ADVERTISEMENT

ಜಾತ್ರೆಗಳಲ್ಲಿ ಮಕ್ಕಳ ಎಸೆತ...

ಎಂ.ಡಿ.ಸೂರ್ಯಕಾಂತ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST
ಜಾತ್ರೆಗಳಲ್ಲಿ ಮಕ್ಕಳ ಎಸೆತ...
ಜಾತ್ರೆಗಳಲ್ಲಿ ಮಕ್ಕಳ ಎಸೆತ...   

ಎಳೆ ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ, ಸಿಂಗಾರ ಮಾಡಿ, ಮಗುವಿನ ಜೊತೆ ಹೆತ್ತವರು, ಸಂಬಂಧಿಗಳು ದೇವಸ್ಥಾನದಲ್ಲಿ ಸಾಲಾಗಿ ನಿಲ್ಲುತ್ತಾರೆ. ಒಂದೊಂದಾಗಿ ಮಕ್ಕಳನ್ನು ದೇವಸ್ಥಾನದ ಮಾಳಿಗೆಗೆ ಕರೆದೊಯ್ಯಲಾಗುತ್ತದೆ.

ಮಾಳಿಗೆಯಿಂದ ಒಂದೊಂದೇ ಮಗುವನ್ನು ಗಾಳಿಯಲ್ಲಿ ತೂರಿ ಕೆಳಗೆ ಎಸೆಯಲಾಗುತ್ತದೆ. ಕೆಳಗೆ ನಿಂತವರು ಬೆಡ್ ಶೀಟ್ ಆಕಾರದ ಹೊದಿಕೆಯಲ್ಲಿ (ಕಂಬಳಿ ಅಥವಾ ಜಮಖಾನೆ) ಮಗುವನ್ನು ಸ್ವೀಕರಿಸುತ್ತಾರೆ. ಹೊದಿಕೆ ಮೇಲೆ ಬಿದ್ದು ಅಳುತ್ತಿರುವ ಮಗುವನ್ನು ಎತ್ತಿಕೊಂಡು ಹೆತ್ತವರು  ಸಂತೋಷ  ಪಡುತ್ತಾರೆ.

ಇದು ಕಥೆ, ಮ್ಯೋಜಿಕ್ ಅಥವಾ ಆಕ್ಷನ್ ಮೂವಿ ಅಲ್ಲ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ಇಂಡಿ, ತಿಕೊಟಾ, ಬಾಗಲಕೋಟೆ ಜಿಲ್ಲೆಯ ನಾಗರಾಳ, ಬೆಳಗಾವಿ ಜಿಲ್ಲೆಯ ಹಾರುಗೆರಿ ಹಾಗೂ ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿ  ಗಾಳಿಯಲ್ಲಿ ಕಂದಮ್ಮಗಳನ್ನು ತೂರುವ ವಿಲಕ್ಷಣ ಸಂಪ್ರದಾಯ.

ವಿವಿಧ ಸ್ಥಳಗಳಲ್ಲಿ ಫೆಬ್ರವರಿಯಿಂದ ಮೇ ವರೆಗೆ ಆಚರಿಸಲಾಗುತ್ತದೆ. ವರ್ಷಕ್ಕೆ ಒಂದು ಬಾರಿ 4-5 ದಿನ ನಡೆಯುವ ಜಾತ್ರೆಯಲ್ಲಿ 6 ತಿಂಗಳಿಂದ 2 ವರ್ಷದ ಮಕ್ಕಳನ್ನು 15 ರಿಂದ 30 ಅಡಿ ಎತ್ತರದಿಂದ ಕೆಳಕ್ಕೆ ಎಸೆಯುತ್ತಾರೆ.

ಕೆಲವು ಸ್ಥಳಗಳಲ್ಲಿ ಜಾತ್ರೆಯಲ್ಲಿನ ತೇರಿನ ಮೇಲಿಂದ ಎಸೆಯುವ ರೂಢಿ ಇದೆ. ಜಾತ್ರಾ ಅವಧಿಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ತೂರಲಾದ ಮಕ್ಕಳ ಒಟ್ಟು ಸಂಖ್ಯೆ ಸುಮಾರು 200ರಿಂದ 500.

ಏಕೆ ಹೀಗೆ?

ದಿನವೆಲ್ಲಾ ಮಧ್ಯಾಹ್ನದ ಉರಿಬಿಸಿಲಿನಲ್ಲಿ ನಿಂತು ಕಂದಮ್ಮಗಳನ್ನು ತೂರಲು ನೀಡುತ್ತಿರುವ ಹೆತ್ತವರಿಗೆ ಆತಂಕವಿಲ್ಲ. ಏಕೆಂದರೆ ಇವರು ಮಕ್ಕಳನ್ನು ತೂರುವುದರಿಂದ ಲಭಿಸುವ ಆಶೀರ್ವಾದಗಳ ಭ್ರಮೆಗಳಲ್ಲಿದ್ದಾರೆ.
 

ಹೀಗೆ ತೂರುವುದರಿಂದ ಮಕ್ಕಳು ಸದೃಢರಾಗುತ್ತಾರೆ, ಧೈರ್ಯವಂತರಾಗುತ್ತಾರೆ, ಆಯುಷ್ಯ ಹೆಚ್ಚುತ್ತದೆ, ಜಾಣರಾಗುತ್ತಾರೆ, ಮಕ್ಕಳು ರಾತ್ರಿ ಹೊತ್ತು  ಹೆದರುವುದಿಲ್ಲ, ಮಾಟ ಮಂತ್ರಗಳಿಂದ ರಕ್ಷಣೆ ಪಡೆಯುತ್ತಾರೆ ಎಂಬೆಲ್ಲಾ ನಂಬಿಕೆಗಳಿವೆ. ಇದೊಂದು ದೇವರ ದರ್ಶನ ಪಡೆಯುವ ದಾರಿ ಎಂಬ ತಪ್ಪು ನಂಬಿಕೆಯಲ್ಲಿದ್ದಾರೆ.

ಜಾತ್ರಾ ಅವಧಿಯವರೆಗೆ ಜನಿಸಿದ ಎಲ್ಲ ಮಕ್ಕಳನ್ನು ತೂರಿಬಿಡಬೇಕೆಂಬ ಶಿಷ್ಟಾಚಾರವಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಸಂತಾನ ಪ್ರಾಪ್ತಿ ಹಾಗೂ ಗಂಡು ಮಗುವಾಗುತ್ತದೆ  ಮತ್ತು ಈ ನಂಬಿಕೆಯಿಂದ ಜನಿಸಿದ ಮಕ್ಕಳನ್ನು ತೂರಿ ಬಿಡಬೇಕೆಂಬ ರೂಢಿ ಇದೆ. ಸ್ಥಳೀಯ ಮಹಿಳೆಯರು  ಹೊರಗಿನ  ಪುರುಷರೊಂದಿಗೆ ವಿವಾಹವಾಗಿದ್ದರೆ ಇಂಥವರ ಮಕ್ಕಳನ್ನು ತೂರಬೇಕೆಂಬ ಅಲಿಖಿತ ನಿಯಮವಿದೆ.

ಈ ಎಲ್ಲಾ ಕಾರಣಗಳಿಂದಾಗಿ ಯಾವುದೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಈ ಪರಂಪರೆ ಕಾಲಾನುಕಾಲದಿಂದ ಅನಿವಾರ್ಯವಾಗಿ ಮುಂದುವರಿದಿದೆ.

ಶೇಕನ್ ಬೇಬಿ ಸಿಂಡ್ರೋಮ್
ಎಳೆ ಮಕ್ಕಳನ್ನು ಹೀಗೆ ಎಸೆಯುವುದರಿಂದ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಪಾಯ ಇದ್ದು, ದುಷ್ಪರಿಣಾಮಗಳಿಗೆ  ಶೇಕನ್ ಬೇಬಿ ಸಿಂಡ್ರೋಮ್ ಅಥವಾ ದೇಹ ಕಂಪನದ ದುಷ್ಪರಿಣಾಮಗಳು ಎನ್ನುತ್ತೇವೆ.

ಹತ್ತು ಅಡಿ ಎತ್ತರದಿಂದ ತೂರಿದಾಗ ಗಂಟೆಗೆ ಸುಮಾರು 35 ಕಿ.ಮೀ ಹಾಗೂ 30 ಅಡಿ ಎತ್ತರದಿಂದ ಎಸೆದಾಗ ಗಂಟೆಗೆ 100 ಕಿ.ಮೀ ವೇಗದಿಂದ ಮಗು ಕೆಳಗೆ ಬೀಳುತ್ತಿರುತ್ತದೆ. ಹೀಗೆ  ವೇಗವಾಗಿ ಕೆಳಗೆ ಬರುತ್ತಿರುವ ಮಗುವನ್ನು ಕೆಳಗೆ ನಿಂತವರು ಹೊದಿಕೆಯಲ್ಲಿ ಸ್ವೀಕರಿಸಿದಾಗ, ಮಗುವಿನ ದೇಹ ಥಟ್ಟನೆ ತುಳುಕಾಡುತ್ತದೆ. ಮಗು ಮೇಲೆ, ಕೆಳಗೆ ಪುಟಿದು ಏಳುತ್ತದೆ.

ಇದರ ಪರಿಣಾಮ ಮಕ್ಕಳ ಅಪಕ್ವ, ಅಸಮತೋಲನದ ಮೆದುಳು ಹೊಯ್ದೊಡಿ ತಲೆಬುರುಡೆಯ ಒಳಭಾಗಕ್ಕೆ ತಾಕುತ್ತದೆ. ಮೆದುಳು, ಕಣ್ಣಿನ ಎಳೆ ರಕ್ತನಾಳಗಳು ಛಿದ್ರಗೊಳ್ಳುತ್ತವೆ. ಕಣ್ಣು, ಮೆದುಳಿನಲ್ಲಿ ರಕ್ತಸ್ರಾವ, ಬಾವು ಮತ್ತು ಬೆನ್ನು ಹುರಿ ಕುತ್ತಿಗೆ ಕೀಲುಗಳಿಗೆ ಅಪಾಯ ಸಾಧ್ಯ. ಈ ಎಲ್ಲ ಬದಲಾವಣೆಗಳ ಒಟ್ಟು ಪರಿಣಾಮ, ಶ್ರವಣ ಹೀನತೆ, ಅಸ್ಪಷ್ಟ ಮಾತು ಅಥವಾ ಮಾತನಾಡಲು ವಿಳಂಬತೆ, ಕಲಿಕೆಯಲ್ಲಿ ಹಿನ್ನಡೆ, ಮನೋದೌರ್ಬಲ್ಯ, ನಡತೆದೋಷ, ಅಪಸ್ಮಾರ, ಕೈಕಾಲುಗಳ ದುರ್ಬಲತೆ ಮುಂತಾದ ತೊಂದರೆಗಳು ಉಂಟಾಗಬಹುದು.

ಅಪಾಯವಿಲ್ಲ ಎನ್ನುವುದು ನಿರಾಧಾರ
ಹಲವಾರು ವರ್ಷಗಳಿಂದ ಕಾರ್ಯಕ್ರಮದಲ್ಲಿರುವ ಊರಿನ ಹಿರಿಯರು ಯಾವ ಮಗುವಿಗೂ ಅಪಾಯವಾಗಿಲ್ಲ  ಎನ್ನುವುದು ನಿರಾಧಾರ ಎನಿಸುತ್ತದೆ. ರಕ್ತಸ್ರಾವ ಅಥವಾ ಮೆದುಳಿನ ಊತ ಅಲ್ಪಪ್ರಮಾಣದಲ್ಲಿದ್ದರೆ ಲಕ್ಷಣಗಳು ವಿಳಂಬವಾಗಿ ಕಾಣಿಸಿಕೊಳ್ಳುತ್ತವೆ. ಅಂದರೆ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೆಳಕಿಗೆ ಬರುತ್ತದೆ.
 
ಉದಾ: ಮಾತಿನ ತೊಂದರೆ. ಮಗು ಮಾತನಾಡಲು ಆರಂಭಿಸುವ ಸಮಯಕ್ಕೆ ಅಂದರೆ ಒಂದೂವರೆ ವರ್ಷಕ್ಕೆ ಕಾಣಿಸಿಕೊಳ್ಳುತ್ತದೆ. ಕಲಿಕೆ ದೋಷಗಳು ಶಾಲೆಗೆ ಹೋಗುವ ಸಮಯಕ್ಕೆ ಅಂದರೆ 4-5ನೇ ವರ್ಷದಲ್ಲಿ ಸಾಧ್ಯ. ಹೀಗೆ ದುಷ್ಪರಿಣಾಮ ತಡವಾಗಿ ಪ್ರಕಟವಾಗುವುದರಿಂದ ದುಷ್ಪರಿಣಾಮಗಳು ಮಗು ತೂರುವ ಸಂಪ್ರದಾಯಕ್ಕೆ ಕಾರಣವಲ್ಲ ಎಂದು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇದೆ.

ತಡೆ ಹೇಗೆ?
-ವಿಶೇಷವಾಗಿ ಗ್ರಾಮೀಣ, ಅವಿದ್ಯಾವಂತರಲ್ಲಿ ಮೂಢನಂಬಿಕೆ ಮತ್ತು ವಿಚಿತ್ರ ಸಂಪ್ರದಾಯಗಳು ಬಂಡೆಯಷ್ಟು ಗಟ್ಟಿ. ಇದೊಂದು ಮನೋಸಾಮಾಜಿಕ ಸಮಸ್ಯೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದವರಿಗೆ ಆಪ್ತ ಸಮಾಲೋಚನೆ ನೀಡಿದರೆ ಮನೋಪರಿವರ್ತನೆ ಸಾಧ್ಯ.

ADVERTISEMENT

-ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ: ಈ ಸಂಪ್ರದಾಯ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ವಿಚಾರಣೆಗೊಳಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲು ಈ ಆಯೋಗಕ್ಕೆ ಅಧಿಕಾರವಿದೆ.

-ಇದೊಂದು ಮಕ್ಕಳ ದುರ್ಬಳಕೆ ಮತ್ತು ನಿರ್ಲಕ್ಷತೆಯೆಂದು ಪರಿಗಣಿಸಿ ಭಾರತದ ಮಕ್ಕಳ ನ್ಯಾಯ ಸಂಹಿತೆ 2000,2006 (ಮಕ್ಕಳ ರಕ್ಷಣೆ, ಕಾಳಜಿ-ಜುವೆನೈಲ್ ಜಸ್ಟಿಸ್ ಆಕ್ಟ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪ್ರಕರಣ ದಾಖಲಿಸಬಹುದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.