ADVERTISEMENT

ಕೊರೊನಾ ತಿಳಿಯೋಣ: ಸಮತೋಲಿತ ಆಹಾರ, ವ್ಯಾಯಾಮ ಇರಲಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 19:45 IST
Last Updated 22 ನವೆಂಬರ್ 2020, 19:45 IST
ಡಾ. ಹೇಮಂತ್‌ ಎಸ್‌.
ಡಾ. ಹೇಮಂತ್‌ ಎಸ್‌.   

ದಾವಣಗೆರೆ: ಕೊರೊನಾ ಬಂದು ಗುಣಮುಖರಾದವರು ಹಿಂದಿನಂತೆ ಕೆಲಸ ಮಾಡಲು ಹೋಗಬಾರದು. ಸಣ್ಣ–ಸಣ್ಣ ಕೆಲಸ ಮಾಡುತ್ತಾ, ನಿಧಾನಕ್ಕೆ ಮುಂದಿನ ಹಂತಕ್ಕೆ ಹೋಗಬೇಕು. ಸಮತೋಲಿತ ಆಹಾರ ಸೇವಿಸಬೇಕು. ವ್ಯಾಯಾಮ ಕೂಡ ಒಮ್ಮೆಲೇ ಹೆಚ್ಚು ಮಾಡಬಾರದು. ವಾಕಿಂಗ್‌ ಮಾಡುವಾಗಲೂ ನಡುವೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಇದರಿಂದ ಕೊರೊನೋತ್ತರ ಸುಸ್ತು,ಮೈಕೈ ನೋವು, ಇತರ ಲಕ್ಷಣಗಳನ್ನು ನಿವಾರಿಸಲು ಸಾಧ್ಯ ಎನ್ನುತ್ತಾರೆ ದಾವಣಗೆರೆಯ ಜನರಲ್‌ ಫಿಜಿಷಿಯನ್‌ಡಾ. ಹೇಮಂತ್‌ ಎಸ್‌.

ಕೊರೊನಾ ರೋಗಲಕ್ಷಣಗಳು ಕಡಿಮೆ ಇದ್ದವರಿಗೆ ಗುಣಮುಖರಾದ ಮೇಲೂ ಕೊರೊನೋತ್ತರ ಲಕ್ಷಣ ಜಾಸ್ತಿ ಕಾಣಿಸುವುದಿಲ್ಲ. ಆದರೆ ತೀವ್ರತರಹ ಲಕ್ಷಣಗಳು ಕಂಡು ಬಂದು ಆಸ್ಪತ್ರೆಗೆ ದಾಖಲಾದವರು,ತುರ್ತು ನಿಗಾ ಘಟಕದಲ್ಲಿದ್ದವರು, ಆಕ್ಸಿಜನ್‌ ವೆಂಟಿಲೇಟರ್‌ಗೆ ಹೋದವರು ಗುಣಮುಖರಾದ ಮೇಲೆ ಸಹಜ ಸ್ಥಿತಿಗೆ ಬರಲುತಿಂಗಳುಗಳೇ ಬೇಕಾಗಬಹುದು.

ತೀವ್ರ ತರಹದ ಸುಸ್ತು, ಮೈಕೈನೋವು, ಒಣಕೆಮ್ಮು, ಕಫ, ಗಂಟಲು ಕೆರೆತ, ನೆನಪಿನ ಶಕ್ತಿ ಕುಂದುವಿಕೆ, ಗೊಂದಲಗಳು ಉಂಟಾಗುತ್ತವೆ. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಬಂದಾಗ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಸ್ಯೆ ಉಂಟಾಗುತ್ತದೆ. ಆಗ ಮನೆಯಲ್ಲಿ ಪ್ರೀತಿಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು.

ADVERTISEMENT

ಕೊರೊನಾ ಸಹಿತ ಯಾವುದೇ ರೋಗ ಬಂದಾಗ ನಮ್ಮ ದೈಹಿಕ ಶಕ್ತಿ ಕ್ಷೀಣಿಸುತ್ತದೆ. ಮಸಲ್ಸ್‌ಗಳು ಸಣ್ಣದಾಗುತ್ತವೆ. ಮಾನಸಿಕ ಶಕ್ತಿಯೂ ಕಡಿಮೆಯಾಗುತ್ತದೆ. ಅವೆಲ್ಲವನ್ನು ಮರಳಿ ಪಡೆಯಬೇಕು.

ಬೆಚ್ಚಗಿನ ನೀರು ಕುಡಿಯಬೇಕು. ಸಾಧ್ಯವಾದರೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ. ಒಮ್ಮೆಲೇ ನೀರು ಕುಡಿಯುವ ಬದಲು ಆಗಾಗ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಗಂಟಲು ಒಣಗುವುದು ತಪ್ಪುತ್ತದೆ.

ಸಮತೋಲಿತ ಆಹಾರ ಬಹಳ ಮುಖ್ಯ. ಸಸ್ಯಾಹಾರಿಗಳು ನಿತ್ಯ ತಿನ್ನುವ ಆಹಾರದಲ್ಲಿ ಪ್ರೊಟೀನ್‌ ಅಂಶ ಕಡಿಮೆ ಇರುತ್ತದೆ. ಅದಕ್ಕಾಗಿ ದ್ವಿದಳ ಧಾನ್ಯಗಳನ್ನು, ಹಾಲು, ಮೊಸರು ಮುಂತಾದವುಗಳನ್ನು ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಅವರಿಗೆ ಮೀನು, ಮೊಟ್ಟೆ,ಇತರ ಮಾಂಸಾಹಾರಗಳಲ್ಲಿ ಪ್ರೊಟೀನ್‌ ದೊರೆಯುತ್ತದೆ.

ಉಸಿರಾಟದ ವ್ಯಾಯಾಮ ಅಂದರೆ ಪ್ರಾಣಾಯಾಮ ಮಾಡಬೇಕು. ಇದರಿಂದ ಶ್ವಾಸಕೋಶಗಳು ಬಲಗೊಳ್ಳುತ್ತವೆ.

ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಮತ್ತೆ ತೀವ್ರ ತರಹದ ಜ್ವರ ಬಂದರೆ, ಉಸಿರಾಡಲು ಸಮಸ್ಯೆಯಾಗುತ್ತಿದ್ದರೆ, ಎದೆಬಿಗಿದಂತಾದರೆ, ಎದೆನೋವು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ಹೋಗಲೇಬೇಕುಎಂದು ಡಾ. ಹೇಮಂತ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.