
ಗೆಟ್ಟಿ ಚಿತ್ರ
ಅತಿಯಾದ ದುಃಖ ಮತ್ತು ಖಿನ್ನತೆಯ ನಡುವೆ ಇರುವ ವ್ಯತ್ಯಾಸವೇನು?
ಶಿಲ್ಪಶ್ರೀ, ಮೈಸೂರು
ದುಃಖ ಮತ್ತು ಖಿನ್ನತೆಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇವೆರಡರ ಮಧ್ಯೆ ಸಂಬಂಧವಿದೆಯಾದರೂ ಅವು ಒಂದೇ ಅಲ್ಲ. ದುಃಖವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಘಟನೆಯಿಂದ ಪ್ರಚೋದನೆಗೆ ಒಳಗಾಗುತ್ತದೆ. ಉದಾಹರಣೆಗೆ, ಆರ್ಥಿಕ ನಷ್ಟ, ವೈಫಲ್ಯ, ಸಂಘರ್ಷ, ಹತಾಶೆ, ಕೊರಗು ಅಥವಾ ನಿರಾಶೆಯಂತಹ ಅನೇಕ ಕಾರಣಗಳು ದುಃಖವನ್ನು ಉಂಟುಮಾಡಬಹುದು. ಆದರೆ, ದುಃಖವು ಸಾಂದರ್ಭಿಕವಾಗಿ ಕಾಣಿಸಿಕೊಂಡು, ಪರಿಸ್ಥಿತಿ ಬದಲಾದ ಮೇಲೆ ಕಡಿಮೆಯಾಗುತ್ತದೆ.
ಖಿನ್ನತೆಗೆ ಎಷ್ಟೋ ಬಾರಿ ಸ್ಪಷ್ಟ ಕಾರಣಗಳು ಇರಬೇಕಾಗಿಲ್ಲ. ಕೆಲವೊಮ್ಮೆ ಸುಮಾರಾಗಿ ಎರಡು ವಾರಗಳಿಗಿಂತಲೂ ಹೆಚ್ಚಿನ ಕಾಲ ಒಬ್ಬ ವ್ಯಕ್ತಿ ನಿರಂತರವಾಗಿ ದುಃಖಿತನಾಗಿದ್ದರೆ ಅಥವಾ ಜೀವನದ ಪರಿಸ್ಥಿತಿಗಳು ಉತ್ತಮಗೊಂಡಾಗಲೂ ಸುಧಾರಿಸದೇ ಹೋದರೆ, ಆಗ ಅದನ್ನು ಖಿನ್ನತೆ ಎಂದು ಪರಿಗಣಿಸಬೇಕಾಗಬಹುದು. ಆದರೆ ಆ ನಿರ್ಧಾರವನ್ನು ನುರಿತ ಮನಃಶಾಸ್ತ್ರಜ್ಞರು ಅಥವಾ ಮನೋವೈದ್ಯರು ಮಾಡಬೇಕೇ ವಿನಾ ಸಾಮಾನ್ಯ ಜ್ಞಾನದಿಂದ ಯಾರೂ ಸ್ವತಃ ಅಂತಹ ನಿರ್ಧಾರಕ್ಕೆ ಬರಬಾರದು.
ಎಷ್ಟೋ ಬಾರಿ ನಾವು ದುಃಖಿತರಾಗಿದ್ದಾಗಲೂ ಅದರಿಂದ ನಮ್ಮ ದಿನನಿತ್ಯದ ಕೆಲಸಗಳ ಮೇಲೆ ದೊಡ್ಡ ಅಡ್ಡಪರಿಣಾಮವೇನೂ ಆಗಿರುವುದಿಲ್ಲ. ಕೆಲಸದ ನಿಖರತೆ ಕಡಿಮೆ ಆಗಬಹುದು ಅಥವಾ ಎಲ್ಲೋ ಕೆಲವೊಂದು ವಿಚಾರಗಳು ಗಮನಕ್ಕೆ ಬಾರದಿರಬಹುದು ಅಥವಾ ಮರೆತುಹೋದ ಹಾಗೆ ಆಗಬಹುದು. ಆದರೂ ಜೀವನಚಕ್ರ ತನ್ನ ಹಾದಿಯಲ್ಲೇ ಸಾಗುತ್ತಿರುತ್ತದೆ. ಆದರೆ ಖಿನ್ನತೆಯು ನಿದ್ರೆ, ಹಸಿವು, ಶಕ್ತಿ, ಏಕಾಗ್ರತೆ, ಕೆಲಸ, ಸಂಬಂಧಗಳು ಮತ್ತು ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ದಿನಚರಿಯು ಏರುಪೇರಾಗುತ್ತದೆ. ದುಃಖದಲ್ಲಿದ್ದ ಮಾತ್ರಕ್ಕೆ ನಾವು ಇತರ ಭಾವನೆಗಳಿಂದ ಸಂಪೂರ್ಣವಾಗಿ ನಿಶ್ಚೇಷ್ಟಿತರಾಗುವುದಿಲ್ಲ.
ಹೊರ ಪ್ರಪಂಚದ ಜೊತೆಗಿನ ಸಂಪರ್ಕದಲ್ಲಿ ದೊಡ್ಡ ಮಟ್ಟಿಗಿನ ವ್ಯತ್ಯಯವೇನೂ ಆಗುವುದಿಲ್ಲ. ಆದರೆ ಖಿನ್ನತೆಯಲ್ಲಿ ಭಾವನಾತ್ಮಕ ಮರಗಟ್ಟುವಿಕೆ (ನಂಬ್‌ನೆಸ್) ಅಥವಾ ಶೂನ್ಯ ಭಾವ (ಎಂಪ್ಟಿನೆಸ್) ಇರುತ್ತದೆ. ಒಂದು ಕಾಲದಲ್ಲಿ ಸಂತೋಷಪಡಿಸುತ್ತಿದ್ದ ವಿಷಯಗಳು ಯಾವುದೇ ಆಸಕ್ತಿ ಉಂಟು ಮಾಡುವುದಿಲ್ಲ.
ಒಬ್ಬ ವ್ಯಕ್ತಿ ದುಃಖದಲ್ಲಿ ಇದ್ದರೂ ಆತನ ಆಲೋಚನೆಗಳು ಸಮತೋಲನದಲ್ಲಿ ಇರುತ್ತವೆ. ಆದರೆ, ಖಿನ್ನತೆಯಲ್ಲಿ ಇರುವಂತಹ ವ್ಯಕ್ತಿಗೆ ಯಾವಾಗಲೂ ನಕಾರಾತ್ಮಕ, ಹತಾಶ ಆಲೋಚನೆಗಳು ಬರುತ್ತವೆ. ಜೀವನಾಸಕ್ತಿ ಕಡಿಮೆ ಆಗುತ್ತದೆ. ಎಷ್ಟೋ ಬಾರಿ ತಮ್ಮದೇ ಆದ ಗುಂಗಿನಲ್ಲಿ ಇರುತ್ತಾರೆ. ಏಕಾಂತವನ್ನು ಬಯಸುತ್ತಾರೆ. ಇತರರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ತಮ್ಮೊಳಗೆ ಆಗುತ್ತಿರುವ ತಳಮಳವನ್ನು ಯಾರೊಡನೆಯೂ ಹೇಳಿಕೊಳ್ಳುವುದಕ್ಕೆ ಅವರು ತಯಾರಿರುವುದಿಲ್ಲ. ಮಾತ್ರವಲ್ಲ, ತಮ್ಮ ಜೀವನದ ಸಮಸ್ಯೆಯ ಜಂಜಾಟದಿಂದ ಹೊರಬರಬಹುದು ಎಂಬ ಆಶಾಭಾವ ಅವರಲ್ಲಿ ಇರುವುದಿಲ್ಲ. ಹಾಗಾಗಿ, ಅದು ಮತ್ತೆ ಮತ್ತೆ ಅವರನ್ನು ತನ್ನದೇ ಆದ ಕೂಪಕ್ಕೆ ಸೆಳೆಯುತ್ತದೆ.
ತೀವ್ರವಾದ ದುಃಖವು ಖಿನ್ನತೆಗಿಂತ ಭಿನ್ನವಾಗಿರುತ್ತದೆ. ಆದರೆ, ಎಚ್ಚರಿಕೆ ವಹಿಸಬೇಕಾದದ್ದು ಏನೆಂದರೆ, ಅತಿಯಾದ ದುಃಖವನ್ನು ತಾತ್ಕಾಲಿಕ ಎಂದು ಅಲಕ್ಷ್ಯ ಮಾಡಿದರೆ, ಅದೇ ಆಮೇಲೆ ಖಿನ್ನತೆಗೆ ಕಾರಣವಾಗಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ತೀವ್ರವಾದ ದುಃಖದಲ್ಲಿ ಕಳೆದುಹೋಗಬೇಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.