ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಸೋಂಕು ಕಡಿಮೆಯಾದರೂ ಕಾಡುವ ಕಿಡ್ನಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 20:32 IST
Last Updated 15 ನವೆಂಬರ್ 2020, 20:32 IST
ಡಾ. ಸುರಿರಾಜು ವಿ.
ಡಾ. ಸುರಿರಾಜು ವಿ.   

ಕೊರೊನಾ ಸೋಂಕಿತರಲ್ಲಿ ಕೆಲವರಲ್ಲಿ ಮೂತ್ರಪಿಂಡ (ಕಿಡ್ನಿ)ದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೋವಿಡ್– 19 ಚಿಕಿತ್ಸೆಗಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಮೂವರಲ್ಲಿ ಒಬ್ಬರಿಗೆ ಮೂತ್ರಪಿಂಡದ ಕಾರ್ಯದಲ್ಲಿ ಏಕಾಏಕಿ ಕುಸಿತ ಕಂಡುಬರುತ್ತಿದೆ. ಇದಕ್ಕೆ ‘ತೀವ್ರ ಮೂತ್ರ ಪಿಂಡ ಕಾಯಿಲೆ’ (ಎಕೆಐ) ಎಂದು ಕರೆಯಲಾಗುತ್ತದೆ. ಅವರಿಗೆ ಈ ಹಿಂದೆ ಈ ಕಾಯಿಲೆಯ ಹಿನ್ನೆಲೆ ಇಲ್ಲದಿದ್ದರೂ ಇದು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

‘ಕೊರೊನಾ ಸಮಸ್ಯೆ ಗಂಭೀರವಾದಾಗ, ಈ ಕಿಡ್ನಿ ಸಮಸ್ಯೆ ಕಾಣಿಸಿಕೊಂಡು ತೀವ್ರವಾಗುವುದಲ್ಲದೇ ಬಹುತೇಕ ಪ್ರಕರಣಗಳಲ್ಲಿ ಇಂತಹ ರೋಗಿಗಳಿಗೆ ತುರ್ತು ಡಯಾಲಿಸಿಸ್ ಅಗತ್ಯ ಬೀಳುತ್ತದೆ. ಕಿಡ್ನಿ ಕಸಿ ಮಾಡಿಸಿಕೊಂಡಿರುವವರು ಹಾಗೂ ಡಯಾಲಿಸಿಸ್‌ಗೆ ಒಳಗಾಗುವವರಿಗೆ ಕೊರೊನಾ ಸೋಂಕು ತಗುಲಿದರೆ ಸಮಸ್ಯೆ ತೀವ್ರ ಸ್ವರೂಪಕ್ಕೆ ತಿರುಗಬಹುದು. ಹೀಗಾಗಿ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಹಾಗೆಯೇ ಕೋವಿಡ್– 19ಗೆ ಹೆದರಿ ಡಯಾಲಿಸಿಸ್‌ ಮುಂದೂಡುವುದೂ ಸರಿಯಲ್ಲ’ ಎನ್ನುತ್ತಾರೆ ಬೆಂಗಳೂರಿನ ರೀಗಲ್‌ ಆಸ್ಪತ್ರೆಯ ಮುಖ್ಯ ಯೂರಾಲಜಿಸ್ಟ್‌ ಡಾ. ಸುರಿರಾಜು ವಿ.

ಕೋವಿಡ್– 19ನಿಂದ ಮೂತ್ರಪಿಂಡದ ಮೇಲಾಗುವ ದೀರ್ಘಕಾಲದ ಪರಿಣಾಮಗಳು ಏನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಸದ್ಯಕ್ಕಂತೂ ಹಲವರನ್ನು ಇದು ಬಾಧಿಸುತ್ತಿದ್ದು, ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.

ADVERTISEMENT

‘ಕೊರೊನಾ ಸೋಂಕು ಕಡಿಮೆಯಾದರೂ ಇದು ಮೂತ್ರಪಿಂಡದ ಕಾರ್ಯದ ಮೇಲೆ ದೀರ್ಘಕಾಲದ ಪರಿಣಾಮ ಉಂಟು ಮಾಡಬಹುದು; ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಮಾತ್ರವಲ್ಲ, ಮೂತ್ರಪಿಂಡದ ಕಾಯಿಲೆ ಹೊಂದಿರದವರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು ಎಂದು ಹಲವು ಮೂತ್ರಪಿಂಡ ಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಹೇಳುತ್ತಾರೆ.

ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಲ್ಲಿ ಕೋವಿಡ್– 19 ಕಾಣಿಸಿಕೊಳ್ಳುವ ಅಪಾಯ ಹೆಚ್ಚು. ಏಕೆಂದರೆ ಅವರು ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗುವುದು ಕಷ್ಟ. ನಿತ್ಯದ ಕೆಲಸಗಳಿಗೆ ಬೇರೆಯವರ ನೆರವು ಬೇಕೇಬೇಕು. ಹೀಗಾಗಿ ಮನೆಯವರೂ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

*****

-ಕೊರೊನಾ ಸೋಂಕು ಕಡಿಮೆಯಾದ ನಂತರ ಮಾಮೂಲು ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಕಿಡ್ನಿ ಕಾರ್ಯದಲ್ಲಿ ಏರುಪೇರಾಗಿರುವುದನ್ನು ಪತ್ತೆ ಮಾಡಬಹುದು.

-ಕಿಡ್ನಿ ಸಮಸ್ಯೆ ಪತ್ತೆಯಾದ ನಂತರ ಆತಂಕಪಡದೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೇ ನಿಲ್ಲಿಸಬೇಡಿ.

-ಕಡಿಮೆ ಉಪ್ಪು, ಕಡಿಮೆ‌ ಸಕ್ಕರೆ, ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸಿ.

-ಮಧುಮೇಹ ಹಾಗೂ ತೀವ್ರ ರಕ್ತದೊತ್ತಡ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಅವುಗಳನ್ನು ನಿಯಂತ್ರಿಸಬೇಕು. ಇದರಿಂದ ಮೂತ್ರಪಿಂಡದ ಮೇಲೆ ಹೆಚ್ಚುವರಿ ಒತ್ತಡ ಬೀಳುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.