ADVERTISEMENT

ಅಸ್ವಸ್ಥ ಸಂಗಾತಿಯ ಆರೈಕೆ: ದಾಂಪತ್ಯ ಬದುಕಿಗೆ ಹೊಸ ವ್ಯಾಖ್ಯಾನ

ಜಗದೀಶ ಅಂಗಡಿ
Published 4 ಫೆಬ್ರುವರಿ 2011, 18:30 IST
Last Updated 4 ಫೆಬ್ರುವರಿ 2011, 18:30 IST

ಇದೊಂದು ಸಾವಿನ ಮನೆಯ ಕದ ತಟ್ಟಿಯೂ ಬದುಕಿನೆಡೆಗೆ ಓಡೋಡಿ ಬಂದ ಕತೆ; ವಿಧಿಯಾಟದ ನಡುವೆಯೂ, ಸಂಕಷ್ಟಗಳ ಅಲೆಗಳಲ್ಲಿ ತೇಲಿಹೋಗಿಯೂ, ತನ್ನವರಿಂದಲೇ ದೂರ ತಳ್ಳಲ್ಪಟ್ಟರೂ ತನ್ನ ಹೆಂಡತಿಯನ್ನು ಉಳಿಸಿಕೊಂಡವನ ಕತೆ. ಈತನ ಹೋರಾಟ, ತ್ಯಾಗ ಮನೋಭಾವ, ಈ  ಜೋಡಿಯ ಅಪ್ಪಟ ಪ್ರೇಮ ಹಾಗೂ ಆಕೆಯ ಕೃತಜ್ಞತಾಭಾವ ಗಂಡ-ಹೆಂಡತಿ ಸಂಬಂಧಕ್ಕೆ ಹೊಸ ವ್ಯಾಖ್ಯಾನ ಬರೆಯುವಂಥದು. ಶಿಥಿಲಗೊಳ್ಳುತ್ತಿರುವ ಮದುವೆಯ ಸಂಬಂಧಗಳಿಗೆ ಹೊಸ ಆಶಯ ತುಂಬುವಂಥದು.

ಈತನ ಹೆಸರು ಸುಭಾಷ; ಆಕೆಯ ಹೆಸರು ದಿವ್ಯ. ಇವರ ಮೂಲ ಕೇರಳ ರಾಜ್ಯದ ಕೊಲ್ಲಂ. ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದದ್ದು 2001ರಲ್ಲಿ. ವೃತ್ತಿಯಲ್ಲಿ ಸುಭಾಷ ಸೇಲ್ಸ್ ಎಕ್ಸಿಕ್ಯುಟಿವ್, ದಿವ್ಯ ಹೌಸ್‌ವೈಫ್. ಈ ದಂಪತಿಗೆ ಏಳು ವರ್ಷದ ಹಾಗೂ ಐದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಈ ದಂಪತಿ ಜೀವನದಲ್ಲಿ ಮೊದಲ ಬಿರುಗಾಳಿ ಬೀಸಿದ್ದು ಮದುವೆಯಾದ ಮೂರು ವರ್ಷಗಳ ನಂತರ. ತೀವ್ರ ಅಸ್ವಸ್ಥಳಾದ ದಿವ್ಯಳನ್ನು ವೈದ್ಯರು ಪರೀಕ್ಷಿಸಿದ ನಂತರ ಹೆಸರಿಟ್ಟ ಕಾಯಿಲೆ ‘ಹೃದಯಾಘಾತ’. ‘ನಿನ್ನ ಹೆಂಡತಿಗೆ ತಕ್ಷಣ ಶಸ್ತ್ರಚಿಕಿತ್ಸೆಯಾಗಲೇಬೇಕು, ಇಲ್ಲದಿದ್ದರೆ ಆಕೆಯ ಸಾವು ನಿಶ್ಚಿತ.

ಚಿಕಿತ್ಸೆ ವಿಳಂಬವಾದಷ್ಟೂ ಸಾವು ಹತ್ತಿರವಾಗುತ್ತದೆ ಎಂದು ಗೊತ್ತಾದಾಗ ನನಗೇ ತೀವ್ರ ಹೃದಯಾಘಾತವಾದ ಅನುಭವ. ಚಿಕಿತ್ಸೆಗೆ ಬೇಕಾದಷ್ಟು ಕಾಸು ಕೈಯಲ್ಲಿರಲಿಲ್ಲ. ಸ್ನೇಹಿತರನ್ನ- ಬಂಧು ಬಳಗದವರನ್ನ ಯಾಚಿಸಿದಾಗ ಸಿಕ್ಕ ನೆರವು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಕೊನೆಗೆ ಬೆಂಗಳೂರಿನ ಶ್ರೀ ಸತ್ಯಸಾಯಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವಿರುವ ಬಗ್ಗೆ ತಿಳಿಯಿತು. ದಿವ್ಯಳನ್ನು ಆಸ್ಪತ್ರೆಗೆ ಕರೆತಂದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು’ ಎಂದು ಸುಭಾಷ ನೆನಪಿನಂಗಳದಲ್ಲಿ ದಾಖಲಾದ ಅನುಭವಗಳ ಬುತ್ತಿ ಬಿಚ್ಚಿಡುತ್ತಾರೆ.

ಕೇವಲ ತನ್ನ 25ನೇ ವಯಸ್ಸಿಗೆ ಕ್ಲಿಷ್ಟಕರವಾದ ಚಿಕಿತ್ಸೆಗೆ ಒಳಗಾದ ದಿವ್ಯಳ ಬದುಕು ಬದಲಾಗಲೇಬೇಕಿತ್ತು. ಈ ಘಟನೆ ಮುಗಿಯುವ ಒಳಗಾಗಿ ಸುಭಾಷ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತನಾಗಿ ಹೋಗಿದ್ದ. ಮಾಸಿಕ ಐದು ಸಾವಿರ ರೂಪಾಯಿಯಷ್ಟು ವರಮಾನವಿರುವ ಆತ ತನ್ನ ಹೆಂಡತಿಯ ಔಷಧಿ ಖರ್ಚನ್ನು, ಸಂಸಾರದ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿತ್ತು.

ಜೀವನ ಸುಗಮವಾಗಿ ಸಾಗುತ್ತಿದೆ ಎಂದು ದಂಪತಿ ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ದುರಂತ ದಿವ್ಯಳನ್ನು ಹಿಂಬಾಲಿಸುತ್ತಿತ್ತು. ಮೂರು ವರ್ಷಗಳ ಹಿಂದೆ ಆಕೆಗೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡಿತು. ಕೆಲವೇ ತಿಂಗಳುಗಳ ಒಳಗೆ ತಲೆನೋವು ಅಸಾಧ್ಯವೆನ್ನುವ ಹಂತ ತಲುಪಿಬಿಟ್ಟಿತು.  ‘ನನ್ನ ಊರಿನ ವೈದ್ಯರಿಗೆ ತೋರಿಸಿದೆ; ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸುತ್ತಲಿನ ಎಲ್ಲ ವೈದ್ಯರಿಗೂ ಹಾಗೂ ಎಲ್ಲ ಪ್ರಕಾರದ ವೈದ್ಯ ಪದ್ಧತಿಯನ್ನೂ ಅನುಸರಿಸಿದೆವು. ವೈದ್ಯರಿಗೆ ದಿವ್ಯಳ ರೋಗದ ಸ್ವರೂಪ ತಿಳಿಯಲೇ ಇಲ್ಲ. ಆಕೆ ದಿನದಿಂದ ದಿನಕ್ಕೆ ಕೃಶಳಾಗತೊಡಗಿದಳು. ವಿಧಿಯಿಲ್ಲದೆ ಮತ್ತೊಮ್ಮೆ ಆಕೆಯನ್ನು ಬೆಂಗಳೂರಿನ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಕರೆತಂದೆ. ಅಲ್ಲಿನ ನರರೋಗ ತಜ್ಞರು ಆಕೆಯನ್ನು ಪರೀಕ್ಷಿಸಿದ ನಂತರ ಹೆಸರಿಟ್ಟ ರೋಗದ ಹೆಸರು ಅನಪ್ಲಾಸ್ಟಿಕ್ ಆ್ಯಸ್ಟ್ರೊಸ್ವೆಟೋಮ್, ಗ್ರೇಡ್-3 ಅಂದರೆ ‘ಬ್ರೇನ್ ಟ್ಯೂಮರ್’ ಸುಭಾಷ್ ವಿವರಿಸಿದ.

ಜುಲೈ 2010 ರಲ್ಲಿ ದಿವ್ಯಳನ್ನು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಚಿಕಿತ್ಸೆ ಫಲಪ್ರದವಾಯಿತು. ಚಿಕಿತ್ಸೆಯ ನಂತರ ಆಕೆಯ ಮೆದುಳಿನ ಭಾಗವೊಂದಕ್ಕೆ ಕ್ಯಾನ್ಸರ್ ರೋಗದ ಲಕ್ಷಣವಿರುವುದಾಗಿಯೂ, ತಕ್ಷಣಕ್ಕೆ ರೇಡಿಯೇಶನ್ ಥೆರಪಿ ಹಾಗೂ ಕಿಮೋಥೆರಪಿ ಅಗತ್ಯವಿರುವುದಾಗಿಯೂ, ಚಿಕಿತ್ಸೆ ಕೊಡಿಸದೇ ಇದ್ದಲ್ಲಿ ಸಾವು ಶತಃಸಿದ್ಧವೆಂದು ವೈದ್ಯರು ಹೇಳಿಬಿಡುತ್ತಾರೆ. ಸುಭಾಷನಿಗೆ ಸುನಾಮಿ, ಭೂಕಂಪ ಹಾಗೂ ಜ್ವಾಲಾಮುಖಿ ಒಟ್ಟಾಗಿ ಉಂಟಾದ ಅನುಭವ.

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಆಗುತ್ತದೆ. ಆದರೆ ರೇಡಿಯೇಶನ್ ಥೆರಪಿ ಹಾಗೂ ಕಿಮೋಥೆರಪಿ ಸೌಲಭ್ಯ ಅಲ್ಲಿರದ ಕಾರಣ ಖಾಸಗಿ ಆಸ್ಪತ್ರೆಗೆ ತೆರಳಬೇಕಾದ ಸಂದರ್ಭ ಬರುತ್ತದೆ.  ‘ಚಿಕಿತ್ಸೆಗೆ ಸುಮಾರು ಎರಡು ಲಕ್ಷದ ರೂಪಾಯಿ ಅಗತ್ಯ ಎಂದು ತಿಳಿದಾಗ ನಾನು ಕುಸಿದುಹೋದೆ.

ಮನೆಯವರನ್ನು ಬಂಧು-ಬಳಗದವರನ್ನು, ಸ್ನೇಹಿತರನ್ನು ಹಾಗೂ ಪರಿಚಯಸ್ಥರನ್ನು ಭೇಟಿಯಾದೆ; ಸಹಾಯಹಸ್ತ ಚಾಚಿದೆ; ಹಣಕಾಸಿನ ನೆರವಿಗೆ ಅಂಗಲಾಚಿದೆ. ಯಾವುದೂ ಉಪಯೋಗವಾಗಲಿಲ್ಲ’ ಎಂದು ಹೇಳುವಾಗ ಸುಭಾಷನ ಕಣ್ಣಂಚು ಒದ್ದೆಯಾಗಿತ್ತು. 

‘ದಿವ್ಯಳೇ ನನಗೆ ಎಲ್ಲ; ಆಕೆಯೇ ನನ್ನ ಬೆಳಕು, ನನ್ನ ಭವಿಷ್ಯ, ನನ್ನ ಜೀವನ, ಅವಳು ನನ್ನ ಬದುಕಿಗೆ ಅರ್ಥವನ್ನು ತಂದಾಕೆ. ಎಂತಹ ವಿಷಮ ಪರಿಸ್ಥಿತಿಯಲ್ಲಿಯೇ ಆಗಿರಲಿ ಆಕೆಯನ್ನು ಬದುಕಿಸಿಕೊಳ್ಳಬೇಕಿತ್ತು. ಆಕೆ ಇಲ್ಲದಿದ್ದರೆ ನನಗೆ ಜೀವನವೇ ಇಲ್ಲ. ಎಲ್ಲ ಮಾರ್ಗಗಳೂ ಮುಚ್ಚಿದಾಗ ನಾನೊಂದು ನಿರ್ಧಾರಕ್ಕೆ ಬಂದೆ. ದಿವ್ಯಳ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದ ಡಾ. ಸಂಗಮೇಶ ಹಳಳ್ಳಿ ಅವರನ್ನು ಭೇಟಿಯಾದೆ. ನನ್ನ ಒಂದು ಕಿಡ್ನಿಯನ್ನು ಮಾರಿ ಅದರಿಂದ ಬರುವ ಹಣದಿಂದ ದಿವ್ಯಳ ಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದೆ. ಅದೊಂದೇ ಅಂದು ನನ್ನೆದುರಿಗಿದ್ದ ಮಾರ್ಗ’ ಎನ್ನುತ್ತಾ  ಸುಭಾಷ ಮೌನವಾಗಿ ಬಿಡುತ್ತಾನೆ.

 ‘ಸುಭಾಷನ ನಿರ್ಧಾರದಿಂದ ನನಗೆ ದಿಗ್ಭ್ರಮೆಯಾಯ್ತು. ಯಾರನ್ನಾದರೂ ನೋಡಿ ನನಗೆ ಪರಿಚಯಿಸಿ, ಅವರಿಗೆ ನನ್ನ ಕಿಡ್ನಿ ದಾನ ಮಾಡುತ್ತೇನೆ ಎಂದು ದುಂಬಾಲುಬಿದ್ದ. ಆತನ ಮನವೊಲಿಸುವ ನನ್ನ ಎಲ್ಲ ಪ್ರಯತ್ನಗಳೂ ವಿಫಲಗೊಂಡವು. ನಾನು ಸುಮ್ಮನಿದ್ದರೆ ಆತ ಬೇರೊಬ್ಬ ವೈದ್ಯರ ಬಳಿ ಹೋಗಲು ಸಿದ್ಧನಾಗಿದ್ದ. ಹಾಗಾಗಿದ್ದರೇ ಯಾವುದೊ ವೈದ್ಯರೊಬ್ಬರು ಆತನ ಕಿಡ್ನಿಯನ್ನು ತೆಗೆದೂ ಬಿಡಬಹುದಿತ್ತು. ಸೂಕ್ಷ್ಮ ಅರಿತ ನಾನು ಆತನಿಗೆ ಎರಡು ದಿನ ಬಿಟ್ಟು ಬರುವಂತೆ ಹೇಳಿದೆ. ನನ್ನ ಕೈಲಾದಷ್ಟು ಹಣಕಾಸಿನ ಸಹಾಯ ಹಾಗೂ ನನ್ನ ಪರಿಚಿತರಿಂದ ಹಣಕಾಸಿನ ನೆರವು ಒದಗಿಸುವುದರ ಮೂಲಕ ಆತನನ್ನು ಕಷ್ಟದಿಂದ ಪಾರುಮಾಡಬೇಕೆಂದು ನಿರ್ಧರಿಸಿದೆ’ ಎಂದು ಡಾ. ಸಂಗಮೇಶ ಹಳಳ್ಳಿ ವಿವರಿಸಿದರು.

ಡಾ. ಸಂಗಮೇಶ ಹಳಳ್ಳಿ ಹಾಗೂ ಅವರ ಮೂವತ್ತು ಸ್ನೇಹಿತರಾದ ಅರುಣ, ಕಿರಣ, ರಾಜಶೇಖರ್, ಸುಂದರ್, ಇಂದೂಪೈ ಹಾಗೂ ಇತರರು ತಮ್ಮ ಕೈಲಾದಷ್ಟು ನೆರವು ನೀಡಿದರು. ಡಾ. ಸಂಗಮೇಶ ಹಾಗೂ ಜಾಕೋಬ್ ತಲಾ  25,000 ರೂಪಾಯಿ ನೀಡಿದರೆ, ಶಿಕ್ಷಕಿಯಾದ ಇಂದೂಪೈ ಹಾಗೂ ಅವರ ಗಂಡ ಕೋರಮಂಗಲದಲ್ಲಿನ ಫೋರಂ ಮಾಲ್‌ನಲ್ಲಿ ಇಡೀ ಒಂದು ದಿನ ದೇಣಿಗೆ ಸಂಗ್ರಹಿಸಿದರು.

ಅವರೆಲ್ಲ ಬೆಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ತಜ್ಞವೈದ್ಯ ((ಬಿಐಒ) ಡಾ. ಶೇಖರ್ ಪಾಟೀಲ್‌ರನ್ನು ಸಂಪರ್ಕಿಸಿದರು. ದಿವ್ಯಳನ್ನು ರೇಡಿಯೇಶನ್ ಥೆರಪಿ ಹಾಗೂ ಕೀಮೋಥೆರಪಿಗಾಗೆ ಬಿಐಒಗೆ ಕಳುಹಿಸಲಾಯ್ತು. ದಂಪತಿ  ವಸತಿಗಾಗಿ ಶಾಂತಿನಗರದ ಡಬಲ್‌ರೋಡ್‌ನಲ್ಲಿನ ಕಾಳಪ್ಪ ನರ್ಸಿಂಗ್ ಹೋಂನಲ್ಲಿ ವ್ಯವಸ್ಥೆ ಮಾಡಲಾಯ್ತು. ಚಿಕಿತ್ಸೆ ಸುಮಾರು ಎರಡು ತಿಂಗಳ ಮಟ್ಟಿಗೆ ನಡೆಯಿತು. ದಿವ್ಯ ನಿಧಾನವಾಗಿ ಚೇತರಿಸಿಕೊಂಡಳು.

ಕೇವಲ ತನ್ನ 28ನೆ ವಯಸ್ಸಿಗೆ ಮೂರು ಗಂಭೀರ ಸ್ವರೂಪದ ಚಿಕಿತ್ಸೆಗೆ ಒಳಗಾಗಿದ್ದ ಆಕೆ ತೀವ್ರವಾಗಿ ಬಳಲಿದ್ದಳು. ಕೊಲ್ಲಂಗೆ ಹೊರಡುವ ಮುನ್ನ ಸುಭಾಷ ‘ಭೂಮಿಕಾ’ ಜತೆ ಮಾತನಾಡುತ್ತ ಹೇಳಿದ: ‘ನಮಗೆ ಬೆಂಗಳೂರಿನಲ್ಲಿ ಮರುಜನ್ಮ ಸಿಕ್ಕಿದೆ. ನನ್ನ ಹೆಂಡತಿ ಸಂಪೂರ್ಣವಾಗಿ ಗುಣವಾಗಿದ್ದಾಳೆ.

ಕೊನೆಗೂ ದೇವರು ನಮ್ಮ ಕೈಹಿಡಿದ. ನಾವೀಗ ಹೊಸ ಬದುಕಿಗೆ ಅಡಿ ಇರಿಸುತ್ತಿದ್ದೇವೆ. ನಮಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹಾಗೂ ಕೃತಜ್ಞತೆ. ಅದನ್ನು ಬಿಟ್ಟರೆ ಕೊಡಲು ನಮ್ಮಲ್ಲಿ ಏನೂ ಉಳಿದಿಲ್ಲ’.

 ‘ನನಗೆ ಏನು ಹೇಳಬೇಕು ಎಂದೇ ತಿಳಿಯದು. ಇಂದು ನಾನು ಬದುಕಿದ್ದರೆ ಅದಕ್ಕೆ ಕಾರಣ ನನ್ನ ಗಂಡ. ಮುಂದೆ ನನ್ನ ಬದುಕಿನಲ್ಲಿ ಏನು ಸಂಭವಿಸುವುದೋ ನನಗೆ ತಿಳಿದಿಲ್ಲ. ಏಳಲ್ಲ ಪ್ರತಿ ಜನ್ಮದಲ್ಲಿಯೂ ಸುಭಾಷ ಮಾತ್ರ ನನ್ನ ಗಂಡನಾಗಬೇಕೆಂದು ನನ್ನ ಆಸೆ. ನಮಗೆ ಸಹಾಯ ಮಾಡಿದವರಿಗೆ ನಾವು ಚಿರಋಣಿ’ ಎಂದು ದಿವ್ಯ ಹೇಳುತ್ತಾಳೆ.

ತಮ್ಮ ಊರು ಕೊಲ್ಲಂಗೆ ಹೋಗುವ ಸಲುವಾಗಿ ಕಾಳಪ್ಪ ನರ್ಸಿಂಗ್ ಹೋಂನಿಂದ ಸುಭಾಷ-ದಿವ್ಯ ಹೊರಟ ಮೇಲೆ ಅಲ್ಲಿ ಉಳಿದಿದ್ದು ಮಾತ್ರ ಸುಭಾಷ ದಾಖಲಿಸಿ ಹೋದ ಗಂಡ-ಹೆಂಡತಿಯ ಸಂಬಂಧದ ಬಗ್ಗೆ ಬೇರೆಯದೇ ಆದ, ವಿನೂತನ ಹಾಗೂ ಅರ್ಥಪೂರ್ಣ ವ್ಯಾಖ್ಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.