ADVERTISEMENT

ಸವಿಯಿರಿ ಈರುಳ್ಳಿ ಕೋಡು ದೋಸೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 16:05 IST
Last Updated 20 ಫೆಬ್ರುವರಿ 2019, 16:05 IST
   

ಈರುಳ್ಳಿ ಕೋಡು, ಈರುಳ್ಳಿ ದಂಟು, ಈರುಳ್ಳಿ ಹೂವು, ಸ್ಪ್ರಿಂಗ್‌ ಆನಿಯನ್‌... ಯಾವುದೇ ಹೆಸರಿನಿಂದ ಇದನ್ನು ಕರೆಯಿರಿ. ಯಾವುದೇ ರೂಪದಲ್ಲಿ ತಿಂದರೂ ಅದರ ಸವಿ ಮತ್ತು ಶಕ್ತಿಗೆ ತಲೆದೂಗುವಂತಾಗುತ್ತದೆ.

ಗೃಹಿಣಿಯರು, ಉದ್ಯೋಗಸ್ಥ ತಾಯಂದಿರು ಇಡ್ಲಿ ಮತ್ತು ದೋಸೆಗೆ ಆಗುವಂತೆ ಹದವಾದ ಹಿಟ್ಟು ಸಿದ್ಧಪಡಿಸಿ ಫ್ರಿಜ್‌ನಲ್ಲಿಟ್ಟುಕೊಳ್ಳುವುದು ಸಾಮಾನ್ಯ. ಒಂದೇ ಬಗೆಯ ತಿಂಡಿ ತಿನ್ನಲು ಮನಸ್ಸು ಮುಷ್ಕರ ಹೂಡುತ್ತದೆ. ಸೊಪ್ಪು ತಿನ್ನುವುದು ಮಕ್ಕಳಿಗೆ ಬಿಲ್‌ಕುಲ್‌ ಇಷ್ಟವಿಲ್ಲವೆನ್ನಿ. ಶಾ‌ಲೆಗೆ ಕಟ್ಟಿಕೊಟ್ಟರೆ ಯಥಾಪ್ರಕಾರ ವಾಪಸ್‌ ಬರುತ್ತದೆ. ಅದಕ್ಕೆ ಅಮ್ಮಂದಿರು ಹೊಸ ವರಸೆಗಳನ್ನು ಕಂಡುಕೊಳ್ಳುವುದೂ ಸಾಮಾನ್ಯ.

ಈರುಳ್ಳಿ ದಂಟು ಅಥವಾ ಸ್ಪ್ರಿಂಗ್‌ ಆನಿಯನ್‌ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಸೊಪ್ಪು. ಇದನ್ನು ದೋಸೆ ರೂಪದಲ್ಲಿ ಕೊಟ್ಟರೆ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಒಂದು ಕಟ್ಟು ಸ್ಪ್ರಿಂಗ್‌ ಆನಿಯನ್‌ ಕತ್ತರಿಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ.

ADVERTISEMENT

ಈರುಳ್ಳಿ, ಹಸಿ ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 4 ಎಸಳು ಕರಿಬೇವು, 2 ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿ ರುಬ್ಬಿ ದೋಸೆ/ಇಡ್ಲಿ ಹಿಟ್ಟಿಗೆ ಬೆರೆಸಿ. ಬೇಕೆನಿಸಿದರೆ ಕರಿಬೇವು ಸೊಪ್ಪು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಮಸಾಲೆ ದೋಸೆಯಷ್ಟು ತೆಳುವಾಗಿ ದೋಸೆ ಹುಯ್ದು ಗರಿಮುರಿಯಾಗುವಷ್ಟು ಬೇಯಿಸಿ ಬಿಸಿ ಬಿಸಿಯಾಗಿ ತಿನ್ನಲು ಕೊಡಿ. ಕಾಯಿ ಚಟ್ನಿ ಇದಕ್ಕೆ ಒಳ್ಳೆಯ ಕಾಂಬಿನೇಷನ್‌.

ಇದೇ ದೋಸೆಯನ್ನು ಊಟದ ಡಬ್ಬಿಗೆ ಹಾಕಿಕೊಡುವುದಾದರೆ ಸ್ವಲ್ಪ ದಪ್ಪಗೆ ಹುಯ್ಯಿರಿ. ಸ್ವಲ್ಪ ಬೇಯುತ್ತಿರುವಾಗ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಹನಿಸಿ. ಮಕ್ಕಳಿಗಾದರೆ ಪಿಜ್ಜಾ ಮಾದರಿಯಲ್ಲಿ ಕತ್ತರಿಸಿ ಡಬ್ಬಿಗೆ ಹಾಕಿಕೊಡಿ.

ಸ್ಪ್ರಿಂಗ್‌ ಆನಿಯನ್‌ ಪಿಜ್ಜಾ ದೋಸೆ!
ಅದೇ ಹಿಟ್ಟು;
ಸಾಮಗ್ರಿ ಮತ್ತು ದೋಸೆಯ ರೂಪ ಸ್ವಲ್ಪ ಬದಲಾಯಿಸಿಕೊಳ್ಳಿ. ‘ಪಿಜ್ಜಾ ದೋಸೆ’ ಎಂದು ಹೇಳಿ ಕೊಡಿ. ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತಾರೆ!

ಕ್ಯಾರೆಟ್‌, ಕ್ಯಾಪ್ಸಿಕಂ, ಮೂಲಂಗಿ, ಸ್ಪ್ರಿಂಗ್‌ ಆನಿಯನ್‌, ಟೊಮೆಟೊ, ಈರುಳ್ಳಿಯನ್ನು ಪಾರದರ್ಶಕದಷ್ಟು ತೆಳುವಾಗಿ ಕತ್ತರಿಸಿ ದೋಸೆ ಹಿಟ್ಟಿನೊಂದಿಗೆ ಕಲಸಿ. ಹಿಟ್ಟು ದಪ್ಪವಾದರೆ ದೋಸೆ ಗಡುಸಾಗುತ್ತದೆ. ಮೇಲೆ ಹೇಳಿದ ಸಾದಾ ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗಿದ್ದರೆ ಮೆದುವಾಗಿರುತ್ತದೆ.

ದೋಸೆ ಹುಯ್ದು ಒಂದು ನಿಮಿಷ ಮುಚ್ಚಳ ಮುಚ್ಚಿ. ನಂತರ ದೋಸೆ ಮೇಲೆ ಬೆಣ್ಣೆ ಅಥವಾ ತುಪ್ಪ ಹನಿಸಿ ಮುಚ್ಚಿ ಹದವಾದ ಉರಿಯಲ್ಲಿ ಬೇಯಲು ಬಿಡಿ. ಎರಡೂ ಕಡೆ ಬೇಯಿಸಿ. ಪಿಜ್ಜಾ ದೋಸೆ ಸಿದ್ಧ. ಇದು ಎಲ್ಲಾ ಬಗೆಯ ಸ್ವಾದಗಳನ್ನು ಹೊಂದಿರುವ ಕಾರಣ ಚಟ್ನಿ ಬೇಕೆನಿಸುವುದಿಲ್ಲ. ಚಟ್ನಿ ಅತ್ಯವಶ್ಯವೆನಿಸಿದರೆ ಪುದೀನಾ ಅಥವಾ ಕಾಯಿ ಚಟ್ನಿ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.