ADVERTISEMENT

ಕ್ಯಾನ್ಸರ್ ಸೋಂಕುರೋಗವೆ?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಕ್ಯಾನ್ಸರ್ ಸೋಂಕುರೋಗವೆ?
ಕ್ಯಾನ್ಸರ್ ಸೋಂಕುರೋಗವೆ?   

 ಇಂದು ವಿಶ್ವ ಕ್ಯಾನ್ಸರ್ ದಿನ...

ತಪ್ಪು ಕಲ್ಪನೆ: ಕ್ಯಾನ್ಸರ್ ಮಾರಕ ರೋಗವಾಗಿದ್ದು ಗುಣಪಡಿಸಲು ಅವಕಾಶವಿಲ್ಲ.
ವಾಸ್ತವಾಂಶ: ಆರಂಭದಲ್ಲಿಯೇ ಪತ್ತೆ ಮಾಡಿದಲ್ಲಿ ಕ್ಯಾನ್ಸರ್ ಗುಣಪಡಿಸಬಹುದು. ಉನ್ನತಹಂತದಲ್ಲಿ ಪತ್ತೆಯಾದರೂ ಕೂಡ ಲಕ್ಷಣಗಳನ್ನು ಕಡಿಮೆ ಮಾಡಿ ದೀರ್ಘಕಾಲ ಬದುಕುವಂತೆ ಮಾಡಬಹುದಾಗಿದೆ. ಅದು  ಆಸ್ತಮಾ ಅಥವ ಮಧುಮೇಹದಂತೆ ದೀರ್ಘಕಾಲದ ವಾಸಿಯಾಗದ ರೋಗವಾಗಿದೆ.

ತಪ್ಪು ಕಲ್ಪನೆ: ಬಹುತೇಕ ಕ್ಯಾನ್ಸರ್‌ಗಳು ವಂಶ ಅನುವಂಶಿಕವಾಗಿ ಬರುವಂತಹವುಗಳಾಗಿವೆ.
ವಾಸ್ತವಾಂಶ: ಎಲ್ಲಾ ಕ್ಯಾನ್ಸರ್‌ಗಳಲ್ಲಿ ಶೇ. 5ರಿಂದ ಶೇ.10ರಷ್ಟು ಮಾತ್ರ ನಿಜಕ್ಕೂ ಅನುವಂಶಿಕ ರೋಗಗಳಾಗಿವೆ. ಒಬ್ಬ ವ್ಯಕ್ತಿಗೆ  ಸ್ತನ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ಅವರನ್ನು ಈ ರೋಗಗಳ ಉನ್ನತ ಅಪಾಯ ಇರುವಂಥವರನ್ನಾಗಿ ಮಾಡುವ ವಂಶವಾಹಿಗಳು ಇವೆಯೇ ಎಂಬುದನ್ನು ಈಗ ಪತ್ತೆ ಮಾಡಬಹುದಾದ ಪರೀಕ್ಷೆಗಳು ಲಭ್ಯವಿವೆ.

ತಪ್ಪು ಕಲ್ಪನೆ: ಕ್ಯಾನ್ಸರ್ ಸೋಂಕು ರೋಗ.
ವಾಸ್ತವಾಂಶ: ಕ್ಯಾನ್ಸರ್ ಸೋಂಕು ರೋಗವಲ್ಲ. ನಿಜವಾಗಿ ಕ್ಯಾನ್ಸರ್‌ಗೆ ಗುರಿಯಾಗಿರುವ ವ್ಯಕ್ತಿಗೆ ರೋಗದ ವಿರುದ್ಧ ಹೋರಾಡಲು ನಿಮ್ಮ ಪ್ರೀತಿ ಮತ್ತು ನೈತಿಕ ಬೆಂಬಲದ ಅಗತ್ಯ ಇರುತ್ತದೆ. ಕ್ಯಾನ್ಸರ್ ಸೋಂಕು ರೋಗವಲ್ಲ. ಆದರೆ, ಹೆಪಟೈಟಿಸ್ ಸಿ ಉಂಟು ಮಾಡುವ ವೈರಸ್ ಪಿತ್ತಜನಕಾಂಗದ ಕ್ಯಾನ್ಸರ್‌ಅನ್ನು ಉಂಟು ಮಾಡಬಹುದು. ಅಲ್ಲದೆ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಉಂಟು ಮಾಡುವ  ಹ್ಯೂಮನ್ ಪ್ಯಾಪಿಲೋಮಾ ವೈರಸ್‌ಗಳು ಲೈಂಗಿಕ ಸಂಪರ್ಕದಿಂದ ಹರಡಬಹುದು. ಅಲ್ಲದೆ ಸೋಂಕಿರುವ ಸೂಜಿಯಿಂದ ಹರಡಬಹುದು.

ತಪ್ಪು ಕಲ್ಪನೆ: ಅತ್ಯಂತ ಹೆಚ್ಚಿನ ಕ್ಯಾನ್ಸರ್ ಅಪಾಯವಿರುವ ವ್ಯಕ್ತಿಗಳು ಮಾತ್ರ ಕ್ಯಾನ್ಸರ್ ಸಂಬಂಧಿ ತಪಾಸಣೆಗೆ ಒಳಗಾಗಬೇಕು.
ವಾಸ್ತವಾಂಶ: ಎಲ್ಲಾ ವಯಸ್ಕರು ನಿಗದಿತ ಅವಧಿಯಲ್ಲಿ ಕ್ಯಾನ್ಸರ್ ಪರೀಕ್ಷೆಗೆ ಒಳಪಡಬೇಕು.

 ತಪ್ಪು ಕಲ್ಪನೆ: ಸಿಗರೇಟಿಗೆ ಬದಲಾಗಿ ತಂಬಾಕು ಜಗಿಯುವುದು ಸುರಕ್ಷಿತವಾಗಿರುತ್ತದೆ.
ವಾಸ್ತವಾಂಶ: ನೆಶ್ಯವಾಗಲಿ ಅಥವ ತಂಬಾಕು ಜಗಿಯುವುದು ಯಾವಾಗಲೂ ಒಳ್ಳೆಯದಲ್ಲ. ಅವು ಸಿಗರೇಟಿನಂತೆಯೇ ಚಟಕ್ಕೆ ಒಳಪಡಿಸುವಂತಹವುಗಳಾಗಿವೆ. ಇವು ಗಂಟಲಿನ ಮತ್ತು ಬಾಯಿಯ ಕ್ಯಾನ್ಸರ್ ಉಂಟು ಮಾಡಬಲ್ಲವು.

ತಪ್ಪು ಕಲ್ಪನೆ: ನಾನು ಹಲವು ವರ್ಷಗಳಿಂದ ಧೂಮಪಾನ  ಮಾಡಿದ್ದೇನೆ. ಹಾನಿ ಈಗಾಗಲೇ ಉಂಟಾಗಿದೆ. ಆದ್ದರಿಂದ ಧೂಮಪಾನ ಬಿಡುವುದು ಲಾಭದಾಯಕವಲ್ಲ.
ವಾಸ್ತವಾಂಶ: ಧೂಮಪಾನ ಬಿಡಲು ಯಾವತ್ತೂ ತಡವಾದದ್ದೇನಲ್ಲ. ಧೂಮಪಾನ ತ್ಯಜಿಸಿದ ನಂತರ ರಕ್ತದ ಹರಿವು ಮತ್ತು ಶ್ವಾಸಕೋಶದ ಕಾರ್ಯದಲ್ಲಿ ಸುಧಾರಣೆ ಉಂಟಾಗುತ್ತದೆ.  ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯವೂ ಕೂಡ ಧೂಮಪಾನ ತ್ಯಜಿಸಿದ ನಂತರ ಕಡಿಮೆಯಾಗುತ್ತಾ ಹೋಗುತ್ತದೆ. 10 ವರ್ಷಗಳ ನಂತರ ಈ ಅಪಾಯ ಶೇ. 50ರಷ್ಟು ಕಡಿಮೆಯಾಗುತ್ತದೆ.

ತಪ್ಪು ಕಲ್ಪನೆ: ನಮ್ಮ ಕುಟುಂಬದಲ್ಲಿ ಸ್ತನಕ್ಯಾನ್ಸರ್‌ನ ಯಾವುದೇ ಪ್ರಕರಣ ಇರುವುದಿಲ್ಲ. ಆದ್ದರಿಂದ ಅದು ನನ್ನ ಮೇಲೆ ಪರಿಣಾಮವುಂಟು ಮಾಡುತ್ತದೆ ಎಂಬ ಚಿಂತೆಯ ಅಗತ್ಯ ನನಗಿಲ್ಲ.
ವಾಸ್ತವಾಂಶ :  ಸ್ತನಕ್ಯಾನ್ಸರ್ ಇರುವುದಾಗಿ ಪತ್ತೆ ಮಾಡಲಾದ ಬಹುತೇಕ ಮಹಿಳೆಯರ ಕುಟುಂಬದಲ್ಲಿ ಈ ರೋಗದ ಇತಿಹಾಸ ಇರುವುದಿಲ್ಲ. ಆದರೆ, ತಾಯಿಯ ಕಡೆಯ ಸಂಬಂಧಿಯಲ್ಲಿ ಈ ರೋಗ ಇದ್ದರೆ ಅದು ನಿಮಗೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಬೇಗನೇ ತಪಾಸಣೆಗೆ ಒಳಗಾಗುವುದು ಒಳ್ಳೆಯದು.

ತಪ್ಪು ಕಲ್ಪನೆ: ಮಹಿಳೆಯರಿಗೆ ಮಾತ್ರ ಸ್ತನ ಕ್ಯಾನ್ಸರ್ ಬರುತ್ತದೆ.
ವಾಸ್ತವಾಂಶ: ಎಲ್ಲರಿಗೂ ಇರುವ ಅತ್ಯಂತ ದೊಡ್ಡದಾದ ತಪ್ಪು ಕಲ್ಪನೆ ಇದಾಗಿದೆ. ಪುರುಷರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಆದರೆ ಅದು ವಿರಳ.

ತಪ್ಪು ಕಲ್ಪನೆ: ಕಿಮೋಥೆರಪಿಯ ಔಷಧಿಗಳು ಸಾಮಾನ್ಯವಾಗಿ ಸಾವನ್ನುಂಟು ಮಾಡುತ್ತವೆ. ಮತ್ತು ಅಗತ್ಯವಿದ್ದಾಗ ಇವುಗಳನ್ನು ತಪ್ಪಿಸುವುದು ಉತ್ತಮವಾದ ಆಯ್ಕೆಯಾಗಿರುತ್ತದೆ.
ವಾಸ್ತವಾಂಶ: ಕಿಮೋಥೆರೆಪಿಯ ಔಷಧಗಳ ಆಯ್ಕೆ ಮತ್ತು ಅವುಗಳ ಔಷಧ ಪ್ರಮಾಣವನ್ನು ಪತ್ತೆಯಾದ ರೋಗಕ್ಕನುಗುಣವಾಗಿ ಅಲ್ಲದೆ ರೋಗಿಯ ಸಾಮಾನ್ಯ ಸ್ಥಿತಿಯನ್ನು ಗಮನಿಸಿ ತಜ್ಞರು ನಿರ್ಧರಿಸುತ್ತಾರೆ. ವಿರಳವಾಗಿ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಲಾಭಗಳನ್ನು ಅಪಾಯಗಳ ಜೊತೆಗೆ ಹೋಲಿಸಿ ನೋಡಬೇಕು. ವಾಸಿಯಾಗುವ ಅವಕಾಶವನ್ನು ಅಲ್ಲಗಳೆಯುವ ಮುನ್ನ ನಿಮ್ಮ ವೈದ್ಯರೊಂದಿಗೆ ಮಾತನಾಡಿರಿ.

ತಪ್ಪು ಕಲ್ಪನೆ: ರೇಡಿಯೋಥೆರೆಪಿ ಎಂದರೆ ವಿದ್ಯುತ್ ಆಘಾತ ನೀಡುವುದು ಮತ್ತು ಅದು ತ್ವಚೆ ಮತ್ತು ಆಂತರಿಕ ಅಂಗಗಳನ್ನು ಸುಟ್ಟುಬಿಡುತ್ತದೆ.
ವಾಸ್ತವಾಂಶ: ರೇಡಿಯೋಥೆರೆಪಿ ಎಂದರೆ ಉನ್ನತಶಕ್ತಿಯ ಎಕ್ಸರೇಗಳನ್ನು ಬಳಸಿ ಉನ್ನತ ತಂತ್ರಜ್ಞಾನದೊಂದಿಗೆ ಯಾವುದೇ ವಿಷ ಪರಿಣಾಮ ಉಂಟಾಗದಂತೆ ಚಿಕಿತ್ಸೆ ಕೈಗೊಳ್ಳಲಾಗುತ್ತದೆ.

ತಪ್ಪು ಕಲ್ಪನೆ: ರೇಡಿಯೋಥೆರೆಪಿ ಸ್ವೀಕರಿಸುವ ರೋಗಿ ಆತನ ಕುಟುಂಬ ಸದಸ್ಯರು ಹಾಗೂ ಮಕ್ಕಳಿಗೆ ಹಾನಿಕಾರಕನಾಗಿರುತ್ತಾನೆ.
ವಾಸ್ತವಾಂಶ: ವ್ಯಕ್ತಿ ರೇಡಿಯೋಥೆರೆಪಿ ಚಿಕಿತ್ಸೆ ಪಡೆದ ಕೊಠಡಿಯಿಂದ ಹೊರಬಂದ ನಂತರ ಸುರಕ್ಷಿತನಾಗಿದ್ದು ಯಾವುದೇ ವಿಕಿರಣದ ಅಪಾಯ ಹೊಂದಿರುವುದಿಲ್ಲ.

 ತಪ್ಪು ಕಲ್ಪನೆ: ರೇಡಿಯೋಥೆರೆಪಿಯಿಂದ ಕೂದಲು ಉದುರುತ್ತವೆ.
ವಾಸ್ತವಾಂಶ: ಕೀಮೋಥೆರೆಪಿಯಂತಲ್ಲದೆ ರೇಡಿಯೋಥೆರೆಪಿ  ಚಿಕಿತ್ಸೆ ನೀಡಿದ ಪ್ರದೇಶದಲ್ಲಿ ಮಾತ್ರ ಕೂದಲು ಉದುರುತ್ತವೆ.

(ಲೇಖಕರು ವಿಕಿರಣ ಕ್ಯಾನ್ಸರ್ ರೋಗ ತಜ್ಞರು, ಮೊಬೈಲ್: 94834 00000)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT