ADVERTISEMENT

ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ: ಹೃದಯಕ್ಕೆ ಮರುಜೀವ!

ಡಾ.ಕಿರಣ್ ವಿ.ಎಸ್.
Published 28 ಅಕ್ಟೋಬರ್ 2025, 0:23 IST
Last Updated 28 ಅಕ್ಟೋಬರ್ 2025, 0:23 IST
<div class="paragraphs"><p>ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ: ಹೃದಯಕ್ಕೆ ಮರುಜೀವ </p></div>

ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ: ಹೃದಯಕ್ಕೆ ಮರುಜೀವ

   

ರಕ್ತವು ಬದುಕಿನ ಮೂಲಾಧಾರ. ಶರೀರದ ಯಾವುದೇ ಜೀವಕೋಶ ಸ್ವಸ್ಥವಾಗಿ ಕೆಲಸ ಮಾಡಿಕೊಂಡಿರಲು ಬೇಕಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಅದಕ್ಕೆ ತಲುಪಿಸುವುದು ರಕ್ತ. ಶರೀರದಲ್ಲಿ ರಕ್ತದ ಅಗತ್ಯ ಇಲ್ಲದ ಜೀವಕೋಶಗಳು ತೀರಾ ವಿರಳ. ರಕ್ತವು ಜೀವಕೋಶಗಳಿಗೆ ತಲುಪುವುದು ಇಡೀ ಶರೀರದ ಆದ್ಯಂತವಾಗಿ ಹರಡಿರುವ ರಕ್ತನಾಳಗಳಿಂದ. ಅವುಗಳ ಒಳಗೆ ನಿರಂತರವಾಗಿ ರಕ್ತವನ್ನು ಹರಿಯುವಂತೆ ಮಾಡುವುದು ಹೃದಯ. ಭ್ರೂಣದ 22ನೆಯ ದಿನದಿಂದ ಬಡಿಯಲು ಆರಂಭಿಸಿ, ಜೀವನ ಮುಗಿಯುವವರೆಗೆ ನಿರಂತರವಾಗಿ ಕೆಲಸ ಮಾಡುವುದು ಹೃದಯವೇ. ಒಂದು ವೇಳೆ ಹೃದಯ ಕೆಲಸ ಮಾಡುವುದು ನಿಂತರೆ ಮರಣ ಕೆಲವೇ ನಿಮಿಷಗಳ ದೂರ.

ಹೀಗೆ ಒಂದೇ ಸಮನೆ ಕೆಲಸ ಮಾಡುವ ಹೃದಯದ ಸ್ನಾಯುಗಳಿಗೂ ಪೋಷಣೆ ಬೇಕಾಗುತ್ತದೆ. ತನ್ನ ಒಡಲಲ್ಲಿ ಎಷ್ಟೇ ಪ್ರಮಾಣದ ರಕ್ತ ಇದ್ದರೂ ಹೃದಯ ಅದನ್ನು ನೇರವಾಗಿ ಬಳಸಿಕೊಳ್ಳಲಾಗದು. ಸರಳವಾದ ಉದಾಹರಣೆ ಎಂದರೆ, ಬ್ಯಾಂಕಿನಲ್ಲಿ ಕೋಟಿಗಟ್ಟಲೇ ಹಣದ ನಿರ್ವಹಣೆ ಮಾಡುವ ಕ್ಯಾಶಿಯರ್, ಅದನ್ನು ತಮ್ಮ ಕುಟುಂಬದ ನಿರ್ವಹಣೆಗೆ ಬಳಸಲಾಗುವುದಿಲ್ಲ. ಬದಲಿಗೆ ಆ ಕೆಲಸಕ್ಕೆ ಅವರಿಗೆ ವೇತನ ದೊರೆಯುತ್ತದೆ. ಅಂತೆಯೇ ಹೃದಯವೂ ತನ್ನ ಕೆಲಸದ ನಿರ್ವಹಣೆಗೆ ಮೂರು ಪ್ರಮುಖ ರಕ್ತನಾಳಗಳನ್ನು ಹೊಂದಿದೆ. ಹೃದಯದ ಶಿರಸ್ಸಿನ ಭಾಗದಿಂದ ಹೊರಡುವ ಮಹಾಧಮನಿಯಿಂದ ಇಳಿದು ಹೃದಯದ ಹೊರ ಆವರಣದ ಮೇಲೆ ಕಿರೀಟದ ರೀತಿಯಲ್ಲಿ ಹರಡುವ ಇವನ್ನು ‘ಕರೋನರಿ ರಕ್ತನಾಳಗಳು’ ಎನ್ನುತ್ತಾರೆ.

ADVERTISEMENT

ದೈಹಿಕ ವ್ಯಾಯಾಮದ ಕೊರತೆ, ಹೆಚ್ಚು ಕೊಬ್ಬಿನ ಆಹಾರಸೇವನೆ, ಧೂಮಪಾನ, ಒತ್ತಡದ ಜೀವನಶೈಲಿ, ಅಧಿಕ ರಕ್ತದೊತ್ತಡ, ಮಧುಮೇಹ, ವಂಶಪಾರಂಪರ್ಯ ಆರೋಗ್ಯಸಮಸ್ಯೆಗಳು ಮೊದಲಾದ ಕಾರಣಗಳಿಂದ ಕರೋನರಿ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನ ಅಂಶ (ಪ್ಲಾಕ್) ಜಮೆಯಾಗುತ್ತದೆ. ಕಾಲಕ್ರಮೇಣ ಈ ‘ಪ್ಲಾಕ್’ ಕಠಿಣವಾಗಿ, ಕರೋನರಿ ರಕ್ತನಾಳದ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತದೆ. ಇದರಿಂದ ರಕ್ತದ ಹರಿಯುವಿಕೆ ತಗ್ಗಿ, ಹೃದಯದ ಕಾರ್ಯಕ್ಷಮತೆ ಇಳಿದು, ಎದೆನೋವು, ಉಬ್ಬಸ, ಸುಸ್ತು, ನಿಶ್ಶಕ್ತಿ ಮೊದಲಾದ ಲಕ್ಷಣಗಳು ಕಾಣುತ್ತವೆ. ಪ್ಲಾಕ್ ಜಮಾವಣೆ ಹೆಚ್ಚುತ್ತಾ ಕರೋನರಿ ರಕ್ತನಾಳವು ಪೂರ್ಣವಾಗಿ ಮುಚ್ಚಿದರೆ ಹೃದಯದ ನಿಶ್ಚಿತ ಭಾಗಕ್ಕೆ ರಕ್ತದ ಸರಬರಾಜು ನಿಂತುಹೋಗಿ, ಆ ಭಾಗ ತೀವ್ರ ಹಾನಿಗೊಳಗಾಗುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದ ಹರಿವನ್ನು ಮರಳಿ ಸರಾಗಗೊಳಿಸಲು ಲಭ್ಯವಿರುವ ಚಿಕಿತ್ಸೆಗಳಲ್ಲಿ ಪ್ರಮುಖ ಹಾಗೂ ಪರಿಣಾಮಕಾರಿಯಾದದ್ದು ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ. ಜನಸಾಮಾನ್ಯರು ಇದನ್ನು ‘ಹೃದಯ ಬೈಪಾಸ್ ಸರ್ಜರಿ’ ಎನ್ನುತ್ತಾರೆ.

‘ಬೈಪಾಸ್’ ಎಂದರೆ ಒಂದು ಮುಖ್ಯ ಮಾರ್ಗದಲ್ಲಿ ಇರುವ ಅಡಚಣೆಯನ್ನು ದಾಟಿ ಹೋಗಲು ನಿರ್ಮಾಣವಾಗುವ ಪರ್ಯಾಯ ರಸ್ತೆ. ಹೆದ್ದಾರಿಗಳ ನಡುವೆ ಇರುವ ಊರುಗಳ ಒಳಗೆ ಬೃಹತ್ ವಾಹನಗಳು ಪ್ರವೇಶಿಸುವುದನ್ನು ತಪ್ಪಿಸಲು ಊರಿನ ಹೊರಭಾಗದಲ್ಲಿ ನಿರ್ಮಿಸುವ ಬೈಪಾಸ್ ರಸ್ತೆಯ ರೀತಿಯಲ್ಲೇ ಈ ಶಸ್ತ್ರಚಿಕಿತ್ಸೆ ಕೂಡ ಕೆಲಸ ಮಾಡುತ್ತದೆ.

ಹೃದಯದ ಆಂಜಿಯೋಗ್ರಾಂ ಪರೀಕ್ಷೆಯ ಮೂಲಕ ರಕ್ತನಾಳದ ಯಾವ ಭಾಗದಲ್ಲಿ ರಕ್ತಸಂಚಾರಕ್ಕೆ ತಡೆ ಉಂಟಾಗಿದೆ ಎಂಬುದನ್ನು ತಿಳಿಯಬಹುದು. ಅಡಚಣೆ ಇರುವ ಭಾಗದ ಮುನ್ನ ಮತ್ತು ಅದರ ನಂತರದ ರಕ್ತನಾಳ ಆರೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ, ರಕ್ತನಾಳದ ಆರೋಗ್ಯಕರ ಭಾಗಗಳನ್ನು ಪರಸ್ಪರ ಜೋಡಿಸುವ ಮತ್ತೊಂದು ಪರ್ಯಾಯ ರಕ್ತನಾಳವನ್ನು ಬೆಸೆಯಬಹುದು. ಕಾಲಿನ ಕೆಲವು ಧಮನಿಗಳು, ಅಂಗೈ ಸಮೀಪದ ಕೆಲವು ಸಿರೆಗಳು, ಎದೆಯೊಳಗಿನ ಕೆಲವು ರಕ್ತನಾಳಗಳನ್ನು ಈ ಕೆಲಸಕ್ಕೆ ಬಳಸಬಹುದು. ಕೈ-ಕಾಲಿನಲ್ಲಿ, ಎದೆಯಲ್ಲಿ ಇರುವ ಇಂತಹ ರಕ್ತನಾಳಗಳಿಗೆ ಅನೇಕ ಬದಲಿ ಧಮನಿಗಳು ಇರುತ್ತವೆ. ಅಲ್ಲಿಂದ ನಿಶ್ಚಿತ ರಕ್ತನಾಳವನ್ನು ತೆಗೆದುಹಾಕಿದರೂ ಸಮಸ್ಯೆ ಆಗದಂತೆ ಇತರ ಧಮನಿಗಳು ಕೆಲಸವನ್ನು ನಿರ್ವಹಿಸುತ್ತವೆ.

ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯ ಆಧುನಿಕ ವಿಧಾನಗಳು ಇಡೀ ಪ್ರಕ್ರಿಯೆಯನ್ನು ಸರಳಗೊಳಿಸಿ, ಸುರಕ್ಷಿತವಾಗಿಸಿ, ಶಸ್ತ್ರಚಿಕಿತ್ಸೆಯ ನೋವನ್ನು ಕಡಿಮೆಯಾಗಿಸಿ, ಚೇತರಿಕೆಯ ವೇಗವನ್ನು ಅಗಾಧವಾಗಿ ಹೆಚ್ಚಿಸಿವೆ. ಎದೆಯ ಮೂಳೆಯನ್ನು ಕತ್ತರಿಸಿ ಮಾಡುತ್ತಿದ್ದ ಸಾಂಪ್ರದಾಯಿಕ ಬೈಪಾಸ್ ಬದಲಿಗೆ ಈಗ ಪಕ್ಕೆಲುಬುಗಳ ನಡುವೆ ಸಣ್ಣ ಛೇದನಗಳನ್ನು ಮಾಡಿ, ಕ್ಯಾಮೆರಾ ಹೊಂದಿರುವ ದುರ್ಬೀನುಗಳ ಮೂಲಕ ರಕ್ತನಾಳದ ಕಸಿ ಚಿಕಿತ್ಸೆ ಸಾಧ್ಯ. ಇದರಿಂದ ಶಸ್ತ್ರಚಿಕಿತ್ಸೆಯ ವೇಳೆಯ ರಕ್ತಸ್ರಾವ ಕಡಿಮೆಯಾಗುತ್ತದೆ; ಸೋಂಕಿನ ಸಾಧ್ಯತೆ ತಗ್ಗುತ್ತದೆ; ಗಾಯದ ಗುರುತು ಹೆಚ್ಚು ಇಲ್ಲದಂತಾಗಿ ರೋಗಿಯ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಸಾಂಪ್ರದಾಯಿಕ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಹೃದಯದ ಕೆಲಸವನ್ನು ಬೇರೊಂದು ಯಂತ್ರಕ್ಕೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಅಡ್ಡಪರಿಣಾಮಗಳು ಅಧಿಕ. ಆದರೆ ಆಧುನಿಕ ಯಂತ್ರಗಳ ನೆರವಿನಿಂದ, ಬಡಿಯುತ್ತಿರುವ ಹೃದಯದ ಚಲನೆಯನ್ನು ಸ್ಥಿರಗೊಳಿಸಿ, ಹೃದಯ ತನ್ನ ಪಾಡಿಗೆ ಕೆಲಸ ಮಾಡುತ್ತಿರುವಂತೆಯೇ ಬೈಪಾಸ್ ಚಿಕಿತ್ಸೆ ಮಾಡಬಹುದಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮ ಮಾದರಿ. ಪ್ರಸ್ತುತ ರೊಬೋಟಿಕ್ ವಿಧಾನದಲ್ಲಿ ಯಾಂತ್ರಿಕ ತೋಳುಗಳನ್ನು ಬಳಸಿ ಅತ್ಯಂತ ಸೂಕ್ಷ್ಮ ಹಾಗೂ ನಿಖರ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಬಹುದು. ಇದರೊಂದಿಗೆ ಹೃದಯದ ಮೂರು ಆಯಾಮದ ಚಿತ್ರಗಳ ಜೋಡಣೆ, ಹೈಬ್ರಿಡ್ ವಿಧಾನಗಳು ರೋಗಿಗಳ ಪಾಲಿಗೆ ವರದಾನವಾಗಿವೆ. ಆಯಾ ರೋಗಿಗೆ ಅತ್ಯಂತ ಸೂಕ್ತ ವಿಧಾನ ಯಾವುದು ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ.

ಚಿಕಿತ್ಸೆ ಎಷ್ಟೇ ಪರಿಣಾಮಕಾರಿಯಾದರೂ, ಕಾಯಿಲೆ ಬಾರದಂತೆ ಕಾಪಾಡಿಕೊಳ್ಳುವುದೇ ಅತ್ಯುತ್ತಮ. ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ, ಆಹಾರದಲ್ಲಿ ಶಿಸ್ತು, ಸಾಕಷ್ಟು ನಿದ್ರೆ, ಕಾಯಿಲೆಗಳ ನಿಯಂತ್ರಣ, ಮನಸ್ಸಿನ ಶಾಂತಿ, ಸಮಾಧಾನ, ನೆಮ್ಮದಿ ನೀಡುವ ಹವ್ಯಾಸಗಳು, ಬಂಧು-ಮಿತ್ರರ ಒಡನಾಟ - ಇವು ಆರೋಗ್ಯಕರ ಬದುಕಿನ ಅತ್ಯಂತ ಪರಿಣಾಮಕಾರಿ ವಿಧಾನಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.