ADVERTISEMENT

ಏನಾದ್ರೂ ಕೇಳ್ಬೋದು: ಲೈಂಗಿಕತೆಯ ಬಗ್ಗೆ ತಪ್ಪು ತಿಳಿವಳಿಕೆ ಸಲ್ಲ

ನಡಹಳ್ಳಿ ವಂಸತ್‌
Published 18 ಮಾರ್ಚ್ 2022, 19:30 IST
Last Updated 18 ಮಾರ್ಚ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

* ನನಗೆ ಸಂಗಾತಿ ಇದ್ದಾಳೆ. ಮಿಲನದಲ್ಲಿ ಗಂಡಸರಿಗೆ ಆಗುವಂತೆ ನನಗೆ ಸ್ಖಲನವಾಗುವುದಿಲ್ಲ, ಹಾಗಾಗಿ ತನಗೆ ಸುಖ ಸಿಗುತ್ತಿಲ್ಲ ಎಂದು ಆಗಾಗ ಹೇಳುತ್ತಿರುತ್ತಾಳೆ. ಪುರುಷರಂತೆ ಮಹಿಳೆಯರಿಗೂ ಸ್ಖಲವನವಾಗುತ್ತದೆಯೇ? ಅವರಿಗೆ ತೃಪ್ತಿಯಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?

-ಹೆಸರು ಊರು ತಿಳಿಸಿಲ್ಲ.

ಇಂತಹ ಪ್ರಶ್ನೆ ಕೇಳುವ ನಿಮ್ಮ ಮುಕ್ತಮನೋಭಾವ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚುತ್ತೇನೆ. ಹಾಗೆಯೇ ಯುವಜನರಲ್ಲಿ ಲೈಂಗಿಕತೆಯ ಕುರಿತಾಗಿ ಇರುವ ಅಜ್ಞಾನ ಮತ್ತು ತಪ್ಪುತಿಳಿವಳಿಕೆಗಳ ಬಗೆಗೆ ನಾವೇನು ಮಾಡಬಹುದು ಎಂದು ಸಮಾಜದ ಹಿರಿಯರೆಲ್ಲರೂ ಯೋಚಿಸಿ ಕ್ರಿಯಾಶೀಲರಾಗಬೇಕಾಗಿ ಮನವಿ ಮಾಡುತ್ತಿದ್ದೇನೆ.

ADVERTISEMENT

ಪುರುಷರಿಗೆ ಸ್ಖಲನವಾಗುವುದು ಸಂತಾನದ ಉದ್ದೇಶಕ್ಕೆ ಮಾತ್ರ. ವೀರ್ಯವನ್ನು ಗರ್ಭಾಶಯದ ಒಳಗೆ ಕಳಿಸುವುದಕ್ಕಾಗಿ ಪಿಚಕಾರಿಯಂತಹ ವ್ಯವಸ್ಥೆಯಿದೆ. ಸ್ಖಲನದ ಸಮಯದಲ್ಲಿ ಪುರುಷರಿಗೆ ವಿಶಿಷ್ಟ ಅನುಭವವಾಗುತ್ತದೆ. ಸ್ತ್ರೀಯರಲ್ಲಿಯೂ ಇದೇ ರೀತಿಯ ಲೈಂಗಿಕ ಸುಖದ ತೀವ್ರ ಅನುಭವವಾಗುತ್ತದೆ. ಉದ್ರೇಕವಾದಾಗ ಸರಾಗವಾದ ಚಲನೆಗೆ ಅನುಕೂಲವಾಗುವಂತೆ ಜಾರುಕದಂತಹ ದ್ರವ ಹೊರಬರುತ್ತದೆ. ಆದರೆ ಪುರುಷರಂತೆ ಸ್ಖಲನವಾಗುವುದಿಲ್ಲ.

ಸ್ಖಲನದಲ್ಲೇ ಪುರುಷರ ಲೈಂಗಿಕ ಸುಖವಿದೆ ಎನ್ನುವುದು ಹಿಂದಿನಿಂದ ಬಂದ ತಪ್ಪುತಿಳಿವಳಿಕೆ. ಇಂತಹ ತಪ್ಪುತಿಳಿವಳಿಕೆಯಿಂದ ಹೆಣ್ಣು ಗಂಡಿನ ಸಂಬಂಧ ಕೇವಲ ಸಂಭೋಗ ಮತ್ತು ಸ್ಖಲನಕ್ಕೆ ಸೀಮಿತವಾಗುತ್ತದೆ. ಆಗ ಆತ್ಮೀಯತೆಯ ಅನುಭವವಾಗುವುದಿಲ್ಲ. ಪರಸ್ಪರ ಸ್ಪರ್ಶ, ಅಪ್ಪುಗೆ, ಚುಂಬನ, ಪ್ರೀತಿಯ ಮಾತುಗಳು, ಒಟ್ಟಾಗಿ ಕಳೆಯುವ ಮಧುರವಾದ ಸಮಯ.. ಇತ್ಯಾದಿಗಳು, ಸಂಭೋಗಕ್ಕೂ ಮೊದಲು ನಡೆಯುವ ಕ್ರಿಯೆಗಳು. ಇವು ಇಬ್ಬರ ನಡುವಿನ ಆಕರ್ಷಣೆಯನ್ನು ಹೆಚ್ಚಿಸಿ ದೇಹವನ್ನು ಪೂರ್ಣ ಲೈಂಗಿಕ ಅನುಭವಕ್ಕೆ ಸಿದ್ಧಪಡಿಸುತ್ತವೆ. ಈ ಎಲ್ಲಾ ಕ್ರಿಯೆಗಳನ್ನು ಸಂಭೋಗದ ಸಮಯದಲ್ಲಿಯೂ ಮುಂದುವರೆಸಿದಾಗ ಇಬ್ಬರಿಗೂ ತೃಪ್ತಿಕರ ಅನುಭವವಾಗುತ್ತದೆ. ನಿಮ್ಮ ಸಂಗಾತಿ ತನಗೆ ಸ್ಖಲನವಾಗುತ್ತಿಲ್ಲ ಎನ್ನುವಾಗ, ತೃಪ್ತಿಕರ ಲೈಂಗಿಕ ಅನುಭವವಾಗುತ್ತಿಲ್ಲ ಎಂದೂ ಹೇಳುತ್ತಿದ್ದಾರೆ. ಹಾಗಾಗಿ ಲೈಂಗಿಕತೆಯ ಬಗೆಗಿನ ನಿಮ್ಮಿಬ್ಬರ ಆಸೆ ನಿರೀಕ್ಷೆ ಕಲ್ಪನೆಗಳೇನು ಎನ್ನುವುದನ್ನು ಮುಕ್ತವಾಗಿ ಚರ್ಚೆಮಾಡಿ. ನಿಮ್ಮ ಮನವನ್ನೂ ಅವರೆದುರಿಗೆ ತೆರೆದಿಡಿ. ನಿಧಾನವಾಗಿ ಪರಸ್ಪರ ಪರಿಚಯ, ಆತ್ಮೀಯತೆ ಹೆಚ್ಚಿದಂತೆ ಲೈಂಗಿಕ ಅನುಭವದ ಗುಣಮಟ್ಟವೂ ಹೆಚ್ಚುತ್ತದೆ.

* 29ರ ಪುರುಷ. ವಿವಾಹವಾಗಿ 4 ವರ್ಷವಾಗಿದೆ. ಮಕ್ಕಳಾಗಿಲ್ಲ. ನನಗೆ ಚಿಕ್ಕವಯಸ್ಸಿನಿಂದ ಹಸ್ತಮೈಥುನದ ಅಭ್ಯಾಸವಿತ್ತು. ಮೂತ್ರವಿಸರ್ಜನೆ ಮಾಡುವ ರಂಧ್ರ ಚಿಕ್ಕದಾಗಿದ್ದು ಸಣ್ಣದಾಗಿ ಮೂತ್ರ ಹೋಗುತ್ತಿದೆ. ಜೊತೆಗೆ ಶೀಘ್ರಸ್ಖಲನದ ಸಮಸ್ಯೆಯೂ ಇದೆ. ಇವೆಲ್ಲವೂ ಮಕ್ಕಳಾಗದಿರಲು ಕಾರಣವೇ?

ಹೆಸರು ಊರು ತಿಳಿಸಿಲ್ಲ.

ಮಕ್ಕಳಾಗದಿರುವುದಕ್ಕೆ ವೈದ್ಯರನ್ನು ಸಂಪರ್ಕಿಸುವುದರ ಬದಲು ನೀವೇ ಹಲವಾರು ಕಾರಣಗಳನ್ನು ಊಹಿಸಿಕೊಳ್ಳುತ್ತಿದ್ದೀರಲ್ಲವೇ? ಪುರುಷ ವೀರ್ಯಾಣು ನಿರ್ದಿಷ್ಟ ಸಮಯದ ನಂತರ ದೇಹದೊಳಗಡೆಯೇ ನಾಶವಾಗಿ ಹೊಸದು ಸೃಷ್ಟಿಯಾಗುತ್ತಲೇ ಇರುತ್ತದೆ. ಹಾಗಾಗಿ ಮಕ್ಕಳಾಗದಿರುವುದಕ್ಕೆ ಹಸ್ತಮೈಥುನ ಕಾರಣವಾಗುವುದಿಲ್ಲ. ಕಿಬ್ಬೊಟ್ಟೆ ಮತ್ತು ಶಿಶ್ನದಲ್ಲಿ ನೋವು ಬಾವು ಉರಿ ರಕ್ತಸ್ರಾವ ಮುಂತಾದ ಯಾವ ಲಕ್ಷಣಗಳೂ ಇಲ್ಲದಿದ್ದಲ್ಲಿ ನಿಮಗೆ ಮೂತ್ರನಾಳದಲ್ಲಿ ಸಮಸ್ಯೆಯಿಲ್ಲ ಎಂದರ್ಥ. ಅಗತ್ಯವೆನ್ನಿಸಿದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಕೊಂಡು ಖಾತ್ರಿಪಡಿಸಿಕೊಳ್ಳಿ.

ಶೀಘ್ರ ಸ್ಖಲನವೂ ಮಕ್ಕಳಾಗದಿರುವುದಕ್ಕೆ ಕಾರಣವಲ್ಲ. ಆದರಿಂದಾಗಿ ಪತಿಪತ್ನಿಯರಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲವೆಂದಾದರೆ ಇಬ್ಬರೂ ಮುಕ್ತವಾಗಿ ಚರ್ಚೆ ಮಾಡಿ. ಹೆಚ್ಚಿನ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾದ ನಿಮ್ಮೊಳಗಿನ ಆತಂಕ ಶೀಘ್ರಸ್ಖಲನಕ್ಕೆ ಕಾರಣ. ಹಾಗಾಗಿ ಇಬ್ಬರಿಗೂ ಎಂತಹ ಸ್ಪರ್ಷ ವಾತಾವರಣ ಮಾತುಗಳು ಇಷ್ಟವಾಗುತ್ತವೆ ಎನ್ನುವುದನ್ನು ಪರಸ್ಪರ ತಿಳಿದುಕೊಳ್ಳಿ. ವೇಗವನ್ನು ಕಡಿಮೆ ಮಾಡಿ ಒಟ್ಟಾಗಿರುವ ಪ್ರತಿಕ್ಷಣವನ್ನೂ ಇಬ್ಬರೂ ಆನಂದಿಸುತ್ತಾ ಮುಂದುವರೆಯಿರಿ. ಹೆಚ್ಚಿನ ಸಹಾಯಕ್ಕೆ ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.