ADVERTISEMENT

ಲೆಕ್ಕಾಚಾರ ಫಲಿಸಬಲ್ಲದೇ?

ಡಾ.ಎಸ್.ಎಸ್.ವಾಸನ್
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST
ಲೆಕ್ಕಾಚಾರ ಫಲಿಸಬಲ್ಲದೇ?
ಲೆಕ್ಕಾಚಾರ ಫಲಿಸಬಲ್ಲದೇ?   

ಒಬ್ಬ ಪುರುಷನ ವೀರ್ಯವು, ಉತ್ಪತ್ತಿಯಾಗುವುದರಿಂದ, ಸ್ಖಲನವಾಗುವವರೆಗೂ 60 ರಿಂದ 70 ದಿನಗಳ ಜೀವನ ಚಕ್ರ ಹೊಂದಿರುತ್ತದೆ ಎಂದು ನಲವತ್ತು ವರ್ಷಕ್ಕೂ ಹೆಚ್ಚು ಕಾಲ ನಂಬಲಾಗಿತ್ತು. ಇದೀಗ ಸಂಶೋಧನೆಯೊಂದು, ಈ ನಂಬಿಕೆಗೆ ಪ್ರತಿಯಾಗಿ, ವೀರ್ಯದ ನಿಖರ ಅವಧಿಯು 47 ದಿನಗಳು ಎಂಬುದನ್ನು ತಿಳಿಸಿಕೊಟ್ಟಿದೆ. ‘ವೀರ್ಯದ ಅತಿ ನಿಖರ ಹಾಗೂ ಸಂಕ್ಷಿಪ್ತವಾದ ಕಾಲಾವಧಿಯನ್ನು ತಿಳಿದುಕೊಳ್ಳುವುದರಿಂದ ಪುರುಷರನ್ನು ಕಾಡುವ ಫಲವಂತಿಕೆ ಸಮಸ್ಯೆಯ ಕುರಿತ ಸೂಕ್ತ ಚಿಕಿತ್ಸೆಗೂ ಹೊಸ ದಾರಿ ಕಂಡುಕೊಳ್ಳಬಹುದಾಗಿದೆ’ ಎಂದು ಅಧ್ಯಯನ ನಡೆಸಿದೆ ಯುಸಿಎಸ್‌ಎಫ್ ಮೆಡಿಕಲ್ ಸೆಂಟರ್.

ಈ ಒಂದು ಹೊಳಹು, ಪುರುಷರ ಸಂತಾನಹೀನತೆ ಸಂಬಂಧಿತ ಔಷಧಗಳನ್ನು ಹಾಗೂ ಸೂಕ್ತ ಚಿಕಿತ್ಸೆಯನ್ನು ನೀಡಲು ಸಹಕರಿಸುವುದಲ್ಲದೆ ಅವುಗಳ ಪರಿಣಾಮವನ್ನು ಇನ್ನಷ್ಟು ಸಮರ್ಥವಾಗಿ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮಾಹಿತಿಯು ಫಲವಂತಿಕೆಯ ಸಮಸ್ಯೆಗೆ ನಿಖರ ಕಾರಣ ಗುರುತಿಸುವಲ್ಲೂ ಮೌಲ್ಯಯುತವಾಗಿರುತ್ತದೆ.

ಸ್ಪರ್ಮ್‌ ಏಜ್ ಕ್ಯಾಲ್ಕುಲೇಟರ್-ವೀರ್ಯದ ಅವಧಿಯ ಲೆಕ್ಕಾಚಾರ

ADVERTISEMENT

ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ ಮಕ್ಕಳಾಗುವ ಸಾಧ್ಯತೆಯಲ್ಲೂ ಏರುಪೇರಾಗುತ್ತದೆ. ಹಾಗೆಯೇ ಪುರುಷರಲ್ಲೂ ಬದಲಾವಣೆಯಾಗುತ್ತದೆ. ಇದನ್ನು ಕಂಡುಕೊಳ್ಳಬಹುದಾದ ದಾರಿ ವೀರ್ಯದ ಲೆಕ್ಕಾಚಾರ. ವೀರ್ಯದ ಪ್ರಮಾಣ, ಗುಣಮಟ್ಟ ಮಾತ್ರವಲ್ಲದೇ, ಹೇಗೆ ಒಬ್ಬ ಪುರುಷನ ಜೀವನಶೈಲಿ ಹಾಗೂ ವಯಸ್ಸು ಆತನ ವೀರ್ಯ ಹಾಗೂ ಫಲವಂತಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕುವುದಲ್ಲದೆ ಹೇಗೆ ವೀರ್ಯದ ಅವಧಿ (ವೀರ್ಯದ ವಯಸ್ಸು) ಮಗುವನ್ನು ಪಡೆಯಲು ನಿರರ್ಥಕ ಅಂಶವಾಗುತ್ತದೆ ಎಂಬುದನ್ನೂ ತಿಳಿದುಕೊಳ್ಳುವ ಅಂಶ.

ಮಹಿಳೆಯ ವಯಸ್ಸು ಹಾಗೂ ಜೀವನಶೈಲಿಯ ಆಯ್ಕೆ ಹೇಗೆ ಆಕೆಯ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುರಿತು ಸಾಕಷ್ಟು ಸಂಶೋಧನೆಗಳು, ಅಧ್ಯಯನಗಳು ನಡೆದಿವೆ. ಹಾಗೆಯೇ ಇದಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ, ಅದಕ್ಕೆ ತಕ್ಕ ಚಿಕಿತ್ಸೆಗಳೂ ಸಿಗುತ್ತಿವೆ. ಆದರೆ ಪುರುಷರ ವಿಷಯವಾಗಿ ಇಂಥ ಪ್ರಯತ್ನಗಳು ನಡೆದಿದ್ದರೂ ಅವು ಅಸ್ಪಷ್ಟವಾಗಿಯೇ ಉಳಿದಿವೆ. ಹೇಗೆ ವೀರ್ಯದ ಅವಧಿ ಸಂತಾನದ ಮೇಲೆ ಪರಿಣಾಮ ಬೀರಬಲ್ಲದು ಎಂಬ ಕುರಿತೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸ್ಪರ್ಮ್‌ ಏಜ್ ಕ್ಯಾಲ್ಕುಲೇಟರ್ ಪರಿಕಲ್ಪನೆ ಸಹಾಯಕ್ಕೆ ಬರಬಲ್ಲದು ಎನ್ನುವುದು ತಜ್ಞರ ಅಭಿಪ್ರಾಯ.

ಈ ಒಂದು ಲೆಕ್ಕಾಚಾರ, ವೀರ್ಯದ ಅವಧಿ ಹಾಗೂ ಅದು ಮಕ್ಕಳಾಗುವ ಸಾಧ್ಯತೆಗಳಲ್ಲಿ ತರುವ ಬದಲಾವಣೆಗಳನ್ನು ಕಂಡುಕೊಳ್ಳಲು ಸಂಶೋಧಕರಿಗೆ ಹೊಸ ದಾರಿಯಂತೆ ಕಂಡುಬಂದಿದೆ. ಪುರುಷನು ಮಗುವನ್ನು ಪಡೆಯುವ ಸಾಮರ್ಥ್ಯವನ್ನು ಕಂಡುಕೊಳ್ಳಲು ಉತ್ತಮ ಸಾಧನವಾಗಲೂಬಹುದು ಎಂದಿದ್ದಾರೆ ತಜ್ಞರು.

ಉತಾಹ್ ವಿಶ್ವವಿದ್ಯಾಲಯದ ಸಂಶೋಧಕರು, ಈ ಪರಿಕಲ್ಪನೆಯನ್ನು ಆಧರಿಸಿಯೇ ಪುರುಷನ ಜೀವನಶೈಲಿ ಹೇಗೆ ಆತನ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಂಡಿದೆ. ಮೊದಲು, ಡಿಎನ್‌ಎ ಹೇಗೆ ವಯಸ್ಸಾಗುತ್ತಿದ್ದಂತೆ ಬದಲಾಗುತ್ತದೆ ಎಂಬುದನ್ನು ಕಂಡುಕೊಂಡು ನಂತರ ವೀರ್ಯದ ಲೆಕ್ಕಾಚಾರದ ಮೂಲಕ, ಹೇಗೆ ವೀರ್ಯ ಬದಲಾವಣೆ ಹೊಂದಿದೆ ಹಾಗೂ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಲೆಕ್ಕಾಚಾರ, ಪುರುಷನ ವಯಸ್ಸು ಹಾಗೂ ಅಸಹಜವಾಗಿ ವೀರ್ಯ ಬದಲಾವಣೆ ಹೊಂದಿದ್ದನ್ನೂ ತಿಳಿದುಕೊಳ್ಳಲು ಸಹಾಯ ಮಾಡಿದೆ. ಇದರೊಂದಿಗೆ, ವೀರ್ಯದ ಅಸಹಜ ಬದಲಾವಣೆಗೆ ಅತಿ ಮುಖ್ಯ ಕಾರಣ ಧೂಮಪಾನ ಎಂಬ ಅಂಶವನ್ನು ಈ ಸಂಶೋಧಕರು ಹೊರಹಾಕಿದ್ದಾರೆ.

ಮಕ್ಕಳನ್ನು ಪಡೆಯುವ ಮುನ್ನ, ತಮ್ಮ ವೀರ್ಯದ ಸ್ಥಿತಿ ಹಾಗೂ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ಮುನ್ನವೇ ಕಂಡುಕೊಳ್ಳಲು ಬಯಸುವ ಪುರುಷರಿಗೂ ಇದು ಸಹಕಾರಿಯಾಗಬಲ್ಲದು ಎಂದಿದ್ದಾರೆ.

ಮಗುವಿಗೆ ಆಟಿಸಂ ಹಾಗೂ ಸ್ಕೈಜೊಫ್ರೆಜಿಯಾದಂಥ ಎರಡು ಸಮಸ್ಯೆಗಳು ಬರುವ ಸಾಧ್ಯತೆಯನ್ನು ತಂದೆಯ ವೀರ್ಯದ ಬದಲಾವಣೆಗಳಿಂದ ಕಂಡುಕೊಳ್ಳಬಹುದಾಗಿದೆ.

ಈ ಮಾನಸಿಕ ಸಮಸ್ಯೆಯು ವಂಶವಾಹಿಯಿಂದ ಬರಬಹುದಾಗಿದ್ದು, ಮಗುವು ಗರ್ಭದಲ್ಲಿದ್ದ ಅವಧಿಯಲ್ಲಿ ಬೆಳವಣಿಗೆ ಹೊಂದುತ್ತದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ಈ ಸಂಬಂಧ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾದರೂ ಕೆಲವು ವಂಶವಾಹಿ ಸಮಸ್ಯೆಗಳನ್ನು ಗುರುತಿಸುವಲ್ಲಿ ಈ ಸ್ಪರ್ಮ್‌ ಏಜ್ ಕ್ಯಾಲ್ಕುಲೇಟರ್ ಒಂದು ಹಾದಿಯಾಗಬಲ್ಲದು ಎನ್ನುತ್ತಾರೆ ತಜ್ಞರು.

ಮುಂದುವರೆಯುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.