ADVERTISEMENT

ಒಳ್ಳೆಯದು, ಕೆಟ್ಟದನ್ನು ತಿಳಿಸಲು ಪೋಷಕರಿಗೆ ಡಿಜಿಟಲ್ ಜ್ಞಾನ ಅವಶ್ಯಕ

ಪ್ರಜಾವಾಣಿ ವಿಶೇಷ
Published 22 ಫೆಬ್ರುವರಿ 2022, 9:07 IST
Last Updated 22 ಫೆಬ್ರುವರಿ 2022, 9:07 IST
   

ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮಕ್ಕಳು ಹಾಗೂ ಯುವ ಜನತೆ ಡಿಜಿಟಲ್ ಪ್ರಪಂಚದಲ್ಲಿ ಮುಳುಗಿ ಹೋಗಿರುವುದನ್ನು ನಾವು ಕಾಣುತ್ತಿದ್ದೇವೆ. ಕೋವಿಡ್‌ನ ಈ ಸಮಯದಲ್ಲಿ ಡಿಜಿಟಲ್ ಪ್ರಪಂಚದ ಪ್ರಭಾವ ಇನ್ನಷ್ಟು ಹೆಚ್ಚಾಗಿರುವುದನ್ನು ಕಾಣುತ್ತಿದ್ದೇವೆ. ಪೋಷಕರು ಮಕ್ಕಳು ಡಿಜಿಟಲ್ ಗ್ಯಾಜೆಟ್‌ಗಳೊಂದಿಗೆ ತಮ್ಮ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ. ಅದನ್ನು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಉಪಯೋಗ ಮಾಡುವುದು ಹೇಗೆ ಅದರಿಂದಾಗುವ ದುಷ್ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ ಎಂಬುದನ್ನು ತಿಳಿಯಲು ಡಿಜಿಟಲ್ ಲಿಟೆರೆಸಿಯ ಅವಶ್ಯಕತೆ ಇದೆ ಎಂಬುದನ್ನು ಮನಗಾಣಬೇಕಿದೆ.

ಡಿಜಿಟಲ್ ಪ್ರಂಪಚವು ಮಕ್ಕಳಿಗೆ ಅಘಾದವಾದ ಜ್ಞಾನದೊಂದಿಗೆ ಅವಕಾಶಗಳನ್ನು ಸಹ ಕಲ್ಪಿಸಬಹುದಾಗಿದೆ. ಇದರ ಬಳಕೆ ಸರಿಯಾದ ರೀತಿಯಲ್ಲಾದರೆ ಇದರಿಂದಾಗುವ ಉಪಯೋಗಗಳೇ ಹೆಚ್ಚು ಎಂದು ಹೇಳಬಹುದಾಗಿದೆ. ಆದರೆ, ಪೋಷಕರ ಕಣ್ಗಾವಲು ಇದಕ್ಕೆ ಅವಶ್ಯಕ. ಪೋಷಕರಿಗೆ ಡಿಜಿಟಲ್ ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ, ಮಕ್ಕಳು ಬಳಸುವ ಡಿಜಿಟಲ್ ಸ್ಪೇಸ್‌ಗಳ ಮಾಹಿತಿ, ಆ್ಯಪ್‌ಗಳ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕ.

ಪೋಷಕರು ಮಾಡಬಹುದಾದ್ದೇನು ?

ADVERTISEMENT

* ಪೋಷಕರು ಮಕ್ಕಳು ಗ್ಯಾಜೆಟ್‌ಗಳ ಬಳಕೆಯನ್ನು ಇಚ್ಛಿಸಿದಾಗ ಅವರೊಟ್ಟಿಗೆ ತಾವು ಭಾಗವಹಿಸುವುದು ಅಂದರೆ ಒಟ್ಟಿಗೆ ಕೂತು ಸಿನಿಮಾ ವೀಕ್ಷಣೆ , ವೀಡಿಯೋ ಗೇಮ್ ಗಳೊಂದಿಗೆ ಆಟವಾಡಿದಾಗ ನಾವೇ ಸ್ವತಃ ಕೆಲವು ಒಳ್ಳೆಯ ವಿಷಯಗಳನ್ನು ಮಕ್ಕಳಿಗೆ ತಿಳಿಸಲು ಬಳಸಿಕೊಳ್ಳಬಹುದಾಗಿದೆ.

* ಇಂಟರ್‌ನೆಟ್ ಸುರಕ್ಷತೆ ಹಾಗೂ ಆನ್‌ಲೈನ್ ಗೌಪ್ಯತೆ ಬಗ್ಗೆ ಮಕ್ಕಳಿಗೆ ತಿಳಿಸುವುದು ಅವಶ್ಯಕ ಅಂದರೆ ಮಕ್ಕಳು ಆನ್ ಲೈನ್ ಬಳಸುವ ಮುನ್ನ ಪೋಷಕರಿಗೆ ತಿಳಿಸುವುದು, ಯಾವುದಾದರೂ ವಿಷಯವನ್ನು ಅಥವ ಪೋಟೋಗಳನ್ನು ಷೇರ್ ಮಾಡುವುದಕ್ಕಿಂತ ಮುನ್ನ ಪೋಷಕರಿಗೆ ತಿಳಿಸುವುದು, ಅಪರಿಚಿತರೊಂದಿಗೆ ಸಂವಹನವನ್ನು ಮಾಡಬಾರದೆಂದು ತಿಳಿಹೇಳುವುದು. ಮುಂತಾದ ವಿಷಯಗಳ ಬಗ್ಗೆ ಗಮನ ಹರಿಸಬೇಕು.

* ಅಧ್ಯಯನಗಳ ಪ್ರಕಾರ, ಶೇಕಡ 75 ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಅಂದರೆ ಫೇಸ್‌ಬುಕ್ , ಇನ್‌ಸ್ಟಾಗ್ರಾಮ್‌ಗಳಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಇಟ್ಟುಕೊಂಡಿರುವುದು ಕಂಡುಬಂದಿರುತ್ತದೆ. ಆದುದರಿಂದ ಸೈಬರ್ ಬುಲ್ಲಿಯಿಂಗ್ ಮುಂತಾದ ಅಹಿತಕರ ಘಟನೆಗಳು ನಡೆಯುವುದನ್ನು ತಡೆಯಲು ಪೋಷಕರು ಇದರ ಬಗ್ಗೆ ಮಕ್ಕಳಿಗೆ ಸ್ನೇಹಭಾವದಿಂದ ತಿಳಿಹೇಳುವುದು ಅವಶ್ಯಕ.

* ಯುವ ಜನತೆ ಸೆಲೆಬ್ರೆಟಿಗಳನ್ನು ಅನುಕರಿಸುವುದು ಸಾಮಾನ್ಯ. ಅಹಿತಕರ ಅನುಕರಣೆ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವುದು ಹೆಚ್ಚು. ಆದುದರಿಂದ ಪೋಷಕರು ಡಿಜಿಟಲ್ ಪ್ರಪಂಚದಿಂದಾಗುವ ಇಂತಹ ಪ್ರಭಾವಗಳ ಬಗ್ಗೆ ಎಚ್ಚರವಹಿಸಿ ಮಕ್ಕಳಿಗೆ ಸೂಕ್ತವಾದ ವಿಷಯಗಳು, ಜೀವನದ ಮೌಲ್ಯಗಳು, ಒಳ್ಳೆಯ ವಿಷಯಗಳ ಅನುಕರಣೆಯನ್ನು ಪ್ರೋತ್ಸಾಹಿಸಬೇಕು.

* ಎಲ್ಲಾ ತಂದೆ ತಾಯಂದಿರಿಗೂ ತಮ್ಮ ಮಕ್ಕಳು ಆಧುನಿಕ ತಂತ್ರಜ್ಞಾನವನ್ನು ತಿಳಿದುಕೊಳ್ಳಬೇಕು, ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಎಂಬ ಹೆಬ್ಬಯಕೆಯನ್ನು ಹೊಂದಿರುತ್ತಾರೆ. ಅದಕ್ಕೆ ಪೂರಕವಾಗುವಂತೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮಕ್ಕಳಿಗೆ ಒದಗಿಸುತ್ತಾರೆ. ಆದರೆ ಒಳ್ಳೆಯದು, ಕೆಟ್ಟದನ್ನು ಬೇಧಿಸುವ ಬುದ್ಧಿಶಕ್ತಿಯನ್ನು ಬೆಳೆಸುವುದು ಪೋಷಕರ ಹೊಣೆಯಾಗಿರುತ್ತದೆ. ಆದುದರಿಂದ ಪೋಷಕರಿಗೆ ಡಿಜಿಟಲ್ ಲಿಟೆರೆಸಿಯು ಅವಶ್ಯಕ.

– ಡಾ. ಸ್ಮಿತಾ ಜೆ ಡಿ, ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.