ADVERTISEMENT

ಜಠರದಲ್ಲಿ ಹುಣ್ಣು; ನಿರ್ಲಕ್ಷ್ಯ ಬೇಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 0:30 IST
Last Updated 11 ಜನವರಿ 2025, 0:30 IST
   

ಹುಣ್ಣುಗಳು ಅದರಲ್ಲಿಯೂ ಜೀರ್ಣಾಂಗವ್ಯೂಹದಲ್ಲಿ ಹುಣ್ಣುಗಳು ಆದಾಗ ನಿರ್ಲಕ್ಷ್ಯ ಮಾಡುವಂತಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ 11.22ರಷ್ಟು ಮಂದಿ ಜಠರ ಹುಣ್ಣುಗಳ ನೋವಿನಿಂದ ಬಳಲುತ್ತಾರೆ ಎನ್ನುತ್ತದೆ ಅಧ್ಯಯನದ ವರದಿ.

ಜೀರ್ಣಾಂಗವ್ಯೂಹದ ರಕ್ಷಣಾತ್ಮಕ ಲೋಳೆ ಪದರವು ಹಾಳಾದಾಗ ಈ ಹುಣ್ಣುಗಳು ರೂಪುಗೊಳ್ಳುತ್ತವೆ. ಸಾಮಾನ್ಯವಾಗಿ ಈ ಲೋಳೆ ಪದರವು ಹಾಳಾಗಲು ಹೊಟ್ಟೆಯ ಆಮ್ಲವೇ ಕಾರಣವಾಗಿರುತ್ತದೆ.

ಜೀರ್ಣಕ್ಕೆ ಸಂಬಂಧಪಟ್ಟ ಆಮ್ಲಗಳು ಹೊಟ್ಟೆ, ಅನ್ನನಾಳ ಅಥವಾ ಸಣ್ಣ ಕರುಳಿನ ಆರಂಭದ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ಹುಣ್ಣುಗಳು ಅಲ್ಲಿ ಬೆಳೆಯುತ್ತವೆ. ಸಾಮಾನ್ಯವಾಗಿ ಸಣ್ಣ ಕರುಳಿನ ಮೊದಲ ಭಾಗದಲ್ಲಿ  ಹುಣ್ಣುಗಳು ಬೆಳೆಯುತ್ತವೆಯಾದರೂ, ಇದರ ಹೊರತಾಗಿ ಬೇರೆ ಕಡೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ADVERTISEMENT

ಹೊಟ್ಟೆಯ ಹುಣ್ಣಿನಂತೆ  ಅನ್ನನಾಳದಲ್ಲಿ ಕಾಣಿಸಿಕೊಳ್ಳುವ ಹುಣ್ಣುಗಳು ಆರೋಗ್ಯಕ್ಕೆ ಮಾರಕವೇ ಆಗಿವೆ. ಯಾವುದೇ ಹುಣ್ಣಿನ ಗುಣಲಕ್ಷಣಗಳು ಕಂಡುಬಂದಾಗ ತಜ್ಞವೈದ್ಯರನ್ನು ಕಂಡು, ತಪಾಸಣೆಗೆ ಒಳಗಾಗುವುದು ಬಹುಮುಖ್ಯ.

ಲಕ್ಷಗಣಗಳೇನು?

ಜಠರದಲ್ಲಿ ಹುಣ್ಣಾದರೆ, ಕಿಬ್ಬೊಟ್ಟೆಯಲ್ಲಿ ತೀವ್ರ ನೋವು, ಸುಡುವ ಭಾವ ಕಾಣಿಸಿಕೊಳ್ಳುತ್ತದೆ. ಜತೆಗೆ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ತಿಂದದ್ದೂ ಅಜೀರ್ಣವಾಗುತ್ತದೆ. ದೇಹದಲ್ಲಿ ಆಯಾಸ, ಸುಸ್ತು ಕಾಣಿಸಿಕೊಳ್ಳುತ್ತದೆ. ಜಠರದಲ್ಲಿ ಹುಣ್ಣಾದರೆ ತಿಂದ ತಕ್ಷಣ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಹೋಗಬಹುದು. ತಿಂದು ಅರ್ಧ ಗಂಟೆಯ ನಂತರ ತಿಂದ ಆಹಾರವೂ ಜೀರ್ಣಗೊಳ್ಳುವ ಸಮಯದಲ್ಲಿ  ನೋವು ವಿಪರೀತ ಇರಬಹುದು. ಕೆಲವೊಮ್ಮೆ ಹಸಿವೆಯಾಗದಂಥ ಅನುಭವ ಆಗಬಹುದು.

ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಹೋದರೆ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹುಣ್ಣು ಆಳವಾಗಿ ರಂಧ್ರಗಳನ್ನು ಮಾಡಬಹುದು. ಇದರಿಂದ ಹೊಟ್ಟೆಯಲ್ಲಿ ಅಸಹನೀಯ ನೋವು, ಜ್ವರ, ವಾಂತಿ ಉಂಟಾಗಬಹುದು. ಕೆಲವೊಮ್ಮೆ ವಾಂತಿಯಲ್ಲಿ ರಕ್ತ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮುಖ್ಯಕಾರಣಗಳೇನು?

ಜಠರದಲ್ಲಿ ಹುಣ್ಣು ಉಂಟಾಗಲು ಎರಡು ಮುಖ್ಯ ಕಾರಣಗಳಿವೆ. ಒಂದು ನೋವು ನಿವಾರಕ ಔಷಧಿಗಳ ಅತಿಯಾದ ಬಳಕೆ ಮತ್ತು ಹೆಲಿಕೋಬ್ಯಾಕ್ಟರ್‌ ಪೈಲೋರಿ ಸೋಂಕುಗಳಿಂದಲೂ ಹುಣ್ಣುಗಳು ಉಂಟಾಗಬಹುದು. ನೋವು ನಿವಾರಕ ಔಷಧಿಗಳ ಅತಿ ಬಳಕೆಯಿಂದ ಜಠರದಲ್ಲಿರುವ ರಕ್ಷಣೆಯನ್ನು ನೀಡುವ ಉತ್ತಮ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದರಿಂದ ಒಳಪದರದ ಸಾಮರ್ಥ್ಯ ಕುಸಿಯುತ್ತದೆ. ಇನ್ನು ಸೋಂಕುಗಳಿಂದ ಹೊಟ್ಟೆಯಲ್ಲಿ ಊರಿಯೂತ ಉಂಟಾಗಬಹುದು.ಇದಲ್ಲದೇ ಅತಿಯಾದ ಒತ್ತಡದ ಬದುಕು, ರಕ್ತಹೀನತೆ, ನಿರ್ದಿಷ್ಟ ಚಿಕಿತ್ಸೆಗಳು, ದೀರ್ಘಕಾಲದ ಕಾಯಿಲೆಗಳಿಂದಲೂ ಜಠರದಲ್ಲಿ ಹುಣ್ಣಾಗಬಹುದು.

ಎಂಡೋಸ್ಕೋಪಿ, ಸಿ.ಟಿ.ಸ್ಕ್ಯಾನ್‌ಗಳಿಂದ ಹುಣ್ಣು ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ. ಆಂತರಿಕವಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದರೆ ಅದರ ಕಾರಣವನ್ನು ತಿಳಿಯಲು ಬಯಾಪ್ಸಿ ನಡೆಸಿ, ನಂತರ ಚಿಕಿತ್ಸೆ ನೀಡಲಾಗುತ್ತದೆ.

ಹೀಗೆ ಮಾಡಿ..

ಉತ್ತಮ, ಸತ್ವಯುತ ಆಹಾರವನ್ನು ಸೇವಿಸಿ. ಮದ್ಯ, ಕಾಫಿ, ಕೊಬ್ಬಿನ ಪದಾರ್ಥಗಳನ್ನು ತ್ಯಜಿಸಿ. ರಾತ್ರಿ ಹೊತ್ತು ಜಂಕ್‌ಫುಡ್‌ಗಳಿಂದ ದೂರವಿರಿ. ಆಗಾಗ್ಗೆ ಸ್ವಲ್ಪ ಸ್ವಲ್ಪ ಊಟ ಮಾಡಿ, ನಿಧಾನವಾಗಿ ಊಟ ಮಾಡಿ. ಊಟ ಮಾಡುವಾಗ ಅತಿಯಾಗಿ ಮಾತನಾಡದೇ, ಗಮನವಿಟ್ಟು ಊಟ ಮಾಡಿ. ಒತ್ತಡವನ್ನು ಸೂಕ್ತ ನಿರ್ವಹಿಸಿ. 

-ಡಾ. ರಾಜೀವ್‌ ಪ್ರೇಮನಾಥ್‌, ಲ್ಯಾಪ್ರೊಸ್ಕೋಪಿಕ್‌ ಸರ್ಜನ್‌, ರಾಮಕೃಷ್ಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.