ADVERTISEMENT

20 ಸೆಕೆಂಡ್‌ ವ್ಯಾಯಾಮ..!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 19:30 IST
Last Updated 10 ಫೆಬ್ರುವರಿ 2019, 19:30 IST
ಫಿಟ್‌ನೆಸ್
ಫಿಟ್‌ನೆಸ್   

ಬೆಳಗಿನ ಜಾವ ಏಳೋದು ಅಂದರೆ ಏನೋ ಸಂಕಟ. ಈಗಂತೂ ಚಳಿಗಾಲ. ಬೆಳಗ್ಗೆ ಏಳಬೇಕು ಅಂತ ಅಂದುಕೊಂಡರೇ ಸಾಕು ಇಡೀ ರಾತ್ರಿ ನಿದ್ದೆ ಬರುವುದಿಲ್ಲ. ಇನ್ನು ಹೇಗೋ ಕಷ್ಟಪಟ್ಟು ಬೇಗನೆ ಎದ್ದು, ವಾಕಿಂಗ್‌ ಹೊರಡೋಕೆ ಪ್ರತ್ಯೇಕ ಬಟ್ಟೆ ತೊಟ್ಟು ಮನೆ ಬಿಡುವುದರಲ್ಲಿ ಸಾಕಾಗಿ ಹೋಗುತ್ತದೆ. ಆದರೆ, ಇಷ್ಟೆಲ್ಲ ಮಾಡಬೇಕಾಗಿಲ್ಲ, ಕೇವಲ 20 ಸೆಕೆಂಡ್‌ ವ್ಯಾಯಾಮ ಮಾಡಿದರೆ ಸಾಕು ಎನ್ನುತ್ತದೆ ಅಧ್ಯಯನ!

ಹಾಮಿಲ್ಟನ್‌ನ ಮ್ಯಾಕ್‌ಮಾಸ್ಟರ್‌ವಿಶ್ವವಿದ್ಯಾಲಯದ ವ್ಯಾಯಾಮ ವಿಜ್ಞಾನಿಗಳು ಇಂತಹ ವ್ಯಾಯಾಮ ವಿಧಾನವನ್ನು ಕಂಡುಹಿಡಿದಿದ್ದಾರೆ. ದಿನದಲ್ಲಿ ಕೆಲವು ಬಾರಿ 20 ಸೆಕೆಂಡ್‌ ಚುರುಕಾಗಿ ಮೆಟ್ಟಿಲು ಹತ್ತುವುದು ಅಥವಾ ಜಿಮ್‌ ಸೈಕ್ಲಿಂಗ್‌ ಮಾಡಿದರೆ ಸಾಕು, ಗಂಟೆಗಟ್ಟಲೆ ವ್ಯಾಯಾಮ ಮಾಡುವವರಂತೆಯೇ ನೀವು ಸಹ ಫಿಟ್‌ ಆಗಿ ಇರಬಹುದು. ಇದರಿಂದಾಗಿ ನಮ್ಮ ಆರೋಗ್ಯ ಸುಧಾರಿಸುವುದಲ್ಲದೇ ರಕ್ತದೊತ್ತಡ ಹಾಗೂ ಮಧುಮೇಹದ ಸಮಸ್ಯೆ ಇರುವವರಿಗೆ ಇದು ಉತ್ತಮ ಉಪಾಯವಾಗಿದೆ.

ಈಗ ಕೆಲಸದ ರೀತಿ ಬದಲಾಗಿದೆ. ರಾತ್ರಿಪಾಳಿ ಇರುತ್ತದೆ. ಇಲ್ಲ ಕೆಲಸ ಒತ್ತಡ ರಾತ್ರಿ ಮಲಗುವುದು ತಡವಾಗುತ್ತದೆ. ಇದರಿಂದ ಬೆಳಗ್ಗೆ ಎದ್ದು ವ್ಯಾಯಾಮ ಮಾಡುವುದು ಕಷ್ಟಕರ. ಆದರೆ ಈಗ ಮನೆಯಲ್ಲೇ ವ್ಯಾಯಾಮ ಮಾಡಬೇಕು ಎನ್ನುವ ಚಿಂತೆ ಇಲ್ಲ ಎನ್ನುತ್ತದೆ ಈ ಅಧ್ಯಯನ. ಈಗಂತೂ ಎಲ್ಲಾ ಆಫೀಸಿನಲ್ಲೂ ಮೆ‌ಟ್ಟಿಲುಗಳಿರುತ್ತವೆ. ವ್ಯಾಯಾಮಕ್ಕಾಗಿ ಬಟ್ಟೆ ಬದಲಾಯಿಸಲೇಬೇಕು, ಬೆವರುತ್ತದೆ ಎನ್ನುವ ಯಾವ ಕಿರಿಕಿರಿಯೂ ಇಲ್ಲದೇ ಚುರುಕಾಗಿ ಮೆಟ್ಟಿಲು ಹತ್ತಿ–ಇಳಿದರೆ ಸಾಕು ಎನ್ನುತ್ತಾರೆ ವಿಜ್ಞಾನಿಗಳು.

ADVERTISEMENT

ಆಫೀಸಿನಲ್ಲಿ ಕೂತು ಕೆಲಸ ಮಾಡುವ ಮಹಿಳೆಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಯಿತು. ಕೆಲವು ನಿಮಿಷ ವಿರಾಮದಲ್ಲಿ ಮೂರು ಬಾರಿ 20 ಸೆಕೆಂಡ್‌ ವ್ಯಾಯಾಮದ ಒಂದು ಅವಧಿಯನ್ನು ದಿನದಲ್ಲಿ ಮೂರು ಬಾರಿ ಮಾಡಲು ಹೇಳಲಾಯಿತು. ಈ ರೀತಿ 42 ದಿನ ಮಾಡಲಾಗಿ, ಆ ಮಹಿಳೆಯರ ಫಿಟ್‌ನೆಸ್‌ ಶೇ. 12 ಏರಿಕೆ ಆಗಿದೆ.

ಆದರೆ, ಇನ್ನು 10 ನಿಮಿಷ ಹೆಚ್ಚಿಗೆ ಸಮಯವನ್ನು ವ್ಯಾಯಾಮಕ್ಕೆ ವ್ಯಯಿಸಬೇಕಾಗಬಹುದು. ಜೊತೆಗೆ ಇದು ವಿರಾಮ ತೆಗೆದುಕೊಳ್ಳದೆ ಮಾಡುವಂತಿರಬೇಕು. ಆದರೆ, ಹೀಗೆ ವ್ಯಾಯಾಮ ಮಾಡುವುದು ಹೆಚ್ಚು ಬ್ಯುಸಿ ಇರುವವರಿಗೆ ಸಾಧ್ಯವಾಗದೇ ಇರಬಹುದು.‘ಈ ರೀತಿಯ ವ್ಯಾಯಾಮವು ನಮ್ಮ ಎಲ್ಲಾ ದೈಹಿಕ ಚಟುವಟಿಕೆಗಳಿಗೆ ಸಮ ಎಂದು ನಾವು ಹೇಳುವುದಿಲ್ಲ. ಆದರೆ, ವ್ಯಾಯಾಮಕ್ಕಾಗಿ ಸಮಯ ಇಲ್ಲ ಎನ್ನುವವರಿಗೆ ಇದೊಂದು ಮಾರ್ಗವಾಗಬಲ್ಲದು’ ಎನ್ನುತ್ತಾರೆ ವ್ಯಾಯಾಮ ವಿಜ್ಞಾನಿ ಗಿಬಾಲ.

(ಮೂಲ: ನ್ಯೂಯಾರ್ಕ್‌ ಟೈಮ್ಸ್‌. ಅನುವಾದ: ಸುಕೃತಾ ಎಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.