ADVERTISEMENT

ಚೀಟಿ ಉಂಡೆ ಮಾಡಿ ನುಂಗಿಬಿಟ್ಟೆ!

ವೈದ್ಯ ಹಾಸ್ಯ

ಡಾ.ಎನ್.ಪ್ರಸಾದ್
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಆಸ್ಪತ್ರೆಗೆ ಜೋಲು ಮುಖ ಮಾಡಿಕೊಂಡು ಬರುವವರೇ ಹೆಚ್ಚು. ಆ ದಿನ, ಒಬ್ಬ ರೋಗಿ ಬಹಳ ಖುಷಿಯಿಂದ ಎಂಟ್ರಿ ಕೊಟ್ಟ.
`ನಮಸ್ಕಾರ ಸಾರ್, ನೆನ್ನೆ ನೀವು ಕೊಟ್ಟಿದ್ದರಲ್ಲಿ ಹೊಟ್ಟೆ ನೋವು ವಾಸಿ ಆಯ್ತು. ಈಗ ಚೆನ್ನಾಗಿದ್ದೀನಿ' ಎಂದ.
ನನಗೆ ಸ್ವರ್ಗಕ್ಕೆ ಮೂರೇ ಗೇಣು, ಇಲ್ಲಿಯತನಕ, ನನ್ನ ಹತ್ತಿರ ಔಷಧಿ ತೆಗೆದು ಕೊಂಡವರಲ್ಲಿ, ಯಾರೂ ಬಂದು ವಾಸಿ ಆಯಿತು ಎಂದು ಹೇಳೇ ಇರಲಿಲ್ಲ. ನೊಬೆಲ್ ಪ್ರಶಸ್ತಿ ಸಿಕ್ಕಿದಷ್ಟು ಆನಂದವಾಯಿತು.

ಯಾವ ಔಷಧಿ ಕೊಟ್ಟಿದ್ದೆ ಎಂಬುದು ಮರೆತು ಹೋಗಿತ್ತು. ಇದೇ ಔಷಧಿ ಚೆನ್ನಾಗಿ ಕೆಲಸ ಮಾಡಿದೆ, ಜ್ಞಾಪಕ ಇಟ್ಟುಕೊಳ್ಳಬೇಕೆಂದು, `ಆ ಚೀಟಿ ಕೊಟ್ಟಿದ್ದೆನಲ್ಲಾ, ಅದನ್ನು ಕೊಡಿ' ಎಂದೆ.
`ಸಾರ್, ನೆನ್ನೆ ನೀವು ಚೀಟಿ ಬರೆದುಕೊಟ್ಟು, ಇದನ್ನು ನುಂಗಪ್ಪಾ ಅಂದ್ರಲ್ಲಾ, ಮನೆಗೆ ಹೋಗಿ ಚೀಟಿ ಉಂಡೆ ಮಾಡಿ, ನೀರಿನ ಜೊತೆ ನುಂಗಿ ಬಿಟ್ಟೆ' ಎನ್ನೋದೆ ಭೂಪ.
`ಬೆಳಿಗ್ಗೆಯಿಂದ ಹತ್ತು ಸಾರ್ತಿ ಕೆರೆ ಕಡೆ ಹೋಗಿದ್ದೆ, ಅಂಟಂಟು ತರಾ ಹೋಗುತ್ತೆ, ಬಹಳ ಮುಕ್‌ಬೇಕು' ಎಂದು ವಿವರಣೆ ಕೊಟ್ಟ.

ಪರೀಕ್ಷಿಸಿದ ನಂತರ, ಇದನ್ನು ಅಮೀಬಿಯಾಸಿಸ್ ಅಂತಾರೆ, ನೀರು ಜಾಸ್ತಿ ಕುಡಿಯಬೇಕು. ಕರುಳಿಗೆ ವಿಶ್ರಾಂತಿ ಬೇಕು. ಗಟ್ಟಿ ಪದಾರ್ಥ ಏನೂ ತಿನ್ನಬೇಡ. ದ್ರವಾಹಾರ ತೆಗೆದುಕೊಳ್ಳಬೇಕು. ಅಂದರೆ ಎಳನೀರು, ಗಂಜಿ, ಹಾಲು, ಬೋರ್ನ್‌ವಿಟಾ ತೆಗೆದುಕೋ' ಎಂದೆ.
ಎಲ್ಲ ಕೇಳಿಸಿಕೊಂಡು ತಲೆದೂಗಿದ ಆಸಾಮಿ, ಇವೆಲ್ಲಾ ಊಟ ಆದ ಮೇಲೆ ಕುಡೀಬೇಕೋ ಅಥವಾ ಊಟಕ್ಕೆ ಮುಂಚೇನೇ ಕುಡೀಬೇಕೋ' ಎಂದು ಕೇಳೋದೇ.

***
ಆ ದಿನ ಭಾನುವಾರ, ಹಿಂದಿನ ದಿನವೇ ಮನೆಯವರು, ಮಕ್ಕಳು ತೌರು ಮನೆಗೆ ಹೋಗಿದ್ದರು. ಅಮ್ಮಾವರು ಇಲ್ಲದ ಮೇಲೆ ಮನೆಯಲ್ಲಿ ಇನ್ನೇನು ಕೆಲಸ. ಕಡಿದು ಕಟ್ಟೆ ಹಾಕುವವನ ಹಾಗೆ ಒಂದು ಗಂಟೆ ಮೊದಲೇ ಕ್ಲಿನಿಕ್‌ಗೆ ಹೋದೆ. ಅಲ್ಲಿ ಒಂದು ನರಪಿಳ್ಳೆಯೂ ಇರಲಿಲ್ಲ. ಅರ್ಧ ಗಂಟೆ ಆಯಿತು, ಒಂದು ಗಂಟೆ ಆಯಿತು. ರೋಗಿಯ ಸುಳಿವೇ ಇಲ್ಲ. ನ್ಯೂಸ್‌ಪೇಪರ್ ಒಂದು ಅಕ್ಷರಾನೂ ಬಿಡದ ಹಾಗೆ ಓದಿದ್ದಾಯ್ತು.

ಪೇಪರ್ ಮಡಿಚಿಡ್ತಾ ಇದ್ದೆ. ಒಂದು ಎಂಟ್ರಿ ಆಗೇ ಬಿಡ್ತು. ಕೈಯಲ್ಲಿ ಹೊಸ ಕಿಂಗ್ ಫಿಶರ್ ಬಿಯರ್ ಬಾಟಲ್. ಲೇಬಲ್ ಮಿರ ಮಿರ ಮಿಂಚುತ್ತಾ ಇದೆ. ಬಾಟಲ್ ಟೇಬಲ್ ಮೇಲೆ ಕುಕ್ಕಿದ.

`ಏನಯ್ಯಾ ಬೆಳಿಗ್ಗೆ ಬೆಳಿಗ್ಗೇನೆ, ಲಂಚ ತಂದಿದ್ದೀಯಾ, ಓಪನ್ ಬೇರೆ ಮಾಡ್‌ಕೊಂಡು ಬಂದಿದ್ದೀಯಾ' ಎಂದೆ.
`ಆವೊತ್ತು ಬಂದಿದ್ದಾಗ ಒಂದಾ ಟೆಸ್ಟ್ ಮಾಡ್ಬೇಕು ಅಂದಿದ್ರಲ್ಲಾ, ಈ ಬಾಟಲ್ ಕುಡ್ದು, ರಾತ್ರಿ ಎಲ್ಲಾ ಎದ್ದು ಎದ್ದು ಒಂದಾ ಮಾಡ್ಕಂಡು ತಂದಿದ್ದೀನಿ, ಅದ್ ಏನೇನ್ ಟೆಸ್ಟ್ ಮಾಡ್ಕತೀರೋ ಮಾಡ್ಕಳಿ' ಎನ್ನೋದೆ.

***
ಯಜಮಾನರಿಗೆ ಸುಮಾರು 65 ವರ್ಷ ಇರಬಹುದು ಎನಿಸುತ್ತಿತ್ತು. `ಯಾವೂರು ಯಜಮಾನ್ರೇ?' ಎಂದೆ.
`ಹಾವೇರಿ, ರೀ' ಎಂದ್ರು. ಅವರ ಕಾಯಿಲೆಯ ವಿವರಗಳನ್ನೆಲ್ಲಾ ಕೇಳಿದ ಮೇಲೆ, `ಡೀಟೇಲ್ ಚೆಕ್‌ಅಪ್ ಮಾಡ್ಬೇಕು, ಅಂದರೆ ಬಿ.ಪಿ, ಶುಗರ್, ಹಾರ್ಟ್ ಎಲ್ಲಾ ನೋಡ್ಬೇಕು' ಎಂದೆ.
`ಏನೇನು ಬೇಕೋ ಎಲ್ಲ ನೋಡ್ರೀ' ಎಂದರು. ಸಂಪೂರ್ಣ ಚೆಕ್ ಅಪ್ ಮಾಡಿ ಮಾತ್ರೆ ಬರೆದುಕೊಟ್ಟೆ. ಅದನ್ನು ಯಾವ ವಿಧಾನದಲ್ಲಿ ನುಂಗಬೇಕು ಎಂದು ವಿವರಿಸಿದ್ದಾಯಿತು.

`ನೀವೇ ಮಾತ್ರೆ, ಔಷಧಿ ಕೊಡಿ' ಎಂದರು. `ಎದುರುಗಡೆ ಔಷಧಿ ಅಂಗಡಿಯಲ್ಲಿ ಸಿಗುತ್ತೆ, ಅಲ್ಲೇ ತಗೋಬೇಕು' ಎಂದೆ.
ಯಜಮಾನರು ಹೊರಡಲು ಸಿದ್ಧರಾದರು. `ಯಜಮಾನರೇ ಫೀಸ್' ಎಂದೆ.
`ನಮ್ಮೂರ‌್ನಾಗೆ, ಗುಳಿಗಿ, ಔಷಧಿ ಕೊಟ್ರೆ ಮಾತ್ರ ರೊಕ್ಕ ಕೊಡೋದು' ಎಂದು ಹೇಳಿ ಹೊರಟೇ ಬಿಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.