ಸೇಬು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಬಲು ಇಷ್ಟ. ಇದರಲ್ಲಿರುವ ಹಲವಾರು ವಿಧದ ಪೋಷಕಾಂಶಗಳಿಂದಾಗಿ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರವರೆಗೂ ಇದೊಂದು ಉತ್ತಮ ಆಹಾರ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. `ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ~ ಎಂಬ ಮಾತನ್ನು ನೀವು ಕೇಳಿರಬಹುದು.
ಆದರೆ ಸೇಬನ್ನು ಕತ್ತರಿಸಿಟ್ಟ ಕೆಲವೇ ನಿಮಿಷಗಳಲ್ಲಿ ಅದು ಕಂದು ಬಣ್ಣಕ್ಕೆ ತಿರುಗುವುದನ್ನು ಗಮನಿಸಿರುತ್ತೀರಿ. ಅಂತೆಯೇ ಸೇಬು ಬಿದ್ದು ಅಥವಾ ಜಜ್ಜಿ ಹೋದ ಭಾಗದಲ್ಲಿ ಸಹ ಕಂದು ಬಣ್ಣಕ್ಕೆ ತಿರುಗುತ್ತದೆ. ಬಹುತೇಕರು ಇಂತಹ ಸೇಬಿನ ತುಂಡುಗಳನ್ನು ಸೇವಿಸಲು ಹಿಂಜರಿಯುತ್ತಾರೆ. ಇನ್ನು ಕೆಲವರು ಕಂದು ಭಾಗವನ್ನು ಕತ್ತರಿಸಿ ತೆಗೆದು ಬಿಳಿ ಭಾಗವನ್ನು ಮಾತ್ರ ಸೇವಿಸುತ್ತಾರೆ. ಹಾಗಾದರೆ ಕತ್ತರಿಸಿದ ಸೇಬು ಕಂದು ಬಣ್ಣಕ್ಕೆ ತಿರುಗುವುದರ ರಹಸ್ಯವೇನು? ಇದನ್ನು ಸುಲಭವಾಗಿ ತಡೆಗಟ್ಟಲು ಸಾಧ್ಯವೇ?
ಸೇಬಿನಲ್ಲಿ ಹಲವಾರು ವಿಧದ ಕಿಣ್ವಗಳಿದ್ದು, ಅವುಗಳಲ್ಲಿ `ಟೈರೊಸಿನೆಸ್~ ಎಂಬುದು ಪ್ರಮುಖವಾದುದು. ಸೇಬಿನಲ್ಲಿ ಅತ್ಯಂತ ಸೂಕ್ಷ್ಮ ಪ್ರಮಾಣದಲ್ಲಿರುವ ಕಬ್ಬಿಣದ ಅಯಾನುಗಳು (ಇದು ರಾಸಾಯನಿಕವಾಗಿ Fe2+ ಎಂಬ ರೂಪದಲ್ಲಿರುತ್ತದೆ) ಹಣ್ಣನ್ನು ಕತ್ತರಿಸಿದ ಕೂಡಲೇ ಗಾಳಿಯ (ಆಮ್ಲಜನಕದ) ಸಂಪರ್ಕಕ್ಕೆ ಬರುತ್ತವೆ.
ಆಗ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯು ಕಬ್ಬಿಣದ ತುಕ್ಕು ಹಿಡಿಯುವಿಕೆಯನ್ನು ಹೋಲುತ್ತದೆ. Fe2+ ಅಯಾನುಗಳು ಆಮ್ಲಜನಕದ ಸಂಪರ್ಕಕ್ಕೆ ಬಂದೊಡನೆ, ಟೈರೊಸಿನೆಸ್ ಕಿಣ್ವದ ಇರುವಿಕೆಯಲ್ಲಿ ಅದು Fe3+ ಎಂಬ ಇನ್ನೊಂದು ರೂಪ ಪಡೆಯುತ್ತದೆ. ಕಬ್ಬಿಣದಲ್ಲಿ ಇದನ್ನೇ ತುಕ್ಕು ಹಿಡಿಯುವುದು ಎನ್ನುತ್ತಾರೆ!
ಅಂದರೆ ತುಕ್ಕು ಹಿಡಿಯುವಿಕೆಯಂತಹ ಪ್ರಕ್ರಿಯೆ ಸೇಬಿನ ಮೇಲ್ಭಾಗದಲ್ಲಿ ಉಂಟಾಗಿ ಅದು ತುಸು ಕಂದು ಬಣ್ಣಕ್ಕೆ ತಿರುಗುತ್ತದೆ. ಸ್ವಲ್ಪ ತುಕ್ಕು ಹಿಡಿದಿರುವ ಅಥವಾ ಹಳೆಯ ಕಬ್ಬಿಣದ ಚಾಕುವಿನಿಂದ ಕತ್ತರಿಸುವುದರಿಂದ ಈ ಪ್ರಕ್ರಿಯೆ ಇನ್ನಷ್ಟು ತ್ವರಿತವಾಗಿ ಉಂಟಾಗುತ್ತದೆ. ಆದರೆ ಈ ಕಂದು ಸೇಬನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಯಾವುದೇ ಹಾನಿಕಾರಕ ಪರಿಣಾಮಗಳು ಉಂಟಾಗುವುದಿಲ್ಲ ಎಂಬುದು ಸಮಾಧಾನದ ಸಂಗತಿ.
ಹೇಗೆ ತಡೆಗಟ್ಟಬಹುದು?
ಸೇಬನ್ನು ಕತ್ತರಿಸಿದ ತಕ್ಷಣ ನೀರಿನಿಂದ ತೊಳೆಯುವುದರಿಂದ ಟೈರೊಸಿನೆಸ್ ಕಿಣ್ವಗಳು ನೀರಿನೊಡನೆ ತೊಳೆದು ಹೋಗುತ್ತವೆ. ಇದರಿಂದ ಮೇಲಿನ ಪ್ರಕ್ರಿಯೆ ಅಪೂರ್ಣವಾಗಿ, ಅದು ಕಂದು ಬಣ್ಣಕ್ಕೆ ತಿರುಗುವುದಿಲ್ಲ. ಕತ್ತರಿಸಿದ ಭಾಗಗಳ ಮೇಲೆ ನಿಂಬೆ ಹಣ್ಣಿನ ರಸ ಲೇಪಿಸುವುದರಿಂದ, ಅದರ ಆಮ್ಲೀಯ ಗುಣದಿಂದಾಗಿ ಕಿಣ್ವ ನಾಶವಾಗಿ ಕಂದು ಬಣ್ಣ ಬರಲಾರದು.
ಇನ್ನೊಂದು ವಿಧಾನದಲ್ಲಿ, ಕತ್ತರಿಸಿದ ತುಂಡುಗಳನ್ನು ತಕ್ಷಣವೇ 3-4 ಸೆಕೆಂಡುಗಳ ಕಾಲ ತುಸು ಬಿಸಿ ಮಾಡುವುದರಿಂದಲೂ ಕಿಣ್ವಗಳು ನಾಶವಾಗಿ ಮೇಲಿನ ರಾಸಾಯನಿಕ ಪ್ರಕ್ರಿಯೆ ಅಪೂರ್ಣವಾಗುತ್ತದೆ.
ಮತ್ತೊಂದು ವಿಧಾನವನ್ನು ಮನೆಯಲ್ಲಿ ಅನುಸರಿಸುವುದು ಕಷ್ಟವಾದರೂ ಉದ್ದಿಮೆಗಳಲ್ಲಿ ಇದೇ ತತ್ವವನ್ನು ಬಳಸುತ್ತಾರೆ. ಸೇಬನ್ನು ಸಂಪೂರ್ಣ ನಿರ್ವಾತದಲ್ಲಿ ಕತ್ತರಿಸಿ ಇಡುವುದರಿಂದ ಆಮ್ಲಜನಕ ಇಲ್ಲದಿರುವುದರಿಂದಲೂ ರಾಸಾಯನಿಕ ಕ್ರಿಯೆ ಅಪೂರ್ಣವಾಗುತ್ತದೆ. ಸೂಪರ್ ಮಾರ್ಕೆಟ್‌ಗಳಲ್ಲಿ ದೊರಕುವ ಕತ್ತರಿಸಿಟ್ಟ ತರಕಾರಿ/ ಹಣ್ಣುಗಳು ತಾಜಾ ಆಗಿ ಗೋಚರಿಸಲು ಇದೇ ಕಾರಣ. ಏಕೆಂದರೆ ನಿರ್ವಾತದಲ್ಲಿ ಅವುಗಳನ್ನು ಕತ್ತರಿಸಿ ಪ್ಯಾಕ್ ಮಾಡಲಾಗಿರುತ್ತದೆ.
ಸಾವು ಕೂಡ ಸಂಭವಿಸಬಹುದು!
ಸೇಬು ನಮ್ಮ ಆರೋಗ್ಯಕ್ಕೆ ಅದೆಷ್ಟು ಉತ್ತಮವೋ, ಅದಕ್ಕಿಂತಲೂ ಕೆಟ್ಟ ಪರಿಣಾಮ ಅವುಗಳ ಬೀಜ ಸೇವನೆಯಿಂದ ಉಂಟಾಗುತ್ತದೆ! ತುಸು ಅಸಹ್ಯ ರುಚಿ ಹೊಂದಿರುವ ಸೇಬಿನ ಬೀಜಗಳ ಸೇವನೆಯಿಂದ ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ (ಸುಮಾರು 2-3 ಸೇಬುಗಳಿಂದ ಸಂಗ್ರಹವಾದ ಬೀಜಗಳನ್ನು ಜಗಿದು ತಿನ್ನುವುದರಿಂದ) ಸಾವು ಕೂಡ ಸಂಭವಿಸಬಹುದು!
ಸೇಬಿನ ಬೀಜದಲ್ಲಿ `ಆ್ಯಮಿಗ್ಡಾಲಿನ್~ ಎಂಬ ಒಂದು ನೈಸರ್ಗಿಕ ರಾಸಾಯನಿಕವಿದ್ದು, ಇದು ಗ್ಲುಕೋಸ್, ಬೆಂಜಾಲ್ಡಿಹೈಡ್ ಹಾಗೂ ಸೈನೈಡ್ ಅನ್ನು ಹೊಂದಿದೆ. ಬೆಂಜಾಲ್ಡಿಹೈಡ್‌ನಿಂದಾಗಿ ಸೇಬಿನ ಬೀಜಗಳಿಗೆ ಅಸಹ್ಯ ವಾಸನೆಯಿದ್ದು, ಸೈನೈಡ್ ಒಂದು ಘೋರ ವಿಷ.
ಗ್ಲುಕೋಸ್ ಮಾತ್ರ ದೇಹಕ್ಕೆ ಒಳ್ಳೆಯದು. ಒಂದು ವೇಳೆ ಸೇಬನ್ನು ಸೇವಿಸುವಾಗ ಅರಿಯದೇ ಬೀಜಗಳನ್ನು ನುಂಗಿದ್ದರೆ ಅದರಿಂದ ಯಾವುದೇ ಹಾನಿ ಉಂಟಾಗಲಾರದು. ಆದರೆ ಈ ಬೀಜಗಳನ್ನು ಜಗಿದು ತಿನ್ನುವುದರಿಂದ ನಮ್ಮ ದೇಹದಲ್ಲಿ ಸೈನೈಡ್ ಸುಲಭವಾಗಿ ಬಿಡುಗಡೆಯಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಲ್ಲದು.
ಚಿಕ್ಕ ಮಕ್ಕಳಲ್ಲಿ ಈ ಅಡ್ಡ ಪರಿಣಾಮ ಅತಿ ತ್ವರಿತವಾಗಿ ಉಂಟಾಗುತ್ತದೆ. ಹೀಗಾಗಿ ಮಕ್ಕಳು ಸೇಬು ತಿನ್ನುವಾಗ ಹಿರಿಯರ ಮಾರ್ಗದರ್ಶನ ಅಗತ್ಯ. ಒಂದು ವೇಳೆ ಮಕ್ಕಳು ಈ ಬೀಜಗಳನ್ನು ಜಗಿದು ತಿಂದಿದ್ದರೆ ವಾಂತಿ ಮಾಡಿಸಿ ಹೊರಹಾಕಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.