ADVERTISEMENT

ಆರೋಗ್ಯಕ್ಕೆ ಕಬ್ಬಿನ ಹಾಲು

ಗೀತಸದಾ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST

ದಾಹ ಇಂಗಿಸಲು ಶುಚಿ - ರುಚಿಯಾದ ಕಬ್ಬಿನ ಹಾಲಿನ ಪಾನಕ ‘ಅಮೃತ’ವೆಂದೇ ಹೇಳಬಹುದು. ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್,  ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು.  ಉರಿಮೂತ್ರ, ಮೂತ್ರಕಟ್ಟು, ಸಾಧಾರಣ ಜ್ವರ, ಕೆಮ್ಮು, ಅಜೀರ್ಣ, ಮಲಬದ್ಧತೆ, ಸಂಧಿವಾತ, ಜ್ಞಾಪಕಶಕ್ತಿ ಇಲ್ಲದಿರುವಿಕೆ, ರಕ್ತಹೀನತೆ, ಜಠರದ ಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಎಳನೀರು, ಲಿಂಬು, ಶುಂಠಿರಸ ಸೇರಿಸಿದ ಈ ಹಾಲಿನ ಸೇವನೆಯಿಂದ ಉತ್ತಮ ಫಲ ದೊರಕುತ್ತದೆ.

ಇತರ ಪ್ರಯೋಜನಗಳು :
ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಈ ಹಾಲಿನ ಸೇವನೆಯಿಂದ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಶಮನವಾಗಿ ಚೈತನ್ಯ ವೃದ್ಧಿಸುವುದು.

* ಇದು ಪಿತ್ತನಾಶಕ ಮತ್ತು ಹೃದಯಕ್ಕೆ ಹಿತಕಾರಿ. ಕಡಿಮೆ ಕ್ಯಾಲರಿಯನ್ನು ಹೊಂದಿರುವ ಇದರ ಸೇವನೆ ಶರೀರದ ತೂಕದ ನಿಯಂತ್ರಣಕ್ಕೆ ಸಹಕಾರಿ ಮತ್ತು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ  ಸರಿ ಮಾಡಿ ದೇಹವನ್ನು ಆರೋಗ್ಯವಾಗಿಡುತ್ತದೆ.

* ಕಬ್ಬಿನ ಹಾಲಿಗೆ ಎಳನೀರು ಬೆರೆಸಿ ಸೇವಿಸುವುದರಿಂದ ಅಸಿಡಿಟಿ  ಹಾಗೂ ಅರಿಶಿಣ ಕಾಮಾಲೆ ರೋಗ ಕಡಿಮೆಯಾಗುತ್ತದೆ.

* ಆಯಾಸ ಪರಿಹಾರ ಮಾಡುವ ಈ ಹಾಲಿನ ಸೇವನೆಯಿಂದ ದೇಹದ ಒಳಗಿನ ಅಂಗಾಂಗಳಾದ ಉದರ, ಕಿಡ್ನಿ, ಹೃದಯ, ಮೆದುಳು ಹಾಗೂ  ಕಣ್ಣಿನ ಕಾರ್ಯಕ್ಷಮತೆಯು ಹೆಚ್ಚುತ್ತದೆ.

*ರಕ್ತ ಶುದ್ಧೀಕರಣಕ್ಕೆ ಹಿತಕಾರಿಯಾದ ಇದರ ಸೇವನೆಯಿಂದ ದೇಹಕಾಂತಿ ಹೆಚ್ಚುತ್ತದೆ ಮತ್ತು ಶುಂಠಿ ಲಿಂಬು ಬೆರೆಸಿದ ಈ ಹಾಲಿನ ಸೇವನೆ ಜೀರ್ಣಶಕ್ತಿಯನ್ನು ವೃದ್ಧಿಸಿ ಹೊಟ್ಟೆ ಉಬ್ಬರ ಇತ್ಯಾದಿಗಳನ್ನು ಹೋಗಲಾಡಿಸುತ್ತದೆ

*ಇದರಲ್ಲಿರುವ ಆಲ್ಕಲೈನ್ ಎಂಬ ಅಂಶವು ಬ್ರೆಸ್ಟ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್  ಕೋಶಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಕುಡಿಯುವ ಮೊದಲು:
 *ಕಬ್ಬಿನ ಹಾಲು ಒಳ್ಳೆಯದೆಂದು ಸಿಕ್ಕಸಿಕ್ಕ (ನೊಣ, ಧೂಳು ಇರುವೆಡೆ) ಕಡೆಗಳಲ್ಲಿಯ ಹಾಲನ್ನು ಸೇವಿಸಿದರೆ, ಇದರಿಂದಲೇ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಹೊಕ್ಕು ಅನಾರೋಗ್ಯಕ್ಕೆ ಕಾರಣವಾದೀತು. ಆದ್ದರಿಂದ ಶುಚಿತ್ವದ ಕಡೆ ಗಮನ ಅತ್ಯಗತ್ಯ.

*ಮೊದಲೇ ಶೇಖರಮಾಡಿಟ್ಟಿರುವ ಕಬ್ಬಿನ ಹಾಲಿನ ಸೇವನೆಯಿಂದ ಅನಾರೋಗ್ಯವುಂಟಾಗುವ ಸಾಧ್ಯತೆ ಇರುವುದರಿಂದ ಆದಷ್ಟು ತಾಜಾ ಶುದ್ಧ ಹಾಲನ್ನೇ ಸೇವಿಸಬೇಕು. ಶುಚಿತ್ವದ ದೃಷ್ಟಿಯಿಂದ ಬರ್ಫ ಸೇರಿಸದಿದ್ದರೆ ಇನ್ನೂ ಉತ್ತಮ.

*ದಪ್ಪ ಕಬ್ಬಿನ ಹಾಲನ್ನು ಹೆಚ್ಚು ಸೇವಿಸಬಾರದು ಮತ್ತು ಒಳ್ಳೆಯದೆಂದು ಮಿತಿಮೀರಿ ಸೇವಿಸಿದರೆ  ಬೇಧಿಯಾಗುವ ಸಾಧ್ಯತೆಯೂ ಇದೆ. 

*ಆದಷ್ಟು ಲಿಂಬು, ಶುಂಠಿ ಬೆರೆಸಿದ ಮತ್ತು ಎಳನೀರು ಅಥವಾ ಶುದ್ಧ ನೀರು ಸೇರಿಸಿದ ಹಾಲಿನ ಸೇವನೆ ಉತ್ತಮ. ಇಲ್ಲವಾದರೆ ಕೆಲವರಿಗೆ ಜೀರ್ಣವಾಗಲಾರದು.

ರಾಸಾಯನಿಕಯುಕ್ತ ಪಾನೀಯಗಳಿಗೆ ಮೊರೆಹೋಗುವ ಬದಲು ತಾಜಾ  ಕಬ್ಬಿನ ಹಾಲಿನ ಸೇವನೆಯಿಂದ ಶರೀರದ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.