ADVERTISEMENT

ಗ್ರೀನ್ ಟೀ ಕುಡಿಯಬೇಕು ಯಾಕೆ?

ಡಾ.ಲೀಲಾವತಿ ದೇವದಾಸ್‌
Published 12 ಜೂನ್ 2015, 19:30 IST
Last Updated 12 ಜೂನ್ 2015, 19:30 IST

ನಮಗೆ ತಿಳಿದೋ ತಿಳಿಯದೆಯೋ ನಮ್ಮ ದೇಹದಲ್ಲಿ ನೂರೆಂಟು ಜೈವಿಕ ಕ್ರಿಯೆಗಳು ಅವಿರತವಾಗಿ ಜರುಗುತ್ತಲೇ ಇರುತ್ತವೆ. ಅವುಗಳಲ್ಲಿ ಹಾಸುಹೊಕ್ಕಾಗಿರುವ ಚಯಾಪಚಯ ಕ್ರಿಯೆಯು (ಮೆಟಾಬೊಲಿಸಮ್‌) ಉಂಟಾಗುತ್ತಿರುವಾಗ, ನಮ್ಮ ಜೀವ ಕೋಶದಲ್ಲಿ ಬ್ಯಾಟರಿಗಳಂತೆ ಶಕ್ತಿ ನೀಡುವ ಮೈಟೊಕಾಂಡ್ರಿಯಾ ಗಳಿಂದ ಮುಕ್ತಮೂಲಗಳು (ಫ್ರೀ ರ್‍ಯಾಡಿಕಲ್‌) ಬಿಡುಗಡೆಯಾಗುತ್ತವೆ.

ಈ ಮುಕ್ತಮೂಲಗಳು ತುಂಬಾ ಚಟುವಟಿಕೆಯಿಂದ ಇದ್ದರೂ, ಅವುಗಳಲ್ಲಿ ಒಂದು ಋಣ ವಿದ್ಯುತ್‌ಕಣದ (ಎಲೆಕ್ಟ್ರಾನ್‌) ಕೊರತೆ ಇರುತ್ತದೆ, ಈ ತೀವ್ರ ಕೊರತೆಯನ್ನು ನಿವಾರಿಸಿಕೊಳ್ಳಲು ಮುಕ್ತಮೂಲಗಳು ದೇಹದ ಬೇರೆ ಬೇರೆ ಜೀವಕೋಶಗಳಿಗೆ ದಾಳಿಯಿಟ್ಟು, ಅಲ್ಲಿನ ಕೇಂದ್ರಬೀಜದ ಡಿ.ಎನ್‌.ಎ.ಗೆ ಘಾಸಿಮಾಡಿ, ಅಲ್ಲಿಂದ ಒಂದು ಎಲೆಕ್ಟ್ರಾನ್‌ ಪಡೆಯಲು ಪ್ರಯತ್ನಿಸುತ್ತದೆ ಪಡೆಯುವುದೂ ಉಂಟು.

ಇಷ್ಟೇ ತಾನೇ? ತೆಗೆದುಕೊಳ್ಳಲಿ ಬಿಡಿ ಎಂದು ನಾವು ಕೈಕಟ್ಟಿಕೊಂಡು ಕೂರಲಾಗುವುದಿಲ್ಲ. ಯಾಕೆಂದರೆ, ಆ ಘಾಸಿ ಹೊಂದಿದ ಡಿ.ಎನ್‌.ಎ. ನಮ್ಮ ದೇಹದಲ್ಲಿ ಗಡ್ಡೆಗಳು, ಮುಖ್ಯವಾಗಿ ಕ್ಯಾನ್ಸರ್‌ ಗಡ್ಡೆಗಳಾಗಲು ಕಾರಣವಾಗುತ್ತದೆ. ಈ ಪ್ರಕ್ರಿಯೆಯನ್ನು ತಡೆಗಟ್ಟಿ, ಮುಕ್ತಮೂಲಗಳು ಬಿಡುಗಡೆಯಾಗದೇ ಇರಲು, ಅಥವಾ ಅವುಗಳನ್ನು ನಾಶಪಡಿಸಲು ನಮಗಾಗುವುದಿಲ್ಲವೆ?

ಇದುವರೆಗೆ ಅದು ಸಾಧ್ಯವಾಗಿಲ್ಲ. ಆದರೆ, ಆ ವಿನಾಶಕ ಪ್ರಕ್ರಿಯೆಗೆ ಲಗಾಮು ಹಾಕಿ, ವ್ಯಕ್ತಿಯು, ತನ್ನ ಆರೋಗ್ಯವನ್ನು ತಕ್ಕಮಟ್ಟಿಗಾದರೂ ಕಾಪಾಡಿಕೊಳ್ಳಲು ಒಂದು ದಾರಿ ಇದೆ! ಅದೇ ಆಮ್ಲಜನಕೀಕರಣ ವಿರೋಧಿಗಳು (ಆ್ಯಂಟಿ ಆಕ್ಸಿಡೆಂಟ್‌ಗಳು).

ಹೌದು, ಈ ಆ್ಯಂಟಿ ಆಕ್ಸಿಡೆಂಟ್‌ಗಳು ಎಲ್ಲಿ ಸಿಗುತ್ತವೆ? ಅವುಗಳನ್ನು ಹೇಗೆ ಪಡೆಯುವುದು? ಈ ಚಿಂತೆ ನಮಗೆ ಬೇಡ. ನಮ್ಮ ಆಹಾರದಲ್ಲೇ ಅವು ಯಥೇಚ್ಛವಾಗಿ ದೊರಕುತ್ತವೆ. ಹಣ್ಣು, ಸೊಪ್ಪು, ತರಕಾರಿಗಳನ್ನು ಪ್ರತಿದಿನವೂ ನಾವು ನಮ್ಮ ಆಹಾರದಲ್ಲಿ ಧಾರಾಳವಾಗಿ ಬಳಸಿದರೆ, ಆ ಆ್ಯಂಟಿ ಆಕ್ಸಿಡೆಂಟ್‌ಗಳು ನಮ್ಮ ದೇಹ ಸೇರಿ, ನಮ್ಮನ್ನು ಈ ಭಕ್ಷಕ ಮುಕ್ತ ಮೂಲಗಳಿಂದ ರಕ್ಷಿಸುತ್ತವೆ. ಅದು ಹೇಗೆ? ಅವು, ಮುಕ್ತ ಮೂಲಗಳೊಂದಿಗೆ ಹೋರಾಡಿ, ಅವುಗಳನ್ನು ನಾಶಪಡಿಸುತ್ತವೆಯೇ?

ಇಲ್ಲ, ಅವುಗಳ ಕಾರ್ಯವೈಖರಿ ಇನ್ನಷ್ಟು ರೋಚಕವಾಗಿದೆ! ಮುಕ್ತಮೂಲಗಳಿಗೆ ಬೇಕಾದದ್ದು ಒಂದು ಎಲೆಕ್ಟ್ರಾನ್‌ ತಾನೇ? ಅದನ್ನು ಈ ಆಮ್ಲಜನಕೀಕರಣ ವಿರೋಧಿಗಳು ತಾವೇ ಆ ಮುಕ್ತಮೂಲಗಳಿಗೆ ಸರಬರಾಜು ಮಾಡಿ, ಅವು ಜೀವಕೋಶಗಳಿಗೆ ದಾಳಿಯಿಡದಂತೆ ತಡೆಯುತ್ತವೆ. ಡಿ.ಎನ್‌.ಎ.ಗಳಿಗೆ ಬರುವ ಅಪಾಯವೂ ದೂರವಾಗುತ್ತದೆ.

ADVERTISEMENT

ಹಣ್ಣು, ಸೊಪ್ಪು, ತರಕಾರಿಗಳಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳಿಗಿಂತಲೂ ಗ್ರೀನ್‌ ಟೀ ನಲ್ಲಿರುವ ಇಜಿಸಿಜಿ (ಎಪಿ ಗ್ಯಾಲೋಕ್ಯಾಟಚಿನ್‌ ಗ್ಯಾಲೇಟ್‌), ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್‌ ಎಂದು ಹೆಸರಾಗಿದೆ. ಹಾಗಾಗಿ, ದಿನವೂ ಗ್ರೀನ್ ಟೀ ಕುಡಿಯುವ ಅಭ್ಯಾಸ (ಒಂದು ಮಿತಿಯಲ್ಲಿ!) ಒಳ್ಳೆಯದು. ಏನಿದು ಗ್ರೀನ್ ಟೀ? ಇದಕ್ಕೂ ಬೇರೆ ಟೀ ಗಳಿಗೂ ಇರುವ ವ್ಯತ್ಯಾಸವೇನು? ಬೇರೆ ಟೀ ಗಳಲ್ಲೂ ಇದೇ ಆ್ಯಂಟಿ ಆಕ್ಸಿಡೆಂಟ್ ಗುಣ ಇರುವುದಿಲ್ಲವೇನು?"

ಸಾಮಾನ್ಯವಾಗಿ ಟೀ ಎಲೆಗಳನ್ನು ಸಂಸ್ಕರಿಸುವ ವಿವಿಧ ಹಂತಗಳಲ್ಲಿ, ಹುದುಗುಬರಿಸುವ ಪ್ರಕ್ರಿಯೆ. (ಫರ್ಮೆಂಟೇಷನ್‌) ಬಹಳ  ಮುಖ್ಯವಾದದ್ದು. ಆದರೆ ಹೀಗೆ ಮಾಡಿದಾಗ, ಆ ಎಲೆಗಳಲ್ಲಿನ  ಆ್ಯಂಟಿ ಆಕ್ಸಿಡೆಂಟ್‌ ಗುಣ ಲುಪ್ತವಾಗುತ್ತೆ. ಹಾಗಾಗಿ ಗ್ರೀನ್‌ ಟೀ ಯನ್ನು ಸಂಸ್ಕರಿಸುವಾಗ, ಟೀ ಎಲೆಗಳಿಗೆ ಹುದುಗುಬರಿಸದೆ ಅತಿ ಹೆಚ್ಚು ಶಾಖದ ಆವಿಯಲ್ಲಿ ಅದನ್ನು ಬೇಯಿಸುತ್ತಾರೆ. ಹೀಗೆ ಮಾಡುವುದರಿಂದ ಅದರ ಆ್ಯಂಟಿಆಕ್ಸಿಡೆಂಟ್‌ ಗುಣ ನಾಶವಾಗದೆ ಉಳಿಯುತ್ತದೆ.

ಹಾಗಾಗಿ, ಬೇರೆಯ ಟೀ ಗಳಿಗಿಂತ ಗ್ರೀನ್‌ ಟೀ, ಆರೋಗ್ಯ ದೃಷ್ಟಿಯಲ್ಲಿ ಉತ್ತಮ ಎನ್ನಿಸಿಕೊಳ್ಳುತ್ತದೆ. ಆದರೆ ಒಂದು, ಗ್ರೀನ್‌ ಟೀ  ಕುಡಿಯಲು ಮೊದಲು ಅದಕ್ಕೆ ಹಾಲು ಬೆರೆಸಬಾರದು. ಹಾಗೆ ಬೆರೆಸಿದರೆ, ಅಲ್ಲಿನ ಆ್ಯಂಟಿಆಕ್ಸಿಡೆಂಟ್‌ಗುಣ ಮಾಯವಾಗಿ, ಇದಕ್ಕೂ ಬೇರೆ ಟೀ ಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.

ಗ್ರೀನ್‌ ಟೀಯಲ್ಲಿ ಕ್ಯಾಫೀನ್‌ ಸಹ ಇರುವುದರಿಂದ, ಇದರ ಸೇವನೆ ದಣಿದ ದೇಹ ಮನಸ್ಸುಗಳಿಗೆ ಸಾಂತ್ವನ ನೀಡುತ್ತದೆ. ಖಿನ್ನತೆ ತಗ್ಗಿ ಚೇತರಿಕೆ, ಉತ್ಸಾಹಗಳು ಹೆಚ್ಚಾಗುತ್ತವೆ. ಗ್ರೀನ್‌ ಟೀ ನಿಯಮಿತ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಟೀಯನ್ನು ಕಂಡು ಹಿಡಿದವರೇ ಚೀನೀಯರು ಶತಶತಮಾನಗಳಿಂದ ಅವರಿಗೆ ಟೀ ಬಹಳ ಪ್ರಿಯವಾದ ಪಾನೀಯ.

ಅವರು ಗ್ರೀನ್‌ ಟೀ ತಯಾರಿಸುವ ವಿಧಾನವೂ ವಿಶಿಷ್ಟವಾದದ್ದೇ ಅವರು ತಾಜಾ ಟೀ ಸೊಪ್ಪನ್ನು (ಕ್ಯಾಮೆಲ್ಲಿಯಾ ಸೈನೆನ್ಸಿಸ್‌) ಬೊಂಬಿನ ದೊಡ್ಡ ತಟ್ಟೆಗಳಲ್ಲಿ ತೆಳ್ಳಗೆ ಹರಡಿ ಒಣಗಿಸುತ್ತಾರೆ. ನಂತರ ಅದನ್ನು ಸ್ವಲ್ಪ ಸ್ವಲ್ಪವಾಗಿ ಬಿಸಿ ಕಾವಲಿಗಳಲ್ಲಿ ಹುರಿಯುತ್ತಾರೆ. ಯಾವ ಹಂತದಲ್ಲಿಯೂ ಹುದುಗು ಬರಿಸುವುದೇ ಇಲ್ಲ.

ಗ್ರೀನ್‌ ಟೀ ಕುಡಿಯುವವರಲ್ಲಿ ಬೊಜ್ಜು ಅಪರೂಪ. ಅದು ಕೊಲೆಸ್ಟರಾಲ್‌ ಅಂಶವನ್ನು ತಗ್ಗಿಸುವ ಕಾರಣ, ಹೃದ್ರೋಗಗಳ ಸಂಭವ ಕಡಿಮೆ. ಕ್ಯಾನ್ಸರ್‌ನ್ನೂ ಒಂದು ಪ್ರಮಾಣದಲ್ಲಿ ದೂರವಿರಿಸುತ್ತದೆನ್ನಬಹುದು. ಡಯಾಬಿಟಿಸ್‌ ಇರುವವರಿಗೂ ಗ್ರೀನ್‌ ಟೀ ಒಳ್ಳೆಯದೆನ್ನುತ್ತಾರೆ. ಮೆದುಳಿನ ವಿವಿಧ ಕ್ರಿಯೆಗಳೂ ಚುರುಕುಗೊಳ್ಳುತ್ತವೆ ಮತ್ತು ಇಳಿವಯಸ್ಸಿನ ಕಾಯಿಲೆಗಳಾದ ಆಲ್ಜೈಯರ್‌, ಪಾರ್ಕಿನ್‌ ಸೋನಿಸಮ್‌ಗಳೂ ಸಾಕಷ್ಟು ದೂರ ಉಳಿಯುತ್ತವೆಂದು ಹೇಳುತ್ತಾರೆ.

ಗ್ರೀನ್‌ ಟೀನಲ್ಲಿ ಕೆಲವು ಜೀವಸತ್ವಗಳೂ, ಖನಿಜ ಲವಣಗಳೂ ಸಾಕಷ್ಟು ಪ್ರಮಾಣದಲ್ಲಿರುವ ಕಾರಣ, ಅದೊಂದು ಉತ್ತಮ ಆಹಾರವೂ ಹೌದು.

ಒಟ್ಟಿನಲ್ಲಿ ಗ್ರೀನ್‌ ಟೀ ಇತರ ಪಾನೀಯಗಳಿಗಿಂತ ಉತ್ತಮ ಆಹಾರ. ಮಿತಿಯಾಗಿ ಸೇವಿಸಿದಾಗ ನಮ್ಮ ಸಮಗ್ರ ಆರೋಗ್ಯವನ್ನು ನಾವು ಉಳಿಸಿಕೊಳ್ಳಲು ಇದು ಸಹಾಯಕ. ಬನ್ನಿ, ಒಂದು ಕಪ್‌ ಗ್ರೀನ್‌ ಟೀ  ಕುಡಿಯೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.