ADVERTISEMENT

ಬೆಟ್ಟದಲ್ಲಿ ‘ಫಿಟ್‌ನೆಸ್‌’ ಧ್ಯಾನ!

ಸಿದ್ದು ಆರ್.ಜಿ.ಹಳ್ಳಿ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST
ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಸಾರ್ವಜನಿಕರಿಗೆ ವ್ಯಾಯಾಮ ಮಾಡಿಸುತ್ತಿರುವ ಮಲ್ಲಿಕಾರ್ಜುನ ಮಲ್ಹಾರಿ
ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಸಾರ್ವಜನಿಕರಿಗೆ ವ್ಯಾಯಾಮ ಮಾಡಿಸುತ್ತಿರುವ ಮಲ್ಲಿಕಾರ್ಜುನ ಮಲ್ಹಾರಿ   

ಮುಂಜಾನೆ ಐದು ಗಂಟೆಗೆ ಎದ್ದು, ಮಬ್ಬುಗತ್ತಲೆಯ ಚುಮು ಚುಮು ಚಳಿಯಲ್ಲಿ ಮೆಟ್ಟಿಲುಗಳನ್ನು ಹತ್ತುತ್ತಾ, ದಿಬ್ಬದ ರಸ್ತೆಯಲ್ಲಿ ಏದುಸಿರು ಬಿಡುತ್ತಾ, ಶುದ್ಧ ಗಾಳಿಯನ್ನು ಉಸಿರಾಡುತ್ತಾ, ಬೆಟ್ಟದ ತುದಿಯನ್ನು ತಲುಪಿದ ಜನರು ‘ಫಿಟ್‌ನೆಸ್‌’ ಧ್ಯಾನದಲ್ಲಿ ತೊಡಗುತ್ತಾರೆ!

ಇಂಥದ್ದೊಂದು ದೃಶ್ಯ ಕಂಡುಬರುವುದು, ಹುಬ್ಬಳ್ಳಿ ನಗರದ ಸೆರಗಿನಂತಿರುವ ನೃಪತುಂಗ ಬೆಟ್ಟದಲ್ಲಿ. ಹೌದು, ಹಸಿರು ಗಿಡ ಮರಗಳಿಂದ ಕಂಗೊಳಿಸುವ ಈ ಬೆಟ್ಟ, ವಾಯುವಿಹಾರಿಗಳ ಉಸಿರಾಗಿದೆ. ಬೆಟ್ಟದ ಬುಡದಿಂದ ತುದಿಯವರೆಗೂ ಇರುವ ಡಾಂಬರು ರಸ್ತೆಯಲ್ಲಿ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌, ಸ್ಕೇಟಿಂಗ್‌ ಮುಂತಾದ ಚಟುವಟಿಕೆಗಳಲ್ಲಿ ಜನರು ತೊಡಗಿರುತ್ತಾರೆ. ಬೆಟ್ಟದ ಮೇಲ್ಭಾಗವಿರುವ ಎರಡು ಧ್ಯಾನ ಮಂದಿರಗಳಲ್ಲಿ ಯೋಗಾಸನ ಮಾಡುತ್ತಾ, ಧ್ಯಾನದಲ್ಲಿ ತೊಡಗುತ್ತಾರೆ. ದಕ್ಷಿಣದಿಂದ ಉತ್ತರ ದಿಕ್ಕಿನ ಅಂಚಿನವರೆಗೂ ಇರುವ ‘ವಾಕಿಂಗ್‌ ಪಾತ್‌’ನಲ್ಲಿ ವಾಯು ವಿಹಾರಿಗಳು ಹೆಜ್ಜೆ ಹಾಕುತ್ತಾರೆ. ಬೆಟ್ಟಕ್ಕೆ ಬೆಳಿಗ್ಗೆ 9ರಿಂದ ರಾತ್ರಿ 8.30ರ ವೇಳೆಯಲ್ಲಿ ಬರುವವರಿಗೆ ಪ್ರವೇಶ ಶುಲ್ಕವಿದೆ. ಆದರೆ, ವಾಯುವಿಹಾರಿಗಳಿಗಾಗಿ ಬೆಳಿಗ್ಗೆ 5ರಿಂದ ಬೆಳಿಗ್ಗೆ 8.30ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಬೆಟ್ಟದ ಕೇಂದ್ರಬಿಂದುವಿನಂತಿರುವ ವೀಕ್ಷಣಾ ಗೋಪುರವನ್ನು ಏರಿದರೆ, ಹುಬ್ಬಳ್ಳಿ ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಉಣಕಲ್‌ ಕೆರೆ, ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರಿಕೆಟ್‌ ಮೈದಾನ, ವಿಮಾನ ನಿಲ್ದಾಣ, ಬೆಟ್ಟದ ಬಳಿ ಧಾರವಾಡದತ್ತ ಹಾದು ಹೋಗುವ ರೈಲುಗಳು, ವೆಂಕಟೇಶ್ವರ ದೇವಸ್ಥಾನ, ಕೃಷಿ ಜಮೀನುಗಳ ಸುಂದರ ದೃಶ್ಯಗಳು ವಾಯು ವಿಹಾರಕ್ಕೆ ಉತ್ತೇಜನ ನೀಡುತ್ತವೆ. ಹಿರಿಯ ನಾಗರಿಕರು ಅಲ್ಲಲ್ಲಿ ಹಾಕಿರುವ ಬೆಂಚ್‌ಗಳಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಾರೆ. ಕೆಲವರು ಮುದ್ರಾಸನ, ಪ್ರಾಣಾಯಾಮದಲ್ಲಿ ತೊಡಗುತ್ತಾರೆ. ಮಕ್ಕಳ ಉದ್ಯಾನದಲ್ಲಿ ಚಿಣ್ಣರು ಜಾರುಬಂಡಿ, ಉಯ್ಯಾಲೆಗಳಲ್ಲಿ ಜೀಕುತ್ತಾರೆ. ಕೆಲವು ಆಟಿಕೆಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸಬೇಕು ಎಂಬುದು ಪೋಷಕರ ಒತ್ತಾಯ.

ADVERTISEMENT

ಬೆಟ್ಟದಲ್ಲೊಬ್ಬ ಫಿಟ್‌ನೆಸ್‌ ಗುರು!

ಬೆಟ್ಟಕ್ಕೆ ಬರುವ ಜನರಿಗೆ ಉಚಿತವಾಗಿ ಯೋಗ, ಧ್ಯಾನ, ಮುದ್ರಾಸನಗಳನ್ನು ಒಂಬತ್ತು ವರ್ಷಗಳಿಂದ ನಿರಂತರವಾಗಿ ಹೇಳಿಕೊಡುತ್ತಿದ್ದಾರೆ 67 ವರ್ಷದ ಮಲ್ಲಿಕಾರ್ಜುನ ಮಹದೇವಪ್ಪ ಮಲ್ಹಾರಿ.

ನಿವೃತ್ತ ಮುಖ್ಯ ಗ್ರಂಥಾಲಯಾಧಿಕಾರಿಯಾಗಿರುವ ಇವರು, ಅತ್ಯುತ್ತಮ ಕ್ರೀಡಾಪಟುವೂ ಹೌದು. ರಾಜ್ಯ ಮಟ್ಟದ ಸೀನಿಯರ್‌ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಹಲವಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2006ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸೀನಿಯರ್‌ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 1,500 ಮೀಟರ್‌ ಮತ್ತು 5 ಕಿ.ಮೀ. ರನ್ನಿಂಗ್‌ನಲ್ಲಿ ಚಿನ್ನದ ಪದಕ ಹಾಗೂ 5 ಕಿ.ಮೀ. ವಾಕಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿರುವ ಸಾಯಿನಗರದಿಂದ ಕಾಲುಹಾದಿಯ ಮೂಲಕ ಗುಡ್ಡವನ್ನು ಏರುತ್ತಾರೆ. ಬೆಳಿಗ್ಗೆ 6 ಗಂಟೆಯಿಂದ 8.30ರವರೆಗೆ ಆಸಕ್ತರಿಗೆ ಯೋಗಾಸನ ಹೇಳಿಕೊಡುತ್ತಾರೆ. ಬಲಾಢ್ಯರ ವಿರುದ್ಧ ಕುಸ್ತಿ ಮಾಡುತ್ತಾ ಇಳಿವಯಸ್ಸಿನಲ್ಲೂ ತಮ್ಮ ತೋಳ್ಬಲ ಪ್ರದರ್ಶಿಸುತ್ತಾರೆ. ಕೀಲು ನೋವು, ಬೆನ್ನು ನೋವು ಎಂದು ಬಳಲುವವರಿಗೆ ‘ಮಸಾಜ್‌’ ಮಾಡಿ ಬೆನ್ನು ತಟ್ಟಿ ಕಳುಹಿಸುತ್ತಾರೆ.

‘ಅಪ್ಪಟ ಸಸ್ಯಾಹಾರಿಯಾಗಿರುವ ನಾನು ನಿತ್ಯ ಜೋಳದ ರೊಟ್ಟಿ, ಚಪಾತಿ, ಹಸಿರು ತರಕಾರಿ, ಸೊಪ್ಪು, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸುತ್ತೇನೆ. ಮುಂಗಾರು ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತೇನೆ. ನಿತ್ಯ ನಾಲ್ಕೈದು ಕಿ.ಮೀ. ನಡೆಯುತ್ತೇನೆ. ನನಗೆ ದುರಭ್ಯಾಸಗಳಿಲ್ಲ. ಹಾಗಾಗಿ ಆರೋಗ್ಯವಾಗಿದ್ದೇನೆ. ನನಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಯಾವ ಸಮಸ್ಯೆಯೂ ಇಲ್ಲ. ಯೋಗಪಟುವಾಗಿರುವ ನಾನು, ನನಗೆ ತಿಳಿದದ್ದನ್ನು ನಾಲ್ಕು ಜನರಿಗೆ ಹೇಳಿಕೊಡುತ್ತೇನೆ. ‘ಯೋಗ ತರಗತಿ ನಡೆಸಿಕೊಡಿ, ನಾವು ಹಣ ನೀಡುತ್ತೇವೆ’ ಎಂದು ಎಷ್ಟೋ ಜನರು ಕರೆದಿದ್ದಾರೆ. ಆದರೆ, ಬೆಟ್ಟಕ್ಕೆ ಬರುವ ಜನರಿಗೆ ಉಚಿತವಾಗಿ ಹೇಳಿಕೊಡುವುದರಲ್ಲೇ ಸಂತೃಪ್ತಿ ಇದೆ’ ಎಂದು ಮನದಾಳದ ಮಾತುಗಳನ್ನು ಮಲ್ಹಾರಿ ಅವರು ಹಂಚಿಕೊಂಡರು.

ನೈಸರ್ಗಿಕ ಟ್ರೆಡ್‌ಮಿಲ್‌!

‘ವಿಶ್ವೇಶ್ವರನಗರದಿಂದ ನೃಪತುಂಗ ಬೆಟ್ಟಕ್ಕೆ ಹೋಗಿ ಬಂದರೆ, ಒಟ್ಟು 5 ಕಿ.ಮೀ. ವಾಕ್ ಮಾಡಿದಂತಾಗುತ್ತದೆ. ಹಾಗಾಗಿ ಬೆಟ್ಟ ನನಗೆ ‘ನೈಸರ್ಗಿಕ ಥ್ರೆಡ್‌ಮಿಲ್‌’ ಇದ್ದಂತೆ. ಮೂವರು ವೈದ್ಯರು ಹಾಗೂ ಇತರ ವೃತ್ತಿಯ ನಾಲ್ವರು ಸೇರಿ ‘ನೃಪತುಂಗ ವಾಕರ್ಸ್‌’ ಟೀಮ್‌ ಮಾಡಿಕೊಂಡಿದ್ದೇವೆ. ಪ್ರತಿದಿನ ಒಂದೊಂದು ಬಣ್ಣದ ಟೀಶರ್ಟ್‌ ಧರಿಸಿ ವಾಕಿಂಗ್‌ಗೆ ಹೋಗುತ್ತೇವೆ. ಇಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಇರುವುದರಿಂದ ಶುದ್ಧ ಗಾಳಿ ದೊರೆಯುತ್ತದೆ. ನಿಸರ್ಗದ ಮಡಿಲಿನಲ್ಲಿ ಓಡಾಡುತ್ತಾ, ಗೆಳೆಯರೊಂದಿಗೆ ನಕ್ಕು ನಲಿಯುವುದರಿಂದ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಹಾಗಾಗಿ ಯಾವುದೇ ಜಿಮ್‌ಗಳಿಗೆ ಹೋಗದೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಖ್ಯಾತ ಚರ್ಮರೋಗ ತಜ್ಞ ಡಾ.ರಾಘವೇಂದ್ರ ತೋಫಖಾನೆ.

ಚಿತ್ರಗಳು: ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.