿ ಕೆಲವು ಕ್ರೈಸ್ತ ಪಂಗಡಗಳು, ಗರಿಗಳ ಭಾನುವಾರದ ಹಿಂದಿನ ಶನಿವಾರನ್ನು ‘ಲಾಸರನ ಶನಿವಾರ’ವೆಂದು ಆಚರಿಸುತ್ತವೆ. ಈ ಕ್ರೈಸ್ತರ ಪಂಚಾಂಗದಲ್ಲಿ ಧ್ಯಾನ, ಪ್ರಾರ್ಥನೆ, ಸಾತ್ವಿಕ ಜೀವನ ಮತ್ತು ಉಪವಾಸಗಳ ತಪಸ್ಸು ಕಾಲ ಹಾಗೂ ಪವಿತ್ರ ವಾರದ ಶೋಕಾಚರಣೆ ಮಧ್ಯೆ ಲಾಸರನ ಶನಿವಾರ ಮತ್ತು ಗರಿಗಳ ಭಾನುವಾರಗಳು ವಿಶೇಷತೆಯನ್ನು ಹೊಂದಿವೆ. ಆ ಸಮಯ ಯೇಸು ಅನುಭವಿಸಿದ ಯಾತನೆ, ಸಾವು ಮತ್ತು ಪುನರುತ್ಥಾನಗಳ ಮುನ್ನುಡಿಯಂತಿದೆ.
ಗ್ರೀಸ್ ಮತ್ತು ಸೈಪ್ರಸ್‌ಗಳಲ್ಲಿ ಸಮಾಧಿ ಬಟ್ಟೆ ತೊಟ್ಟ ಲಾಸರನನ್ನು ಹೋಲುವ ಸಿಹಿ ಬ್ರೆಡ್/ಬನ್ (ಲಾಸರಕಿಯಾ)ಗಳನ್ನು ಸವಿಯುತ್ತಾರೆ. ತಪಸ್ಸು ಕಾಲವಾದ್ದರಿಂದ ‘ಲಾಸರಕಿಯಾ’ ಬನ್ ತಯಾರಿಸಲು ಸಕ್ಕರೆ, ಆಲಿವ್ ಎಣ್ಣೆ, ಗೋದಿ ಹಿಟ್ಟು, ಅಕ್ರೂಟ ಕಾಯಿ, ಒಣದ್ರಾಕ್ಷಿ, ಲವಂಗ, ಏಲಕ್ಕಿ, ಚಾಕೋಲೇಟ್ ತುಂಡುಗಳು ಮತ್ತು ಚಕ್ಕೆ (ದಾಲ್ಚಿನ್ನಿ) ಪುಡಿಬೇಕು. ಗೋದಿ ಹಿಟ್ಟಿನ ಕಣಕವನ್ನು ಅಂಡಾಕಾರದಲ್ಲಿ ತಟ್ಟಿ, ಮಧ್ಯೆ ಚಾಕೋಲೇಟ್ ತುಂಡುಗಳು, ಒಣದ್ರಾಕ್ಷಿ, ಸಕ್ಕರೆ, ಏಲಕ್ಕಿ, ಚಕ್ಕೆ ಮತ್ತು ಅಕ್ರೋಟ ಕಾಯಿ ಪುಡಿಗಳ ಮಿಶ್ರಣವನ್ನು ತುಂಬಿ ಮುಚ್ಚುತ್ತಾರೆ. ನಂತರ ಕೈ ಕಟ್ಟಿದ ಆಕಾರದಲ್ಲಿ ಎರಡೂ ಬದಿಗೆ ಕಣಕದ ತುಂಡುಗಳನ್ನು ಅಂಟಿಸುತ್ತಾರೆ. ಕಣ್ಣು ಇರಬೇಕಾದ ಜಾಗದಲ್ಲಿ ಎರಡು ಲವಂಗಗಳನ್ನು ಅಂಟಿಸುತ್ತಾರೆ. ಓವನ್‌ನಲ್ಲಿ ಬೇಯಿಸಿದಾಗ ‘ಲಾಸರಕಿಯಾ’ ಸವಿಯಲು ಸಿದ್ಧವಾಗುತ್ತದೆ. ಅದೊಂದು ಬಗೆಯಲ್ಲಿ ಆಧ್ಯಾತ್ಮಿಕ ಸಾಂತ್ವನ ನೀಡುವ ತಿಂಡಿ ಎಂದು ಪರಿಗಣಿಸಲಾಗುತ್ತದೆ.
ಗ್ರೀಸ್ ಕ್ರೈಸ್ತರಂತೆ ಕೇರಳದ ಪೌರಾತ್ಯ ಸಿರಿಯನ್ ಸಂಪ್ರದಾಯದ ಸಂತ ತೋಮಾಸ್ ಕ್ರೈಸ್ತರು, ಲಾಸರಸ್ ಶನಿವಾರದಂದು ಅಕ್ಕಿ ಹಿಟ್ಟಿನ ಕಣಕದಲ್ಲಿ ಬೆಲ್ಲ ತೆಂಗಿನಕಾಯಿ ತುರಿಯನ್ನು ಬಳಸಿ ಕಡುಬನ್ನು ಮಾಡಿಕೊಂಡು ತಿನ್ನುತ್ತಾರೆ. ಅದನ್ನು ‘ಲಾಸರಕಿಯಾ’ ಎಂದು ಕರೆಯದೇ ಮಲಯಾಳ ಭಾಷೆಯಲ್ಲಿ ಅದನ್ನು ಕೊಳುಕಟ್ಟ (ಕಡುಬು) ಎಂದು ಹೆಸರಿಸುತ್ತಾರೆ. ಹೀಗಾಗಿ ಲಾಸರಸ್ ಶನಿವಾರವನ್ನು ‘ಕೊಳುಕಟ್ಟ ಶನಿವಾರ’ ಎಂದು ಕರೆಯುತ್ತಾರೆ.
ಮೊದಲು ಅಕ್ಕಿಹಿಟ್ಟಿಗೆ ನೀರು ಹಾಕಿ ನಾದಿ, ಕಣಕವನ್ನು ಸಿದ್ಧಪಡಿಸಲಾಗುತ್ತದೆ. ಕಣಕವನ್ನು ವೃತಾಕಾರದಲ್ಲಿ ತಟ್ಟಿ, ನಡುವೆ ಬೆಲ್ಲದ ಪಾಕದಲ್ಲಿ ತುರಿದ ಕೊಬ್ಬರಿಯನ್ನು ಹಾಕಿ ತಯಾರಿಸಿದ ಹೂರಣವನ್ನು ತುಂಬಿ ಮುಚ್ಚುತ್ತಾರೆ. ಅದು ಉಂಡೆಯ ಆಕಾರ ಪಡೆಯುತ್ತದೆ. ಹಬೆಯಲ್ಲಿ ಬೇಯಿಸಿದ ಈ ಕಡುಬು, ಕೇರಳದ ಸಿರಿಯನ್ ಕ್ರೈಸ್ತರಿಗೆ ಆಧ್ಯಾತ್ಮಿಕ ಸಾಂತ್ವನ ನೀಡುವ ತಿಂಡಿಯ ಸ್ವರೂಪ ಪಡೆದಿದೆ.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.