ADVERTISEMENT

ಸಮಾಲೋಚನೆಯ ಒಂದಷ್ಟು ತಂತ್ರಗಳು

ಡಾ.ಎಸ್.ಎಸ್.ವಾಸನ್
Published 12 ಏಪ್ರಿಲ್ 2019, 20:00 IST
Last Updated 12 ಏಪ್ರಿಲ್ 2019, 20:00 IST

ವಿವಾಹ ಪೂರ್ವ ಸಮಾಲೋಚನೆಯಲ್ಲಿ ವಿವಿಧ ಬಗೆಯ ತಂತ್ರಗಳನ್ನು ಬಳಸಲಾಗುತ್ತದೆ. ವಿವಿಧ ವಿಧಾನಗಳನ್ನೂ ಅನುಸರಿಸಲಾಗುತ್ತದೆ. ಬಹುಸಂಸ್ಕೃತಿಯ ಭಾರತದಲ್ಲಿ ಧಾರ್ಮಿಕ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಸಮಾಲೋಚನೆಯ ತಂತ್ರ ಹಾಗೂ ವಿಧಾನಗಳನ್ನು ನಿರ್ಧರಿಸಲಾಗುತ್ತದೆ.

ನಿಮ್ಮ ವ್ಯಕ್ತಿತ್ವ, ನಿಮ್ಮ ಸಂಗಾತಿಯ ವ್ಯಕ್ತಿತ್ವ, ನಿಮ್ಮಿಬ್ಬರ ಕುಟುಂಬದ ಹಿನ್ನೆಲೆ, ನಿಮ್ಮಿಬ್ಬರ ವೃತ್ತಿ ಹಿನ್ನೆಲೆ ಇವುಗಳನ್ನೆಲ್ಲ ಗಮನದಲ್ಲಿರಿಸಿಕೊಂಡು ಯಾವ ಬಗೆಯ ಸಮಾಲೋಚನೆ ಸೂಕ್ತವಾದೀತು ಎಂಬುದನ್ನು ನಿರ್ಧರಿಸಬಹುದಾಗಿದೆ. ಈ ಸಮಾಲೋಚನೆಯಿಂದ ನಿಮ್ಮ ಹಾಗೂ ಸಂಗಾತಿಯ ನಡುವಿನ ಯಾವ ವಿಷಯಗಳು ಸ್ಷಷ್ಟವಾಗಬೇಕಿದೆ? ಯಾವುದನ್ನು ಹೇಗೆ ಸ್ವೀಕರಿಸಬೇಕು, ನಿಭಾಯಿಸಬಹುದಾದ ವಿಷಯಗಳು ಹೀಗೆ ಪಟ್ಟಿ ಮಾಡಿಕೊಂಡು ಮುಂದುವರಿದರೆ ಒಂದು ಬಾಂಧವ್ಯ ಗಟ್ಟಿಯಾಗಬಹುದಾದ ಎಲ್ಲ ಸಾಧ್ಯತೆಗಳನ್ನೂ ಇಲ್ಲಿ ಪ್ರಯತ್ನಿಸಲಾಗುತ್ತದೆ.

ಧಾರ್ಮಿಕ ಆಪ್ತ ಸಮಾಲೋಚನೆ: ನೀವು ಧಾರ್ಮಿಕ ಕೇಂದ್ರಗಳಲ್ಲಿ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಲ್ಲಿ, ಸಾಂಪ್ರದಾಯಿಕವಾಗಿ ಅಲ್ಲಿಯ ಧಾರ್ಮಿಕ ಮುಖಂಡರು ಮದುವೆಗೆ ಮುನ್ನ ಒಂದೆರಡು ಸಲವಾದರೂ ನಿಮ್ಮೊಟ್ಟಿಗೆ ಚರ್ಚಿಸಿರುತ್ತಾರೆ. ಇಂಥ ಚರ್ಚೆಗಳನ್ನೇ ಸಮಾಲೋಚನೆಯ ಚೌಕಟ್ಟಿನಲ್ಲಿ ತರುವ ಯತ್ನ ಈಚೆಗೆ ನಡೆಯುತ್ತಿದೆ. ಪ್ರತಿ ಕುಟುಂಬದೊಂದಿಗೂ ಪ್ರತ್ಯೇಕವಾಗಿ ಸಮಯ ಕಳೆದು, ಮದುವೆಯ ಸಂಪ್ರದಾಯ, ವಿಧಿ ವಿಧಾನಗಳನ್ನು ಚರ್ಚಿಸಲಾಗುತ್ತದೆ. ಹಾಗೆಯೇ ವಧು ವರ ಇಬ್ಬರಿಗೂ ಈ ವಿಧಿ ವಿಧಾನಗಳು ಒಪ್ಪಿತವೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವರಿಬ್ಬರು ಪರಸ್ಪರ ಏನು ಯೋಚಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಧಾರ್ಮಿಕ ಮುಖಂಡರು ಕೆಲವೊಮ್ಮೆ ಇಬ್ಬರ ನಡುವಿನ ಹೊಂದಾಣಿಕೆಯ ಗುಣವನ್ನೂ ಈ ಭೇಟಿಯಲ್ಲಿ ಅಳೆದುಬಿಡುತ್ತಾರೆ. ಅದಕ್ಕೆ ತಕ್ಕಂತೆ ಕೆಲವು ಸಲಹೆ ಸೂಚನೆಗಳನ್ನೂ ನೀಡುತ್ತಾರೆ. ಅವುಗಳನ್ನು ವಧುವರರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಈ ಬಗೆಯ ಸಮಾಲೋಚನೆಯ ಸಾಫಲ್ಯ ನಿರ್ಧರಿತವಾಗುತ್ತದೆ.

ADVERTISEMENT

ಆನ್‌ಲೈನ್‌ ಸಮಾಲೋಚನಾ ಕೋರ್ಸುಗಳು: ಒಂದು ವೇಳೆ ನಿಮಗೆ ನಿಮ್ಮ ವೈಯಕ್ತಿಕ ಅಂಶಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ ಎಂದೆನಿಸಿದರೆ, ಆನ್‌ಲೈನ್‌ ಕೋರ್ಸುಗಳನ್ನು ಯತ್ನಿಸಬಹುದಾಗಿದೆ. ಇಲ್ಲಿ ಗೋಪ್ಯವನ್ನು ಕಾಪಾಡಲಾಗುತ್ತದೆ. ಮೂರನೆಯ ವ್ಯಕ್ತಿಯ ಮಧ್ಯಪ್ರವೇಶವಿಲ್ಲದೇ ಮುಕ್ತವಾಗಿ ಚರ್ಚಿಸಬಹುದಾಗಿದೆ. ನೀವು ಮತ್ತು ನಿಮ್ಮ ಸಂಗಾತಿ ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಬರುವ ವಿಷಯಗಳನ್ನು ಮೊದಲೇ ಅರಿಯಲು, ಸಕಾರಾತ್ಮಕವಾಗಿ ಅವನ್ನು ಸ್ವೀಕರಿಸಲು, ಹಾಗೂ ನಿಭಾಯಿಸಲು ಈ ಕೋರ್ಸುಗಳು ಸಹಜವಾಗಿಯೇ ಸಹಾಯ ಮಾಡುತ್ತವೆ. ಈ ಕೋರ್ಸು ಮುಗಿದ ನಂತರ ನಿಮಗೊಂದು ಪ್ರಮಾಣ ಪತ್ರವೂ ನೀಡಲಾಗುತ್ತದೆ.

ವೈಯಕ್ತಿಕ ಸಮಾಲೋಚನೆ:ಇದು ವಿವಾಹ ಪೂರ್ವ ಸಮಾಲೋಚನೆಯ ಪಾರಂಪರಿಕ ವಿಧಾನವಾಗಿದೆ. ಒಬ್ಬ ವೃತ್ತಿನಿರತ ಸಮಾಲೋಚಕ, ವಧುವರರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಾರೆ. ಅವರಿಬ್ಬರೊಂದಿಗೆ ಚರ್ಚಿಸುತ್ತಾರೆ. ನಂತರ ಅವರಿಬ್ಬರೊಟ್ಟಿಗೆ ಸಮಾಲೋಚನೆಯ ಪ್ರಕ್ರಿಯೆ ಆರಂಭವಾಗುತ್ತದೆ. ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ತಂತ್ರಗಳನ್ನು ಇಬ್ಬರಿಗೂ ಮನದಟ್ಟು ಮಾಡಿಕೊಡುತ್ತಾರೆ. ಇಲ್ಲಿ ಮದುವೆಯ ಬಾಂಧವ್ಯಕ್ಕೆ ಹಾನಿ ತರಬಹುದಾದ ನಿಮ್ಮ ಸ್ವಭಾವವನ್ನು ಮುಕ್ತವಾಗಿ ಅವರಲ್ಲಿ ಚರ್ಚಿಸಬಹುದು. ಅಂಥ ಯಾವುದೇ ಸಮಸ್ಯೆಗಳನ್ನು ನಿಭಾಯಿಸುವುದನ್ನು ಮದುವೆಗೆ ಮುಂಚೆಯೇ ಅಭ್ಯಾಸ ಮಾಡಬಹುದು. ಈ ಪ್ರಕ್ರಿಯೆ ನಿಮ್ಮಲ್ಲಿ ಆತ್ಮವಿಶ್ವಾಸವನ್ನೂ ಹುಟ್ಟಿಸುತ್ತದೆ.

ಹೊಂದಾಣಿಕೆಯ ಪರೀಕ್ಷೆಗಳು ಮತ್ತು ಪ್ರಶ್ನಾವಳಿಗಳು: ಸಮಾಲೋಚನೆಯ ಇತರ ವಿಧಾನಗಳಲ್ಲಿ ಪ್ರಶ್ನಾವಳಿಯನ್ನು ನೀಡುವುದು ಅತಿ ಸಾಮಾನ್ಯವಾಗಿದೆ. ಈ ಪ್ರಶ್ನಾವಳಿಗಳಿಂದಲೇ ವ್ಯಕ್ತಿಗಳ ಆದ್ಯತೆಯನ್ನು ಬಹುಮಟ್ಟಿಗೆ ಸ್ಪಷ್ಟಗೊಳಿಸುತ್ತ ಹೋಗಬಹುದು. ಸರಳವಾದ ಈ ವಿಧಾನದಿಂದ ಅವರನ್ನು ಅರಿಯುವುದು ಸುಲಭದ ತಂತ್ರವಾಗಿದೆ. ಹೆಚ್ಚಾಗಿ ಬಹು ಆಯ್ಕೆಯ ಉತ್ತರಗಳಿರುವ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇವು ನಿಮ್ಮಿಬ್ಬರ ನಡುವೆ ಸಬಲವಾದ ಸಂವಹನ, ಮಾತುಗಾರಿಕೆ ಹಾಗೂ ಪರಸ್ಪರ ಗೌರವ ಹಾಗೂ ಅಂಗೀಕಾರದ ಮನೋಭಾವವಿದೆಯೇ ಎಂಬುದನ್ನು ಪ್ರಶ್ನಿಸುವುದಾಗಿರುತ್ತದೆ. ಈ ಪ್ರಶ್ನೆಗಳು ಅಥವಾ ಈ ಪರೀಕ್ಷೆ ಯಾರಿಗೂ ಪಾಸು ಅಥವಾ ಫೇಲು ಎಂದು ಹೇಳುವುದಾಗಿರುವುದಿಲ್ಲ ಎಂಬುದು ಗಮನದಲ್ಲಿರಲಿ.

ನಿಜ ಹೇಳಬೇಕೆಂದರೆ ಈ ಪ್ರಶ್ನೆಗಳು, ಪ್ರಶ್ನೋತ್ತರಗಳು ನಿಮ್ಮ ನಡುವಿನ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಾಯ ಮಾಡುವ ಸಾಧನಗಳಾಗಿರುತ್ತವೆ ಎಂಬುದು ಓದುತ್ತ ಹೋದಾಗ ತಾನಾಗಿಯೇ ತಿಳಿಯುತ್ತದೆ. ನಿಮ್ಮ ಬಾಂಧವ್ಯದ ನಿರ್ವಹಣೆ ಹೇಗೆ ಎಂಬುದರ ಮೇಲೆ ಈ ಪ್ರಶ್ನೋತ್ತರಗಳನ್ನು ವಿನ್ಯಾಸಗೊಳಿಸಿರಲಾಗುತ್ತದೆ. ಬಾಂಧವ್ಯದ ಸ್ಪಷ್ಟ ಚಿತ್ರಣ ಇವನ್ನು ಓದುತ್ತ ಹೋದಂತೆ, ಉತ್ತರಿಸುತ್ತ ಹೋದಂತೆ ತಿಳಿಯಾಗುತ್ತ ಹೋಗುತ್ತದೆ. ಪ್ರತಿ ಪ್ರಶ್ನೆಗೂ ಅಸಾಧ್ಯ, ಕೆಲವೊಮ್ಮೆ, ಯಾವಾಗಲೂ ಎಂಬಂಥ ಆಯ್ಕೆಯ ಉತ್ತರಗಳನ್ನೇ ನೀಡಲಾಗಿರುತ್ತದೆ. ನಿಮ್ಮಿಬ್ಬರ ನಡುವಿನ ಹೊಂದಾಣಿಕೆಯನ್ನು ಈ ಆಯ್ಕೆಯಿಂದಲೇ ಪತ್ತೆ ಮಾಡಬಹುದಾಗಿರುತ್ತದೆ. ವಿವಾಹ ಪೂರ್ವ ಪ್ರಶ್ನಾವಳಿ (premarital questionnaire) ಎಂದು ಗೂಗಲ್ ಶೋಧ ಮಾಡಿದರೆ ನಿಮಗೆ ಸಾಕಷ್ಟು ಮಾದರಿ ಪ್ರಶ್ನೋತ್ತರಗಳು ಸಿಗುತ್ತವೆ. ನಂತರ ವೃತ್ತಿಪರರ ಸಹಾಯದೊಂದಿಗೆ ಮೌಲ್ಯಮಾಪನವನ್ನು ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.