ಡಾ. ವಿನೋದ್ ಬಾಲಚಂದ್ರನ್
ನ್ಯೂಯಾರ್ಕ್: ಮೇಧೋಜೀರಕ ಗ್ರಂಥಿ ಕ್ಯಾನ್ಸರ್‌ಗೆ ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡ ಅಭಿವೃದ್ಧಿಪಡಿಸಿದ ಲಸಿಕೆ ಪಡೆದವರು ಕಳೆದ ಮೂರು ವರ್ಷಗಳಿಂದ ಸಮಸ್ಯೆ ಮರುಕಳಿಸದೆ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ ಮೂಲದ ಸೋಲನ್ ಕೆಟ್ಟೆರಿಂಗ್ ಸ್ಮಾರಕ ಕ್ಯಾನ್ಸರ್ ಕೇಂದ್ರ ಹಾಗೂ ರೋಷ್ ಅಂಡ್ ಬಯೋನ್‌ಟೆಕ್ ಕಂಪನಿಯ ಈ ಸಂಶೋಧನೆಯಲ್ಲಿ ಭಾರತ ಮೂಲದ ಡಾ. ವಿನೋದ್ ಬಾಲಚಂದ್ರನ್ ನೇತೃತ್ವದ ತಂಡ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಈ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ. ಇದರಿಂದ ರೂಪಾಂತರಿ ಪ್ರೊಟೀನ್‌ಗಳು ಕ್ಯಾನ್ಸರ್ ಕಾರಕ ಕೋಶಗಳ ದಾಳಿಯನ್ನು ಗ್ರಹಿಸಿ ಅದಕ್ಕೆ ಪ್ರತಿಕಾಯವನ್ನು ಸಜ್ಜುಗೊಳಿಸುತ್ತಿರುವುದನ್ನು ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದು ಎಂಆರ್‌ಎನ್‌ಎ ಆಧಾರಿತ ಚಿಕಿತ್ಸಕ ಕ್ಯಾನ್ಸರ್ ಲಸಿಕೆ ಆಟೋಜೀನ್ ಸೆವುಮೆರಾನ್ ಆಗಿದ್ದು, 16 ಕ್ಯಾನ್ಸರ್ ಪೀಡಿತರ ಮೇಲೆ ನಡೆಸಲಾದ ಕ್ಲಿನಿಕಲ್ ಟ್ರಯಲ್‌ಗಳಲ್ಲಿ 8ರಲ್ಲಿ ಏಕರೂಪ ಫಲಿತಾಂಶ ದಾಖಲಾಗಿದೆ. ಈ ಸಂಶೋಧನೆಯ ವರದಿಯು ನೇಚರ್ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.
ಮೇಧೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ರತಿಯೊಬ್ಬ ರೋಗಿಗೂ ಅವರ ದೇಹಕ್ರಮವನ್ನು ವಿಶ್ಲೇಷಿಸಿ ವೈಯಕ್ತಿಕವಾಗಿ ಸಿದ್ಧಪಡಿಸಿದ ಲಸಿಕೆಯನ್ನೇ ನೀಡಲಾಗಿದೆ. ಈ ಟ್ರಯಲ್‌ಗೆ ಒಪ್ಪಿಗೆ ನೀಡಿದವರು ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು. ನಂತರ ರೋಷೆ ಕಂಪನಿಯ ಆಟೊಜೊಲಿಝುಂಬಾ ಲಸಿಕೆ ಪಡೆಯಬೇಕು. ಅಂತಿಮವಾಗಿ ಕೀಮೋಥೆರಪಿ ಪಡೆಯಬೇಕು.
3.2 ವರ್ಷಗಳ ನಂತರ ಸಕಾರಾತ್ಮಕ ಫಲಿತಾಂಶ ಕಂಡುಬಂದ ಎಂಟರಲ್ಲಿ ಆರು ಜನ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಇನ್ನಿಬ್ಬರಲ್ಲಿ ಲಸಿಕೆ ದುರ್ಬಲವಾದ ಕಾರಣ ಮತ್ತು ರೋಗನಿರೋಧಕ ಶಕ್ತಿ ಕುಂದಿದ ಪರಿಣಾಮ ಕ್ಯಾನ್ಸರ್ ಮತ್ತೆ ಮರುಕಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಫಲಗೊಂಡ ಎಂಟು ಜನರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಏಳು ಜನರಲ್ಲಿ 13 ತಿಂಗಳ ನಂತರ ಮತ್ತೆ ಕ್ಯಾನ್ಸರ್ ಮರುಕಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲ ಹಂತದ ಟ್ರಯಲ್ ಸುರಕ್ಷತೆಯ ದೃಷ್ಟಿಕೋನದಿಂದ ನಡೆದಿದೆಯೇ ಹೊರತು, ಅದರ ಪರಿಣಾಮಗಳ ಬಗ್ಗೆ ಅಲ್ಲ. ಹೀಗಾಗಿ ಲಸಿಕೆಯಿಂದಾಗಿ ಕ್ಯಾನ್ಸರ್ ಮರುಕಳಿಸುತ್ತಿರುವುದು ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಸಂಶೋಧಕರು ಏನನ್ನೂ ಹೇಳಿಲ್ಲ. ಮಧ್ಯಮ ಹಂತದ ಪ್ರಯೋಗ ಈಗಷ್ಟೇ ಆರಂಭವಾಗಿದೆ. ಹೀಗಾಗಿ ಲಸಿಕೆಯ ಪರಿಣಾಮ ಇನ್ನಷ್ಟೇ ತಿಳಿಯಬೇಕಿದೆ.
‘ಮೇಧೋಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿರುವವರಿಗೆ ಅಭಿವೃದ್ಧಿಪಡಿಸುತ್ತಿರುವ ವೈಯಕ್ತೀಕರಿಸಿದ ಎಂಆರ್‌ಎನ್‌ಎ ಲಸಿಕೆಯು ಸರಿಯಾದ ದಿಸೆಯಲ್ಲೇ ಸಾಗುತ್ತಿದೆ. ಇವು ಪ್ರತಿಯೊಬ್ಬ ರೋಗಿಯ ದೇಹದಲ್ಲಿರುವ ಗೆಡ್ಡೆಯಲ್ಲಿರುವ ನಿಯಾಂಟಿಜೆನ್‌ಗಳನ್ನು ಗುರಿಯಾಗಿಸಿ ತನ್ನ ಕಾರ್ಯ ನಿರ್ವಹಿಸುತ್ತಿವೆ’ ಎಂದು ಸೋಲನ್ ಕೆಟ್ಟೆರಿಂಗ್ ಸ್ಮಾರಕ ಕ್ಯಾನ್ಸರ್ ಕೇಂದ್ರದ ಮುಖ್ಯ ಸಂಶೋಧಕ ಡಾ. ವಿನೋದ್ ಬಾಲಚಂದ್ರನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.