ADVERTISEMENT

ಎದೆ ಹಾಲು ಪಂಪ್‌ ಸಾಧನ ಮತ್ತು ಶೇಖರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 20:30 IST
Last Updated 4 ಫೆಬ್ರುವರಿ 2020, 20:30 IST
Manual breast pump on the wooden table, 3D renderingManual breast pump on the wooden table, 3D rendering
Manual breast pump on the wooden table, 3D renderingManual breast pump on the wooden table, 3D rendering   

ಅವಧಿಪೂರ್ವ ಜನನ, ಎದೆ ಕಚ್ಚದೆ ಇರುವ ಮಗುವಿಗೆ ಅಥವಾ ಉದ್ಯೋಗಸ್ಥ ಮಹಿಳೆಯರಿಗೆ ಮಗುವಿಗೆ ಹಾಲುಣಿಸುವುದು ಸವಾಲಿನ ಕೆಲಸ. ಹಾಲನ್ನು ತೆಗೆದು ಬಾಟಲಿಯಲ್ಲಿ ಹಾಕಿ ಕುಡಿಸಬೇಕು. ಈ ಅಗತ್ಯಗಳಿಗೆ ತಕ್ಕಂತೆ ಹಾಲು ತೆಗೆಯುವುದಕ್ಕೆ ಈಗ ಹೊಸ ಸಾಧನಗಳು ಅಭಿವೃದ್ಧಿಯಾಗಿದೆ. ತೆಗೆದ ಹಾಲು ಶೇಖರಿಸಲೂ ನವೀನ ಮಾದರಿಯ ಬಾಟಲಿ, ಬ್ಯಾಗ್‌ಗಳು ಲಭ್ಯ.

ಹಾಲನ್ನು ಹೊರ ತೆಗೆಯಲು ಹಲವು ಬಗೆಯ ಪಂಪ್‌ಗಳು ಲಭ್ಯವಿವೆ– ಮ್ಯಾನುವಲ್ ಪಂಪ್, ಬ್ಯಾಟರಿ ಚಾಲಿತ ಪಂಪ್ ಹಾಗೂ ಎಲೆಕ್ಟ್ರಿಕ್ ಪಂಪ್. ಮ್ಯಾನುವಲ್ ಪಂಪ್‌ನಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ. ಸ್ತನಕ್ಕೆ ಇಟ್ಟುಕೊಳ್ಳುವ ಕಪ್, ಹಾಲನ್ನು ಎಳೆಯುವ ಹ್ಯಾಂಡಲ್, ಶೇಖರಣೆಗೆ ಬಾಟಲ್‌. ಬ್ಯಾಟರಿ ಚಾಲಿತ ಪಂಪ್ ಹಾಗೂ ಎಲೆಕ್ಟ್ರಿಕ್ ಪಂಪ್‌ಗಳಲ್ಲಿ ಯುಎಸ್‌ಬಿ ಪೋರ್ಟ್‌, ವೈರ್‌ ಕನೆಕ್ಟಿವಿಟಿ ಹಾಗೂ ಪವರ್ ಬ್ಯಾಂಕ್ ಇರುತ್ತದೆ.

ಮ್ಯಾನುವಲ್ ಪಂಪ್‌ನಲ್ಲಿ ಕಪ್‌ ಅನ್ನು ಸ್ತನದ ಮೇಲಿರಿಸಿ ಹ್ಯಾಂಡಲ್ ಒತ್ತಿದರೆ ಹಾಲನ್ನು ಎಳೆದು ಬಾಟಲಿಗೆ ಬಿಡುತ್ತದೆ. ಇದೇ ಮಾದರಿಯಲ್ಲಿ ಬ್ಯಾಟರಿ ಚಾಲಿತ ಪಂಪ್ ಹಾಗೂ ಎಲೆಕ್ಟ್ರಿಕ್ ಪಂಪ್ ಇದ್ದು, ಹ್ಯಾಂಡಲ್ ಬದಲು ಪವರ್ ಬ್ಯಾಂಕ್ ಹಾಗೂ ಯುಎಸ್‌ಬಿ ಪೋರ್ಟ್‌ ಸಂಪರ್ಕದಿಂದ ಹಾಲು ಹೊರಬರುತ್ತದೆ.

ADVERTISEMENT

ಕೊಠಡಿ ವಾತಾವರಣದಲ್ಲಿ ಶೇಖರಿಸಿ ಇಡುವುದಾದರೆ ಪಂಪ್‌ ಬಾಟಲಿಯಲ್ಲೇ ಹಾಲನ್ನು ಇಡಬಹುದು. ಫ್ರಿಜ್‌ನಲ್ಲಿ ಇಡುವುದಾದರೆ ಶೇಖರಣೆ ಬ್ಯಾಗ್ ಅಥವಾ ಬೇರೆ ಬಾಟಲಿಗೆ ಹಾಕಿ ಇಡಬೇಕು. ಒಂದು ಬಾರಿ ಪಂಪ್ ಮಾಡಿದ ಹಾಲಿನ ಜೊತೆ ಹೊಸ ಹಾಲನ್ನು ಪಂಪ್ ಮಾಡಿ ಶೇಖರಿಸಬಾರದು.

ತಾಪಮಾನ:ಕೊಠಡಿ ವಾತಾವರಣದಲ್ಲಿ (25 ಡಿಗ್ರಿ ಸೆಲ್ಸಿಯಸ್) ನಾಲ್ಕು ಗಂಟೆಯವರೆಗೆ ಹಾಲನ್ನು ಇಟ್ಟು ಕುಡಿಸಬಹುದು. ಫ್ರಿಜ್‌ನಲ್ಲಿ (4.4 ಡಿಗ್ರಿ ಸೆಲ್ಸಿಯಸ್) ನಾಲ್ಕು ದಿನಗಳವರೆಗೆ ಶೇಖರಿಸಿ ಇಡಬಹುದು. ಫ್ರೀಜರ್‌ನಲ್ಲಿ (-20 ಡಿಗ್ರಿ ಸೆಲ್ಸಿಯಸ್) ಶೇಖರಿಸಿ ಇಡುವುದಾದರೆ ಆರು ತಿಂಗಳವರೆಗೆ ಬಳಸಬಹುದು.

ತಣ್ಣಗಿನ ಹಾಲನ್ನು ಬಳಸುವ ಮುನ್ನ ಹಾಲನ್ನು ನೇರವಾಗಿ ಪಾತ್ರೆಗೆ ಹಾಕಿ ಬಿಸಿ ಮಾಡುವಂತಿಲ್ಲ. ಬಿಸಿ ನೀರಿನ ಪಾತ್ರೆಯಲ್ಲಿ ಇಟ್ಟು ಬಳಸಬಹುದು.

ಹಾಲಿನ ಶೇಖರಣೆ

*ಏರ್‌ಟೈಟ್‌ ಮುಚ್ಚಳವಿರಬೇಕು

* ಒಂದು ಬಾರಿ ಬಳಸಿ ಎಸೆಯುವ ಬ್ಯಾಗ್‌ ಅನ್ನು ಮತ್ತೆ ಬಳಸಬಾರದು

* ಪ್ರತಿ ಬಾರಿ ಬಳಕೆ ನಂತರ ಬಾಟಲಿಯನ್ನು ಸ್ಟೆರಲೈಸ್‌ ಮಾಡಬೇಕು

* ಬ್ಯಾಗ್‌ ಮೇಲೆ ಕಡ್ಡಾಯವಾಗಿ ಹಾಲು ತೆಗೆದ ಸಮಯ, ದಿನಾಂಕ ನಮೂದಿಸಬೇಕು.

* ಹಾಲು ಶೇಖರಣೆ ಬ್ಯಾಗ್‌ ಅಲ್ಲದೆ ಬೇರೆ ಯಾವುದೇ ಪ್ಲಾಸ್ಟಿಕ್ ಬ್ಯಾಗ್‌ ಬಳಸಬಾರದು

ಎಷ್ಟು ಹಾಲು ಬೇಕು?

ನವಜಾತ ಶಿಶುವಿಗೆ ನಿತ್ಯ 8– 10 ಬಾರಿ ಹಾಲು ಕುಡಿಸಬೇಕು. 2– 6 ಕೆ.ಜಿ. ತೂಕ ಇರುವ ಮಗುವಿಗೆ 60– 170 ಎಂ.ಎಲ್‌. ಹಾಲಿನ ಅಗತ್ಯವಿದೆ. ಮೂರು ತಿಂಗಳಿನ ಮಗುವಿಗೆ ನಿತ್ಯ 5– 6 ಬಾರಿ ಹಾಲು ಕುಡಿಸಬೇಕು. 4– 7 ಕೆ.ಜಿ. ತೂಕವಿರುವ ಮಗುವಿಗೆ 80– 200 ಎಂ.ಎಲ್‌. ಹಾಲಿನ ಅವಶ್ಯಕತೆ ಇರುತ್ತದೆ.

ಆರು ತಿಂಗಳಿನ ನಂತರ (ಮೇಲು ಆಹಾರದೊಂದಿಗೆ) ದಿನಕ್ಕೆ ನಾಲ್ಕು ಬಾರಿ ಹಾಲು ಕುಡಿಸಬೇಕು. 60–180 ಎಂ.ಎಲ್‌. ಹಾಲು ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.