ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ವಿಟಮಿನ್‌ ಸೇವನೆ ಹೇಗೆ ಸಹಕಾರಿ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 18:38 IST
Last Updated 24 ಅಕ್ಟೋಬರ್ 2020, 18:38 IST
ಡಾ.ಉಮಾ ಮಹೇಶ್ವರಿ ಎನ್‌
ಡಾ.ಉಮಾ ಮಹೇಶ್ವರಿ ಎನ್‌   

ಬೆಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಸವಾಲಾಗಿ ನಿಂತಿರುವ ಕೊರೊನಾವನ್ನು ವಿಟಮಿನ್‌ಗಳಿಂದ ತಡೆಗಟ್ಟಲು ಸಾಧ್ಯವಿದೆಯೇ?

‘ವಿಟಮಿನ್ ಸಿ ಹಾಗೂ ಡಿ ದೇಹದ ಹಲವಾರು ಅಂಗಾಂಗಗಳ ಕಾರ್ಯಕ್ಷಮತೆಯಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತವೆ. ದೇಹದ ರೋಗನಿರೋಧಕ ಶಕ್ತಿಯ ಮೇಲೂ ಇವುಗಳ ಪರಿಣಾಮ ಸಾಕಷ್ಟಿದೆ. ದಿನಕ್ಕೆ ಎರಡು ಗ್ರಾಮ್‌ಗಳಷ್ಟು ವಿಟಮಿನ್ ಸಿ ಸೇವಿಸಿದರೆ ಸಾಮಾನ್ಯ ಶೀತವನ್ನು ತಡೆಗಟ್ಟಬಹುದು. ಇದು ಕೊರೊನಾ ತಡೆಗಟ್ಟಲು ಹಾಗೂ ಕೊರೊನಾ ಚಿಕಿತ್ಸೆಗೆ ಅನ್ವಯವಾಗುತ್ತದೆಯೇ ಎಂಬುದರ ಬಗೆಗೆ ಸಂಶೋಧನೆ ಮುಂದುವರಿದಿದೆ’ ಎನ್ನುತ್ತಾರೆ ಬೆಂಗಳೂರಿನ ವೈದ್ಯೆ (ಜನರಲ್‌ ಮೆಡಿಸಿನ್‌) ಡಾ.ಉಮಾಮಹೇಶ್ವರಿ ಎನ್‌.

ತಾಜಾ ಹಣ್ಣು ಮತ್ತು ತರಕಾರಿಗಳು ವಿಟಮಿನ್‌ಗಳಿಂದ ಸಮೃದ್ಧವಾಗಿರುವುದು ಗೊತ್ತೇ ಇದೆ. ಬೆಟ್ಟದ ನೆಲ್ಲಿಕಾಯಿ ಅತಿಹೆಚ್ಚು ಪ್ರಮಾಣದ ವಿಟಮಿನ್ ಸಿ ಹೊಂದಿದ್ದರೂ ಅವಶ್ಯಕವಾದ ಪ್ರಮಾಣವನ್ನು ಬರೀ ಆಹಾರ ಪದಾರ್ಥಗಳಿಂದ ಪಡೆದುಕೊಳ್ಳುವುದು ಅಸಾಧ್ಯ. ಹಾಗಾಗಿ ಮಾತ್ರೆಗಳ ಸೇವನೆ ಅಗತ್ಯವಿರುತ್ತದೆ.

ADVERTISEMENT

‘ಹಾಗೆಯೇ ವಿಟಮಿನ್ ಡಿ ಸೇವನೆಯೂ ಕೊರೊನಾ ತಡೆಗಟ್ಟುವಲ್ಲಿ ಹಾಗೂ ಚಿಕಿತ್ಸೆಯಲ್ಲಿ ಸಹಕಾರಿಯಾಗುವ ಸಾಧ್ಯತೆಗಳಿವೆ. ನಮ್ಮ ಚರ್ಮದ ಪದರಗಳಲ್ಲಿ ಸೂರ್ಯಕಿರಣಗಳ ಸಹಾಯದಿಂದ ಉತ್ಪತ್ತಿಯಾಗುವ ಈ ವಿಟಮಿನ್ ಕೊರತೆ ಇರುವವರಲ್ಲಿ ಕೊರೊನಾದ ಸಂಭಾವ್ಯತೆ ಹೆಚ್ಚು ಮತ್ತು ತೀವ್ರತೆಯೂ ಹೆಚ್ಚು. ಹಾಗಾಗಿ ವಿಟಮಿನ್ ಡಿ ಯ ಸೇವನೆ ಉಪಯುಕ್ತ. ಸೂಕ್ತವಾದ ಪ್ರಮಾಣವನ್ನು ವೈದ್ಯರ ಸಲಹೆಯಂತೆ ಸೇವಿಸಬೇಕು. ಕೊರೊನಾ ತಡೆಗಟ್ಟಲೆಂದು ನಿತ್ಯವೂ ತಮ್ಮಷ್ಟಕ್ಕೇ ಸರಿಯಲ್ಲದ ಪ್ರಮಾಣದ ವಿಟಮಿನ್ ಡಿ ಸೇವಿಸಿ ಜನರು ತೊಂದರೆಗೊಳಗಾದ ಕೆಲವು ಉದಾಹರಣೆಗಳು ಇವೆ’ ಎನ್ನುತ್ತಾರೆ ಡಾ.ಉಮಾಮಹೇಶ್ವರಿ

ಮಕ್ಕಳಲ್ಲಿ ವಿಟಮಿನ್ ಎ ಶ್ವಾಸನಾಳಗಳ ಒಳಪದರವನ್ನು ಸೋಂಕುಗಳಿಂದ ರಕ್ಷಿಸುವಲ್ಲಿ ಸಹಕಾರಿ. ಹಾಗಾಗಿ ಕೊರೊನಾದಿಂದ ರಕ್ಷಿಸುವಲ್ಲಿ ಇದರ ಪಾತ್ರವಿರುವ ಸಾಧ್ಯತೆಗಳು ಬಹಳಷ್ಟು. ಹಾಗೆಯೇ ವಿಟಮಿನ್ ಇ ಮತ್ತು ಸತು ಕೂಡಾ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಸಂಭಾವ್ಯತೆ ಇದೆ ಎನ್ನಲಾಗುತ್ತದೆ. ತೀವ್ರತರದ ಕೊರೊನಾಕ್ಕೆ ಕಾರಣವಾಗುವ ಸೈಟೊಕೈನ್ ಸ್ಟಾರ್ಮ್ ತಡೆಗಟ್ಟುವಲ್ಲಿ ಇವುಗಳು ಪ್ರಮುಖ ಪಾತ್ರ ನಿರ್ವಹಿಸಬಹುದಾದ ಸಾಧ್ಯತೆಗಳೂ ಇವೆ.

ರೋಗ ತಡೆಗಟ್ಟುವಿಕೆಗಲ್ಲದೆ, ಕೊರೊನಾ ಚಿಕಿತ್ಸೆಯಲ್ಲೂ ಇವುಗಳು ಉಪಯುಕ್ತವೇ ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ಮುಂದುವರಿದಿವೆ ಎನ್ನುತ್ತಾರೆ ವೈದ್ಯರು.

*ಸತ್ವಭರಿತ ತಾಜಾ ತರಕಾರಿ, ಹಣ್ಣುಗಳನ್ನು ಸೇವಿಸಿ.

*ಸಾಧ್ಯವಾದಷ್ಟು ಬಿಸಿಲಿಗೆ ಮೈ ಒಡ್ಡಿ.

*ವೈದ್ಯರ ಸಲಹೆಯಂತೆ ವಿಟಮಿನ್ ಸಿ ಮತ್ತು ಡಿ ಸಪ್ಲಿಮೆಂಟ್‌ಗಳನ್ನು ಸೇವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.