ಒತ್ತಡದ ಕೆಲಸಗಳು, ಶಿಸ್ತಿಲ್ಲದ ಜೀವನಶೈಲಿಯಿಂದ ಸಾಕಷ್ಟು ಜನರು ಹಠಾತ್ ಹೃದಯ ಸ್ತಂಭನಕ್ಕೆ ಬಲಿಯಾದ ಸುದ್ದಿಗಳು ವರದಿಯಾಗುತ್ತಿವೆ. ಅದರಲ್ಲೂ ಸಣ್ಣ ವಯಸ್ಸಿನವರಲ್ಲಿ ಕೂಡ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತಿದ್ದು ಹೃದಯಾಘಾತಕ್ಕೆ, ಹೃದಯವೈಫಲ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೃದಯ ಆರೋಗ್ಯವನ್ನು ಕೆಡಿಸುವಲ್ಲಿ ‘ಹೈಪರ್‌ಟೆನ್ಷನ್’ ಅಥವಾ ಅಧಿಕ ರಕ್ತದೊತ್ತಡದ ಪಾತ್ರ ಬಲುದೊಡ್ಡದು.
ಅಧಿಕ ರಕ್ತದೊತ್ತಡ ಎಂದರೇನು ? ಯಾರಿಗೆ ಕಾಡುತ್ತದೆ?
ಅಪಧಮನಿಗಳಲ್ಲಿ (ಆರ್ಟರೀಸ್) ರಕ್ತ ಸಂಚಲನದ ಒತ್ತಡ ಹೆಚ್ಚಾದಾಗ ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಹೇಳಲಾಗುತ್ತದೆ. ರಕ್ತದೊತ್ತಡ ಪರೀಕ್ಷೆಯಲ್ಲಿ 140/90 mmHg ಅಥವಾ ಇದಕ್ಕೂ ಹೆಚ್ಚು ಅಂಶವನ್ನು ಕಾಣಬಹುದು. 40 ವರ್ಷ ಮೇಲ್ಪಟ್ಟವರಲ್ಲಿ, ವಂಶ ಪಾರಂಪರಿಕವಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಲ್ಲಿ, ಅಧಿಕ ತೂಕ , ದೈಹಿಕ ಚಟುವಟಿಕೆಯಲ್ಲಿ ಕೊರತೆ, ಅಧಿಕ ಉಪ್ಪು ಸೇವಿಸುವವರಲ್ಲಿ, ತಂಬಾಕು ಸೇವಿಸುವರಲ್ಲಿ, ಕೆಲಸದ ವಾತಾವರಣದಲ್ಲಿ ಸಾಮಾಜಿಕ ಬೆಂಬಲ ಸಿಗದವರಲ್ಲಿ ಹಾಗೆಯೇ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೂಡ ಹೈಪರ್‌ಟೆನ್ಷನ್ / ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹೈಪರ್‌ಟೆನ್ಷನ್ ಎಂಬ ಸೈಲೆಂಟ್ ಕಿಲ್ಲರ್
ಹೈಪರ್‍ಟೆನ್ಷನ್ ಸಮಸ್ಯೆಯನ್ನು ‘ಸೈಲೆಂಟ್ ಕಿಲ್ಲರ್’ ಎಂದೇ ಕರೆಯಲಾಗುತ್ತದೆ. ಯಾವುದೇ ಲಕ್ಷಣ ತೋರದೆ ಹಠಾತ್ ಹೃದಯ ಸ್ತಂಭನಕ್ಕೆ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಅಧಿಕ ರಕ್ತದೊತ್ತಡ ಸಮಸ್ಯೆಗೆ ಚಿಕಿತ್ಸೆ ಪಡೆಯದೆ ಹಾಗಯೇ ಬಿಟ್ಟರೆ ಹಾರ್ಟ್ ಅಟ್ಯಾಕ್ ಜೊತೆಗೆ ಸ್ಟ್ರೋಕ್, ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.
ಅಧಿಕ ರಕ್ತದೊತ್ತಡದಿಂದಾಗಿ ಮೆದುಳಿಗೆ ರಕ್ತ ಪೂರೈಸುವ ರಕ್ತನಾಳ ಒಡೆದು ಅಥವಾ ಬೇರೆ ಬೇರೆ ಕಾರಣಗಳಿಗಾಗಿ ರಕ್ತನಾಳ ಬ್ಲಾಕ್ ಆಗುವ ಮೂಲಕ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಇದಕ್ಕೆ ಹ್ಯಾಮೊರೇಜ್ ಎಂದು ಕೂಡ ಕರೆಯಲಾಗುತ್ತದೆ. ಹೃದಯಕ್ಕೆ ರಕ್ತ ಪಂಪ್ ಮಾಡುವ ಸ್ನಾಯುಗಳು ಅಧಿಕ ಒತ್ತಡದಿಂದ ಕ್ರಮೇಣ ಶಕ್ತಿ ಕಳೆದುಕೊಂಡು ರಕ್ತ ಪಂಪ್ ಮಾಡುವ ಕ್ರಿಯೆ ಕಡಿಮೆಯಾದಾಗ, ರಕ್ತದೊಳಗಿನ ನೀರಿನಾಂಶ ಹೊರ ಚೆಲ್ಲಿ ಶ್ವಾಸಕೋಶ ಹಾಗೂ ದೇಹದ ಅಂಗಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಶ್ವಾಸಕೋಶದಲ್ಲಿ ನೀರು ತುಂಬಿದಾಗ ಉಸಿರುಕಟ್ಟಿ ಹಠಾತ್ ಸಾವು ಸಂಭವಿಸಲೂಬಹುದು.
ಇನ್ನು ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿಕೊಂಡು ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ . ಇದರಿಂದ ರಕ್ತ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು ಒಂದೇ ಸಂಭಾವ್ಯ ಆರೋಗ್ಯ ಸಮಸ್ಯೆಯನ್ನು ತಡೆಯಲು ಇರುವ ಮಾರ್ಗವಾಗಿದೆ.
ಲಕ್ಷಣಗಳೇನು ?
ರಕ್ತದೊತ್ತಡ ಅತಿಯಾಗಿ ಏರಿಕೆ ಕಂಡಾಗ ( 180/120 mmHg ಅಥವಾ ಹೆಚ್ಚು) ಇದನ್ನು ತುರ್ತು ವೈದ್ಯಕೀಯ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ತಲೆ ನೋವು , ಉಸಿರುಗಟ್ಟುವುದು, ಎದೆ ನೋವು , ಮೂಗಿನಲ್ಲಿ ರಕ್ತ, ಕಣ್ಣು ಮಂಜಾಗುವುದು, ಗೊಂದಲ, ತಲೆ ತಿರುಗುವುದು , ಅಶಕ್ತತೆ ಸಮಸ್ಯೆ ಕಂಡುಬರುತ್ತದೆ.
ಅಧಿಕ ರಕ್ತದೊತ್ತಡದಿಂದ ಉಂಟಾಗುವ ಸಮಸ್ಯೆಗಳು
ಹಲವು ವರ್ಷಗಳಿಂದ ಹೈಬಿಪಿ ( ಅಧಿಕ ರಕ್ತದೊತ್ತಡ) ಸಮಸ್ಯೆ ಎದುರಿಸುತ್ತಿದ್ದಲ್ಲಿ ಹಾರ್ಟ್ ಅಟ್ಯಾಕ್, ಹಾರ್ಟ್ ಫೇಲ್ಯೂರ್, ಹೃದಯ ಲಯದಲ್ಲಿ ಏರುಪೇರು ಸಮಸ್ಯೆ ಕಾಣಬಹುದು. ಇದರಿಂದ ಹಠಾತ್ ಸಾವು ಕೂಡ ಸಂಭವಿಸಬಹುದು. ಮಹಾಪಧಮನಿಯ ನಾಳ ಒಡೆದು ಸಾವು ಸಂಭವಿಸಬಹುದು. ಮೆದುಳಿನ ರಕ್ತನಾಳ ಒಡೆದು ಸ್ಟ್ರೋಕ್‌ಗೆ ಗುರಿಯಾಗಬಹುದು, ಡೆಮೆನ್ಶಿಯಾದಂತಹ ಸಮಸ್ಯೆ ಕೂಡ ಕಂಡುಬರುತ್ತದೆ. ಹಲವರಲ್ಲಿ ಕಿಡ್ನಿ ವೈಫಲ್ಯ ಕಂಡುಬಂದರೆ, ಕಣ್ಣಿನ ರೆಟಿನಾ ಹಾನಿಯಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.
ರಕ್ತದೊತ್ತಡ ನಿರ್ವಹಣೆ ಹೇಗೆ?
• ಪ್ರತಿ ರಾತ್ರಿ ಕನಿಷ್ಠ 7 ಗಂಟೆಗಳ ಉತ್ತಮ ನಿದ್ದೆ ಮಾಡಿ
• ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಿ
• ಆರೋಗ್ಯಕರ ತೂಕ ನಿರ್ವಹಿಸಿ
• 30-45 ನಿಮಿಷಗಳ ವೇಗ ನಡಿಗೆ ನಿತ್ಯ ಅಭ್ಯಾಸದಲ್ಲಿರಲಿ
• ಸ್ವಿಮ್ಮಿಂಗ್ ಅಥವಾ ಸೈಕ್ಲಿಂಗ್ ಅಭ್ಯಾಸ ಕೂಡ ಉತ್ತಮ
• ಮನಸ್ಸಿಗೆ ಆರಾಮ ನೀಡುವ ಯೋಗ, ಧ್ಯಾನ , ಕುಟುಂಬ-ಗೆಳೆಯರೊಡನೆ ಸಮಯ ಕಳೆಯುವುದು, ಸಂಗೀತ, ಇತರೆ ಉತ್ತಮ ಹವ್ಯಾಸಗಳು ಕೂಡ ರಕ್ತದೊತ್ತಡ ನಿರ್ವಹಣೆಗೆ ಸಹಾಯಕಾರಿ.
• ಸಂಸ್ಕರಿತ ಆಹಾರ ಹಾಗೂ ಹೆಚ್ಚು ಉಪ್ಪು ಇರುವ ಆಹಾರ ಕಡಿಮೆ ಮಾಡಿ
• ಕಡಿಮೆ ಕೊಬ್ಬಿನಾಂಶದ ಆಹಾರ, ಮೀನು, ಧಾನ್ಯಗಳ ಸೇವನೆ ಉತ್ತಮ
• ಅಧಿಕ ಪೊಟ್ಯಾಶಿಯಮ್‌ಯುಕ್ತ ಆಹಾರಗಳಾದ ಬಾಳೆಹಣ್ಣು, ಕಿತ್ತಳೆ, ಹಸಿರು ಸೊಪ್ಪು, ಆರೋಗ್ಯಕರ ರಕ್ತದೊತ್ತಡ ನಿರ್ವಹಿಸಲು ನೆರವಾಗುತ್ತದೆ.
• ಆಲ್ಕೋಹಾಲ್ ಸೇವನೆ ತಗ್ಗಿಸಿ, ಧೂಮಪಾನ ಸೇವನೆ ನಿಲ್ಲಿಸಿ.
• ನಿತ್ಯ 2.5 ಗ್ರಾಂಗಿಂತಲೂ ಕಡಿಮೆ ಉಪ್ಪಿನ ಸೇವನೆ ಇರಲಿ
• ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು, ಬೀಜಗಳು, ದ್ವಿದಳ ಧಾನ್ಯಗಳು, ಮೀನು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಿಗೆ ಒತ್ತು ನೀಡಿ. ಪೊಟ್ಯಾಸಿಯಂ (ಬಾಳೆಹಣ್ಣು, ಕಿತ್ತಳೆ, ಎಲೆಗಳ ಸೊಪ್ಪು) ಮತ್ತು ಮೆಗ್ನೀಸಿಯಮ್ (ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳಲ್ಲಿ ಕಂಡುಬರುವ) ಅಧಿಕವಾಗಿರುವ ಆಹಾರಗಳು ಉಪ್ಪಿನ ಕೆಟ್ಟ ಪರಿಣಾಮಗಳನ್ನು ಎದುರಿಸಲು ಮತ್ತು ಆರೋಗ್ಯಕರ ರಕ್ತದೊತ್ತಡವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಚಿಕಿತ್ಸೆ ಏನು ?
ಜೀವನ ಶೈಲಿಯಲ್ಲಿ ಬದಲಾವಣೆ ಬಳಿಕವೂ ರಕ್ತದೊತ್ತಡ ಏರಿಕೆ ಕಾಣುತ್ತಿದ್ದಲ್ಲಿ ತುರ್ತಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಲೇಖಕರು: ಹಿರಿಯ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ, ಕೆಎಂಸಿ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.