ADVERTISEMENT

ಹಗ್ಗ ಎಳಿ, ಟೈರ್‌ ಎತ್ತು

ಬದಲಾಗುತ್ತಿದೆ ಜಿಮ್‌ ಪರಿಕಲ್ಪನೆ

ರಮೇಶ ಕೆ
Published 31 ಮಾರ್ಚ್ 2019, 19:45 IST
Last Updated 31 ಮಾರ್ಚ್ 2019, 19:45 IST
ಮಲ್ಟಿ ಫಿಟ್‌ ಸ್ಟುಡಿಯೊ ನೋಟ
ಮಲ್ಟಿ ಫಿಟ್‌ ಸ್ಟುಡಿಯೊ ನೋಟ   

ಎರಡೂ ಕೈಗಳಿಂದ ಟ್ರಾಕ್ಟರ್‌ನ ದೊಡ್ಡ ಟೈರ್‌ಅನ್ನು ಎತ್ತಿಹಾಕುತ್ತಿದ್ದ ಆ ವ್ಯಕ್ತಿ, ನಂತರ ಸುತ್ತಿಗೆಯಿಂದ ಜೋರಾಗಿ ಹೊಡೆಯುತ್ತಿದ್ದ. ಮತ್ತೊಬ್ಬ ರಥ ಎಳೆಯಲು ಕಟ್ಟುವಂಥ ಹಗ್ಗವನ್ನು ಹಿಡಿದು ಮೇಲೆ ಕೆಳಗೆ ಆಡಿಸುತ್ತಿದ್ದ. ಇನ್ನೊಬ್ಬ ಮೇಲೆ ಕಟ್ಟಿದ್ದ ರಿಂಗ್‌ಗಳನ್ನು ಹಿಡಿದು ಮುಂದಿನ ರಿಂಗ್‌ಗಳನ್ನು ಹಿಡಿಯಲು ಪ್ರಯತ್ನ ಪಡುತ್ತಿದ್ದ...

ಇದು ಯಾವುದೋ ವರ್ಕ್‌ಶಾಪ್‌ ಅಥವಾ ಗ್ಯಾರೇಜ್‌ನಲ್ಲಿ ಕಂಡ ದೃಶ್ಯವಲ್ಲ... ಮೈಸೂರಿನ ಜಯಲಕ್ಷ್ಮೀಪುರಂನ ಬಿಎಂ ಆರ್ಬಿಟ್‌ ಮಾಲ್‌ನ ‘ಮಲ್ಟಿಫಿಟ್‌’ ಫಿಟ್‌ನೆಸ್‌ ಸ್ಟೂಡಿಯೊದಲ್ಲಿ ಕಂಡು ಬಂದದ್ದು.

ಫಿಟ್‌ನೆಸ್‌ ಸೆಂಟರ್‌ಗಳಲ್ಲಿ ಈಗ ಟ್ರೆಡ್‌ಮಿಲ್‌, ಸೈಕ್ಲಿಂಗ್‌, ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೇ ಹೊಸದಾಗಿ ಅನೇಕ ವ್ಯಾಯಾಮಗಳು ಸೇರ್ಪಡೆಗೊಳ್ಳುತ್ತಿವೆ. ಸೈನಿಕರು ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮಾಡುವ ಕಸರತ್ತನ್ನು ಫಿಟ್‌ನೆಸ್‌ ಕೇಂದ್ರಗಳಲ್ಲಿ ಪಡೆಯುತ್ತಿದ್ದಾರೆ. ದೇಹದ ತೂಕವನ್ನು ಇಳಿಸಲು ಹಾಗೂ ಹೆಚ್ಚಿಸಿಕೊಳ್ಳಲೂ ಇಂಥ ಫಿಟ್‌ನೆಸ್‌ ಸ್ಟೂಡಿಯೊ ಮೊರೆ ಹೋಗುತ್ತಿರುವುದು ವಿಶೇಷ.

ADVERTISEMENT

ಬ್ಯಾಟಲ್‌ ರೋಪ್‌, ಟೈರ್‌ ವರ್ಕೌಟ್‌, ಟಬಾಟ ವರ್ಕೌಟ್‌ (ಸೊಂಟದ ಮೇಲ್ಭಾಗಕ್ಕೆ ವ್ಯಾಯಾಮ), ಮಲ್ಟಿ ಮೂವ್‌ (ಬ್ರೆಜಿಲಿಯನ್‌ ಕಲೆ), ಫಂಕ್ಷನಲ್‌ ಟ್ರೈನಿಂಗ್‌, ಜಂಗಲ್‌ ಜಿಮ್‌... ಹೀಗೆ ವಿಭಿನ್ನ ಕಸರತ್ತುಗಳಿವೆ.

‘ಬ್ಯಾಟಲ್‌ ರೋಪ್‌’ ಅಂದರೆ ಹಗ್ಗದ ವ್ಯಾಯಾಮ. ದೇಹದ ಅಷ್ಟೂ ಸ್ನಾಯುಗಳಿಗೆ ವ್ಯಾಯಾಮ ಆಗಬೇಕೆಂದರೆ 20 ನಿಮಿಷ ಕಸರತ್ತು ಮಾಡಬೇಕು. ಸುಮಾರು 15 ಮೀಟರ್‌ ಉದ್ದದ ಹಗ್ಗಗಳನ್ನು ಎರಡೂ ಕೈಗಳಲ್ಲಿ ಹಿಡಿದು ಸಮುದ್ರದ ಅಲೆಗಳಂತೆ ಮೇಲೆ ಕೆಳಗೆ ಆಡಿಸಬೇಕು. ಕರಾಟೆಪಟುಗಳು, ಕ್ರಿಕೆಟಿಗರು ಹಾಗೂ ಅಥ್ಲೆಟ್‌ಗಳು ಹೆಚ್ಚಾಗಿ ಈ ವರ್ಕೌಟ್‌ ಮಾಡುತ್ತಾರೆ. ಇಂಥ ವ್ಯಾಯಾಮವೂ ಸಾಮಾನ್ಯರನ್ನು ಆಕರ್ಷಿಸುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಟೆರೇಷಿಯನ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಂತೋಣಿ ಮೋಸೆಸ್‌.

ಟೈರ್‌ ವರ್ಕೌಟ್‌; ಇದು ಟ್ರಾಕ್ಟರ್‌ ಇಂಜಿನ್ನಿನ ದೊಡ್ಡ ಟೈರ್‌ಅನ್ನು ಒಂದು ಮಗ್ಗುಲಿನಿಂದ ಮತ್ತೊಂದು ಮಗ್ಗುಲಿಗೆ ಬೀಳಿಸುವ ಕಸರತ್ತು. ಶೋಲ್ಡರ್‌ ಸ್ಟ್ರೆಂತ್‌ಗೆ ಇದು ಸಹಕಾರಿ. ಬೆನ್ನಿನ ಕೆಳಭಾಗಕ್ಕೂ ಉತ್ತಮ ವ್ಯಾಯಾಮವಾಗುತ್ತದೆ.

ಟೈರ್‌ಗೆ 10, 15, 20 ಕೆ.ಜಿ. ತೂಕದ ಸುತ್ತಿಗೆಯಿಂದ ಹೊಡೆದು ಶೋಲ್ಡರ್‌ಗೆ ವರ್ಕೌಟ್‌ ಮಾಡುತ್ತಾರೆ.

ಜಂಗಲ್‌ ಜಿಮ್‌: ಸೈನಿಕರು ಮಾಡುವ ವರ್ಕೌಟ್‌ ಇದು. ಎಂಟರಿಂದ ಒಂಬತ್ತು ಅಡಿ ಎತ್ತರದಲ್ಲಿ ಸಾಲಾಗಿ ಕಟ್ಟಿದ ರಿಂಗ್‌ಗಳು ಮತ್ತು ಹಗ್ಗ‌ಗಳನ್ನು ಜಿಗಿದು ಹಿಡಿಯುವ ಕಸರತ್ತು. ಸಾಮಾನ್ಯ ಜನರೂ ಈ ವ್ಯಾಯಾಮದ ಮೊರೆ ಹೋಗುತ್ತಿರುವುದು ಫಿಟ್‌ನೆಸ್‌ ಮಹತ್ವವನ್ನು ಸಾರುತ್ತದೆ.

‘ನಮ್ಮದು ಫಂಕ್ಷನಲ್‌ ಫಿಟ್‌ನೆಸ್‌ ಸ್ಟೂಡಿಯೊ. ಇಲ್ಲಿ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ನೀಡುವ ಹೈ ಇಂಟೆನ್ಸಿಟಿ ಇಂಟರ್‌ವಲ್‌ ಟ್ರೈನಿಂಗ್‌ (ಎಚ್‌ಐಐಟಿ) ಹೇಳಿಕೊಡಲಾಗುತ್ತದೆ. ಅದೇ ವಿಧಾನವನ್ನು ಸಾಮಾನ್ಯ ಜನರಿಗೂ ಸಾಧ್ಯವಾಗುವಂತೆ ಬದಲಾವಣೆ ಮಾಡಿ ಕೆಲವು ವರ್ಕೌಟ್‌ಗಳನ್ನು ಮಾಡಿಸುತ್ತೇವೆ. ನಮ್ಮಲ್ಲಿ ಐರನ್‌ಮ್ಯಾನ್‌ಗಳು, ಅಥ್ಲಿಟ್‌ಗಳು ತರಬೇತಿ ನೀಡುತ್ತಾರೆ. ಹೆಚ್ಚಾಗಿ ಗ್ರೂಪ್ ವರ್ಕೌಟ್‌ ಮಾಡಿಸುತ್ತೇವೆ. ದಿನಕ್ಕೆ ಒಂದು ಗಂಟೆ ತರಬೇತಿ ನೀಡಲಾಗುತ್ತದೆ. ಪ್ರತಿದಿನವೂ ಒಂದೊಂದು ವರ್ಕೌಟ್‌ ಇರುತ್ತದೆ. ವರ್ಷದ ಕೋರ್ಸ್‌ ಸಹಾ ಇದೆ’ ಎಂದು ಮಾಹಿತಿ ನೀಡುತ್ತಾರೆ ಮಲ್ಟಿಫಿಟ್‌ ಫಿಟ್‌ನೆಸ್‌ ಸ್ಟೂಡಿಯೊ ವ್ಯವಸ್ಥಾಪಕ ರಾಜೀವ್‌.

ಫಿಟ್‌ನೆಸ್‌ ಸೆಂಟರ್‌ನಲ್ಲಿ ಕಸರತ್ತು ಮಾಡಿಸುವುದು ಮಾತ್ರವಲ್ಲದೇ ಹೊರಾಂಗಣ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಚಾಮುಂಡಿ ಬೆಟ್ಟ ಹತ್ತಿಸುವುದು, ಕುಕ್ಕರಹಳ್ಳಿ ಕೆರೆ ಸುತ್ತ ಹಾಗೂ ರಂಗನತಿಟ್ಟಿನಲ್ಲಿ ಓಟದ ಸ್ಪರ್ಧೆ... ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತಾರೆ.

ಬೆಂಗಳೂರು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ನಂಜನಗೂಡು ಭಾಗಗಳಿಂದ ಇಲ್ಲಿಗೆ ಬಂದು ವರ್ಕೌಟ್‌ ಮಾಡುವವರಿದ್ದಾರೆ.

‘ತೂಕ ಹೆಚ್ಚಿಸಿಕೊಳ್ಳಲು ಫಿಟ್‌ನೆಸ್‌ ಸೆಂಟರ್‌ಗೆ ಬಂದಿದ್ದೇನೆ. ದಿನಕ್ಕೆ 16 ಮೊಟ್ಟೆ, 300 ಗ್ರಾಂ ಚಿಕನ್‌, ಬ್ರೆಡ್‌ ಪೀನಟ್‌ ಬಟರ್‌ ತಿನ್ನುತ್ತೇನೆ. ಇಲ್ಲಿಗೆ ಬಂದಾಗ 65 ಕೆ.ಜಿ. ಇದ್ದೆ ಈಗ 76 ಕೆ.ಜಿ. ಆಗಿದ್ದೇನೆ’ ಎಂದರು ಉದ್ಯಮಿ ಪವನ್‌.

ಸರಳ ಡಯೆಟ್
ಇಲ್ಲಿ ದೇಹ ದಂಡಿಸಲು ಬರುವವರಿಗೆ ಕೃತಕ ಆಹಾರ (ಪ್ರೋಟೀನ್‌ ಶೇಕ್‌, ಇಂಜಕ್ಷನ್‌) ತಿನ್ನಲು ಹೇಳುವುದಿಲ್ಲ, ಬದಲಿಗೆ ಸೊಪ್ಪು, ಪನ್ನಿರ್‌, ತರಕಾರಿ ಹಾಗೂ ಹಣ್ಣು, ಮಾಂಸಾಹಾರಿಗಳಿಗೆ ಚಿಕನ್‌ ತಿನ್ನುವಂತೆ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.