ADVERTISEMENT

ಮನೆಯಲ್ಲೇ ಡಯಾಲಿಸಿಸ್ : ಮಾರ್ಚ್‌ನಿಂದ ರಾಜ್ಯದಲ್ಲಿ ಜಾರಿ

ರೋಗಿಗಳು ಆಸ್ಪತ್ರೆಗಳಿಗೆ ನಡೆಸುವ ಅಲೆದಾಟ ತಪ್ಪಿಸಲು ಯೋಜನೆ

ವರುಣ ಹೆಗಡೆ
Published 14 ಫೆಬ್ರುವರಿ 2020, 20:30 IST
Last Updated 14 ಫೆಬ್ರುವರಿ 2020, 20:30 IST
ಮೂತ್ರಪಿಂಡ
ಮೂತ್ರಪಿಂಡ   

ಬೆಂಗಳೂರು: ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಮನೆಯಲ್ಲೇ ಡಯಾಲಿಸಿಸ್ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆದು, ದೈನಂದಿನ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಸದ್ಯ ಡಯಾಲಿಸಿಸ್ ಮಾಡಿಸಿಕೊಳ್ಳಲು ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಬೇಕು. ಕೆಲವೊಮ್ಮೆ ಹಾಸಿಗೆ, ನೀರು, ವಿದ್ಯುತ್, ವೈದ್ಯರ ಕೊರತೆ ಕಾಡುತ್ತದೆ. ಡಯಾಲಿಸಿಸ್ ಮಾಡಿಸಿಕೊಳ್ಳಲು ಒಬ್ಬರಿಗೆ ತಿಂಗಳಿಗೆ ₹10 ಸಾವಿರದಿಂದ ₹15 ಸಾವಿರದವರೆಗೆ ವೆಚ್ಚವಾಗುತ್ತದೆ.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗೃಹ ಆಧಾರಿತ ಡಯಾಲಿಸಿಸ್ ಯೋಜನೆ ರೂಪಿಸಿದೆ. ಮಾರ್ಚ್‌ನಿಂದ ರೋಗಿಗಳು ಮನೆಯಲ್ಲೇ ಈ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ADVERTISEMENT

ಕೇರಳದ ಬಳಿಕ ಈ ಮಾದರಿಯಲ್ಲಿ ಸೇವೆ ಒದಗಿಸುವ ಎರಡನೇ ರಾಜ್ಯ ಕರ್ನಾಟಕವಾಗಿದೆ.ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ₹ 5 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ. ಈ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಗೆ ನೆಪ್ರೊ ಯುರಾಲಜಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ.

ಬಿಪಿಎಲ್‌ ಕುಟುಂಬಗಳಿಗೆ ಉಚಿತ: ಯಂತ್ರದ ಮೂಲಕ ಮಾಡುವ ರಕ್ತ ಶುದ್ಧೀಕರಣಕ್ಕೆ ‘ಹಿಮೋಡಯಾಲಿಸಿಸ್’ ಎಂದು, ಮನೆಯಲ್ಲಿ ಮಾಡುವ ಡಯಾಲಿಸಿಸ್‌ಗೆ ‘ಪೆರಿಟೋನಿಯಲ್’ ಡಯಾಲಿಸಿಸ್ ಎಂದು ಕರೆಯಲಾಗುತ್ತದೆ. ಗ್ಲುಕೋಸ್‌ ನೀಡುವ ಮಾದರಿಯಲ್ಲೇ ದ್ರವಾಂಶಗಳನ್ನು ನೀಡುವ ಮೂಲಕವೂ ಡಯಾಲಿಸಿಸ್ ಮಾಡಿಕೊಳ್ಳಬಹುದು.

‘ರೋಗಿಗಳಿಗೆ ಕೊಡುವ ತರಬೇತಿ ಹಾಗೂ ನೀಡುವದ್ರವಾಂಶ ಬಿಪಿಎಲ್‌ ಕುಟುಂಬಗಳಿಗೆ ಸಂಪೂರ್ಣ ಉಚಿತ. ಎಪಿಎಲ್‌ ಕುಟುಂಬಗಳು ಹಣ ಪಾವತಿಸಬೇಕಾಗುತ್ತದೆ’ ಎಂದುಇಲಾಖೆಯ ವೈದ್ಯಕೀಯ ವಿಭಾಗದ ಉಪನಿರ್ದೇಶಕ ಡಾ.ಎಂ.ಸೆಲ್ವರಾಜನ್ ತಿಳಿಸಿದರು.

ಮನೆಯಲ್ಲಿ ಚಿಕಿತ್ಸೆ ಹೇಗೆ?

‘ಡಯಾಲಿಸಿಸ್ ಅಗತ್ಯ ಇರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಎರಡು ವಾರ ತರಬೇತಿ ನೀಡಲಾಗುತ್ತದೆ. ರೋಗಿಯ ಹೊಟ್ಟೆಯ ಭಾಗದಲ್ಲಿ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಟ್ಯೂಬ್ ಅಳವಡಿಸಲಾಗುತ್ತದೆ. ಅದರೊಳಗೆ ಫ್ಲುಯಿಡ್‌ಗಳನ್ನು ಹಾಕುವ ಮೂಲಕ ಡಯಾಲಿಸಿಸ್ ಮಾಡಿಕೊಳ್ಳಬಹುದು. ಈ ವಿಧಾನವನ್ನು ಕಲಿತುಕೊಂಡ ಬಳಿಕ ಅಗತ್ಯವಿರುವ ದ್ರವಾಂಶವನ್ನೂ ನೀಡಿ, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ’ ಎಂದುಡಾ.ಎಂ.ಸೆಲ್ವರಾಜನ್ ತಿಳಿಸಿದರು.

‘ತಿಂಗಳಿಗೊಮ್ಮೆ ರೋಗಿಗಳು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡರೆ ಸಾಕು. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗಿ, ಪ್ರಯಾಣ ಹಾಗೂ ಚಿಕಿತ್ಸಾ ವೆಚ್ಚವೂ ತಗ್ಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.