ADVERTISEMENT

ಪ್ರಶ್ನೋತ್ತರ | ಲೈಂಗಿಕತೆ ನಿಯಂತ್ರಣ ಸಾಧ್ಯವೇ?

ನಡಹಳ್ಳಿ ವಂಸತ್‌
Published 4 ಜುಲೈ 2020, 6:02 IST
Last Updated 4 ಜುಲೈ 2020, 6:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಯಸ್ಸು 24. ಅರೆಕಾಲಿಕ ಉದ್ಯೋಗ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಲೈಂಗಿಕ ವಿಷಯಗಳಿಂದ ದೂರ ಉಳಿದು ಮನಸ್ಸಿನ ನಿಯಂತ್ರಣ ಸಾಧಿಸುವುದು ಹೇಗೆ ಎಂದು ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಮನಸ್ಸಿನಲ್ಲಿ ಮೂಡುವ ಲೈಂಗಿಕ ಆಸಕ್ತಿಗಳು ನಿಮ್ಮ ಓದು ವೃತ್ತಿಗಳಿಗೆ ತೊಂದರೆ ಕೊಡುತ್ತಿರಬೇಕಲ್ಲವೇ? ಲೈಂಗಿಕ ಆಸಕ್ತಿಯನ್ನು ಬಲವಂತವಾಗಿ ಕುಗ್ಗಿಸಿದರೆ ಮದುವೆಯಾದ ಮೇಲೆಯೂ ಅದು ಕುಗ್ಗಿ ಉಳಿದರೆ ಏನು ಮಾಡುತ್ತೀರಿ? ವಯಸ್ಸಿಗೆ ಸಹಜವಾಗಿ ಬರುವ ಲೈಂಗಿಕ ಆಸಕ್ತಿಯನ್ನು ಬೇಕಾದಾಗ ಬೇಕಾದಂತೆ ಬದಲಾಯಿಸುವ ಸ್ವಿಚ್‌ ಅನ್ನು ಪ್ರಕೃತಿ ನಮ್ಮ ತಲೆಯಲ್ಲಿ ಇಟ್ಟಿಲ್ಲ. ತಿರಸ್ಕರಿಸಿದಷ್ಟೂ ಅದು ನಿಮ್ಮನ್ನು ಹೆಚ್ಚಾಗಿ ಕಾಡುತ್ತದೆ. ಲೈಂಗಿಕತೆಯನ್ನು ಸಹಜವೆಂದು ಒಪ್ಪಿಕೊಂಡು ಲೈಂಗಿಕ ಭಾವನೆಗಳನ್ನು ಆನಂದಿಸಿ. ಮದುವೆಯಾಗುವವರೆಗೆ ಹಸ್ತಮೈಥುನದ ಮೂಲಕ ತೃಪ್ತಿ ಪಡೆಯುವ ಆರೋಗ್ಯಕರ ಮಾರ್ಗಗಳನ್ನು ಹಿಂಜರಿಕೆಯಿಲ್ಲದೆ ಬಳಸಿ.

ADVERTISEMENT

ನನ್ನ ವಯಸ್ಸು 55, ಶಿಕ್ಷಣ ಸಂಸ್ಥೆಯಲ್ಲಿ ನೌಕರ. ಸ್ವಂತ ಊರಿನಿಂದ ದೂರವಿದ್ದೇನೆ. ಮನೆಯಲ್ಲಿ ಎಲ್ಲಾ ಪತ್ನಿಯದೇ ನಡೆಯುತ್ತದೆ, ಯಾರನ್ನು ಕಂಡರೂ ಆಗುವುದಿಲ್ಲ. ಹೀಗಿರುವುದರಿಂದ ಇಬ್ಬರ ಸಂಬಂಧಿಕರೂ ಅಷ್ಟಕಷ್ಟೆ. ನಾವು ಅವರಮನೆಗೆ ಹೋಗುವುದಿಲ್ಲ. ಅವರು ನಮ್ಮ ಮನೆಗೆ ಬರುವುದಿಲ್ಲ. ನನಗೆ ಕೆಟ್ಟ ಆಲೋಚನೆಗಳು ಬರುತ್ತಿರುತ್ತವೆ ಹಾಗೂ ಹಗಲುಗನಸು ಕಾಣುತ್ತಿರುತ್ತೇನೆ. ಇದೆಲ್ಲಾ ಏಕೆ? ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ವಿವಾಹವಾಗಿ ಇಷ್ಟು ವರ್ಷ ಕಳೆದ ಮೇಲೆ ನನಗೆ ಬೇಕಾಗಿರುವಂತೆ ಬದುಕಲು ಸಾಧ್ಯವಾಗಲಿಲ್ಲ, ಸ್ವಂತಿಕೆಯನ್ನು ಕಳೆದುಕೊಂಡು ಹೆಂಡತಿಯ ನೆರಳಿನಲ್ಲಿ ಬದುಕುತ್ತಿದ್ದೇನೆ ಎನ್ನುವ ನೋವು ಕಾಡುತ್ತಿರಬೇಕಲ್ಲವೇ? ಹೀಗಿರುವಾಗ ಕೆಟ್ಟ ಯೋಚನೆ, ಹಗಲುಗನಸುಗಳೆಲ್ಲವೂ ಸಹಜ. ಕುಟುಂಬಕ್ಕೆ ನೇರವಾಗಿ ಸಂಬಂಧಿಸಿರುವ ವಿಚಾರಗಳಲ್ಲಿ ಇಬ್ಬರ ತೀರ್ಮಾನ ಅಗತ್ಯ. ಉಳಿದೆಲ್ಲಾ ವಿಚಾರಗಳಲ್ಲಿ ನೀವು ಅವರ ಅಭಿಪ್ರಾಯಗಳನ್ನು ಮೀರಿ ನಿಮ್ಮದೇ ಸ್ವಂತಿಕೆ ಉಳಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದೀರಿ.

ಉದಾಹರಣೆಗೆ ನಿಮಗೆ ಹೋಗಬೇಕೆನಿಸುವ ನೆಂಟರ, ಸ್ನೇಹಿತರ ಮನೆಗೆ ನೀವು ಹೋಗುವುದು ಅಥವಾ ಅವರನ್ನು ಆಹ್ವಾನಿಸುವುದು. ಹೆಂಡತಿಯ ಸಹಕಾರವಿಲ್ಲದ್ದಕ್ಕಾಗಿ ನಿಮಗೆ ಬೇಕಾಗಿರುವುದನ್ನು ಮಾಡದೆ ನಿಮ್ಮ ಸಂತೋಷವನ್ನು ನೀವೇ ಬಿಟ್ಟುಕೊಟ್ಟಿದ್ದೀರಲ್ಲವೇ? ಮೊದಲು ಯಾವ ವಿಚಾರಗಳಲ್ಲಿ ಹೇಗೆ ಇರುವುದಕ್ಕೆ ನೀವು ಇಷ್ಟಪಡುತ್ತೀರಿ ಎನ್ನುವುದರ ಬಗೆಗೆ ಸ್ಪಷ್ಟವಾಗಿ ಯೋಚಿಸಿ. ನಂತರ ನಿಮ್ಮ ಆಸಕ್ತಿಗಳ ಬಗೆಗೆ ಪತ್ನಿಯ ಜೊತೆ ಚರ್ಚಿಸಿ. ಅವರು ಒಪ್ಪದಿದ್ದರೂ ಕೆಲವು ವಿಚಾರಗಳಲ್ಲಿ ನಿಮಗೆ ಬೇಕಾದಂತೆ ಬದುಕುತ್ತಾ ಹೋಗಿ. ತಾತ್ಕಾಲಿಕವಾಗಿ ಭಿನ್ನಾಭಿಪ್ರಾಯಗಳು, ಬೇಸರ, ಸಿಟ್ಟು ಎಲ್ಲವೂ ಇರುತ್ತವೆ. ಆದರೆ ನೀವು ಉಳಿದೆಲ್ಲಾ ವಿಚಾರಗಳಲ್ಲಿ ಪತ್ನಿಯ ಜೊತೆ ಪ್ರೀತಿಯಿಂದ ಇರಲು ಸಾಧ್ಯವಾದರೆ ನಿಧಾನವಾಗಿ ಬದಲಾವಣೆಗಳಾಗುತ್ತವೆ.

(ಲೇಖಕ: ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.