ಕಳೆದ ಸಾವಿರಾರು ವರುಷಗಳಿಂದಲೂ ಮಾನವ ಅಣಬೆಯನ್ನು ಸೇವಿಸುತ್ತಿದ್ದ. ಇದು ಅತ್ಯಂತ ಪೌಷ್ಟಿಕ; ಜೊತೆಗೆ ಹಲವಾರು ಔಷಧೀಯ ಗುಣಧರ್ಮಗಳನ್ನು ಹೊಂದಿದೆ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಪ್ರಾಚೀನ ಕಾಲದಿಂದಲೂ ಈಜಿಪ್ತ್ ‘ಫೆರೊ’ಗಳು ಅಣಬೆಯೊಂದು ಅತ್ಯಂತ ರುಚಿಕರ ಆಹಾರವೆಂದು ಸೇವಿಸುತ್ತಿದ್ದರು. ಗ್ರೀಕ್ ಸೈನಿಕರು ಯುದ್ಧಗಳ ಸಂದರ್ಭದಲ್ಲಿ ಇದನ್ನು ಶಕ್ತಿಯುತ ಆಹಾರವಾಗಿ ಬಳಸುತ್ತಿದ್ದರು. ರೋಮನ್ನರು ಇದೊಂದು ದೈವದತ್ತ ಶ್ರೇಷ್ಠ ಆಹಾರವೆಂದು ನಂಬಿ ವಿಶೇಷವಾದ ಧಾರ್ಮಿಕ ಸಂದರ್ಭಗಳಲ್ಲಿ ಬಳಸುತ್ತಿದ್ದರು ಎಂಬಂತಹ ಉಲ್ಲೇಖಗಳಿವೆ. ಅಂತೆಯೇ ಚೀನಿಯರು ಇದು ಆರೋಗ್ಯಕರ ಹಾಗೂ ಔಷಧಯುಕ್ತವೆಂದು ಹೆಚ್ಚಾಗಿ ಬಳಸುತ್ತಿದ್ದರು.
ಇದೀಗ ಆಧುನಿಕ ವಿಜ್ಞಾನ ಬೆಳೆಯುತ್ತಿದ್ದಂತೆ, ಅಣಬೆಯನ್ನು ಉತ್ಕೃಷ್ಟ ಆಹಾರವೆಂದು ವಿಜ್ಞಾನಿಗಳು ಸಾರಿದ್ದಾರೆ. ಇದರಿಂದ ನಮ್ಮ ದೇಹಕ್ಕೆ ವೈದ್ಯಕೀಯವಾಗಿ ಹಲವಾರು ಪ್ರಯೋಜನಗಳೂ ಇವೆ! ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಣಬೆಯ ಮಹತ್ವ ವೈಜ್ಞಾನಿಕವಾಗಿ ಅರಿವು ಮೂಡಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಇತ್ತ ಪ್ರಾಣಿಯೂ ಅಲ್ಲದ, ಅತ್ತ ಸಸ್ಯವೂ ಅಲ್ಲದ ಅಣಬೆಯನ್ನು ಜೀವವಿಜ್ಞಾನಿಗಳು ‘ಶಿಲೀಂಧ್ರ’ಗಳ ಗುಂಪಿನಲ್ಲಿ ಸೇರಿಸಿದ್ದು ಇದರ ವೈಜ್ಞಾನಿಕ ಹೆಸರು ‘ಅಗಾರಿಕಸ್’ ಎಂಬುದಾಗಿದ್ದು ಇದು ನೂರಾರು ಜಾತಿಗಳನ್ನು ಹೊಂದಿದೆ. ವಿಜ್ಞಾನಿಗಳು ಈವರೆಗೆ ಸುಮಾರು 14,000 ಕ್ಕಿಂತಲೂ ಅಧಿಕ ಪ್ರಭೇದಗಳನ್ನು ಗುರುತಿಸಿದ್ದು, ಅವುಗಳಲ್ಲಿ ಸುಮಾರು 3000ದಷ್ಟು ತಿನ್ನಲು ಯೋಗ್ಯವಾಗಿವೆ. ಇವುಗಳಲ್ಲಿ ಸುಮಾರು 700ರಷ್ಟು ಪ್ರಭೇದಗಳು ಔಷಧೀಯ ಗುಣಧರ್ಮ ಹೊಂದಿವೆ. ಒಟ್ಟು ಪ್ರಭೇದದಲ್ಲಿ ಶೇಕಡಾ 1 ಕ್ಕಿಂತಲೂ ಕಡಿಮೆ ಮಾತ್ರ ವಿಷಪೂರಿತವಾಗಿವೆ. ಅಣಬೆಗಳ ಗಾತ್ರ, ಆಕಾರ, ಬಣ್ಣಗಳಲ್ಲಿ ಹಲವಾರು ವೈವಿಧ್ಯತೆ ಇವೆ. ಇವು ಸ್ವಂತ ಪತ್ರ ಹರಿತ್ತು ಹೊಂದಿಲ್ಲದೇ ಇರುವುದರಿಂದ ಸ್ವತಃ ಆಹಾರವನ್ನು ತಯಾರಿಸಲಾರವು. ಹೀಗಾಗಿ ಇವು ಸತ್ತ ಸಸ್ಯ ಅಥವಾ ಪ್ರಾಣಿಗಳ ಮೇಲೆ ಬೆಳೆಯುತ್ತವೆ.
ಬಹುತೇಕ ಜನರು ಇಷ್ಟಪಡುವ ಈ ಅಣಬೆಗಳು ವಿಶಿಷ್ಟ ರುಚಿ ಹಾಗೂ ಪರಿಮಳ ಹೊಂದಿದ್ದು ಸೂಪ್, ಸಲಾಡ್, ಪಲ್ಯ ಮುಂತಾದ ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತವೆ. ಬೇಯಿಸುವುದರಿಂದ ಇವುಗಳ ಪರಿಮಳ ಹಾಗೂ ಸ್ವಾದ ಇನ್ನಷ್ಟು ಹೆಚ್ಚುತ್ತದೆ.
ಅಣಬೆಯಲ್ಲಿ ಏನೇನಿದೆ?
*ಇದು ಸುಮಾರು ಶೇಕಡಾ 80-90 ರಷ್ಟು ನೀರು ಹೊಂದಿದ್ದು, ಅತೀ ಕಡಿಮೆ ಕ್ಯಾಲೋರಿ ಹೊಂದಿದೆ.
* ಸೋಡಿಯಂ ಹಾಗೂ ಕೊಬ್ಬು ಕೂಡ ಅತೀ ಕಡಿಮೆ ಪ್ರಮಾಣದಲ್ಲಿದ್ದು ಶೇಕಡಾ 8-10 ರಷ್ಟು ನಾರಿನಂಶ ಹೊಂದಿದೆ. ಹೀಗಾಗಿ ‘ಡಯಟ್’ ಆಹಾರ ಸೇವಿಸುವವರಿಗೆ ಇದು ಅತ್ಯುತ್ತಮ.
*ಇದರ ಜೊತೆ ಶರೀರಕ್ಕೆ ಅಗತ್ಯವಾದ ಯಥೇಚ್ಛವಾಗಿ ಪ್ರೊಟೀನುಗಳು, ವಿಟಮಿನ್‌ಗಳು, ಅಮೈನೋ ಆಮ್ಲಗಳು, ಕೆಲವೊಂದು ಆ್ಯಂಟಿಬಯೋಟಿಕ್ ಕಿಣ್ವಗಳನ್ನು ಅಲ್ಲದೇ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ.
ಜೊತೆಗೆ, ಈ ಕೆಳಗೆ ವಿವರಿಸಿದ ವಿಷಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿದ್ದು, ಇತ್ತೀಚಿನ ಹಲವಾರು ಸಂಶೋಧನೆಗಳಿಂದ ಇದು ದೃಢಪಟ್ಟಿದೆ.
ಸ್ತನ ಕ್ಯಾನ್ಸರ್, ಪ್ರೊಸ್ಟೆಟ್ ಕ್ಯಾನ್ಸರ್‌ಗೆ ತಡೆ:
ಸ್ತ್ರೀಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಉಂಟಾಗುವ ಪ್ರೊಸ್ಟೆಟ್ ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲ ‘ಬೀಟಾ ಗ್ಲುಕಾನ್’ಗಳು ಹಾಗೂ ‘ಅನೋಲಿಕ್’ ಆಮ್ಲಗಳು ಹೇರಳವಾಗಿದ್ದು, ಇವು ಕ್ಯಾನ್ಸರ್ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
‘ಲಿನೋಲಿಕ್’ ಆಮ್ಲವು ಈಸ್ಟ್ರೋಜೆನ್ ಹಾರ್ಮೋನ್‌ನ ಪರಿಣಾಮವನ್ನು ತಡೆಗಟ್ಟುತ್ತದೆ. ಈ ಈಸ್ಟ್ರೋಜೆನ್, ಸ್ತನ ಕ್ಯಾನ್ಸರ್‌ನ ಮೂಲವೆಂದು ವಿಜ್ಞಾನಿಗಳು ಭಾವಿಸಿದ್ದಾರೆ. ಬೀಟಾ ಗ್ಲುಕಾನ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ. ಹಾಗೂ ಇದರಲ್ಲಿರುವ ಸೆಲಿನಿಯಮ್ ಎಂಬ ಇನ್ನೊಂದು ವಸ್ತು ಕೂಡ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕುಂಠಿತಗೊಳಿಸುತ್ತದೆ.
ಮಧುಮೇಹ ರೋಗಿಗಳಿಗೆ:
ಮಧುಮೇಹ ರೋಗಿಗಳಿಗೂ ಅಣಬೆ ಉತ್ತಮ ಆಹಾರವೆಂದು ದೃಢಪಟ್ಟಿದೆ. ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಹಾಗೂ ಕೆಲವೊಂದು ಕಿಣ್ವಗಳು, ಆಹಾರದಲ್ಲಿನ ಸಕ್ಕರೆ ಅಥವಾ ಪಿಷ್ಟವನ್ನು ವಿಭಜಿಸುವಲ್ಲಿ ಅತೀ ಸಹಕಾರಿ. ಇದರಲ್ಲಿನ ಇನ್ನೂ ಕೆಲವೊಂದು ವಸ್ತುಗಳು, ಲಿವರ್, ಪ್ಯಾಂಕ್ರಿಯಾಸ್ ಹಾಗೂ ನಿರ್ನಾಳ ಗ್ರಂಥಿಗಳ ಸರಿಯಾದ ಕಾರ್ಯನಿರ್ವಹಿಸುವಿಕೆ ನಡೆಸುತ್ತಿದ್ದು, ದೇಹದಲ್ಲಿ ಇನ್‌ಸುಲಿನ್‌ನ ಅಗತ್ಯ ಪ್ರಮಾಣದಲ್ಲಿ ತಯಾರಿಸುವಿಕೆಗೂ ಸಹಕಾರಿ. ಸಾಮಾನ್ಯವಾಗಿ ಮಧುಮೇಹಿ ರೋಗಿಗಳಲ್ಲಿ ಉಂಟಾಗುವ ಮೊಣಕಾಲಿನ ವ್ಯಾಧಿಗಳು ಗುಣಪಡಿಸುವಲ್ಲಿ ಅಣಬೆಯ ಪಾತ್ರವಿದೆ.
ರೋಗ ನಿರೋಧಕತೆ ಹೆಚ್ಚಿಸುವಲ್ಲಿ:
ಅಣಬೆಯಲ್ಲಿರುವ ‘ಎರಗೋಥಿಯೊನಿನ್’ ಎಂಬ ಆ್ಯಂಟಿ ಆಕ್ಸಿಡೆಂಟ್‌ಗಳು (ಇವು ದೇಹಕ್ಕೆ ಉತ್ತಮ), ದೇಹಕ್ಕೆ ಹಾನಿಯನ್ನುಂಟು ಮಾಡುವ ‘ಫ್ರಿ ರೆಡಿಕಲ್’ ಗಳನ್ನು (ಒಂದು ಎಲೆಕ್ಟ್ರಾನ್ ಹೊಂದಿರುವ, ದೇಹಕ್ಕೆ ಅಪಾಯಕಾರಿ ಕಣ) ನಾಶಮಾಡಿ ದೇಹದ ರೋಗನಿರೋಧಕತೆಯನ್ನು ಹೆಚ್ಚಿಸುತ್ತದಲ್ಲದೇ, ದೇಹವೂ ತಾರುಣ್ಯದಿಂದಿರುತ್ತದೆ.
ಅಣಬೆಯಲ್ಲಿರುವ ಕೆಲವೊಂದು ನೈಸರ್ಗಿಕ ಆ್ಯಂಟಿಬಯೋಟಿಕ್‌ಗಳು ಸೂಕ್ಷ್ಮಾಣು ಜೀವಿ ಹಾಗೂ ಶಿಲೀಂಧ್ರಗಳ ಸೋಂಕನ್ನೂ ತಡೆಗಟ್ಟುತ್ತದೆ. ಇದರಲ್ಲಿನ ವಿಟಮಿನ್ ‘ಎ’, ‘ಬಿ’ ಹಾಗೂ ‘ಸಿ’ಗಳು ಕೂಡ ರೋಗ ನಿರೋಧಕತೆ ಹೆಚ್ಚಿಸುತ್ತವೆ.
ಕೊಲೆಸ್ಟರಾಲ್‌ನ ನಿರ್ವಹಣೆಗೆ:
ಅಣಬೆಗಳು ಕೊಬ್ಬು ಹಾಗೂ ಕೊಲೆಸ್ಟರಾಲ್ ಮುಕ್ತವಾಗಿರುವುದರಿಂದ ಇದರ ಪ್ರೋಟಿನ್ ಅನ್ನು ‘ಲೀನ್ ಪ್ರೊಟೇನ್’ ಎನ್ನುತ್ತಾರೆ. ಹೀಗಾಗಿ ಈ ಪ್ರೊಟೇನ್, ನಾರಿನಂಶ ಹಾಗೂ ಕೆಲವೊಂದು ಕಿಣ್ವಗಳು ದೇಹದಲ್ಲಿನ ಕೊಲೆಸ್ಟರಾಲ್‌ನ ಪ್ರಮಾಣ ಕಡಿಮೆಯಾಗಿಸುವಲ್ಲಿ ಅತೀ ಸಹಾಯಕಾರಿ ಎಂಬುದಾಗಿ ದೃಢಪಟ್ಟಿದೆ. ಜೊತೆಗೆ ಈ ಪ್ರೊಟೀನುಗಳು, ಕೊಲೆಸ್ಟರಾಲ್‌ನ ಜೀರ್ಣಿಸುವಿಕೆಯಲ್ಲೂ ಸಹಕರಿಸುವುದರಿಂದ, ಹೃದ್ರೋಗಿಗಳಿಗೆ ಇದೊಂದು ಅತ್ಯುತ್ತಮ ಆಹಾರ.
ಸ್ಥೂಲಕಾಯ ಕಡಿಮೆ ಮಾಡುವಲ್ಲಿ:
ಪ್ರತಿ ನಿತ್ಯ ಅಣಬೆಯನ್ನು ಮಿತವಾಗಿ ಸೇವಿಸುವುದರಿಂದ, ದೇಹದಲ್ಲಿರುವ ಅತಿಯಾದ ಕೊಬ್ಬು ಕಡಿಮೆಯಾಗುತ್ತದೆ.
ಇತರೇ ಉಪಯುಕ್ತತೆ:
‘ಕಾಡ್-ಲಿವರ್’ ಎಣ್ಣೆಯ ಬಳಿಕ, ಇದೊಂದೇ ತರಕಾರಿ ವಿಟಮಿನ್ ‘ಡಿ’ಯನ್ನು ತಿನ್ನುವ ರೂಪದಲ್ಲಿ ಹೊಂದಿರುವ ವಸ್ತುವಾಗಿದೆ. ಅಣಬೆಯಲ್ಲಿ ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೂಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶ, ಶರೀರದ ರಕ್ತಹೀನತೆ ಕಡಿಮೆ ಮಾಡುತ್ತದೆ. ಇದರಲ್ಲಿನ ಪೊಟ್ಯಾಷಿಯಂ ರಕ್ತದೊತ್ತಡ ಹತೋಟಿಯಲ್ಲಿಡುವಲ್ಲಿ, ತಾಮ್ರದ ಅಂಶ ಬ್ಯಾಕ್ಟೀರಿಯಾ ನಾಶಕವಾಗಿ, ಸೆಲಿನಿಯಮ್ ಹಲ್ಲುಗಳ, ಮೂಳೆಗಳ, ಉಗುರು ಹಾಗೂ ಕೂದಲಿನ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ ಸೆಲಿನಿಯಮ್ ಒಂದು ಆ್ಯಂಟಿ ಆಕ್ಸಿಡೆಂಟ್ ಕೂಡ ಆಗಿರುವುದರಿಂದ ದೇಹದಲ್ಲಿನ ರೋಗನಿರೋಧಕತೆ ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ, ಹೀಗಾಗಿ ಸಸ್ಯಾಹಾರಿಗಳಿಗೆ ಅಣಬೆಯೊಂದೇ ಉತ್ತಮ ಪ್ರಮಾಣದಲ್ಲಿ ಸೆಲಿನಿಯಮ್ ಹೊಂದಿರುವ ಆಹಾರ.
ಶಕ್ತಿದಾಯಕ ಕೂಡ:
ಅಣಬೆಯಲ್ಲಿರುವ ನಿಯಾಸಿನ್ ಹಾಗೂ ರೈಬೊಫ್ಲೆವಿನ್ ಎಂಬ ವಿಟಮಿನ್ ‘ಬಿ’ನಿಂದಾಗಿ, ದೇಹದಲ್ಲಿ ಆಯಾಸವಾಗುವಿಕೆ ಹಾಗೂ ಮೆದುಳಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಯಥೇಚ್ಛವಾಗಿ ಪ್ರೊಟೀನುಗಳನ್ನು ಹೊಂದಿರುವುದರಿಂದ, ದೇಹದ ಸ್ನಾಯುಗಳ ಬೆಳವಣಿಗೆಯನ್ನೂ ಮಾಡುತ್ತವೆ.
ಎಚ್ಚರಿಕೆ ಕೂಡ ಅಗತ್ಯ:
ಕೆಲವೊಂದು ಜಾತಿಯ ಅಣಬೆಗಳು ವಿಷಕಾರಿಯಾಗಿದ್ದು, ಹಾನಿ ಕೂಡ ಉಂಟು ಮಾಡಬಲ್ಲವು. ನಿಮಗೆ ಸರಿಯಾಗಿ ಗೊತ್ತಿರದ ಅಣಬೆಗಳನ್ನು ಯಾವುದೇ ಕಾರಣಕ್ಕೂ ಕಿತ್ತು ತಿನ್ನಬೇಡಿ, ಗೊತ್ತಿಲ್ಲದ, ಅಪರಿಚಿತ ಮಾರಾಟಗಾರರಿಂದಲೂ ಕೊಳ್ಳುವುದು ಕೂಡ ಕೆಲವೊಮ್ಮೆ ಅಪಾಯಕಾರಿಯೆಂದೂ ಸಾಬೀತಾಗಿದೆ. ಸೂಪರ್ ಮಾರ್ಕೆಟ್‌ಗಳಲ್ಲಿ ದೊರೆಯುವ ಸೀಲ್ ಮಾಡಿದ ಅಣಬೆಗಳು ವಿಶ್ವಾಸಕಾರಿ.
ನಮ್ಮ ದೇಹಕ್ಕೆ ಇಷ್ಟೊಂದು ಉಪಯುಕ್ತವಾಗಿರುವ ಅಣಬೆಗಳ ಸೇವನೆಯಿಂದ ಆರೋಗ್ಯ ವೃದ್ಧಿಯಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.