ADVERTISEMENT

ಕೊರೊನಾ ಒಂದಷ್ಟು ತಿಳಿಯೋಣ: ಯಕೃತ್ತಿಗೂ ಹಾನಿ ಮಾಡುವ ವೈರಾಣು

ಪ್ರಜಾವಾಣಿ ವಿಶೇಷ
Published 21 ಅಕ್ಟೋಬರ್ 2020, 20:44 IST
Last Updated 21 ಅಕ್ಟೋಬರ್ 2020, 20:44 IST
ಡಾ. ಗೌತಮ್ ಕುಮಾರ್ ಮೆಹ್ತಾ
ಡಾ. ಗೌತಮ್ ಕುಮಾರ್ ಮೆಹ್ತಾ   

ಬೆಂಗಳೂರು: ಕೊರೊನಾ ಸೋಂಕು ವ್ಯಕ್ತಿಯ ದೇಹದಲ್ಲಿ ವ್ಯಾಪಿಸುತ್ತಿದ್ದಂತೆ ಯಕೃತ್ತಿಗೂ ಹಾನಿ ಮಾಡಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರಲ್ಲಿ ಕೆಲವರು ಯಕೃತ್ತು ಸಮಸ್ಯೆ ಎದುರಿಸಿದ್ದಾರೆ.

ಕೊರೊನಾ ಸೋಂಕು ವ್ಯಕ್ತಿಯ ಶ್ವಾಸಕೋಶದ ಮೇಲೆ ದಾಳಿ ನಡೆಸುವ ಜತೆಗೆ ವಿವಿಧ ಅಂಗಗಳಿಗೆ ಕೂಡ ಹಾನಿ ಮಾಡಲಿದೆ ಎನ್ನುವುದು ವಿವಿಧ ಅಧ್ಯಯನಗಳಿಂದ ದೃಢಪಟ್ಟಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಕೃತ್ತು, ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಮತ್ತು ಇತರೆ ಪೌಷ್ಟಿಕಾಂಶಗಳನ್ನು ಸಂಗ್ರಹಿಸುತ್ತದೆ.ನ್ಯೂ ಹೆವನ್‌ನ ಯೇಲ್ ಲಿವರ್ ಸೆಂಟರ್ 1,827 ಕೊರೊನಾ ಸೋಂಕಿತರ ಯಕೃತ್ತಿನ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ್ದು, ಶೇ 15ರಷ್ಟು ಮಂದಿಯ ಯಕೃತ್ತು ಅಸ್ವಸ್ಥಗೊಂಡಿರುವುದು ತಿಳಿದುಬಂದಿದೆ.

‘ಕೊರೊನಾ ಸೋಂಕು ಹಂತ ಹಂತವಾಗಿ ಯಕೃತ್ತಿನ ಮೇಲೆ ದಾಳಿ ನಡೆಸಲಿದೆ. ಸೋಂಕಿತರಲ್ಲಿ ಶೇ 14ರಿಂದ ಶೇ 53ರಷ್ಟು ಮಂದಿಯಲ್ಲಿ ಯಕೃತ್ತಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಂದಾಜಿಸಲಾಗಿದೆ. ಆದರೆ, ವೈರಾಣುವಿನ ದಾಳಿಗೆ ಯಕೃತ್ತು ವೈಫಲ್ಯವಾಗಿ, ವ್ಯಕ್ತಿ ಮೃತಪಟ್ಟ ಪ್ರಕರಣಗಳು ವರದಿಯಾಗಿರುವುದು ತಿಳಿದುಬಂದಿಲ್ಲ. ಯಕೃತ್ತಿನ ಮೇಲೆ ವೈರಾಣುಗಳು ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಗೋಚರಿಸುವುದಿಲ್ಲ’ ಎಂದು ಮಣಿಪಾಲ್ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಡಾ. ಗೌತಮ್ ಕುಮಾರ್ ಮೆಹ್ತಾ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.