ADVERTISEMENT

ಬಾಕ್ಸಿಂಗ್ ಕ್ರಾಂತಿ ಹಿಂದೆ ಫಿಟ್‌ನೆಸ್ ಮಂತ್ರ...

ಚೇತನ ಚಿಲುಮೆ

ಕೆ.ಓಂಕಾರ ಮೂರ್ತಿ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST
ಭಾರತದ ಬಾಕ್ಸಿಂಗ್‌ನಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ್ದು ವಿಜೇಂದರ್ ಸಿಂಗ್. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಜಯಿಸಿದ್ದು ಭಾರತದ ಬಾಕ್ಸಿಂಗ್ ದಿಕ್ಕನ್ನೇ ಬದಲಾಯಿಸಿತು. ಸಾವಿರಾರು ಮಕ್ಕಳು ಬಾಕ್ಸಿಂಗ್‌ನತ್ತ ಆಕರ್ಷಿತರಾದರು.
 
ಆದರೆ ಬಾಕ್ಸರ್ ವಿಜೇಂದರ್ ಅವರ ಈ ಸಾಧನೆಯ ಹಿಂದೆ ಹಲವು ವರ್ಷಗಳ ಶ್ರಮವಿದೆ, ಕಠಿಣ ಪ್ರಯತ್ನವಿದೆ. ಪೋಷಕರ ತ್ಯಾಗವಿದೆ,     ಕೋಚ್‌ಗಳ ದುಡಿಮೆ ಇದೆ. ಅವರ ಯಶಸ್ಸಿನಲ್ಲಿ  ಫಿಟ್‌ನೆಸ್ ಪಾತ್ರವೂ ಪ್ರಮುಖವಾದುದು.
 
`ನಾನು ಬಾಕ್ಸಿಂಗ್ ಆರಂಭಿಸಿದ ಮೇಲೆ ಪ್ರಮುಖ ಕಾರ್ಯಕ್ರಮಗಳು, ಮದುವೆ ಸಮಾರಂಭಗಳನ್ನು ತಪ್ಪಿಸಿಕೊಂಡಿರಬಹುದು. ಆದರೆ ಫಿಟ್‌ನೆಸ್ ವಿಷಯದಲ್ಲಿ ಯಾವತ್ತೂ ರಾಜಿ ಆಗಿಲ್ಲ. ಮಳೆಯೇ ಇರಲಿ, ಅದೆಷ್ಟೇ ಚಳಿ ಇರಲಿ. ಬೆಳಿಗ್ಗೆ ಆರು ಗಂಟೆಗೆ ಫಿಟ್‌ನೆಸ್ ಶುರುವಾಗಬೇಕು. ಈ ಬದ್ಧತೆಯೇ ನನ್ನ ಈ ಯಶಸ್ಸಿಗೆ ಕಾರಣವಾಗಿರಬಹುದು' ಎನ್ನುತ್ತಾರೆ ವಿಜೇಂದರ್.
 
`ಬಾಕ್ಸಿಂಗ್ ತೊಟ್ಟಿಲು' ಎನಿಸಿರುವ ಹರಿಯಾಣದ ಭಿವಾನಿಯ ವಿಜೇಂದರ್ 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ, ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಹಾಗೂ 2009ರಲ್ಲಿ ಮಿಲನ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ವರ್ಷ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.
 
`ಬಾಕ್ಸಿಂಗ್‌ನಲ್ಲಿ ಸಮರ್ಪಕ ಫಿಟ್‌ನೆಸ್ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಬೆಳಿಗ್ಗೆ ಆರು ಗಂಟೆಗೆ ನನ್ನ ವ್ಯಾಯಾಮ ಶುರುವಾಗುತ್ತದೆ. ಮೊದಲು ಸ್ವಲ್ಪ ದೂರ ಓಡುತ್ತೇನೆ. ಆಮೇಲೆ ನಡೆಯುತ್ತೇನೆ. ಓಡುವುದು, ನಡೆಯುವುದು ನನಗೆ ಇಷ್ಟವಿಲ್ಲ. ಆದರೆ ದೈಹಿಕ ತರಬೇತುದಾರರು ಹೇಳಿದಂತೆ ಕೇಳಬೇಕಲ್ಲವೇ? ತರಬೇತುದಾರರ ಮಾರ್ಗದರ್ಶನದಲ್ಲೇ ನನ್ನ ಪೂರ್ಣ ಫಿಟ್‌ನೆಸ್ ನಡೆಯುತ್ತದೆ. ಆರಂಭದಲ್ಲಿ ಭಾರ ಎತ್ತುವ ವರ್ಕ್‌ಔಟ್‌ಗೆ ಒತ್ತು ನೀಡುತ್ತೇನೆ. ಕಾರ್ಡಿಯೊ ವ್ಯಾಯಾಮಕ್ಕೂ ಮಹತ್ವ ನೀಡುತ್ತೇನೆ' ಎಂದು ಅವರು ವಿವರಿಸುತ್ತಾರೆ.
 
`ಬಾಕ್ಸರ್‌ಗಳು ಭುಜದ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು. ಪುಶ್ ಅಪ್ಸ್, ಚಿನ್ ಅಪ್ಸ್, ಟ್ರೈಸೆಪ್ಸ್, ಬೈಸೆಪ್ಸ್, ಕ್ವಾಡ್ರಿಸೆಪ್ಸ್ ವರ್ಕ್‌ಔಟ್ ಮಾಡುತ್ತೇನೆ. ಹಾಗೇ, ಕಾಲುಗಳ ಸ್ನಾಯುಗಳು ಬಲಿಷ್ಠವಾಗಿರಬೇಕು' ಎನ್ನುತ್ತಾರೆ.
 
ಆದರೆ ಸಂಜೆ ಸಮಯವನ್ನು ಅವರು ಪೂರ್ಣವಾಗಿ ಬಾಕ್ಸಿಂಗ್‌ಗೆ ಮೀಸಲಿಡುತ್ತಾರೆ. `ಸಂಜೆ ನಾಲ್ಕು ಗಂಟೆಗೆ ಅಭ್ಯಾಸ ಶುರುವಾಗುತ್ತದೆ. ಈ ಅವಧಿಯಲ್ಲಿ ಬಾಕ್ಸಿಂಗ್ ತಂತ್ರ ಸುಧಾರಣೆಗೆ ಗಮನ ಹರಿಸುತ್ತೇನೆ. ಎರಡೂವರೆಯಿಂದ ಮೂರೂವರೆ ಗಂಟೆ ಅಭ್ಯಾಸ ನಡೆಸುತ್ತೇನೆ' ಎಂದು ವಿಜೇಂದರ್ ಹೇಳುತ್ತಾರೆ.
 
ಹಾಗೇ, ಬಾಕ್ಸರ್‌ಗಳಿಗೆ ಸ್ಕಿಪ್ಪಿಂಗ್ ತುಂಬಾ ಮಹತ್ವದ್ದು. ಇದು ರಿಂಗ್‌ನಲ್ಲಿ ಬಾಕ್ಸಿಂಗ್ ಮಾಡುವಾಗ ಪಾದ ಚಲನೆಯ ವೇಗವನ್ನು ಹೆಚ್ಚಿಸುತ್ತದೆ. ಕಾಲಿನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಕೈಯಲ್ಲಿ ತುಂಬಾ ಹೊತ್ತು ಮರಳು ಅದುಮಿಟ್ಟುಕೊಳ್ಳುವುದೂ ನನ್ನ ದೈಹಿಕ ಕಸರತ್ತಿನ ಒಂದು ಭಾಗ. ಇದರಿಂದ ಮುಷ್ಟಿಗೆ ಬಲ ಬರುತ್ತದೆ. ಬಳಿಕ ಪಂಚಿಂಗ್ ಬ್ಯಾಗ್‌ಗೆ ಮುಷ್ಟಿ ಪ್ರಹಾರ ನಡೆಸುತ್ತೇನೆ ಎಂದೂ ವಿವರಿಸುತ್ತಾರೆ.
 
`ದೈಹಿಕ ಸಾಮರ್ಥ್ಯ ಮಾತ್ರವಲ್ಲ; ಮಾನಸಿಕ ಫಿಟ್‌ನೆಸ್‌ಗೂ ಮಹತ್ವ ನೀಡಬೇಕು. ಅದಕ್ಕಾಗಿ ನಾನು ಯೋಗದ ಮೊರೆ ಹೋಗುತ್ತೇನೆ. ಒಂದು ಕೋಣೆಯಲ್ಲಿ ಒಬ್ಬನೇ ಅರ್ಧ ಗಂಟೆ ಕುಳಿತು ಧ್ಯಾನ ಮಾಡುತ್ತೇನೆ. ಉತ್ತಮ ನಿದ್ದೆ ಕೂಡ ಅಗತ್ಯ' ಎಂದು ಒಲಿಂಪಿಯನ್ ಬಾಕ್ಸರ್ ವಿಜೇಂದರ್ ನುಡಿಯುತ್ತಾರೆ.
 
`ಕೇವಲ ಕ್ರೀಡಾಪಟುಗಳು ಮಾತ್ರವಲ್ಲ; ಪ್ರತಿಯೊಬ್ಬರೂ ಉತ್ತಮ ಫಿಟ್‌ನೆಸ್ ಕಾಯ್ದುಕೊಳ್ಳಲು ಮುಂದಾಗಬೇಕು. ಅದಕ್ಕಾಗಿ ನಿಗದಿತ ಸಮಯ ಮೀಸಲಿಡಬೇಕು' ಎಂದು ಅವರು ಸಲಹೆ ನೀಡುತ್ತಾರೆ.
 
`ನಾನು ಮಾಂಸಾಹಾರಿ. ಮೂರೂ ಹೊತ್ತು ಮಾಂಸ ಇರಲೇಬೇಕು. ಮೀನಿನ ಆಹಾರವನ್ನು ಹೆಚ್ಚಾಗಿ ಸೇವಿಸುತ್ತೇನೆ. ಇದು ಕ್ರೀಡಾಪಟುಗಳಿಗೆ ತುಂಬಾ ಉಪಯುಕ್ತ ಆಹಾರ. ಬಾಕ್ಸಿಂಗ್ ವೇಳಾಪಟ್ಟಿ ಇಲ್ಲದಿದ್ದಾಗ ವರ್ಕ್‌ಔಟ್ ಹಾಗೂ ಆಹಾರ ಸೇವನೆಯಲ್ಲಿ ಬದಲಾವಣೆಯಾಗುತ್ತದೆ' ಎಂಬ ಗುಟ್ಟನ್ನು ಅವರು ಬಿಚ್ಚಿಡುತ್ತಾರೆ.
 
ಸುಂದರ ರೂಪ, ಆಕರ್ಷಕ ಮೈಕಟ್ಟು ಹೊಂದಿರುವ 26 ವರ್ಷದ ವಿಜೇಂದರ್‌ಗೆ ಬಾಲಿವುಡ್‌ನಿಂದಲೂ ಆಹ್ವಾನ ಬಂದಿದೆ. ರ‌್ಯಾಂಪ್ ಶೋ, ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಜಾಹೀರಾತು ಪ್ರಚಾರದಲ್ಲೂ ಅವರನ್ನು ಕಾಣಬಹುದು.
 
`ಬಾಲಿವುಡ್‌ನಿಂದ ಈಗಾಗಲೇ ಆಹ್ವಾನ ಬಂದಿದೆ. ಆದರೆ ನಾನು ಬಾಕ್ಸಿಂಗ್‌ನತ್ತ ಹೆಚ್ಚು ಚಿತ್ತ ಹರಿಸಬೇಕು. ನನ್ನ ಮೊದಲ ಆದ್ಯತೆ ಬಾಕ್ಸಿಂಗ್. ಈ ಕಾರಣ ನಾನು ಹೆಸರು ಮಾಡಿದ್ದೇನೆ' ಎನ್ನುತ್ತಾರೆ ವಿಜೇಂದರ್.
 
ವಿಜೇಂದರ್ ತಂದೆ ಹರಿಯಾಣದಲ್ಲಿ ಬಸ್ ಚಾಲಕರಾಗಿದ್ದರು. `ನಾನು ಬಾಕ್ಸಿಂಗ್ ಆರಂಭಿಸಿದ ದಿನಗಳಲ್ಲಿ ನನ್ನ ತರಬೇತಿಗೆ ಹಣ ಹೊಂದಿಸಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಅದಕ್ಕಾಗಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿದ್ದರು. ಅವರ ಶ್ರಮ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ' ಎಂದು ನುಡಿಯುತ್ತಾರೆ.
 
ಬೆಳಿಗ್ಗೆ ಎದ್ದ ತಕ್ಷಣ ಚಹಾ ಹಾಗೂ ಬಿಸ್ಕೆಟ್ ತಿನ್ನುತ್ತೇನೆ. 10 ಗಂಟೆಗೆ ಉಪಾಹಾರ. 3-4 ಬ್ರೆಡ್ ತುಣುಕು ಹಾಗೂ ಮೊಟ್ಟೆ ತಿನ್ನುತ್ತೇನೆ. ದೊಡ್ಡ ಬಟ್ಟಲಿನಲ್ಲಿ ಕಾರ್ನ್ ಫ್ಲೇಕ್ಸ್ ಹಾಗೂ ಹಾಲು ಕುಡಿಯುತ್ತೇನೆ. ಮಧ್ಯಾಹ್ನ ಚಿಕನ್, ದಾಲ್, 3-4 ರೋಟಿ ತಿನ್ನುತ್ತೇನೆ. ತರಕಾರಿ ಸೇವನೆಗೂ ಮಹತ್ವ ನೀಡುತ್ತೇನೆ. ರಾತ್ರಿಯ ಊಟ ಕೂಡ ಇದೇ ರೀತಿ ಇರುತ್ತದೆ. ಆದರೆ ಪನೀರ್ ಜೊತೆ ರೋಟಿ ಸೇವಿಸುತ್ತೇನೆ. ತುಂಬಾ ನೀರು ಕುಡಿಯುತ್ತೇನೆ. ಸಿಹಿ ತಿನಿಸುಗಳನ್ನು ಇಷ್ಟಪಡುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.