ADVERTISEMENT

ಮಹಿಳೆಯರಲ್ಲಿ ಫಂಗಸ್‌ ಸೋಂಕು: ಸ್ವಚ್ಛತೆಗೆ ಗಮನವಿರಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 19:30 IST
Last Updated 12 ಜುಲೈ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಳೆ ಬಂದರೆ ಇಳೆಯೇನೋ ತಂಪಾಗುತ್ತದೆ, ಆದರೆ ಈ ತಣ್ಣನೆಯ ಹವಾಮಾನ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಹೊತ್ತು ತರುತ್ತದೆ. ಅದರಲ್ಲೂ ತೇವಾಂಶ ಹೆಚ್ಚಿರುವ ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವ ಕಾರಣಕ್ಕೆ ದೇಹದಲ್ಲೂ ಶಿಲೀಂಧ್ರ, ಬ್ಯಾಕ್ಟೀರಿಯ ಹಾಗೂ ಯೀಸ್ಟ್‌ ಮೊದಲಾದವುಗಳ ಬೆಳವಣಿಗೆ ಜಾಸ್ತಿ. ಜನನಾಂಗವನ್ನು ಶುಚಿಯಾಗಿ ಹಾಗೂ ತೇವಾಂಶವಿಲ್ಲದಂತೆ ಇಟ್ಟುಕೊಳ್ಳದಿದ್ದರೆ, ಒದ್ದೆಯಿರುವ ಮತ್ತು ಬಿಗಿಯಾಗಿರುವ ಒಳ ಉಡುಪು ಧರಿಸುವುದರಿಂದ ಇಂತಹ ಸಮಸ್ಯೆ ಅಧಿಕ.

ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ‘ವೆಜೈನಲ್‌ ಕ್ಯಾಂಡಿಡಯಾಸಿಸ್‌’. ಅಂದರೆ ಇದು ಯೀಸ್ಟ್‌ ಬೆಳವಣಿಗೆ ಹೆಚ್ಚಾಗುವ ಕಾರಣದಿಂದ ಉಂಟಾಗುವ ಶಿಲೀಂಧ್ರದ ಸೋಂಕು. ಅಧಿಕವಾಗುವ ಯೋನಿ ಸ್ರಾವ ಹಾಗೂ ಲೈಂಗಿಕ ಕ್ರಿಯೆಯಲ್ಲಿ ಉಂಟಾಗುವ ನೋವು ಈ ಸೋಂಕಿನ ಮುಖ್ಯ ಲಕ್ಷಣಗಳು.

ಹತ್ತಿಯ ಒಳ ಉಡುಪು ಧರಿಸಿ

ADVERTISEMENT

‘ವೆಜೈನಲ್‌ ಕ್ಯಾಂಡಿಡಯಾಸಿಸ್‌ ತೊಂದರೆಯು ತೇವಾಂಶ ಅಧಿಕವಿದ್ದರೆ ಬರುತ್ತದೆ. ಬಿಳಿ ಸ್ರಾವ ಜಾಸ್ತಿಯಾಗುತ್ತದೆ. ಇದನ್ನು ತಡೆಯಲು ಸ್ವಚ್ಛವಾದ ಹಾಗೂ ಒಣಗಿದ ಒಳ ಉಡುಪು ಧರಿಸಬೇಕು. ವೈದ್ಯರು ಈ ಸೋಂಕು ನಿವಾರಣೆಗೆ ಆ್ಯಂಟಿ ಫಂಗಲ್ ಕ್ರೀಂ ಲೇಪಿಸಲು, ಕೆಲವೊಮ್ಮೆ ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡಬಹುದು. ಸೋಂಕು ಇದ್ದವರು ತಮ್ಮ ಉಡುಪನ್ನು ಪ್ರತ್ಯೇಕವಾಗಿ ಒಗೆದುಕೊಳ್ಳುವುದು ಸೂಕ್ತ. ಒಣಗಿದ ನಂತರ ಇಸ್ತ್ರಿ ಮಾಡಿಕೊಳ್ಳಬೇಕು’ ಎನ್ನುವ ವೈದ್ಯೆ ಡಾ. ಉಮಾಮಹೇಶ್ವರಿ ಎನ್‌., ‘ಇದು ಲೈಂಗಿಕ ಕ್ರಿಯೆಯಿಂದ ಸಂಗಾತಿಗೂ ಹರಡುತ್ತದೆ. ಹೀಗಾಗಿ ಗಂಡ– ಹೆಂಡತಿ ಇಬ್ಬರಿಗೂ ಚಿಕಿತ್ಸೆ ನೀಡಬೇಕಾಗುತ್ತದೆ’ ಎನ್ನುತ್ತಾರೆ. ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ದೇಹದೊಳಗೂ ಸೋಂಕು ತಗುಲಬಹುದು ಎಂಬ ಎಚ್ಚರಿಕೆ ನೀಡುತ್ತಾರೆ.

ಈ ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

* ದಿನಕ್ಕೆ ಎರಡು ಸಲವಾದರೂ ಜನನಾಂಗವನ್ನು ನೀರಿನಿಂದ ಶುಚಿಗೊಳಿಸಿ.

* ಸಡಿಲವಾದ ಹತ್ತಿಯ ಒಳ ಉಡುಪು ಧರಿಸಿ. ಇದು ತೇವಾಂಶ ಹೀರಿಕೊಂಡು, ಗಾಳಿಯಾಡುವಂತೆ ಮಾಡುತ್ತದೆ.

* ಲೈಂಗಿಕ ಕ್ರಿಯೆ ನಂತರ ಯೋನಿಯನ್ನು ತೊಳೆದುಕೊಳ್ಳುವುದರಿಂದ ಬ್ಯಾಕ್ಟೀರಿಯಾ ಸೋಂಕಿನಿಂದ ಪಾರಾಗಬಹುದು.

* ಋತುಸ್ರಾವದ ಸಂದರ್ಭದಲ್ಲಿ ಶುಚಿತ್ವದ ಕಡೆ ಹೆಚ್ಚು ನಿಗಾ ವಹಿಸಿ. ನ್ಯಾಪ್‌ಕಿನ್‌ ಅನ್ನು 4–6 ಗಂಟೆಯೊಳಗೆ ಬದಲಾಯಿಸಿ.

* ಸೋಪ್‌ ಬಳಸಬೇಡಿ. ಇದು ಪಿಎಚ್‌ ಮಟ್ಟವನ್ನು ಹೆಚ್ಚಿಸುವುದಲ್ಲದೇ, ತುರಿಕೆ ಉಂಟು ಮಾಡಬಹುದು. ತಜ್ಞರ ಸಲಹೆ ಮೇರೆಗೆ ಇತರ ಕ್ಲೀನಿಂಗ್‌ ಲೋಷನ್‌ ಬಳಸಿ.

* ಜನನಾಂಗದ ದುರ್ವಾಸನೆ ತೊಲಗಿಸಲು ಯಾವುದೇ ತರಹದ ರಾಸಾಯನಿಕದಿಂದ ತೊಳೆದುಕೊಳ್ಳುವುದು (ಡ್ಯೂಷಿಂಗ್‌) ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.