ADVERTISEMENT

ಕ್ಷೇಮ–ಕುಶಲ: ಕಂಟಕವಾಗದಿರಲಿ ಗರ್ಭಕಂಠದ ಕ್ಯಾನ್ಸರ್

ಡಾ.ಕಿರಣ್ ವಿ.ಎಸ್.
Published 4 ಮಾರ್ಚ್ 2024, 22:56 IST
Last Updated 4 ಮಾರ್ಚ್ 2024, 22:56 IST
   

ಇತ್ತೀಚಿಗೆ ಅನೇಕ ಕಾರಣಗಳಿಂದ ಗರ್ಭಕಂಠದ ಕ್ಯಾನ್ಸರ್ ಸುದ್ಧಿಯಲ್ಲಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಮೂರೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಮರಣಿಸುತ್ತಾರೆ. ಜಗತ್ತಿನಲ್ಲಿ ಸ್ತ್ರೀಯರನ್ನು ಕಾಡುವ ಕ್ಯಾನ್ಸರ್‌ಗಳ ಪೈಕಿ ಸ್ತನಗಳು, ಶ್ವಾಸಕೋಶಗಳು, ಕರುಳಿನ ನಂತರ ಗರ್ಭಕಂಠದ ಕ್ಯಾನ್ಸರ್‌ಗೆ ನಾಲ್ಕನೆಯ ಸ್ಥಾನ. ವಾರ್ಷಿಕವಾಗಿ ಸುಮಾರು ಆರೂವರೆ ಲಕ್ಷ ಸ್ತ್ರೀಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದು ಪತ್ತೆಯಾಗದೇ ಉಳಿಯುತ್ತದೆ ಎಂದು ತಜ್ಞರ ಅಭಿಮತ. ಜಗತ್ತಿನ ಎಲ್ಲ ದೇಶಗಳಲ್ಲೂ ಗರ್ಭಕಂಠದ ಕ್ಯಾನ್ಸರ್ ಕಾಣುತ್ತದೆಯಾದರೂ, ಇದರಿಂದ ಮರಣಿಸುವವರು ಆಫ್ರಿಕಾ, ದಕ್ಷಿಣ ಏಷ್ಯಾ, ಮತ್ತು ಮಧ್ಯ ಅಮೆರಿಕಗಳಲ್ಲಿ ಹೆಚ್ಚಾಗಿ ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಣುವ ಸ್ತ್ರೀ-ಆರೋಗ್ಯದ ಅವಗಣನೆ, ಕ್ಯಾನ್ಸರ್ ಪತ್ತೆ ಮಾಡಲು ಅನುಕೂಲಗಳ ಅಭಾವ, ಚಿಕಿತ್ಸೆಯ ಅಲಭ್ಯತೆ, ಲಸಿಕೆಗಳ ಬಗೆಗಿನ ಅಜ್ಞಾನ. ಇದರ ಜೊತೆಗೆ ಜಗತ್ತಿನಲ್ಲೆಲ್ಲ ಪಸರಿಸಿರುವ ಎಚ್.ಐ.ವಿ. ಕಾಯಿಲೆ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ, ಗರ್ಭಕಂಠದ ಕ್ಯಾನ್ಸರ್‌ನ ಸಾಧ್ಯತೆಯನ್ನು ಆರು ಪಟ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಗರ್ಭಕಂಠ ಎಂದರೇನು? ಗರ್ಭಕೋಶ ಎನ್ನುವುದು ಸ್ತ್ರೀಯರ ಕಿಬ್ಬೊಟ್ಟೆಯಲ್ಲಿರುವ ಚೀಲದಂತಹ ಅಂಗ. ಇದರ ಆರಂಭಿಕ ಭಾಗ ಗರ್ಭಕಂಠ. ಇದು ಯೋನಿಯನ್ನು ಗರ್ಭಾಶಯಕ್ಕೆ ಸಂಪರ್ಕಿಸುವ ಕಿರಿದಾದ ಭಾಗ. ಗರ್ಭಾಶಯದಿಂದ ಮಾಸಿಕ ಋತುಸ್ರಾವ ಗರ್ಭಕಂಠದ ಮೂಲಕ ಹಾಯ್ದು ಯೋನಿಯ ದಾರಿಯಿಂದ ಹೊರಹೋಗುತ್ತದೆ. ಹೆಣ್ಣು ಗರ್ಭವನ್ನು ಧರಿಸಿದಾಗ ಬೆಳೆಯುತ್ತಿರುವ ಭ್ರೂಣಕ್ಕೆ ಸಮನಾಗಿ ಗರ್ಭಕೋಶದ ಮೇಲಿನ ಭಾಗ ಹಿಗ್ಗುತ್ತಾ ಹೋಗುತ್ತದೆ. ಇದಕ್ಕೆ ವಿರುದ್ಧವಾಗಿ ಗರ್ಭಕಂಠ ಕಿರಿದಾಗಿಯೇ ಇದ್ದು, ಭ್ರೂಣವು ಹೊರಗೆ ಜಾರದಂತೆ ಕಾಪಾಡುತ್ತದೆ. ಶಿಶುವಿನ ಜನನದ ವೇಳೆ ಗರ್ಭಕಂಠ ಹಿಗ್ಗಿ, ಹೆರಿಗೆಗೆ ಅನುವು ಮಾಡಿಕೊಡುತ್ತದೆ.

‘ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕು’ ಎನ್ನುವ ಲೈಂಗಿಕವಾಗಿ ಹರಡುವ ಕಾಯಿಲೆ ಗರ್ಭಕಂಠದ ಕ್ಯಾನ್ಸರ್‌ನ ಅತಿ ಮುಖ್ಯ ಕಾರಣ. ಲೈಂಗಿಕವಾಗಿ ಸಕ್ರಿಯರಾಗಿರುವ ಬಹುತೇಕ ಜನರಲ್ಲಿ ಈ ವೈರಸ್ ಸೋಂಕು ಸಣ್ಣ ಮಟ್ಟದಲ್ಲಿ ಇರುತ್ತದೆ. ಶರೀರದ ರಕ್ಷಕ ವ್ಯವಸ್ಥೆ ಇದರ ಸೋಂಕನ್ನು ಬಹುಮಟ್ಟಿಗೆ ನಿಗ್ರಹಿಸುತ್ತದೆ. ಆದರೆ ಈ ವೈರಸ್ ಸೋಂಕು ಪದೇ ಪದೇ ಗರ್ಭಕಂಠವನ್ನು ಘಾಸಿ ಮಾಡುತ್ತಲೇ ಹೋದರೆ ಸಾಮಾನ್ಯ ಜೀವಕೋಶಗಳು ನಶಿಸಿ, ಆ ಸ್ಥಾನದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವ ಸಾಧ್ಯತೆಗಳು ಹೆಚ್ಚು. ಲೈಂಗಿಕ ಸಂಗಾತಿಗಳ ಸಂಖ್ಯೆ ಅಧಿಕವಾದಷ್ಟೂ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದರ ಜೊತೆಗೆ ಸಣ್ಣವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಶರೀರದ ರೋಗನಿರೋಧಕ ಶಕ್ತಿಯ ಇಳಿಕೆ, ಪೌಷ್ಟಿಕ ಆಹಾರದ ಕೊರತೆ, ಅಶುಚಿ, ಹೆಚ್ಚು ಬಾರಿ ಗರ್ಭವನ್ನು ಧರಿಸುವುದು, ಹಾರ್ಮೋನ್-ಯುಕ್ತ ಗರ್ಭನಿರೋಧಕಗಳ ಬಳಕೆ, ಧೂಮಪಾನ, ಮದ್ಯಪಾನಗಳ ಅಭ್ಯಾಸ, ಮಾದಕ ದ್ರವ್ಯಗಳ ವ್ಯಸನ, ಸ್ಟೀರಾಯ್ಡ್ ಔಷಧಗಳ ಚಿಕಿತ್ಸೆ, ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಎಚ್.ಐ.ವಿ.ಯಂತಹ ಕಾಯಿಲೆಗಳು ಮೊದಲಾದುವು ಗರ್ಭಕಂಠದ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತವೆ.

ಅಸಹಜ ಮತ್ತು ಅನಿಯಮಿತವಾಗಿ ಯೋನಿಯ ಮೂಲಕ ರಕ್ತಸ್ರಾವ ಆಗುವುದು ಗರ್ಭಕಂಠದ ಕ್ಯಾನ್ಸರ್‌ನ ಪ್ರಮುಖ ಲಕ್ಷಣ. ಎರಡು ಮಾಸಿಕ ಋತುಸ್ರಾವಗಳ ನಡುವೆ ಆಗಾಗ ರಕ್ತಸ್ರಾವ ಆಗುವುದು, ಸಂಭೋಗದ ನಂತರ ಸಣ್ಣಪ್ರಮಾಣದಲ್ಲಿ ರಕ್ತಸ್ರಾವ ಕಾಣುವುದು, ಕಿಬ್ಬೊಟ್ಟೆ, ಸೊಂಟ ಮತ್ತು ಬೆನ್ನಿನ ಹಿಂಭಾಗದ ನೋವು, ಯೋನಿಸ್ರಾವದಲ್ಲಿ ದುರ್ವಾಸನೆ, ಮಾಸಿಕ ಋತುಸ್ರಾವ ನಿಂತ ಕೆಲವರ್ಷಗಳ ಬಳಿಕೆ ಮತ್ತೆ ರಕ್ತಸ್ರಾವ ಕಾಣುವುದು, ಪದೇ ಪದೇ ನೋವುಯುಕ್ತ ಮೂತ್ರವಿಸರ್ಜನೆ ಆಗುವಿಕೆ, ಮೊದಲಾದುವು ಗರ್ಭಕಂಠದ ಕ್ಯಾನ್ಸರ್‌ನ ಕೆಲವು ಲಕ್ಷಣಗಳು. ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಕೋಶಗಳು ಶರೀರದ ಇತರ ಅಂಗಗಳಿಗೆ ವ್ಯಾಪಿಸುವ ಸಾಧ್ಯತೆಗಳಿರುತ್ತವೆ. ಒಮ್ಮೆ ಕ್ಯಾನ್ಸರ್ ಗರ್ಭಕಂಠದಿಂದ ಇತರ ಅಂಗಗಳಿಗೆ ಹರಡಿದರೆ ಚಿಕಿತ್ಸೆ ಬಹಳ ಕಷ್ಟ; ಫಲಿತಾಂಶವೂ ಕಡಿಮೆ.

ADVERTISEMENT

ಗರ್ಭಕಂಠದ ಕ್ಯಾನ್ಸರ್ ಪತ್ತೆಗಾಗಿ ಸಾಕಷ್ಟು ಪರೀಕ್ಷೆಗಳಿವೆ. ‘ಪ್ಯಾಪ್ ಸ್ಮಿಯರ್’ ಎಂದು ಕರೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಗರ್ಭಕಂಠದ ಮೇಲ್ಮೈಕೋಶಗಳನ್ನು ತೆಗೆದು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಪರೀಕ್ಷಿಸುತ್ತಾರೆ. ಕ್ಯಾನ್ಸರ್ ಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತಲೂ ಭಿನ್ನವಾಗಿರುತ್ತವೆ. ಇದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಬಹುದು. ಪ್ಯಾಪ್ ಸ್ಮಿಯರ್ ಪರೀಕ್ಷೆ ಗರ್ಭಕಂಠದ ಕ್ಯಾನ್ಸರ್‌ನ ಸಾಧ್ಯತೆಗಳನ್ನು ತೋರಿದರೆ, ಅದನ್ನು ನಿಖರವಾಗಿ ಪತ್ತೆ ಮಾಡಲು ಇನ್ನಷ್ಟು ಪರೀಕ್ಷೆಗಳನ್ನು ಮಾಡಿ ಖಚಿತಪಡಿಸಿಕೊಳ್ಳಬಹುದು. ಈ ಹಂತದಲ್ಲಿ ಚಿಕಿತ್ಸೆ ಸರಳ ಮತ್ತು ಪರಿಣಾಮಕಾರಿ.

ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಲಸಿಕೆ ಲಭ್ಯವಿದೆ. ಈ ಲಸಿಕೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ. 12-13 ವರ್ಷಗಳ ವಯಸ್ಸಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡುವುದು ಸೂಕ್ತ ಎಂದು ತಜ್ಞರ ಅಭಿಪ್ರಾಯ. ಈ ಬಗ್ಗೆ ಕಳೆದ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಉಲ್ಲೇಖವನ್ನು ಮಾಡಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ಪ್ರಲೋಭನೆಗಳಿಗೆ ಒಳಗಾಗದ ಮಾನಸಿಕ ಧೃಢತೆ, ಶಿಸ್ತುಬದ್ಧ ಬದುಕು, ಆರೋಗ್ಯಕ್ಕೆ ಮಾರಕವಾಗುವ ಚಟಗಳಿಂದ ದೂರ ಉಳಿಯುವಿಕೆ, ಸಮಯೋಚಿತ ಪರೀಕ್ಷೆಗಳು, ಲಸಿಕೆ, ಮೊದಲಾದ ವಿಧಾನಗಳು ಗರ್ಭಕಂಠದ ಕ್ಯಾನ್ಸರ್‌ನಿಂದ ಆಗಬಹುದಾದ ಅನಾಹುತಗಳನ್ನು ತಡೆಯಬಲ್ಲವು. ಇದರ ಬಗ್ಗೆ ಪ್ರತಿಯೊಬ್ಬರೂ ಅರಿವನ್ನು ಮೂಡಿಸಿಕೊಂಡು ಕಾರ್ಯಪ್ರವೃತ್ತರಾಗುವುದು ಈ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.