ADVERTISEMENT

ಸಿಕ್ಕಿತು ಪುನರ್ಜನ್ಮ

ಮೃತ್ಯುಂಜಯ

ಬಿ.ಎನ್.ಸರ್ವಮಂಗಳ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ವೈದ್ಯರು ನನ್ನ ಕಾಯಿಲೆಗೆ ಕೊಟ್ಟ ಹೆಸರು `ಅಕಲೇಷಿಯಾ ಕಾರ್ಡಿಯಾ'. ಕಾರ್ಡಿಯಾ ಅಂದರೆ ಹೃದಯ ಎಂದು ಗೊತ್ತು. ಆದರೆ ಈ ಅಕಲೇಷಿಯಾ ಏನು? ವೈದ್ಯರು ನನಗೆ ಅರ್ಥವಾಗುವಂತೆ ಬಿಡಿಸಿ ಹೇಳಲೇ ಇಲ್ಲ! ಕಲಾ ವಿಭಾಗದ ವಿದ್ಯಾರ್ಥಿಗೆ ವೈದ್ಯಕೀಯ ಪಾರಿಭಾಷಿಕ ಶಬ್ದದ ಅರ್ಥವಾದರೂ ಹೇಗೆ ತಿಳಿಯಬೇಕು?

1970ರ ಅವಧಿಯಲ್ಲಿ ಮಾನಸ ಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾ­ನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆಯಾಗಿದ್ದೆ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ವಾಂತಿ ಶುರುವಾಯ್ತು. ತಿಂದದ್ದು ಏನೂ ದಕ್ಕುತ್ತಿರಲಿಲ್ಲ. ಆದರೂ ನಾನು ಆಶಾಜೀವಿಯಾಗಿದ್ದೆ. ಬದುಕಬೇಕೆಂಬ ಉತ್ಕಟ ಮನೋ ನಿರ್ಧಾರವಿತ್ತು. ಬಲವಂತವಾಗಿ ನೀರನ್ನಾದರೂ ಹೊಟ್ಟೆಗೆ ಹಾಕಲು ಪ್ರಯತ್ನಿಸುತ್ತಿದ್ದೆ. ಒಮ್ಮೊಮ್ಮೆ ಒಳ ಹೋಗುತ್ತಿತ್ತು, ಬಹಳಷ್ಟು ಸಾರಿ ನುಂಗಿದ್ದೆಲ್ಲ ವಾಪಸ್ಸೇ ಬರುತ್ತಿತ್ತು. ನನ್ನ ತೂಕ 35 ಕೆ.ಜಿ.ಗೆ ಇಳಿದಿತ್ತು.

ಮೈಸೂರಿನ ಪ್ರಸಿದ್ಧ ಸರ್ಕಾರಿ ಕೆ.ಆರ್.ಆಸ್ಪತ್ರೆಗೆ ತೋರಿಸೋಣವೆಂದು ಹೋದೆ. ಹೊರ ರೋಗಿ ವಿಭಾಗದಲ್ಲಿ ನನ್ನ ಸಮಸ್ಯೆ ಹೇಳಿದೆ. ಯಾಕೋ ಅಲ್ಲಿನ ವೈದ್ಯರು ನಕ್ಕು ಏನೋ ಒಂದಷ್ಟು ಬರೆದುಕೊಟ್ಟರು. ಈಚೆ ಬರುತ್ತಿದ್ದ ಹಾಗೆ ನರ್ಸ್ ಒಬ್ಬಳು ನನ್ನನ್ನು ಹಿಂಬಾಲಿಸಿದಳು. ಅವಳೇ ಮುಂದಾಗಿ ಮಾತನಾಡಿಸಿ `ಏನಾಗಿದೆ, ಎಷ್ಟು ತಿಂಗಳು, ನಾನೆಲ್ಲ ಸರಿ ಮಾಡ್ತೀನಿ' ಎಂದು ಏನೇನೋ ಹೇಳಿದಳು. ಅವಳ ಮಾತು ಕೇಳಿ ತುಂಬಾ ಅವಮಾನವಾಗಿ, ಛಿ, ಈ ಆಸ್ಪತ್ರೆ ಸಹವಾಸವೇ ಬೇಡ ಎನಿಸಿತು. ವಿದ್ಯಾರ್ಥಿನಿಯರು ಎಂದರೆ ಏನು ತಿಳ್ಕೊಂಡಿದ್ದಾರೆ ಈ ಜನ ಎಂದು ಬೇಸರವಾಯಿತು.

ಮತ್ತೆ ಮೊದಲಿನಂತೆ ವಾಂತಿ. ಎಷ್ಟು ದಿನ ಸಹಿಸಲು ಸಾಧ್ಯ? ಆನೆಯಂತಾ ಬಲಶಾಲಿ ಪ್ರಾಣಿಯೇ ಆಹಾರದ ಕೊರತೆಯಿಂದ ಕೃಶವಾಗಿ ಸಾಯುತ್ತದಂತೆ. ನಾನು ಮತ್ತೊಮ್ಮೆ ಕೆ.ಆರ್. ಆಸ್ಪತ್ರೆಗೆ ಹೋದೆ. ನೇರವಾಗಿ ಗಂಟಲಿನ ತಜ್ಞರ ಬಳಿಯೇ ಹೋದೆ. ಅವರೇ ಡಾ. ಅಡಪ್ಪ.  ನನ್ನ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ ಎಕ್ಸ್‌ರೇ ಮಾಡಿಸಲು ಬರೆದುಕೊಟ್ಟರು. ಎಕ್ಸ್‌ರೇ ರಿಪೋರ್ಟ್ ತಂದ ಮೇಲೆ `ಇನ್ನು ಮೂರ್ನಾಲ್ಕು ದಿನಗಳಲ್ಲಿ ಆಸ್ಪತ್ರೆ ಸೇರಲು ವ್ಯವಸ್ಥೆ ಮಾಡಿಕೊಂಡು ಬಾಮ್ಮ' ಎಂದರು.

ಹಸಿವಿನ ಸಂಕಟ, ವಾಂತಿ ಎಂದರೆ ಅಪಾರ್ಥ ಕಲ್ಪಿಸುವ ಜನ. ಸತ್ತರೆ ಸಾಯಲಿ, ಏನಾದರೂ ಆಗಲಿ ಸದ್ಯದ ಪರಿಸ್ಥಿತಿಯಿಂದ ಮುಕ್ತಳಾದರೆ ಸಾಕು ಎನಿಸಿ ಆಸ್ಪತ್ರೆ ಸೇರಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ಮಾಡುವ ಪೂರ್ವಭಾವಿ ಉಪಚಾರ­ಗಳನ್ನು ಮಾಡಿದರು. ವಾರ್ಡಿನಲ್ಲಿ ನನ್ನಂತೆ ಬಳಲುತ್ತಿದ್ದ ಹಲವು ರೋಗಿಗಳು ಇದ್ದರು.

ವಿಷಯವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಯಾಕೆಂದರೆ ಅವರು ಶಸ್ತ್ರಚಿಕಿತ್ಸೆಗೆ ಒಪ್ಪುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಮುನ್ನ ತುಂಬುವ ಅರ್ಜಿಯಲ್ಲಿ ನಾನೇ ಸಹಿ ಮಾಡಿದೆ. ರೂಮ್‌ಮೇಟ್ ಮತ್ತು ಕೆಲವು ಆತ್ಮೀಯ ಗೆಳತಿಯರಿಗೆ ಮಾತ್ರ ವಿಷಯ ತಿಳಿಸಿದ್ದೆ. ಗ್ರಂಥಾಲಯದ ಪುಸ್ತಕಗಳನ್ನೆಲ್ಲ ವಾಪಸ್ ಮಾಡಿದ್ದೆ. ಮೈಮೇಲಿದ್ದ ಚೂರು ಪಾರು ಒಡವೆಗಳನ್ನೆಲ್ಲ ಗೆಳತಿಗೆ ನೀಡಿ, ನಾನು ಹಿಂದಕ್ಕೆ ಬರದಿದ್ದರೆ ಅಮ್ಮನಿಗೆ ತಲುಪಿಸು ಎಂದಿದ್ದೆ. ಬ್ಯಾಂಕ್‌ನಲ್ಲಿದ್ದ ಹಣವನ್ನು ತೆಗೆದು ಅವಳ ಕೈಲಿಟ್ಟು, ನನಗಾಗಿ ಖರ್ಚು ಮಾಡಲು ಹೇಳಿದೆ.
ವಿಷಯವನ್ನು ಬಹುಶಃ ಡಾ. ಅಡಪ್ಪ ಅವರೇ ಯೂನಿವರ್ಸಿಟಿಗೆ ಫೋನಾಯಿಸಿ, ಹಾಸ್ಟೆಲ್ ವಾರ್ಡನ್ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರಬೇಕೆಂದು ಕೋರಿದ್ದರು. ವಾರ್ಡನ್ ನಮ್ಮ ಮನೆಗೆ ಟೆಲಿಗ್ರಾಂ ಕೊಟ್ಟು ವಿಷಯ ತಿಳಿಸಿಬಿಟ್ಟಿದ್ದರು.

ಅಂದು ಮಂಗಳವಾರ, ಶಸ್ತ್ರಚಿಕಿತ್ಸಾ ಕೊಠಡಿಗೆ ನನ್ನನ್ನು ಕರೆದೊಯ್ದರು. ಶೂನ್ಯ ಭಾವ ನನ್ನನ್ನು ಆವರಿಸಿತ್ತು. ಡಾ. ಅಡಪ್ಪ, ಅರಿವಳಿಕೆ ತಜ್ಞರು, ಸಹ ವೈದ್ಯರು ನನ್ನನ್ನು ನಗಿಸುತ್ತಲೇ ಇದ್ದರು. ನನ್ನ ನಿರ್ಲಿಪ್ತತೆಯನ್ನು ಕಂಡು ಅವರಿಗೂ ಅಚ್ಚರಿ. ಮಾತನಾಡುತ್ತಾ, ಮಾತನಾಡಿಸುತ್ತಲೇ ನನಗೆ ಅರಿವು ತಪ್ಪಿತು. ಆಮೇಲೆ ಏನಾಯ್ತು ನನಗೊಂದೂ ನೆನಪಿಲ್ಲ. ಸುಮಾರು ಒಂದೂವರೆ ಗಂಟೆಯ ಕಾಲ ಆಪರೇಷನ್ ನಡೆಯಿತಂತೆ. ನನ್ನಮ್ಮ ಶಸ್ತ್ರಚಿಕಿತ್ಸಾ ಕೊಠಡಿಯ ಹೊರಭಾಗದಲ್ಲಿ ಕುಳಿತು ತನ್ನ ಮಗುವನ್ನು ಕಾಪಾಡುವಂತೆ ಪ್ರಾರ್ಥನೆ ಮಾಡುತ್ತಿದ್ದರಂತೆ.

ಐ.ಸಿ.ಯು.ಗೆ ತಂದು ಹಾಕಿದ್ದಾರೆ. ನನಗೆ ಪೂರ್ಣ ಜ್ಞಾನ ಬಂದಿಲ್ಲ. ಅಸಹಾಯಕ ಕೊರಡಿನಂತೆ ಬಿದ್ದಿದ್ದೆ. ಇಂದಿನ ಹಾಗೆ ಅಂದು ಬಹುಶಃ ವೈದ್ಯಕೀಯ ವಿಜ್ಞಾನದಲ್ಲಿ ಹೆಚ್ಚು ಕ್ರಾಂತಿಯಾಗಿರಲಿಲ್ಲ. ನ್ಯಾನೋ, ಲೆಪ್ರೋಸ್ಕೋಪಿ, ಲೇಸರ್ ತಂತ್ರಜ್ಞಾನ ಬಳಕೆಗೆ ಬಂದಿರಲಿಲ್ಲ. ಹೊಟ್ಟೆಯ ಎಡ ಪಕ್ಕೆಲುಬಿನಿಂದ ಹಿಡಿದು ಬೆನ್ನಿನ ಮಧ್ಯದವರೆಗೂ ಸುಮಾರು 13– -14 ಇಂಚುಗಳಷ್ಟು ಕೊಯ್ದು ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕಿದ್ದರು. ಒಂದು ಕೊಳವೆಯ ಮೂಲಕ ರಕ್ತ ಪೂರೈಕೆ, ಮತ್ತೊಂದರಲ್ಲಿ ಗ್ಲೂಕೋಸ್, ಇನ್ನೊಂದರಲ್ಲಿ ಕೆಟ್ಟ ರಕ್ತ ಈಚೆ ಬರಲು ಪಂಪ್‌ನಂತೆ ಕೆಲಸ ಮಾಡುವ ಟ್ಯೂಬು. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಕೊಡುತ್ತಿದ್ದ ಇಂಜೆಕ್ಷನ್‌ನಿಂದ ಭಯಂಕರ ನೋವು. ಆ ನೋವನ್ನು ತಗ್ಗಿಸಲು ಮತ್ತೊಂದು ರೀತಿಯ ಇಂಜೆಕ್ಷನ್. ಒಮ್ಮಮ್ಮೆ ನೋವು ತಾಳಲಾರದೆ ವಾರ್ಡ್ ಕಿತ್ತು ಹೋಗುವಂತೆ ಕಿರುಚುತ್ತಿದ್ದೆನಂತೆ.

ಹೆಚ್ಚೂ ಕಡಿಮೆ ನನ್ನದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದ 25 ವರ್ಷದ ಯುವಕ, ಮಧ್ಯವಯಸ್ಸಿನ ಒಬ್ಬ ಹೆಂಗಸು ನನ್ನ ಕಣ್ಮುಂದೆಯೇ ಸತ್ತಾಗ ನಾನೂ ದಿನಗಳನ್ನು, ಕ್ಷಣಗಳನ್ನು ಎಣಿಸುತ್ತಿದ್ದೆ. ಅಂತಹ ಸಮಯದಲ್ಲಿ ಡಾ. ಅಡಪ್ಪ, ಅವರ ಸಹ ವೈದ್ಯರು ಎಡೆಬಿಡದೆ ಹಲವು ಬಾರಿ ಬಂದು ನನ್ನ ಆರೋಗ್ಯ ವಿಚಾರಿಸುತ್ತಿದ್ದರು. ಕೆನ್ನೆ ತಟ್ಟಿ ಧೈರ್ಯ ತುಂಬುತ್ತಿದ್ದರು.

ಸುಮಾರು 10 ದಿನಗಳ ಐ.ಸಿ.ಯು. ವಾಸ್ತವ್ಯದ ನಂತರ ವಾರ್ಡ್‌ಗೆ ವರ್ಗಾಯಿಸಿದರು. ಡಾಕ್ಟರುಗಳಿಗೇ ಅಚ್ಚರಿಯಾಗುವಂತೆ ದಿನೇ ದಿನೇ ನನ್ನ ಆರೋಗ್ಯ ಸುಧಾರಿಸಿತು. 20 ದಿನಗಳ ನಂತರ ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ತಪಾಸಣೆಗೆಂದು ಹೋದಾಗೆಲ್ಲ `ದೇವರ ದಯೆ ನಿನ್ನ ಮೇಲಿದೆ. ಇನ್ನು ಮುಂದೆ ನೀನೂ ಎಲ್ಲರಂತೆ ಇಷ್ಟ ಬಂದಿದ್ದನ್ನು ತಿನ್ನಬಹುದು, ಸಂತೋಷವಾಗಿರು' ಎಂದು ಹರಸುತ್ತಿದ್ದರು.

ಈ ಘಟನೆ ನಡೆದು 40 ವರ್ಷಗಳೇ ಉರುಳಿವೆ. ಆಗೊಮ್ಮೆ ಈಗೊಮ್ಮೆ ಉತ್ಸಾಹದಲ್ಲಿ ಮೈಮರೆತು ಶ್ರಮದಾಯಕ ಕೆಲಸ ಮಾಡಿದರೆ ಬೆನ್ನು ಕುಸಿದಂತೆ ಭಾಸವಾಗುತ್ತದೆ. ವಿಶ್ರಾಂತಿ ತೆಗೆದುಕೊಂಡರೆ ಸರಿ ಹೋಗುತ್ತದೆ. ಯಶಸ್ವಿಯಾಗಿ 30 ವರ್ಷ ಉಪನ್ಯಾಸಕ ವೃತ್ತಿಯಲ್ಲಿದ್ದು ನಿವೃತ್ತಳಾಗಿದ್ದೇನೆ. ಅದೃಷ್ಟಕ್ಕೆ ನನ್ನ ಬಾಳಸಂಗಾತಿ ಡಾಕ್ಟರಾಗಿದ್ದರಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಜೀವನ ಸಾಗಿಸಿದ್ದೇನೆ.

ಇಷ್ಟು ದೊಡ್ಡ ಶಸ್ತ್ರಚಿಕಿತ್ಸೆ ನನಗೆ ಉಚಿತವಾಗಿ ದೊರೆಯಿತು. ಇಂದಿನ ಆಸ್ಪತ್ರೆಗಳ ಖರ್ಚು ವೆಚ್ಚವನ್ನು ಗಮನಿಸಿದರೆ ಮಧ್ಯಮ ವರ್ಗದವರಿಗೆ ದುಬಾರಿ ಎನಿಸುತ್ತದೆ. ಎಲ್ಲಿ ಹೋದವು ಆ ದಿನಗಳು? ಆ ಸೇವಾ ಮನೋಭಾವ? ವೈದ್ಯರ ಸಮರ್ಪಣಾಭಾವ, ಪ್ರೀತಿ, ಸಾಂತ್ವನದ ನುಡಿಗಳು? ಜಾಗತೀಕರಣದ ಜಂಜಡದಲ್ಲಿ ಮರೀಚಿಕೆಯಾದವೇ?

ನನಗೆ ಪುನರ್ಜನ್ಮ ನೀಡಿದ ಡಾ. ಅಡಪ್ಪ ಪ್ರಾತಃಸ್ಮರಣೀಯರು. ಒಮ್ಮೆ ಅವರನ್ನು ಭೇಟಿ ಮಾಡಲು ಹೋಗಿದ್ದಾಗ ವಿದೇಶದಲ್ಲಿದ್ದಾರೆ ಎಂದು ತಿಳಿಯಿತು.
ಡಾ. ಅಡಪ್ಪ ಸರ್, ನಿಮ್ಮ ಕೈ ಚಳಕದಿಂದ ಬದುಕಿರುವ ಕೂಸು ನಾನು. ನಿಮಗೊಂದು ಕೃತಜ್ಞತಾ ಪೂರ್ವಕ ವಂದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.