ADVERTISEMENT

ಗಡ್ಡ ಬಿಡೂದ್ರಿಂದ ಏನ್‌ ಲಾಭ?

ಖಲೀಲಹ್ಮದ್ ಶೇಖ
Published 9 ಜುಲೈ 2019, 11:10 IST
Last Updated 9 ಜುಲೈ 2019, 11:10 IST
   

ಯಾವ್ದೋ ಒಂದ್ ವಿಷಯ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ ಅಂದ್ರೆ ಅದರ ಬಗ್ಗೆ ಕಾಲು ಎಳೆಯುವರು ಇರ್ತಾರೆ. ಒಳ್ಳೇದು ಅಂತ ಹೇಳೋವ್ರು ಇರ್ತಾರೆ. ಈಗ ಪ್ರಪಂಚದಲ್ಲಿ ಈ ಥರ ಫೇಮಸ್ ಆಗ್ತಿರೋ ವಿಷ್ಯ ಅಂದ್ರೆ ಗಡ್ಡ ಬೆಳೆಸುವುದು. ಸುಮಾರು ಜನ ಗಡ್ಡ ಬಿಡೋದು ಸ್ಟೈಲ್, ಟ್ರೆಂಡ್, ಶೋಕಿ ಅಂತ ಅನ್ಕೊಂಡ್ರೆ ಸ್ವಲ್ಪ ಜನ, ‘ಥೂ ಏನಿದು ಗಡ್ಡ, ಯಾವಾಗ ತಗಿತೀಯೋ ಇದನ್ನ, ಚೂರು ಚೆನ್ನಾಗಿಲ್ಲ’ ಅಂತಾರೆ. ಆದರೆ ಗಡ್ಡ ಯಾರ ಯಾರ್ ಬಿಡ್ತಿದಿರೋ ಅವರಿಗೆಲ್ಲ ಒಳ್ಳೆಯ ಸುದ್ದಿ ಇದೆ. ಗಡ್ಡ ಬೆಳ್ಸೋದ್ರಿಂದ ಆಗೋ ಲಾಭ ತಿಳ್ಕೊಳಿ, ಗಡ್ಡ ಬಿಡ್ದೆ ಇರೋರು ಇನ್ಮುಂದೆ ಬಿಡಿ...

ಬಹಳ ಮಂದಿ ಪುರುಷರು ಗಡ್ಡ ಬೆಳೆಸುವುದು ಏಕೆಂದರೆ ಒರಟಾಗಿ ಕಾಣಿಸಿಕೊಳ್ಳುವುದಕ್ಕಂತೆ. ಅತ್ಯಂತ ಜನಪ್ರಿಯ ಸ್ಟೈಲ್ ಐಕಾನ್ ಬೆನ್ ಅಫ್ಲೇಕ್ ಮತ್ತು ಜಾರ್ಜ್ ಕ್ಲೂನಿ ಕೂಡ ತಮ್ಮದೇ ಶೈಲಿಯಲ್ಲಿ ಗಡ್ಡ ಬೆಳೆಸಿಕೊಳ್ಳುತ್ತಾರೆ. ಮಹಿಳೆಯರನ್ನು ಆಕರ್ಷಿಸಲು ಅಥವಾ ಫ್ಯಾಷನ್ ಪರವಾಗಿ ಹೇಳುವುದಾದರೆ ಗಡ್ಡ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ ಗಡ್ಡ ಬೆಳೆಸುವುದರಿಂದ ಆರೋಗ್ಯ ಲಾಭವೂ ಇದೆ ಎಂಬ ಸತ್ಯ ನಿಮಗೆ ಗೊತ್ತೆ?

ನಮ್ಮ ದೇಹದ ಬಹುಭಾಗ ಬಟ್ಟೆಯಿಂದ ಮುಚ್ಚಿದ್ದು ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ. ಆದರೆ ನಮ್ಮ ಮುಖ ಬಿಸಿಲಿಗೆ ತೆರೆದಿರುತ್ತದೆ. ಮುಖದ ಚರ್ಮವು ನಿರಂತರವಾಗಿ ಅತೀ ನೇರಳೆ ಕಿರಣಗಳಿಗೆ ತೆರೆದುಕೊಂಡಿದ್ದರೆ ಚರ್ಮದ ಕಜ್ಜಿಗಳು ಅಥವಾ ಚರ್ಮದ ಕ್ಯಾನ್ಸರ್ ಕೂಡ ಬರುವುದೆಂದು ವಿಜ್ಞಾನಿಗಳು ಸಿಕ್ಕಾಪಟ್ಟೆ ಸಂಶೋಧನೆ ಮಾಡಿದ ಮೇಲೆ ಹೇಳಿರುವ ಮಾತಿದು. ಗಡ್ಡ ಶೇ 95ರಷ್ಟು ಅಲ್ಟ್ರಾವಯಲೆಟ್‌ (ಯು.ವಿ) ಕಿರಣಗಳನ್ನು ತಡೆದು ಮುಖವನ್ನು ರಕ್ಷಿಸುತ್ತದೆ. ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಯೂ ಕಡಿಮೆ ಆಗುತ್ತೆ.

ADVERTISEMENT

ಮೊಡವೆ ಬರುವುದಕ್ಕೆ ಬಿಡದು...

ಗಡ್ಡ ಬಿಟ್ರೆ ಗಡ್ಡದ ಕೆಳ್ಗಡೆ ಇರೋ ಚರ್ಮ ತುಂಬಾ ಸಾಫ್ಟಾಗಿರಲಿದೆ. ಶೇವ್ ಮಾಡುವುದರಿಂದ ಮೊಡವೆ ಬೆಳೆಯುವ ಬ್ಯಾಕ್ಟೀರಿಯಾಗೆ ಮುಖದ ತುಂಬೆಲ್ಲಾ ಬೆಳೆಯುವುದಕ್ಕೆ ಜಾಗ ಸಿಗಲಿದೆ. ಆದ್ದರಿಂದ ಗಡ್ಡ ಬಿಟ್ಟರೆ ಮೊಡವೆಯ ಗೊಡವೆಯಿಂದ ದೂರವಿರಬಹುದು.

ಗಡ್ಡ ಬಿಡೋರು ಜಾಸ್ತಿ ಇಷ್ಟವಾಗುವರು

ಸಂಶೋಧನೆಗೋಸ್ಕರವೇ ಎಂಟು ಜನ ಪುರುಷರನ್ನು ಕರೆಸಿ, ಗಡ್ಡ ತೆಗಿಸಿ, ಮತ್ತೆ ಪೂರ್ತಿ ಗಡ್ಡ ಬೆಳೆಸೋಕೆ ಹೇಳ್ಬಿಟ್ಟು ಗಡ್ಡ ಬೆಳೆಯುವ ಪ್ರತಿ ಹಂತದಲ್ಲೂ ಫೋಟೊ ತೆಗೆದು ಒಂದು ಅಲ್ಬಮ್ ರೆಡಿ ಮಾಡಿದ್ರು. ಈ ಫೋಟೊ ನೋಡಿ ನಿಮಗೇನು ಅನ್ನಿಸುತ್ತೆ ಹೇಳಿ ಅಂತ ಪ್ರತ್ಯೇಕವಾಗಿ 64 ಜನ ಪುರುಷರನ್ನು, 64 ಮಹಿಳೆಯರನ್ನು ಕೇಳಿದರು. ಆಗ 128 ಜನ ಬಿಟ್ಟಿರೋರನ್ನು ಒಳ್ಳೇವ್ರು, ಪಾಸಿಟಿವ್ ಆಟಿಟ್ಯೂಡ್ ಇರೋರು, ಚೆನ್ನಾಗಿ ಕಾಣ್ತಿರೋರು ಅನ್ನುವ ಅಭಿಪ್ರಾಯ ಕೇಳಿಬಂತು.

ಗಡ್ಡದಿಂದ ತ್ವಚೆ ಕೋಮಲ

ಗಡ್ಡ ಯುವಕರಂತೆ ಕಾಣುವ ಹಾಗೆ ಮಾಡುತ್ತದೆ. ಪ್ರತಿ ದಿನ ಶೇವ್ ಮಾಡಿಕೊಳ್ಳುವವರ ಮುಖದಲ್ಲಿ ಕಲೆ ಮತ್ತು ಗಾಯಗಳು ಸಾಮಾನ್ಯ. ಇದರಿಂದಾಗಿ ಚರ್ಮ ಒರಟಾಗುವುದು ಮತ್ತು ಸಂವೇದನೆ ಕಡಿಮೆಯಾಗುತ್ತದೆ. ಗಡ್ಡ ಬೆಳೆಸುವುದರಿಂದ ಮುಖದಲ್ಲಿ ಕಲೆಗಳಾಗದಂತೆ ತಡೆಯಬಹುದು. ಮುಖವನ್ನು ಸುಕ್ಕಾಗಲು ಬಿಡದು.

ಕಾಯಿಲೆಗಳಿಗೆ ತಡೆ

ಗಡ್ಡ ಬೆಳೆಸುವುದರಿಂದ ಹಠಾತ್ ಹವಾಮಾನ ಬದಲಾವಣೆಯಿಂದ ಆಗುವ ಅನಾರೋಗ್ಯವನ್ನು (ನೆಗಡಿ, ಕೆಮ್ಮು) ತಡೆಗಟ್ಟಬಹುದು. ನಿಮ್ಮ ಗಡ್ಡ ಕೆಲವು ಬಾರಿ ನಿಮ್ಮ ಚರ್ಮವನ್ನು ಹೊರಗಿನ ತಾಪಮಾನದಿಂದ ರಕ್ಷಿಸುತ್ತದೆ. ದೇಹದ ಬಿಸಿ ಹೊರಗೆ ಹೋಗದಂತೆ ತಡೆದು ಮುಖ ಮತ್ತು ಕುತ್ತಿಗೆಯನ್ನು ಬೆಚ್ಚಗಿರಿಸುತ್ತದೆ. ನಿರಂತರ ಪ್ರಯಾಣ ಮಾಡುವವರಿಗೆ ಇದು ವಿಶೇಷವಾಗಿ ಅನ್ವಯವಾಗುತ್ತದೆ.

ಗೊತ್ತಾಯ್ತಲ್ಲ; ಗಡ್ಡ ಬಿಡೋದ್ರಿಂದ ಏನೆಲ್ಲಾ ಲಾಭ ಇದೆ ಅಂತ. ನೀವ್ ಏನ್ ಮಾಡ್ತೀರಾ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.