ADVERTISEMENT

ಹಾಲು ಹಲ್ಲು ಬರುವಾಗ...

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 12:00 IST
Last Updated 21 ಜನವರಿ 2011, 12:00 IST

ಹಾಲುಗೆನ್ನೆಯ ಕಂದನ ಬಾಯಲ್ಲಿ ಮೂಡುವ ಹಲ್ಲು ಸರಿಯಾಗಿದ್ದರೆ ಬಿಳಿಯ ಮುತ್ತಿನ ಮಾಲೆ. ಅದೇ ಸಮಸ್ಯೆ  ತಂದೊಡ್ಡಿದ್ದರೆ ಖಂಡಿತ ಅದಕ್ಕಿಂತ ದುಃಖದಾಯಕ ಮತ್ತೊಂದಿಲ್ಲ.  ಮಗು 6 ನೇ ವಾರದ ಭ್ರೂಣವಿರುವಾಗಲೇ ಹಾಲು ಹಲ್ಲು ಮೂಡಲು ಶುರುವಾಗುತ್ತದೆ. ಆದರೆ ಹುಟ್ಟಿದ 6 ತಿಂಗಳಿನ ನಂತರ ಬಾಯಲ್ಲಿ ಕಾಣಿಸಲು ಶುರುವಾಗುತ್ತದೆ.

ಈ ಹಾಲು ಹಲ್ಲು ಕೆಲವೊಮ್ಮೆ ಮಗು ಹುಟ್ಟುವಾಗಲೇ ಬಂದಿರುತ್ತದೆ. ಇದನ್ನು ನವಜಾತ ಶಿಶುಹಲ್ಲು (ನಿಯೋನೇಟಲ್ ಟೀತ್) ಎನ್ನುತ್ತೇವೆ ಅಥವಾ ಕೆಲವೊಮ್ಮೆ ಹುಟ್ಟಿದ ಒಂದು  ತಿಂಗಳಿನಲ್ಲಿಯೇ ಹಾಲು ಹಲ್ಲು ಬರಬಹುದು. ಇದನ್ನು ‘ನೇಟಲ್ ಟೀತ್’ ಎನ್ನುತ್ತೇವೆ.

ಸಾಮಾನ್ಯವಾಗಿ ಹಾಲು ಹಲ್ಲು ಮೂಡುವಾಗ ಶೇ 50-60 ರಷ್ಟು ಮಕ್ಕಳಲ್ಲಿ ಮಾತ್ರ ತೊಂದರೆ ಕಾಣಿಸುತ್ತದೆ. ಮುಖ್ಯವಾಗಿ ಹಾಲು ಹಲ್ಲು ವಸಡನ್ನು ಸೀಳಿ ತೂರಿಕೊಂಡು ಬರುವಾಗ ವಸಡು ಕೆಂಪಾಗುವುದು, ಬಾವು, ನೋವು, ಕೀವು, ಜ್ವರ, ಭೇದಿ ಇವೆಲ್ಲಾ  ಕಾಣಿಸಬಹುದು. ಆದರೆ ಈ ಲಕ್ಷಣಗಳು ಹಲ್ಲು ಬರುವ ಒಂದು ಅಥವಾ ಎರಡು ವಾರ ಮುಂಚೆ ಅಥವಾ ನಂತರ ಕಾಣಿಸಬಹುದು.     

ಹಲ್ಲು ಮೂಡುವ ವೇಳೆಯಲ್ಲಿ ಮಗು ಕೈಗೆ ಸಿಗುವ ವಸ್ತುಗಳನ್ನು ಬಾಯೊಳಗೆ  ಹಾಕಿಕೊಳ್ಳಲು ಪ್ರಯತ್ನಿಸುತ್ತದೆ.  ಆದ್ದರಿಂದ ಹಾನಿಕಾರಕ  ಅಪಾಯಕಾರಿ ವಸ್ತು ಮಗುವಿನ ಕೈಗೆ ಸಿಗದಂತೆ ಜಾಗ್ರತೆ ವಹಿಸಬೇಕು. ಜೊತೆಗೆ ಹಲ್ಲು ಮೂಡುವ ಜಾಗ ಉಬ್ಬಿದಂತಾಗಿ ಕೆಂಪಾಗಿರುತ್ತದೆ. ಇದು ಸಹಜವಾಗಿಯೇ ನೋವನ್ನುಂಟು ಮಾಡುತ್ತಿರುತ್ತದೆ. ಕೈಗೆ ಸಿಗುವ ವಸ್ತು ಈ ಜಾಗಕ್ಕೆ ಕೆಲವೊಮ್ಮೆ ತಾಗಿ ಅಥವಾ ಒಡೆದು ಸೋಂಕಾಗಬಹುದು.
ಏನು ಮಾಡಬೇಕು?

ಪೋಷಕರು ತಮ್ಮ ಕೈಬೆರಳನ್ನು ಸ್ವಚ್ಛ ಮಾಡಿಕೊಂಡು ಮಗುವಿನ ವಸಡನ್ನು ಮೃದುವಾಗಿ ದಿನಾಲೂ 2-3 ಬಾರಿ 2 ನಿಮಿಷ ಮಸಾಜ್ ಮಾಡಬೇಕು.
ಒದ್ದೆ ಬಟ್ಟೆಯಿಂದ ಬಾಯನ್ನು ಸ್ವಚ್ಛ ಮಾಡುತ್ತಿರಬೇಕು.

ಮಗು ಬಾಯನ್ನು ಆಡಿಸುವಂತಿರಲು ಬಾಯೊಳಗೆ ತೂರುವಂತಹ, ಆದರೆ  ನುಂಗಲಾರದಂತಹ ಟೀತಿಂಗ್ ರಿಂಗ್ (ಪ್ಲಾಸ್ಟಿಕ್‌ನದು) ಕೈಗೆ ಕೊಡಬೇಕು.
ಹಲ್ಲು ಕಾಣಿಸದೇ ವಸಡು ಊದಿ ಗುಳ್ಳೆಯಂತಾದರೆ ವೈದ್ಯರಿಗೆ ತೋರಿಸಿ.

6-8 ತಿಂಗಳಾದರೂ ಒಂದು ಹಾಲು ಹಲ್ಲು ಮೂಡದಿದ್ದರೆ ದಂತ ವೈದ್ಯರಲ್ಲಿ ತೋರಿಸಿ.

ಹಾಲು ಹಲ್ಲುಗಳ ಆರೈಕೆ, ಪಾಲನೆ ಮಾಡಿದಷ್ಟು ಒಳ್ಳೆಯದು.

ಹಾಲು ಹಲ್ಲು 6 ತಿಂಗಳಿಗೆ ಮುಂಚೆಯೇ 4-5 ತಿಂಗಳಿನಲ್ಲಿ ಬಂದರೆ ತೊಂದರೆಯಿಲ್ಲ. ಹುಟ್ಟುವಾಗಲೇ ಮೂಡಿದ್ದರೆ ಅಥವಾ 1-2 ತಿಂಗಳಲ್ಲಿ ಬಂದರೆ ಗಮನಿಸಬೇಕು. ತಾಯಿ ಮಗುವಿಗೆ ಹಾಲುಣಿಸಬೇಕಾದಾಗ ಆ ಮಗುವಿನ ಹಲ್ಲು ತಾಯಿಯ ಸ್ತನಕ್ಕೆ ನೋವು ಮಾಡುತ್ತಿದ್ದರೆ, ಚುಚ್ಚುತ್ತಿದ್ದರೆ ಆ ಹಾಲು ಹಲ್ಲು ತೆಗೆಸಬೇಕು. 

   ಲೇಖಕರ ದೂರವಾಣಿ:  9342466936                                                    

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT