ADVERTISEMENT

ರಸಾಸ್ವಾದ: ಬಾಣಂತಿಯರಿಗೆ ಪಥ್ಯಾಹಾರ 

ವೇದಾವತಿ ಎಚ್.ಎಸ್.
Published 3 ಜನವರಿ 2025, 23:38 IST
Last Updated 3 ಜನವರಿ 2025, 23:38 IST
<div class="paragraphs"><p>ಬೆಳ್ಳುಳ್ಳಿ ಚಟ್ನಿ</p></div>

ಬೆಳ್ಳುಳ್ಳಿ ಚಟ್ನಿ

   

 ಮಗು ಹುಟ್ಟಿದ ಬಳಿಕ ಬಾಣಂತಿಯರ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತದೆ. ದೇಹವು ಪುನಃ ಮೊದಲಿನಂತೆ ಆಗಲು ಪಥ್ಯಾಹಾರವನ್ನು ಸೇವಿಸಬೇಕು. ಮಗುವಿಗೆ ಹಾಲುಣಿಸುವಾಗ ಬಾಣಂತಿಯರಿಗೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ದೇಹವನ್ನು ಸಮತೋಲನವಾಗಿ ಕಾಪಾಡಲು ಹಿಂದಿನ ತಲೆಮಾರಿನ ಅಡುಗೆಗಳು ಇಲ್ಲಿವೆ. ಇಲ್ಲಿರುವ ಅಡುಗೆಗಳನ್ನು ಬಾಣಂತಿಯರು ಮಾತ್ರವಲ್ಲದೇ ಮನೆಮಂದಿಯು ಸವಿಯಬಹುದು. ಎಲ್ಲರ ಆರೋಗ್ಯಕ್ಕೂ ಒಳ್ಳೆಯ ರೆಸಿಪಿ ಇವಾಗಿದೆ.

 ಬೆಳ್ಳುಳ್ಳಿ ಚಟ್ನಿ


ಬೇಕಾಗುವ ಸಾಮಗ್ರಿಗಳು:

ADVERTISEMENT


ಎಳ್ಳು 1/2 ಕಪ್, ತುಪ್ಪ 4 ಟೀ ಚಮಚ, ಬೆಳ್ಳುಳ್ಳಿ 25 ರಿಂದ 30 ಎಸೆಳುಗಳು, ಒಣಮೆಣಸಿನಕಾಯಿ 8 ಅಥವಾ ಕಾಳುಮೆಣಸನ್ನು ಹಾಕುತ್ತಿದ್ದರೆ 2 ಟೇಬಲ್ ಚಮಚ, ಒಣಕೊಬ್ಬರಿ 1/2 ಕಪ್, ಕಲ್ಲುಪ್ಪು ರುಚಿಗೆ ತಕ್ಕಷ್ಟು, ಬೆಲ್ಲ 1 ಟೇಬಲ್ ಚಮಚ, ಕಾದಾರಿದ ನೀರು 1 ಕಪ್.


ತಯಾರಿಸುವ ವಿಧಾನ: ಬಾಣಲೆಗೆ ಎಳ್ಳನ್ನು ಹಾಕಿ ಸಿಡಿಯುವರೆಗೆ ಹುರಿದು ತಟ್ಟೆಯಲ್ಲಿ ತೆಗೆದಿಡಿ. ಬಳಿಕ ಬಾಣಲೆಗೆ 2 ಟೀ ಚಮಚ ತುಪ್ಪವನ್ನು ಹಾಕಿ ಬೆಳ್ಳುಳ್ಳಿಯನ್ನು ಸೇರಿಸಿ ಬಣ್ಣ ಬದಲಾಗುವರೆಗೆ ಹುರಿಯಿರಿ. ನಂತರ ಬೆಳ್ಳುಳ್ಳಿ ಜೊತೆಗೆ ಒಣಮೆಣಸಿಕಾಯಿಯನ್ನು ಸೇರಿಸಿ ಗರಿ ಗರಿಯಾಗುವರೆಗೆ ಹುರಿದು ಒಲೆಯನ್ನು ಆರಿಸಿ. ಒಣಮೆಣಸಿನಕಾಯಿ ಬದಲು ಕಾಳುಮೆಣಸನ್ನು ಹಾಕುತ್ತಿದ್ದರೆ ಅದು ಸಿಡಿಯುವರೆಗೆ ಹುರಿಯಿರಿ.

ಯಾವುದರು ಒಂದನ್ನು ಉಪಯೋಗಿಸಿ. ಹುರಿದ ಪದಾರ್ಥಗಳ ಜೊತೆಗೆ ಒಣಕೊಬ್ಬರಿ, ಉಪ್ಪು, ಹುರಿದ ಎಳ್ಳನ್ನು ಸೇರಿಸಿ ಮಿಶ್ರಣ ಮಾಡಿ. ಮಿಕ್ಸಿ ಜಾರಿಗೆ ಹುರಿದ ಪದಾರ್ಥ, ಬೆಲ್ಲ ಮತ್ತು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕೈಬಾಣಲೆಗೆ 2 ಟೀ ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಐದಾರು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಹುರಿಯಿರಿ. ಈ ಒಗ್ಗರಣೆಯನ್ನು ತಯಾರಿಸಿಕೊಂಡ ಚಟ್ನಿಗೆ ಸೇರಿಸಿ ಮಿಶ್ರಣ ಮಾಡಿ. ಬಳಿಕ ಅನ್ನದೊಂದಿಗೆ, ಚಪಾತಿ ಅಥವಾ ನಿಮಗೆ ಇಷ್ಟವಾದ ಪದಾರ್ಥದೊಂದಿಗೆ ಸವಿಯಿರಿ.

ಈ ಚಟ್ನಿಯನ್ನು ಬಾಣಂತಿಯರು 20 ದಿನಗಳ ಬಳಿಕ ಉಪಯೋಗಿಸಬೇಕು. ಈ ಚಟ್ನಿಯನ್ನು ಒಮ್ಮೆ ತಯಾರಿಸಿದರೆ ಎರಡರಿಂದ ಮೂರು ದಿನಗಳವರೆಗೆ ಉಪಯೋಗಿಸಬಹುದು.

ಬಾಳೆಹೂವಿನ ಗೊಜ್ಜು

ಬಾಳೆಹೂವಿನ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಬಾಳೆ ಹೂವು ಮಧ್ಯಮ ಗಾತ್ರದ್ದು 1 ಒಣ ಕೊಬ್ಬರಿತುರಿ 1 ಕಪ್ ಎಳ್ಳು 5 ಟೀ ಚಮಚ ಧನಿಯಾ 3 ಟೀ ಚಮಚ ಜೀರಿಗೆ 2 ಟೀ ಚಮಚ ಮಂತ್ಯೆ 1 ಟೀ ಚಮಚ ಸಾಸಿವೆ 1 ಟೀ ಚಮಚ ಕಾಳುಮೆಣಸು 1/2 ಟೀ ಚಮಚ ಒಣಮೆಣಸಿನ ಕಾಯಿ 8 ರಿಂದ 10 ತುಪ್ಪ ಸ್ವಲ್ಪ ಹುಣಸೆಹಣ್ಣು ನಿಂಬೆ ಹಣ್ಣಿನ ಗಾತ್ರದಷ್ಟು ಉಪ್ಪು ರುಚಿಗೆ ತಕ್ಕಷ್ಟುಬೆಲ್ಲ 2 ಟೀ ಚಮಚ ಬೆಳ್ಳುಳ್ಳಿ 10 ಎಸೆಳು

ತಯಾರಿಸುವ ವಿಧಾನ: ಮೊದಲು ಬಾಳೆ ಹೂವಿನ ಹೊರಗಿನ ಪದರುಗಳನ್ನು ತೆಗೆದು ಒಳ ಭಾಗದ ಚಿಕ್ಕ ಬಿಳಿಯ ಹೂವು ಮಾತ್ರ ಉಪಯೋಗಿಸಿ. ಅದರಲ್ಲಿ ಜಾಸ್ತಿ ಅಂಟಿನ ಅಂಶ ಇರುವುದಿಲ್ಲ. ಬಳಿಕ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ 2 ಟೀ ಚಮಚ ತುಪ್ಪ ಹಾಕಿ ಹೆಚ್ಚಿಕೊಂಡ ಬಾಳೆಹೂವುನ್ನು ಬಣ್ಣ ಬದಲಾಗುವರೆಗೆ ಹುರಿಯಿರಿ. ಇನ್ನೊಂದು ಬಾಣಲೆಯಲ್ಲಿ 1 ಟೀ ಚಮಚ ತುಪ್ಪವನ್ನು ಹಾಕಿ ಸಾಸಿವೆ ಜೀರಿಗೆ ಮೆಂತ್ಯೆ ಧನಿಯಾ ಎಳ್ಳು ಕಾಳುಮೆಣಸು ಒಣ ಮೆಣಸಿನಕಾಯಿ ಕೆಂಬಣ್ಣ ಬರುವರೆಗೆ ಹುರಿದುಕೊಳ್ಳಿ.

ಮಿಕ್ಸಿ ಜಾರಿಗೆ ಹುರಿದ ಪದಾರ್ಥ ಒಣಕೊಬ್ಬರಿ ತುರಿ ಮತ್ತು ಹುರಿದ ಬಾಳೆ ಹೂವು ಮತ್ತು ಒಂದು ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ 2 ಟೀ ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಬೆಳ್ಳುಳ್ಳಿಯನ್ನು ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಬಳಿಕ ರುಬ್ಬಿಕೊಂಡ ಮಿಶ್ರಣ ಎಷ್ಟು ತೆಳ್ಳಗೆ ಬೇಕು ಅಷ್ಟು ನೀರು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಿ ಒಲೆಯಿಂದ ಇಳಿಸಿ. ಗೊಜ್ಜನ್ನು ಚೆನ್ನಾಗಿ ಕುದಿಸಿಟ್ಟರೆ ಒಂದು ವಾರ ಉಪಯೋಗಿಸಬಹುದು.

ಈ ಬಾಳೆಹೂವಿನ ಗೊಜ್ಜನ್ನು ಬಾಣಂತಿಯರು 20 ದಿನಗಳ ನಂತರ ಉಪಯೋಗಿಸಬಹುದು. ಆರೋಗ್ಯಕರವಾದ ಮತ್ತು ರುಚಿಕರವಾದ ಗೊಜ್ಜು ಅನ್ನ ಚಪಾತಿ ರಾಗಿ ಮುದ್ದೆ ಜೊತೆಗೆ ಸವಿಯಲು ರುಚಿಯಾಗಿರುತ್ತದೆ.

ಹೇರಳೆಕಾಯಿ ಒಣ ಉಪ್ಪಿನಕಾಯಿ

ಹೇರಳೆಕಾಯಿ ಒಣ ಉಪ್ಪಿನಕಾಯಿ

ಜ್ವರ ಅಜೀರ್ಣ ಹೊಟ್ಟೆನೋವು ಕೆಮ್ಮು ಶೀತ ಗಂಟಲು ನೋವು ಮುಂತಾದ ರೋಗಗಳಿಗೆ ಮನೆಮದ್ದಾಗಿ ತುಂಬಾ ಉಪಯೋಗವಾಗುತ್ತದೆ. ಬಾಣಂತಿಯರಿಗೆ ಹತ್ತು ದಿನದ ನಂತರ ಇದನ್ನು ಕೊಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು: ಹೇರಳೆಕಾಯಿ 4 ಕಲ್ಲುಪ್ಪು 1/2 ಕಪ್ ಕಾಳುಮೆಣಸು 1/2 ಕಪ್

ತಯಾರಿಸುವ ವಿಧಾನ: ಹೇರಳೆಕಾಯಿಯ ಒಳಗಿರುವ ಬೀಜಗಳನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಕಲ್ಲುಪ್ಪು ಹಾಕಿ 2 ನಿಮಿಷ ಹುರಿಯಿರಿ. ಬಳಿಕ ಕಾಳುಮೆಣಸು ಹಾಕಿ 3 ರಿಂದ 4 ನಿಮಿಷ ಹುರಿಯಿರಿ. ಆರಿದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಹೆಚ್ಚಿಕೊಂಡ ಹೇರಳೆಕಾಯಿ ಹೋಳುಗಳಿಗೆ ಹಾಕಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಐದು ದಿನ ಬಿಸಿಲಿನಲ್ಲಿ ಒಣಗಿಸಿ. ಬಳಿಕ ಒಂದು ಬಾಟಲಿನಲ್ಲಿ ಹಾಕಿ ಮುಚ್ಚಿಡಿ. ಬೇಕಾದಾಗ ಉಪಯೋಗಿಸಿ. ಈ ಉಪ್ಪಿನ ಕಾಯಿಯನ್ನು ವರ್ಷಗಳ ಕಾಲ ಉಪಯೋಗಿಸಬಹುದು. ಬಾಣಂತಿಯರು ಇದನ್ನು ಊಟಕ್ಕೆ ಹಾಕಿಕೊಂಡು ತಿನ್ನಬಹುದು.

ಕಹಿ ಜೀರಿಗೆ (ಕಾಳ ಜೀರಿಗೆ) ಕಷಾಯ ಮತ್ತು ಉಂಡೆ

ಕಹಿ ಜೀರಿಗೆ (ಕಾಳ ಜೀರಿಗೆ) ಕಷಾಯ ಮತ್ತು ಉಂಡೆ

ಕಹಿ ಜೀರಿಗೆ ಕಷಾಯ ಮತ್ತು ಉಂಡೆಯನ್ನು ಬಾಣಂತಿಯರಿಗೆ ಮಗು ಹುಟ್ಟಿದ ದಿನದಿಂದ ಪ್ರಾರಂಭಿಸಿ 3 ಅಥವಾ 5 ದಿನಗಳವರೆಗೆ ಕೊಡುತ್ತಾರೆ. ಇದನ್ನು ಉಪಯೋಗಿಸುವುದರಿಂದ ಬಾಣಂತಿ ನಂಜು ನಿವಾರಣೆಯಾಗುತ್ತದೆ. ಇದರ ಕಷಾಯ ಅಥವಾ ಉಂಡೆ ಯಾವುದಾದರೂ ಒಂದನ್ನು ತೆಗೆದುಕೊಳ್ಳಬೇಕು. ಕಷಾಯ ಕುಡಿಯಲು ಕಹಿ ಅನ್ನಿಸಿದರೆ ಮಾತ್ರೆಯಂತೆ ಚಿಕ್ಕ ಉಂಡೆಗಳನ್ನು ತಯಾರಿಸಿ ಸವಿಯಬಹುದು. ಇದನ್ನು ಸೇವಿಸುವ ಕ್ರಮ ಹೇಗೆಂದರೆ ಮುಂಜಾನೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬೇಕು. ಕಹಿ ಜೀರಿಗೆ ತಿಂದ ನಂತರ ಒಂದು ಗಂಟೆ ಯಾವ ಆಹಾರವನ್ನು ತೆಗೆದುಕೊಳ್ಳಬಾರದು. ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದವರು ವೈದ್ಯರ ಸಲಹೆ ಮೇರೆಗೆ ಉಪಯೋಗಿಸಿ.

ಬೇಕಾಗುವ ಸಾಮಗ್ರಿಗಳು: 100 ಗ್ರಾಂ ಕಹಿ ಜೀರಿಗೆ ಸ್ವಲ್ಪ ಬೆಲ್ಲ.ತಯಾರಿಸುವ ವಿಧಾನ: ಕಹಿ ಜೀರಿಗೆಯನ್ನು ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಉಂಡೆ ತಯಾರಿಸುವ ವಿಧಾನ: 1 ಟೇಬಲ್ ಚಮಚ ಕಹಿ ಜೀರಿಗೆ ಪುಡಿಯನ್ನು ಬಟ್ಟಲಿಗೆ ಹಾಕಿ. ಜೊತೆಗೆ 1 ಟೀ ಚಮಚ ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ 5 ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಟ್ಟುಕೊಳ್ಳಿ. ಖಾಲಿ ಹೊಟ್ಟೆಗೆ ದಿನಕ್ಕೆ 1 ಉಂಡೆಯನ್ನು ಮಾತ್ರೆಯಂತೆ ನುಂಗಿ ಸ್ವಲ್ಪ ನೀರು ಕುಡಿಯಿರಿ.ಕಷಾಯ ತಯಾರಿಸುವ ವಿಧಾನ: ಬಟ್ಟಲಿಗೆ 200 ಎಂಎಲ್ ( 1ಕಪ್) ನೀರು ಹಾಕಿ. ಜೊತೆಗೆ 1 ಟೇಬಲ್ ಚಮಚ ಕಹಿ ಜೀರಿಗೆ ಮತ್ತು ಬೆಲ್ಲವನ್ನು ಸೇರಿಸಿ 100 ಎಂಎಲ್ (1/2 ಕಪ್) ಬರುವರೆಗೆ ಕುದಿಸಿ. ಖಾಲಿ ಹೊಟ್ಟೆಗೆ ಬಿಸಿ ಇರುವಾಗಲೇ ಕುಡಿಯಿರಿ. ಉಳಿದ ಕಹಿ ಜೀರಿಗೆ ಪುಡಿಯನ್ನು ನಂತರ ದಿನಗಳಲ್ಲಿ ಬಾಣಂತಿ ಕಷಾಯಕ್ಕೆ ಸೇರಿಸಿ ಕುಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.