ADVERTISEMENT

ಆರೋಗ್ಯ ಹೊತ್ತಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಅತಿತೂಕಕ್ಕೆ ಆತಂಕವೇಕೆ..?
ಲೇಖಕಿ: ಡಾ.ಎಚ್.ಎಸ್. ಪ್ರೇಮಾ
ಪ್ರಕಾಶನ: ಅಂಕಿತ ಪುಸ್ತಕ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು. ಬೆಲೆ: ರೂ 130 .

ಬದಲಾದ ಜೀವನಶೈಲಿ, ಫಾಸ್ಟ್‌ಫುಡ್, ಜಂಕ್‌ಫುಡ್‌ಗಳ ಬಳಕೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜತೆಗೆ ಕೆಲಸದ ಒತ್ತಡದಿಂದಾಗಿ ವ್ಯಾಯಾಮ, ನಡಿಗೆಯ ಕೊರತೆಯೂ ಉಂಟಾಗಿ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇದಿನೇ ಏರುತ್ತಿದೆ. ಅತಿತೂಕವಂತೂ ಇಂದಿನ ದಿನಗಳಲ್ಲಿ ಜಾಗತಿಕ ಮತ್ತು ಗಂಭೀರ ಸಮಸ್ಯೆಯಾಗಿ ರೂಪುಗೊಂಡಿದೆ.

ಅತಿತೂಕವನ್ನು ನಿವಾರಿಸುವುದು ಹೇಗೆ? ಏರುತ್ತಿರುವ ತೂಕ ನಿಯಂತ್ರಿಸುವ ಉಪಾಯ ಏನು ಎಂಬುದು ತಿಳಿಯದೆ ಡಯಟೀಷಿಯನ್ ಬಳಿ ಓಡುವವರ ಸಂಖ್ಯೆಯೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಸಮತೋಲಿತ, ಸಾವಯವ ಆಹಾರ, ತೂಕ ಕಡಿಮೆ ಮಾಡುವಂತಹ ಪೌಷ್ಟಿಕಾಂಶವಿರುವ ಆಹಾರ ನಮ್ಮ ದೇಹಕ್ಕೆ ಅತೀ ಮುಖ್ಯ ಎಂಬುದು ಗೊತ್ತಿದ್ದರೂ ಇದನ್ನು ಜೀವನಕ್ರಮದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ.

ಡಯಟ್ ಮಾಡುವುದು ಹೇಗೆ ಮತ್ತು ಯಾಕೆ, ಯಾವ ಆಹಾರ ತಿನ್ನಬಹುದು, ಆಹಾರ ಕ್ರಮದ ಬಗ್ಗೆ ನಮ್ಮಲ್ಲಿರುವ ತಪ್ಪು ಕಲ್ಪನೆಗಳೇನು? ವಿದೇಶಿ ಧಾನ್ಯ, `ಹೈಫೈಬರ್, ಕೊಲೆಸ್ಟ್ರಾಲ್ ಫ್ರೀ~ ಎಂಬ ಲೇಬಲ್ ಅಂಟಿಸಿಕೊಂಡ ಆಹಾರ ಖರೀದಿಸಿ ತಿಂದರೆ ತೂಕ ಇಳಿಯುತ್ತದೆ ಎಂಬ ಭ್ರಮೆ ನಮ್ಮಲ್ಲಿ ಬೆಳೆಸಿಕೊಳ್ಳುವುದು ಏಕೆ? - ಇವೇ ಮುಂತಾದ ಪ್ರಶ್ನೆಗಳಿಗೆ ವೈಜ್ಞಾನಿಕ ವಿಶ್ಲೇಷಣೆ ಸಹಿತ ಸರಿಯಾದ ಮತ್ತು ಸರಳ ಉತ್ತರ ನಮಗೆ ಈ ಪುಸ್ತಕದಲ್ಲಿ ಸಿಗುತ್ತದೆ.

ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರ ಅನಿಸಿಕೆ. ಆದರೆ ಡಯಟೀಷಿಯನ್ ಡಾ. ಪ್ರೇಮಾ ಪ್ರಕಾರ ಅನ್ನ ತಿನ್ನಿ, ವ್ಯಾಯಾಮ ಮಾಡಿ ಎಂಬುದು. ಓಟ್ಸ್ ಬದಲು ಉಪ್ಪಿಟ್ಟು ತಿನ್ನಿ, ಇಡ್ಲಿ ಇಲ್ಲದೆ ತಿಂಡಿ ಇಲ್ಲ.. ಇವೇ ಮುಂತಾದ ಸಾಲುಗಳು ಅಚ್ಚರಿ ಹುಟ್ಟಿಸಿದರೂ ವೈಜ್ಞಾನಿಕವಾಗಿ ಸಾಬೀತಾಗಿರುವ ವಾಸ್ತವ ಎಂಬುದನ್ನು ಮಾತ್ರ ಮರೆಯುವಂತಿಲ್ಲ.

ನಾವು ಯಾವ ಆಹಾರ ತಿಂದರೆ ತೂಕ ಹೆಚ್ಚುತ್ತದೆ ಎಂದು ಹೆದರುತ್ತೇವೋ ಅವೆಲ್ಲ ಆಹಾರ ಈ ಡಯಟೀಷಿಯನ್ ಹಾಕಿಕೊಡುವ ಚಾರ್ಟ್‌ನಲ್ಲಿದೆ ಎಂದರೆ ನಂಬುತ್ತೀರಾ..? ಹಣ್ಣು, ತರಕಾರಿ, ಧಾನ್ಯ, ಬೇಳೆಕಾಳುಗಳಲ್ಲಿರುವ ಕ್ಯಾಲೊರಿ ಬಗ್ಗೆ, ಪುರುಷರು ಯಾವ ವಯಸ್ಸಿಗೆ ಎಷ್ಟು ತೂಕವಿರಬೇಕು, ಮಹಿಳೆಯರು ಎಷ್ಟಿರಬೇಕು, ಯಾವ ಆಹಾರ ಕ್ರಮ ಅನುಸರಿಸಬೇಕು, ಈಗಾಗಲೇ ಅತಿತೂಕದವರಾಗಿದ್ದರೆ ತೂಕ ಇಳಿಸಿಕೊಳ್ಳುವ ವಿಧಾನ ಹೇಗೆ ಎಂಬುದನ್ನು ಕೂಡ ಡಾ. ಪ್ರೇಮಾ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ.

ರಾತ್ರಿ ಪಾಳಿ ಮಾಡಿದರೆ ನಿದ್ದೆ, ಆಹಾರ ಕ್ರಮ ಏರುಪೇರಾಗುತ್ತದೆ ಎಂಬುದನ್ನು ಕಾಲ್‌ಸೆಂಟರ್ ಸ್ನೇಹಿತೆ ಹೇಳಿರುವ ಮಾತನ್ನು ಕೃತಿಯಲ್ಲಿ ಪಡಿಮೂಡಿಸಿ ಈ ರಾತ್ರಿಪಾಳಿ ಸಮಸ್ಯೆಯಿಂದ ತೂಕ ಹೇಗೆ ಏರುತ್ತದೆ; ಇದಕ್ಕೆ ಪರಿಹಾರ ಏನು ಎಂಬುದನ್ನು ಕೂಡ ಸಂಕ್ಷಿಪ್ತವಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ. ನಾಲಿಗೆಗೆ ಹಿತ ಎನಿಸುವ ಮನೆಯಡಿಗೆ ತಿನ್ನಿ, ಜತೆಗೆ ನಡಿಗೆಯನ್ನೂ ಮಾಡಿ ಎಂಬ ಸಲಹೆಗಳ ಜತೆಗೆ `ವಾರದಲ್ಲಿ ತೂಕ ಇಳಿಸಿ ಸ್ಲಿಮ್ ಆಗಿ, ತೆಳ್ಳಗಾಗಿಸಲು ಈ ಮಾತ್ರೆ ಸೇವಿಸಿ..~ ಇವೇ ಮುಂತಾದ ಜೇಬಿಗೆ ಕತ್ತರಿ ಹಾಕಿಸುವ ಜಾಹೀರಾತಿಗೆ ಮರುಳಾಗಬೇಡಿ ಎಂಬ ಎಚ್ಚರಿಕೆಯನ್ನೂ ಪ್ರೇಮಾ ಕೊಡುತ್ತಾರೆ.

ಸರಳವಾದ ಭಾಷೆ, ಸುಂದರ ನಿರೂಪಣೆ, ಅತಿತೂಕಿಗಳಿಗೆ ಕಿವಿಮಾತು, ಸಲಹೆ ಸೂಚನೆಗಳನ್ನು ವಿವರಿಸಿದ ರೀತಿ ಆಪ್ರವಾಗಿದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಕ್ಲಿನಿಕ್‌ಗೆ ಬಂದ ಅತಿತೂಕಿಗಳನ್ನು `ಸ್ನೇಹಿತರು~ ಎಂದು ಕರೆದು ಅವರಿಗೆ ನೀಡಿದ ಸಲಹೆ, ಮಾರ್ಗದರ್ಶನಗಳ ವಿವರಗಳೂ ಸಮಗ್ರವಾಗಿವೆ. ಅಲ್ಲದೆ ಅತಿತೂಕ ಇರುವವರು ತಲೆ ಮೇಲೆ ಕೈಹೊತ್ತು ಕೂರದೆ ಸರಳವಾಗಿ ಅನುಸರಿಸಿಕೊಂಡು ಹೋಗಿ ತೂಕ ಇಳಿಸಿ ಹಾಯಾಗಿರಬಹುದು ಎಂಬುದನ್ನೂ ಸೂಚ್ಯವಾಗಿ ಪುಸ್ತಕದಲ್ಲಿ ವಿವರಿಸಿದ್ದೂ ಕೂಡ ಪುಸ್ತಕದ ಮೌಲಿಕತೆ ಹೆಚ್ಚಲು ಸಹಕಾರಿಯಾಗಿದೆ.

ಅತಿತೂಕ ಇರುವವರಿಗೆ, ಮಹಿಳೆಯರಿಗೆ, ಕುಳಿತೇ ಕೆಲಸ ಮಾಡುವವರಿಗೆ, ಅವೈಜ್ಞಾನಿಕವಾಗಿ ಆಹಾರ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವ ಆತಂಕವಿರುವವರಿಗೆ, ಡಯಟ್ ಕಾನ್ಷಿಯಸ್ ಇರುವವರಿಗೆ ಅಲ್ಲದೆ `ಡಯಟ್~ ಕುರಿತು ಸಲಹೆ ಕೊಡುವವರಿಗೂ ಕೂಡ ಸೂಕ್ತವಾಗಿದೆ ಈ ಹೊತ್ತಿಗೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT