ADVERTISEMENT

ಅಜೀರ್ಣ ನಿವಾರಣೆಗೆ ಹಲವು ಮಾರ್ಗ

ಮುರಲೀಧರ ಕುಲಕರ್ಣಿ
Published 8 ಫೆಬ್ರುವರಿ 2013, 19:59 IST
Last Updated 8 ಫೆಬ್ರುವರಿ 2013, 19:59 IST

ಅಜೀರ್ಣ ಒಂದು ಸಾಮಾನ್ಯ ವ್ಯಾಧಿ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅಜೀರ್ಣಕ್ಕೆ ತುತ್ತಾಗಿಯೇ ಆಗುತ್ತಾರೆ. ಈ ಸಮಸ್ಯೆಗೆ ಹಲವಾರು ಕಾರಣಗಳಿರುತ್ತವೆ. ರಾತ್ರಿ ತಡಮಾಡಿ ಊಟ ಮಾಡುವುದು, ಕರಿದ ಹಾಗೂ ಮಸಾಲೆಯುಕ್ತ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು, ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದು, ನಮಗೆ ಇಷ್ಟ ಎಂದು ಯಾವುದೋ ಒಂದು ಖಾದ್ಯವನ್ನೇ ಹೆಚ್ಚಾಗಿ ಸೇವಿಸುವುದು, ಪಚನಾಂಗಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸುವುದು, ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದು, ಯಾವುದೋ ಒಂದು ಖಾದ್ಯದ ಬಗೆಗೆ ನಮಗಿರುವ ಅಲರ್ಜಿ, ಮಲಬದ್ಧತೆ, ಕಫ ಪ್ರಕೃತಿ ಇತ್ಯಾದಿ.

ವಿವಿಧ ಬಗೆಯ ಅಜೀರ್ಣಗಳನ್ನು ಹೊಗಲಾಡಿಸಿಕೊಳ್ಳಲು ಇಲ್ಲಿವೆ ಹಲವು ಉಪಾಯಗಳು:

* ಮಾವಿನ ಹಣ್ಣುಗಳ ಅತಿಯಾದ ಸೇವನೆಯಿಂದ ಅಜೀರ್ಣ ಉಂಟಾಗಿದ್ದರೆ ಬಿಸಿ ಹಾಲನ್ನು ಕುಡಿಯಬೇಕು.

* ತುಪ್ಪ, ಎಣ್ಣೆ ಮುಂತಾದ ಕೊಬ್ಬಿನ ಪದಾರ್ಥಗಳನ್ನು ಹೆಚ್ಚಾಗಿ ತಿಂದು ಅಜೀರ್ಣ ಆಗಿದ್ದರೆ ನೀರಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು.

* ಬಾಳೆಹಣ್ಣಿನ ಸೇವನೆಯಿಂದ ಅಜೀರ್ಣ ಆಗಿದ್ದರೆ ಒಂದು ಚಿಟಿಕೆ ಉಪ್ಪನ್ನು ಬಾಯಿಗೆ ಹಾಕಿಕೊಳ್ಳಬೇಕು.

* ಸಿಹಿ ಪದಾರ್ಥಗಳನ್ನು ಮಿತಿಯಿಲ್ಲದೇ ತಿಂದು ಹೊಟ್ಟೆ ಕೆಡಿಸಿಕೊಂಡಿದ್ದರೆ ಬಿಸಿ ನೀರನ್ನು ಕುಡಿಯಬೇಕು.

* ಹಾಲಿನಿಂದ ತಯಾರಿಸುವ ಖೀರು ಮುಂತಾದ ತಿನಿಸುಗಳಿಂದ ಅಜೀರ್ಣ ಉಂಟಾಗಿದ್ದರೆ ಮಜ್ಜಿಗೆಯನ್ನು ಕುಡಿಯಬೇಕು.

* ಹೆಚ್ಚಿಗೆ ನೀರು ಕುಡಿಯುವುದರಿಂದ ಅಜೀರ್ಣ ಆಗಿದ್ದರೆ ಸ್ವಲ್ಪ ಜೇನುತುಪ್ಪವನ್ನು ಸೇವಿಸಬೇಕು.

* ಪಿತ್ತದಿಂದ ಅಜೀರ್ಣವಾಗಿದ್ದರೆ ಅರ್ಧ ಚಮಚ ಅರಿಶಿಣ ಪುಡಿಗೆ ಒಂದು ಚಿಟಿಕೆ ಉಪ್ಪನ್ನು ಬೆರೆಸಿ ಬಿಸಿ ನೀರಿನೊಂದಿಗೆ ಸೇವಿಸಬೇಕು. ಇಲ್ಲವೇ ಅರಿಶಿಣ ಪುಡಿಯನ್ನು ಬಿಸಿಹಾಲಿಗೆ ಬೆರೆಸಿ ಕುಡಿಯಬೇಕು.

* ಅಜೀರ್ಣಕ್ಕೆ ಮಲಬದ್ಧತೆ ಕಾರಣವಾಗಿದ್ದರೆ ಬಿಸಿ ನೀರಿಗೆ ಜೀರಿಗೆ ಹಾಗೂ ಸ್ವಲ್ಪ ತುಪ್ಪವನ್ನು ಸೇರಿಸಿ ಕುಡಿಯಬೇಕು.
ಮೇಲಿನ ಈ ಉಪಾಯಗಳ ಜೊತೆಗೆ, ಎಲ್ಲ ಬಗೆಯ ಅಜೀರ್ಣಗಳಿಗೂ ಶುದ್ಧ ಗಾಳಿಯಲ್ಲಿ ಕನಿಷ್ಠ ಎರಡು ಕಿಲೊ ಮೀಟರ್ ನಡೆಯಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.