ADVERTISEMENT

ಅಡುಗೆ ಸೋಡ ನೀ ನಮಗೆ ಬೇಡ

ಡಾ.ಅರುಣ್ ಇಸ್ಲೂರ್
Published 28 ಜೂನ್ 2013, 19:59 IST
Last Updated 28 ಜೂನ್ 2013, 19:59 IST

ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಅಂತರ ರಾಷ್ಟ್ರೀಯ ಕಮ್ಮಟವೊಂದರಲ್ಲಿ ಭಾಗವಹಿಸಲು ಹೋಗಿದ್ದೆ. ವಾಪಸ್ ಬರುವಾಗ ಅಹಮದಾಬಾದ್‌ನಿಂದ ಮುಂಬೈ ಏರ್‌ಪೋರ್ಟ್‌ಗೆ ಬಂದು ಅಲ್ಲಿಂದ ಮಂಗಳೂರಿಗೆ ಇನ್ನೊಂದು ವಿಮಾನ ಹಿಡಿಯಲು ಇನ್ನೂ 3 ಗಂಟೆಗಳ ಸಮಯಾವಕಾಶ ಇತ್ತು.

ಹೊಟ್ಟೆ ಜೋರಾಗಿ ಹಸಿಯುತ್ತಿತ್ತು. ಬೆಳಿಗ್ಗೆ 11 ಗಂಟೆಗೆ ನನ್ನ ಸಹಪಾಠಿ ದರ್ಶಕ್ ಬಾಯಿಯೊಡನೆ ಮುಂಬೈ ವಿಮಾನ ನಿಲ್ದಾಣದ ಫುಡ್‌ಕೋರ್ಟ್‌ನತ್ತ ಸಾಗಿದೆವು. ಹಲವಾರು ಆಹಾರ ಪದಾರ್ಥಗಳ ಮೆನು ನೋಡಿ `ಮೇರಾ ವೆಜ್ ಮೀಲ್' (220 ರೂಪಾಯಿ) ಆರ್ಡರ್ ಮಾಡಿದೆವು.

ಹತ್ತು ನಿಮಿಷದಲ್ಲಿ ನೀಡಿದ ಆ ಪ್ಲೇಟಿನಲ್ಲಿ ಒಂದು ಪುಟ್ಟದಾದ ಚಪಾತಿ, ತುಸು ಮೊಸರಿನಿಂದ ತಯಾರಿಸಿದ ಸಲಾಡ್, ಅಲ್ಪ ಪ್ರಮಾಣದ ತರಕಾರಿಗಳಿಂದ ಸಿದ್ಧಪಡಿಸಿದ ಪಲ್ಯ, ಕೊಂಚ ದಾಲ್ ಹಾಗೂ ಸುಮಾರು ಒಂದು ಮುಷ್ಟಿಯಷ್ಟು ಅನ್ನವನ್ನು ಹರಡಿ ನೀಡಿದ್ದರು! ಕೇವಲ 6-7 ಬಾರಿ ಪುಟ್ಟ ಚಮಚ ಬಾಯಿಯಲ್ಲಿ ಇಟ್ಟೊಡನೆ ತಟ್ಟೆಯಲ್ಲಿನ ಅನ್ನ ಖಾಲಿಯಾಗಿತ್ತು. ಆದರೆ ಮಾತನಾಡುತ್ತ ಊಟ ಮಾಡುವಾಗ ಮಾತ್ರ ಹೊಟ್ಟೆ ತುಂಬಿದಂತಹ ಅನುಭವ. ಬಹುಶಃ 220 ರೂಪಾಯಿ ನೀಡಿ ಊಟ ಸೇವಿಸಿದ್ದರಿಂದ ಮಾನಸಿಕವಾಗಿ ಹೊಟ್ಟೆ ತುಂಬಿರಬೇಕು ಎಂದೆಣಿಸಿದೆ.

ಈ ಹೊಟ್ಟೆ ತುಂಬಿದ ಅನುಭವ ಅದೆಷ್ಟಿತ್ತೆಂದರೆ, ಒಂದು ಗಂಟೆಯ ಬಳಿಕ ವಿಮಾನದಲ್ಲಿ ನೀಡಿದ (ಉಚಿತ) ಕೇಕ್ ಹಾಗೂ ಚಹಾ  ಸೇವಿಸಲು ಸಹ ಹೊಟ್ಟೆಯಲ್ಲಿ ಜಾಗವಿಲ್ಲ ಎಂಬಂತಾಗಿತ್ತು. ಬಳಿಕ ಸುರತ್ಕಲ್‌ನ ಮನೆ ತಲುಪಿದಾಗಲೂ ಊಟ ಮಾಡಲಾಗದೇ ಮನೆಯವಳ ಕಿರಿಕಿರಿಯನ್ನೂ ಸಹಿಸಬೇಕಾಯಿತು. ಸಂಜೆ ಕೂಡ ಹೊಟ್ಟೆ ಭಾರ ಎನಿಸಿ ಏನೂ ತಿನ್ನಲಾರದ ಸ್ಥಿತಿ. ರಾತ್ರಿಯವರೆಗೆ 2-3 ಬಾರಿ ಶೌಚಾಲಯಕ್ಕೆ ಹೋಗಿ ಬಂದ ಬಳಿಕವೇ ತುಸು ಸಮಾಧಾನ ಆಗಿದ್ದು.

ADVERTISEMENT

ಸಾಮಾನ್ಯವಾಗಿ ಯಾವುದೇ ಕಠಿಣ ಆಹಾರವನ್ನೂ ಯಾವ ತೊಂದರೆಯೂ ಇಲ್ಲದೆ ಜೀರ್ಣಿಸಿಕೊಳ್ಳುತ್ತಿದ್ದ ನನಗೆ ಇದೊಂದು ಹೊಸ ಅನುಭವವಾಗಿತ್ತು. ಮಧ್ಯಾಹ್ನದ ಆ ಅಲ್ಪ ಪ್ರಮಾಣದ ಊಟದಲ್ಲಿ ಅತಿಯಾಗಿ ಅಡುಗೆ ಸೋಡ ಬಳಸಿದ್ದರ ಪರಿಣಾಮ ಇದೆಂದು ನನಗೆ ಅರಿವಾಗಿದ್ದು ಆ ಬಳಿಕವೇ. ನಿಮಗೂ ಅನೇಕ ಬಾರಿ ಹೋಟೆಲ್‌ಗಳಲ್ಲಿ ಇದೇ ತರಹದ ಅನುಭವ ಆಗಿರಬಹುದು.

ಆಹಾರ ಪದಾರ್ಥ ಅಥವಾ ಊಟಕ್ಕೆ ಹೆಚ್ಚಿನ ದರ ವಿಧಿಸಿ, ಹೊಟ್ಟೆ ಭರ್ತಿಯಾದಂತೆ ಮಾಡಲು ಇದೊಂದು ಸುಲಭದ ವಿಧಾನ. ಕೊಟ್ಟ ದುಡ್ಡಿಗೆ ಹೊಟ್ಟೆ ಭರ್ತಿಯಾಗಿ ತೃಪ್ತಿಯಾದ ಭಾವನೆ ಬಡ ಗ್ರಾಹಕರದ್ದು. ಕಡಿಮೆ ಪ್ರಮಾಣದ ಆಹಾರ ಗ್ರಾಹಕರಿಗೆ, ಹೆಚ್ಚಿನ ಲಾಭ ಹೋಟೆಲ್ ಮಾಲೀಕರಿಗೆ. ಹಾಗಾದರೆ ಏನಿದು ಅಡುಗೆ ಸೋಡ? ಇದನ್ನು ಆಹಾರ ಪದಾರ್ಥಗಳಲ್ಲಿ ಬೆರೆಸುವ ಅಗತ್ಯವಿದೆಯೇ? ಇದರಿಂದಾಗೇ ಗ್ಯಾಸ್ ಹೇಗೆ ಉಂಟಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾದ ಅಗತ್ಯ ಜನಸಾಮಾನ್ಯರಿಗೆ ಇದೆ.

ಅಡುಗೆ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಬೈ ಕಾರ್ಬೊನೇಟ್. ಇದೊಂದು ಪ್ರತ್ಯಾಮ್ಲ. ಇದನ್ನು ಬಿಸ್ಕತ್ತು, ಬ್ರೆಡ್, ಕೇಕ್ ಮುಂತಾದ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಅಲ್ಪ ಪ್ರಮಾಣದಲ್ಲಿ ಹಾಕುತ್ತಾರೆ. ಇದರಿಂದ ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವು ಗಾತ್ರದಲ್ಲಿ ಹಿಗ್ಗಿಕೊಂಡು, ತಿನ್ನುವಾಗ ಹಗುರವಾದ ಭಾವನೆ ನೀಡುತ್ತವೆ.

ಸಾಮಾನ್ಯವಾಗಿ ಬ್ರೆಡ್‌ನ ತಯಾರಿಕೆಯಲ್ಲಿ ಯೀಸ್ಟ್ ಅನ್ನು ಗಾತ್ರ ಹಿಗ್ಗಿಸುವಿಕೆಗೆ ಬಳಸುತ್ತಾರೆ. ಆದರೆ ಈ ವಿಧಾನ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ `ತ್ವರಿತ ಬ್ರೆಡ್'ನ (ಇನ್‌ಸ್ಟೆಂಟ್ ಬ್ರೆಡ್) ತಯಾರಿಕೆಯಲ್ಲಿ ಅಡುಗೆ ಸೋಡವನ್ನು ಬಳಸುತ್ತಾರೆ.

ಬ್ರೆಡ್ ಅಥವಾ ಕೇಕ್ ತಯಾರಿಸುವಾಗ, ಅದನ್ನು ಸುಡುವುದರಿಂದ ಹಿಟ್ಟಿನಲ್ಲಿರುವ ಸೋಡಿಯಂ ಬೈ ಕಾರ್ಬೊನೇಟ್ ವಿಭಜನೆಯಾಗಿ ಸೋಡಿಯಂ ಹಾಗೂ ಇಂಗಾಲದ ಡೈ ಆಕ್ಸೈಡ್ ಅನಿಲ ಉಂಟಾಗುತ್ತದೆ. ಬ್ರೆಡ್‌ನ ಹಿಟ್ಟಿನಿಂದ ಇಂಗಾಲದ ಡೈ ಆಕ್ಸೈಡ್ ಹೊರಹೊಮ್ಮುವುದರಿಂದ ಹಿಟ್ಟಿನಲ್ಲಿ ಸೂಕ್ಷ್ಮ ರಂಧ್ರಗಳಾಗಿ ಅವು ಅದರ ಗಾತ್ರವನ್ನು ವಿಪರೀತವಾಗಿ ಹಿಗ್ಗಿಸುತ್ತವೆ.

ಇದೇ ರೀತಿ ಅನ್ನ ಅಥವಾ ಇತರ ತಿಂಡಿ ಪದಾರ್ಥದಲ್ಲೂ ಅಡುಗೆ ಸೋಡವನ್ನು ಬೆರೆಸುವುದರಿಂದ, ಹೊಟ್ಟೆಯನ್ನು ಸೇರಿದ ಅಡುಗೆ ಸೋಡವು ಅಲ್ಲಿ ಉತ್ಪತ್ತಿಯಾಗುವ ಹೈಡ್ರೊಕ್ಲೋರಿಕ್ ಆಮ್ಲದೊಡನೆ ವರ್ತಿಸಿ, ಇಂಗಾಲದ ಡೈ ಆಕ್ಸೈಡ್‌ನ್ನು ಉತ್ಪತ್ತಿ ಮಾಡುತ್ತದೆ. ಇದೊಂದು ತಟಸ್ಥೀಕರಣ (ನ್ಯೂಟ್ರಲೈಜೇಷನ್) ರಾಸಾಯನಿಕ ಕ್ರಿಯೆ. ಹೀಗೆ ಊಟವಾದ ಕೆಲ ಗಂಟೆಗಳ ಕಾಲ ಇದು ಉತ್ಪತ್ತಿಯಾಗುತ್ತಲೇ ಇರುತ್ತದಾದ್ದರಿಂದ ಘೋರವಾಗಿ ಹೊಟ್ಟೆ ತುಂಬಿದ ಅನುಭವ ಆಗುತ್ತದೆ.

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ನೀಡುವ ಅಲ್ಪ ಪ್ರಮಾಣದ ಮೊಸರನ್ನು ಸೇವಿಸಿದಾಗ, ಇದರಲ್ಲಿನ ಆಮ್ಲೀಯ ಪದಾರ್ಥವು ಅನ್ನದಲ್ಲಿನ ಅಡುಗೆ ಸೋಡದೊಡನೆ ವರ್ತಿಸಿ ಇಂಗಾಲದ ಡೈಆಕ್ಸೈಡ್‌ನ್ನು ಇನ್ನೂ ವೇಗವಾಗಿ ಬಿಡುಗಡೆ ಮಾಡುತ್ತದೆ. ಇದರಿಂದ ಬೇಗನೆ ಹೊಟ್ಟೆ ತುಂಬಿದ ಭಾವನೆ ಬರುತ್ತದೆ.

ಹಾನಿಕರವೇ?
ಅಡುಗೆ ಸೋಡ ಹೊಂದಿರುವ ಯಾವುದೇ ಆಹಾರ ವಸ್ತುವನ್ನು (ಉದಾಹರಣೆಗೆ ಬಿಸ್ಕತ್ತು, ಕೇಕ್ ಮುಂತಾದವು) ಪ್ರತಿನಿತ್ಯ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಹಲವು ವರ್ಷಗಳ ಕಾಲ ಹೀಗೆ ತಿನ್ನುವವರಿಗೆ ಕ್ರಮೇಣ ನೈಸರ್ಗಿಕವಾಗಿ ಹಸಿವಾಗುವಿಕೆಯೇ ಕಡಿಮೆಯಾಗಿ ದೈಹಿಕವಾಗಿ ಅವರು ಕೃಶರಾಗಬಹುದು.

ಅಡುಗೆ ಸೋಡದಿಂದ ಬಿಡುಗಡೆಯಾದ ಸೋಡಿಯಂ ಲವಣದ ಅಂಶ ದೇಹದಲ್ಲಿ ಹೆಚ್ಚಾದರೆ ಅದು ಕೆಲವು ತೊಂದರೆಗಳನ್ನು ಉಂಟುಮಾಡುತ್ತದೆ. ಅಡುಗೆ ಸೋಡ ಬೆರೆಸಿದ ಊಟವನ್ನು ಪ್ರತಿನಿತ್ಯ ಮಾಡುವುದರಿಂದ ಗ್ಯಾಸ್ ಟ್ರಬಲ್, ಕರುಳಿಗೆ ಸಂಬಂಧಿಸಿದ ಕೆಲವು ತೊಂದರೆಗಳೂ ಉಂಟಾಗುತ್ತವೆ.

ಕೇವಲ ಲಾಭದ ದೃಷ್ಟಿಯಿಂದ ಹೋಟೆಲ್ ಉದ್ಯಮ ನಡೆಸುವವರು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯದಾಯಕ ಆಹಾರ ನೀಡುವುದೂ ಅಷ್ಟೇ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.