ADVERTISEMENT

ಅತಿಬಾಯಾರಿಕೆಯೆ? ಹೆದರಬೇಡಿ!

ಡಾ.ಪಲ್ಲವಿ ಹೆಗಡೆ
Published 16 ಅಕ್ಟೋಬರ್ 2023, 23:50 IST
Last Updated 16 ಅಕ್ಟೋಬರ್ 2023, 23:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

-ಚಿತ್ರ: ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ಬಾಯಾರಿಕೆ - ದೇಹದ ಸಹಜಕ್ರಿಯೆ; ಚಯಾಪಚಯಕ್ರಿಯೆಗಳು ನಡೆಯುವಾಗ ದ್ರವಾಂಶವು ಅಗತ್ಯ. ಆಯಾ ವ್ಯಕ್ತಿಯ ಹತ್ತು ಬೊಗಸೆಯಷ್ಟು ದ್ರವಾಂಶವು ಶರೀರದಲ್ಲಿರುತ್ತದೆ. ಬಾಯಾರಿಕೆಯು, ದ್ರವಾಂಶವು ಕಡಿಮೆಯಾಗಿ, ಶರೀರಕ್ಕೆ ಅಗತ್ಯವಿರುವಾಗ ಅನುಭವಕ್ಕೆ ಬರುವ ಸೂಚನೆ. ಹಸಿವೆಯಾಗುವುದು ಶರೀರಕ್ಕೆ ಘನಾಹಾರದ ಅಗತ್ಯವಿದೆ ಎಂದು ಸೂಚಿಸುತ್ತದೆ. ಹಸಿವು ಮತ್ತು ಬಾಯಾರಿಕೆ ಒಟ್ಟೊಟ್ಟಿಗೆ ಆಗುವುದು ಸ್ವಾಸ್ಥ್ಯ ಲಕ್ಷಣ. ಆಹಾರವನ್ನು ತಿನ್ನುತ್ತಾ, ನೀರು ಅಥವಾ ಇತರ ದ್ರವಾಹಾರಗಳನ್ನು ಕುಡಿಯುವುದು ದೇಹದ ಅವಶ್ಯಕತೆಯನ್ನು ಸರಿದೂಗಿಸುತ್ತದೆ. ಒಂದೇ ವ್ಯಕ್ತಿಯಲ್ಲಿ ವಾತಾವರಣ, ಶಾರೀರಕ ಚಟುವಟಿಕೆ, ಆಹಾರಕ್ಕೆ ಅನುಗುಣವಾಗಿ ಬಾಯಾರಿಕೆಯೂ ವ್ಯತ್ಯಾಸವಾಗುತ್ತದೆ. ಹೆಚ್ಚು ಬೆವರುವ, ಉಷ್ಣಮೈಯುಳ್ಳ ಪಿತ್ತಪ್ರಕೃತಿಯ ವ್ಯಕ್ತಿಗಳಿಗೆ ಬಾಯಾರಿಕೆ ಹೆಚ್ಚು, ಇವರಿಗೆ ದ್ರವಾಹಾರದ ಅಗತ್ಯವೂ ಹೆಚ್ಚು.

ADVERTISEMENT

ನೀರು, ಬಾಯಾರಿಕೆಯನ್ನು ನಿವಾರಿಸುವ ಅತ್ಯುತ್ತಮ ದ್ರವಾಹಾರ. ಬಾಯಾರಿಕೆಯಾದಾಗಲೂ ನೀರು ಅಥವಾ ಯಾವುದೇ ದ್ರವಾಹಾರವನ್ನು ಸೇವಿಸದೆ ಇದ್ದರೆ ಹಲವು ತೊಂದರೆಗಳಾಗಬಹುದು. ಯಾವಾಗಲೂ ಬಾಯಾರಿಕೆಯನ್ನು ನಿವಾರಿಸಿಕೊಳ್ಳದೆ ಹಾಗೆಯೇ ಇದ್ದರೆ ಗಂಟಲು-ಬಾಯಿ ಒಣಗುವುದು, ಕಿವಿಮಂದವಾಗುವುದು, ಆಯಾಸಗೊಳ್ಳುವುದು, ಸೋತುಬರುವುದು, ಎದೆಯು ಹಿಡಿದಂತೆ, ಹಿಂಡಿದಂತಾಗುವುದು. ಆದ್ದರಿಂದ ಬಾಯಾರಿಕೆಯನ್ನು ಸಕಾಲದಲ್ಲಿ ತಣಿಸಿಕೊಳ್ಳಬೇಕು.

ಅತಿಯಾದ ಬಾಯಾರಿಕೆಗೆ ಕಾರಣಗಳು


ನೀರು ಅಥವಾ ಯಾವುದೇ ದ್ರವವನ್ನು ಕುಡಿದಷ್ಟೂ ಬಾಯಾರಿಕೆಯಾಗುವುದು, ಇನ್ನೂ ಮತ್ತಷ್ಟು ನೀರು ಬೇಕೆನಿಸುವುದು, ಗಂಟಲು-ಬಾಯಿ-ತುಟಿ ಒಣಗಿಕೊಂಡೇ ಇರುವುದು ಅತಿಯಾದ ಬಾಯಾರಿಕೆ ಅಥವಾ ‘ತೃಷ್ಣಾರೋಗ’ದ ಲಕ್ಷಣ. ಇದು ಮತ್ತೊಂದು ರೋಗದ ಲಕ್ಷಣವೂ ಆಗಿರಬಹುದು. ಉದಾಹರಣೆಗೆ ಜ್ವರ, ರಕ್ತಪಿತ್ತ, ಶ್ವಾಸರೋಗ, ಕೆಮ್ಮು, ಜಲೋದರ, ಪ್ರಮೇಹ, ಸ್ಥೌಲ್ಯ ಅಥವಾ ಪಿತ್ತದೋಷದ ವೃದ್ಧಿಯಿಂದ ಅತಿಯಾದ ಬಾಯಾರಿಕೆಯಾಗಬಹುದು. ಕೆಲವು ಸಾಮಾನ್ಯ ಕಾರಣಗಳು ಹೀಗಿವೆ

• ಶಾರೀರಿಕ-ಮಾನಸಿಕ ಆಘಾತ, ಭಯ, ಶಾರೀರಿಕಶ್ರಮ, ದುಃಖ, ಸಿಟ್ಟು ಮೊದಲಾದ ಸ್ಥಿತಿಗಳಲ್ಲಿ.
• ಸಂಪೂರ್ಣವಾಗಿ ಆಹಾರವನ್ನು ತ್ಯಜಿಸಿ ಉಪವಾಸದಲ್ಲಿ ತೊಡಗಿಕೊಳ್ಳುವುದು.
• ಮದ್ಯಸೇವನೆಯ ವ್ಯಸನದಿಂದ.
• ಕ್ಷಾರ/ಉಪ್ಪು, ಹುಳಿ, ಖಾರ, ಉಷ್ಣ ಆಹಾರಗಳ ಸೇವನೆ, ಜಿಡ್ಡುರಹಿತ, ಒಣಕಲು ಆಹಾರಸೇವನೆ.
• ಬಹುಕಾಲದಿಂದ ಯಾವುದೋ ಕಾಯಿಲೆಗೆ ತುತ್ತಾಗಿ ದೇಹವು ಸೊರಗಿದ್ದಾಗ.
• ವಮನ, ವಿರೇಚನ ಮೊದಲಾದ ಆಯುರ್ವೇದದ ಶೋಧನಚಿಕಿತ್ಸೆಯು ತಪ್ಪಾದಾಗ, ಅತಿಯಾದಾಗ.
• ಸದಾ ಬಿಸಿಲಿನಲ್ಲಿ ಬಳಲುವಿಕೆ.
• ದೇಹದಲ್ಲಿ ಪಿತ್ತ-ವಾತದೋಷಗಳು ಹೆಚ್ಚಿ, ತಂಪಿನಂಶವನ್ನು ಕಡಿಮೆಮಾಡಿ, ನಾಲಿಗೆ, ಗಂಟಲು, ಬಾಯಿ, ತುಟಿ, ಶ್ವಾಸಕೋಶಗಳನ್ನು ಒಣಗಿಸಿ ಅತಿಯಾದ ಬಾಯಾರಿಕೆಯನ್ನು ಉಂಟುಮಾಡುತ್ತವೆ.

ಪರಿಹಾರಗಳು


• ಶುದ್ಧವಾದ ಮಳೆಯ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದು.
• ಕಾಯಿಸಿ ಆರಿಸಿದ ನೀರಿನಲ್ಲಿ ಕಲ್ಲುಸಕ್ಕರೆಯನ್ನು ಬೆರೆಸಿ ಕುಡಿಯುವುದು.
• ಬೆಲ್ಲವನ್ನು ತಿಂದು ತಣ್ಣೀರನ್ನು ಕುಡಿಯುವುದು.
• ಕಬ್ಬಿನ ರಸವನ್ನು ಕುಡಿಯುವುದು.
• ದ್ರಾಕ್ಷಿಯಿಂದ ಮಾಡಿದ ಮದ್ಯವನ್ನು ಸೇವಿಸುವುದು.
• ಭತ್ತದ ಅರಳಿನ ಪುಡಿ, ಕಲ್ಲುಸಕ್ಕರೆ, ಜೇನುತುಪ್ಪವನ್ನು ತಣ್ಣೀರಿನಲ್ಲಿ ಬೆರೆಸಿ ಕುಡಿಯುವುದು.
• ಜವೆಗೋಧಿಯನ್ನು ಬೇಯಿಸಿ ಗಂಜಿ ಬಸಿದು ಜೇನುತುಪ್ಪವನ್ನು ಬೆರೆಸಿ ಕುಡಿಯುವುದು.
• ಹಾಲಿನ ಖೀರು, ಕೆಂಪಕ್ಕಿಯ ಗಂಜಿ ಅಥವಾ ಪಾಯಸ ಆಹಾರವಾಗಿ ಸೇವಿಸುವುದು.
• ತಣ್ಣೀರಿನಲ್ಲಿ ಮುಳುಗಿ ಅಥವಾ ಟಬ್‍ಬಾತ್ ಮಾಡಿ ತುಪ್ಪ ಬೆರೆಸಿದ ಹೂಬಿಸಿಯಾದ ಹಾಲನ್ನು ಕುಡಿಯುವುದು.
• ಹೆಸರುಬೇಳೆ, ಮಸೂರ್‌ದಾಲ್, ಕಡಲೆಬೇಳೆ ಬೇಯಿಸಿದ ತಿಳಿಗೆ ತುಪ್ಪ ಬೆರೆಸಿ ಕುಡಿಯುವುದು.
• ಮೂಗಿಗೆ ಎದೆಹಾಲು ಅಥವಾ ಹಸುವಿನ ಹಾಲು ಅಥವಾ ಕಬ್ಬಿನ ರಸವನ್ನು ಹನಿಸುವುದು. ಗಂಟಲಿಗೆ ಬರುವಷ್ಟಾದರೂ ಹನಿಗಳನ್ನು ಬಿಡುವುದು.
• ಕೋಕಂ/ ಮುರುಗಲು ಹಣ್ಣಿನರಸ ಅಥವಾ ಮಾದಲಕಾಯಿ ಅಥವಾ ಲಿಂಬೆಜಾತಿಯ ಹಣ್ಣಿನ ರಸಗಳಿಂದ ಬಾಯಿಯನ್ನು ತುಂಬಿಕೊಂಡು, ಮುಕ್ಕಳಿಸುವುದು – ಇದರಿಂದ ಅತಿಯಾಗಿ ಬಾಯಿಯು ಒಣಗುವುದು ಸರಿಯಾಗುತ್ತದೆ.
• ತಲೆಗೆ ಮೊಸರು ಮತ್ತು ನೆಲ್ಲಿಪುಡಿಯ ಕಲ್ಕವನ್ನು ಲೇಪಿಸಿ ಒಣಗದಂತೆ ಒಂದೆರಡು ಗಂಟೆ ತೇವ ಮಾಡುತ್ತಾ ಇಟ್ಟುಕೊಳ್ಳುವುದು.
• ತಲೆಗೆ, ಎದೆಗೆ ಚಂದನದ ಶೀತಲೇಪನ, ತಣ್ಣಿರಿನಲ್ಲಿ ಅದ್ದಿದ ಬಟ್ಟೆಯನ್ನು ತಲೆಗೆ, ಎದೆಗೆ ಹೊದೆದುಕೊಳ್ಳುವುದು.
• ತಣ್ಣೀರಿನಲ್ಲಿ ಪಾದವನ್ನು ಮುಳುಗಿಸಿಟ್ಟುಕೊಳ್ಳುವುದು.
• ಮದ್ಯಸೇವನೆಯಿಂದ, ರಕ್ತವು ಒಸರುವ ಕಾಯಿಲೆ, ಪಿತ್ತವೃದ್ಧಿ, ವಿಷಸೇವನೆಯಿಂದ ಬಾಯಾರಿಕೆಯಾಗುತ್ತಿದ್ದರೆ ಸ್ವಭಾವತಃ ಶೀತವಾದ ನೀರು ಹಿತ.
• ದಮ್ಮು, ಕೆಮ್ಮು, ಬಿಕ್ಕಳಿಕೆ, ಜ್ವರ, ನೆಗಡಿ, ಗಂಟಲು, ಎದೆಗೂಡಿನ ರೋಗಗಳಲ್ಲಿ, ಜಿಡ್ಡುಳ್ಳ ಆಹಾರಸೇವನೆಯಿಂದಾಗುವ ಬಾಯಾರಿಕೆಯಲ್ಲಿ ಬಿಸಿನೀರು ಹಿತಕರ.
• ಪ್ರಮೇಹ, ಜಲೋದರ, ಹೊಟ್ಟೆಯಲ್ಲಿ ಗಡ್ಡೆ ಮೊದಲಾದ ರೋಗದಲ್ಲಿ, ಹಸಿವೆಯೇ ಇಲ್ಲದೆ ಬಾಯಾರಿಕೆ ಮಾತ್ರ ಆಗುತ್ತಿರುವಾಗ ನೀರು ಹಿತಕರವಲ್ಲ. ಬದಲಿಗೆ ನೆಲ್ಲಿ, ತ್ರಿಫಲಾ, ನೆಲನೆಲ್ಲಿ ಮೊದಲಾದವುಗಳನ್ನು ಕುದಿಸಿದ, ಆರಿಸಿದ ನೀರು, ಜೇನು ಬೆರೆಸಿದ ನೀರು, ಆಯಾ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಗಳ ನೀರನ್ನು ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.