ADVERTISEMENT

ಕೊರೊನಾ ಜಯಿಸೋಣ | ಮಾತಾಡಿ; ಒತ್ತಡ ನಿವಾರಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 4:43 IST
Last Updated 2 ಜುಲೈ 2020, 4:43 IST
ಡಾ. ಮೇಘಾ ಮಹಾಜನ್ 
ಡಾ. ಮೇಘಾ ಮಹಾಜನ್    

ಬೆಂಗಳೂರು: ‘ಮಾತು ಮನೆ ಕೆಡಿಸಿತು’ ಎಂಬ ಮಾತಿದೆ. ಆದರೆ, ಈ ಕೊರೊನಾ ಕಾಲದಲ್ಲಿ ‘ಮಾತು ಮನೆ ಉಳಿಸುತ್ತದೆ’ ಎನ್ನುತ್ತಾರೆ ಮನೋವೈದ್ಯರು. ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡುತ್ತಾ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇದ್ದರೆ ಮಾನಸಿಕ ಒತ್ತಡ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ ಅವರು.

ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯ ಕುರಿತು, ಉದ್ಯೋಗದ ಸ್ಥಿತಿ–ಗತಿ ಕುರಿತು ಮನೆಯಲ್ಲಿ ಹೆಚ್ಚು ಮಾತನಾಡಬಾರದು. ಕೊರೊನಾ ಸೋಂಕಿನ ಬಗ್ಗೆ ಆತಂಕಗೊಳ್ಳದೆ ಧೈರ್ಯವಾಗಿ ಇರಬೇಕು. ಕೊರೊನಾ ಭಯಾನಕವಾಗಿದೆ, ಮಿತಿ ಮೀರಿ ಹರಡುತ್ತಿದೆ ಎಂದೆಲ್ಲ ಮಾತನಾಡಬಾರದು. ಪೋಷಕರು ಧೈರ್ಯವಾಗಿ ಇದ್ದರೆ, ಮಕ್ಕಳೂ ಧೈರ್ಯವಾಗಿ ಇರುತ್ತಾರೆ ಎಂದು ಹೇಳುತ್ತಾರೆ ಮನೋವೈದ್ಯ ಡಾ. ಕೆ.ಎಂ. ರಾಜೇಂದ್ರ.

ಮನೆಗೆಲಸವೂ ಒಂದು ಕಲಿಕೆ. ಇಂತಹ ಯಾವುದೇ ಚಟುವಟಿಕೆಗಳಲ್ಲಿ ಮಕ್ಕಳು ನಿರತರಾಗಿರುವಂತೆ ನೋಡಿಕೊಳ್ಳಬೇಕು.ವಾರದಲ್ಲಿ ಒಂದೆರಡು ಬಾರಿ ಎಲ್ಲರೂ ಸೇರಿ ಆಟವಾಡುವುದು, ಹಾಡು, ನೃತ್ಯದಂತಹ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಮಕ್ಕಳು ಹಿಂಸಾತ್ಮಕ ಆಟಗಳನ್ನು ಆಡಲು ಬಿಡಬಾರದು. ಇದು ಅವರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಮೊಬೈಲ್‌ ಅಥವಾ ಟಿವಿ ವೀಕ್ಷಿಸುವ ಸಮಯಕ್ಕೆ ಮಿತಿ ಹೇರಬೇಕು ಎಂದು ಅವರು ಹೇಳುತ್ತಾರೆ.

ADVERTISEMENT

‘ಕೊರೊನಾ ಎನ್ನುವುದು ಗಲೀಜು ಅಂಶ. ನಾವು ಒಂದೆರಡು ಬಾರಿ ಕೈತೊಳೆದುಕೊಂಡರೆ ಅದು ಹೋಗಿಬಿಡುತ್ತದೆ ಎಂದು ಹೇಳುವ ಮೂಲಕ ಸೋಂಕಿನ ಬಗ್ಗೆ ಮಕ್ಕಳಲ್ಲಿ ಪರೋಕ್ಷವಾಗಿ ಜಾಗೃತಿ ಮೂಡಿಸಬೇಕು’ ಎಂದು ಹೇಳುತ್ತಾರೆ ಮನೋವೈದ್ಯೆ ಡಾ. ಮೇಘಾ ಮಹಾಜನ್.

‘ಮಕ್ಕಳಿಗೆ ಒಂದು ವೇಳಾಪಟ್ಟಿ ಹಾಕಿಕೊಡಿ. ಅದರಂತೆ ಅವರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ. ಆದರೆ, ಪ್ರತಿ ಗಂಟೆಯನ್ನು ಹೀಗೆಯೇ ಕಳೆಯಬೇಕು ಎಂದು ಒತ್ತಡ ಹೇರಬಾರದು. ಅವರಿಗೆ ಸಮಯ ನೀಡಿ, ಆಟವಾಡಲು ಬಿಡಬೇಕು’ ಎನ್ನುತ್ತಾರೆ ಅವರು.

*
ಮಕ್ಕಳಾಗಲಿ, ದೊಡ್ಡವರಾಗಲಿ ಎಲ್ಲರೂ ಸ್ವರಕ್ಷಣೆ ಬಗ್ಗೆ ಗಮನ ಹರಿಸಬೇಕು. ಯಾವುದೇ ಒಂದು ವಿಷಯದಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗದಿದ್ದರೂ ಚಿಂತಿಸಬಾರದು. ಬದಲಾಗಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು.
–ಡಾ. ಮೇಘಾ ಮಹಾಜನ್‌, ಮಕ್ಕಳು–ಹದಿಹರೆಯದವರ ವಿಭಾಗದ ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.