ರಕ್ತ ಎಂದರೆ ದೇಹದಲ್ಲಿರುವ ಕೆಂಪುಬಣ್ಣದ ದ್ರವ. ದೇಹಕ್ಕೆ ಗಾಯವಾದಾಗ ಹರಿದು ಬರುವ ರಕ್ತ, ದೇಹದ ರಕ್ತನಾಳಗಳಲ್ಲಿ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತದೆ. ರಕ್ತದ ಕೆಂಪುಬಣ್ಣಕ್ಕೆ ಕಾರಣ ಅದರಲ್ಲಿರುವ ಕೆಂಪು ರಕ್ತಕಣಗಳು ಹೊಂದಿರುವ ‘ಹಿಮೋಗ್ಲೋಬಿನ್’ ಎನ್ನುವ ಅಂಶ. ರಕ್ತದಲ್ಲಿ ಮುಖ್ಯವಾಗಿ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್ಸ್, ನೀರಿನ ಅಂಶ – ಇವು ಅಡಕವಾಗಿವೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು, ಪ್ರಾಣವಾಯುವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪುವಂತೆ ಕಾರ್ಯವನ್ನು ನಿರ್ವಹಿಸುವುದೇ ರಕ್ತದ ಮುಖ್ಯ ಕೆಲಸ.
ಮನುಷ್ಯರ ದೇಹದಲ್ಲಿ 5–6 ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತವು ದೇಹದಲ್ಲಿರುವ ಹೃದಯ ಮತ್ತು ರಕ್ತನಾಳಗಳಲ್ಲಿ ದ್ರವರೂಪದಲ್ಲಿರುತ್ತದೆ; ಆದರೆ ಅದು ಹೊರಗೆ ಬಂದ 3–4 ನಿಮಿಷಗಳಲ್ಲಿ ಹೆಪ್ಪುಗಟ್ಟುತ್ತದೆ. ಇದು ದೇಹದ ರಕ್ಷಣಾತ್ಮಕ ತಂತ್ರವೂ ಹೌದು. ರಕ್ತದಲ್ಲಿರುವ ಒಂದೊಂದು ಬಗೆಯ ಜೀವಕಣಗಳ ಜೀವಿತಾವಧಿ ಒಂದೊಂದು ಬಗೆಯಾಗಿರುತ್ತದೆ. ಉದಾಹರಣೆಗೆ: ಕೆಂಪು ರಕ್ತಕಣಗಳು 120 ದಿವಸಗಳು, ಬಿಳಿ ರಕ್ತಕಣಗಳು 2–3 ವಾರಗಳು, ಪ್ಲೇಟ್‌ಲೇಟ್‌ಗಳು 7–10 ದಿನಗಳು.
ವೈದ್ಯರು ನಿಮಗೆ ರಕ್ತ ಕಡಿಮೆಯಾಗಿದೆ ಎಂದಾಗ ಸಾಮಾನ್ಯವಾಗಿ ಹಿಮೋಗ್ಲೋಬಿನ್, ಎಂದರೆ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅರ್ಥ. ಹಿಮೋಗ್ಲೋಬಿನ್ ಎಂದರೆ ‘ಹೀಮ್’ ಮತ್ತು ‘ಪ್ರೋಟೀನ್’. ಎಂದರೆ ಕಬ್ಬಿಣದ ಅಂಶ ಮತ್ತು ಪ್ರೋಟೀನ್ ಸೇರಿ ಹೀಮೊಗ್ಲೋಬಿನ್ ಆಗಿದೆ. ಆಮ್ಲಜನಕವನ್ನು ಶ್ವಾಸಕೋಶದಿಂದ ಇತರ ಜೀವಕೋಶಗಳಿಗೆ, ಇಂಗಾಲದ ಡೈಯಾಕ್ಸೈಡನ್ನು ಇತರ ಜೀವಕೋಶಗಳಿಂದ ಶ್ವಾಸಕೋಶಕ್ಕೆ ಸರಬರಾಜು ಮಾಡುವ ಜವಾಬ್ದಾರಿ ಹಿಮೋಗ್ಲೋಬಿನದ್ದು ಆಗಿದೆ. ಹಾಗಾಗಿ ಯಾವುದೇ ಕಾರಣಕ್ಕೆ ಹಿಮೋಗ್ಲೋಬಿನ್ ಕಡಿಮೆಯಾದಾಗ ದೇಹದ ಎಲ್ಲ ಚಟುವಟಿಕೆಗಳು ಆಮ್ಲಜನಕದ ಮೇಲೆ ಅವಲಂಬಿಸಿರುವ ಕಾರಣ, ನಮ್ಮ ಶರೀರದ ಕೆಲಸಕಾರ್ಯಗಳು ನಿಧಾನವಾಗಿ, ಮುಂದೆ ಕೆಲಸವನ್ನು ನಿರ್ವಹಿಸುವುದೇ ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪುತ್ತದೆ. ರಕ್ತವನ್ನು ಶರೀರದಲ್ಲಿ ಹೆಚ್ಚು ಮಾಡಿಕೊಳ್ಳುವುದು ಎಂದರೆ ಹಿಮೋಗ್ಲೋಬಿನನ್ನು ಹೆಚ್ಚಿಸಿಕೊಳ್ಳುವುದು ಎಂದು ಅರ್ಥ.
ಹಿಮೋಗ್ಲೋಬಿನ್‌ನ ಉತ್ಪತ್ತಿಗೆ ಬೇಕಾದ ಅಂಶಗಳಾದ ಪ್ರೋಟೀನ್, ಕಬ್ಬಿಣದ ಅಂಶ, ವಿಟಮಿನ್ ಬಿ 12, ಫೋಲಿಕ್ ಆಸಿಡ್ – ಇವುಗಳನ್ನು ಪೂರೈಸಬೇಕಾಗುತ್ತದೆ. ಕೆಂಪುರಕ್ತಕಣಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ ಎರಿತ್ರೋಪೋಯಿಟಿನ್ ಎನ್ನುವ ರಸದೂತ; ಇದು ಉತ್ಪತ್ತಿಯಾಗುವುದು ಮೂತ್ರಪಿಂಡಗಳಲ್ಲಿ; ರಕ್ತಕಣಗಳ ಉತ್ಪತ್ತಿಯಾಗುವುದು ಮೂಳೆಗಳ ಅಸ್ಥಿಮಜ್ಜೆಯಲ್ಲಿ.
ಪೌಷ್ಟಿಕಾಂಶಗಳ ಕೊರತೆ.
ರಕ್ತ ನಷ್ಟವಾಗುವುದು: ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ, ಹೆರಿಗೆ ಸಮಯದಲ್ಲಿ ರಕ್ತಸ್ರಾವ, ಗುದದ್ವಾರದಿಂದ ರಕ್ತಸ್ರಾವ, ಇತ್ಯಾದಿ ಕಾರಣಗಳಿಂದ.
ಕಿಡ್ನಿ ಸಂಬಂಧಿತ ಕಾಯಿಲೆಗಳಲ್ಲಿ, ಎರಿತ್ರೋಪೋಯಿಟಿನ್ ಉತ್ಪತ್ತಿ ಕಡಿಮೆಯಾದಾಗ, ದೀರ್ಘಕಾಲದ ನಂಜುಕಾಯಿಲೆ ಇದ್ದಾಗ.
ಅಸ್ಥಿಮಜ್ಜೆಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ.
ಆನುವಂಶೀಯ ಕಾಯಿಲೆಗಳು: ಕೆಂಪು ರಕ್ತಕಣಗಳ, ಹಿಮೊಗ್ಲೋಬಿನ್ ಉತ್ಪತ್ತಿಯಲ್ಲಿ ವ್ಯತ್ಯಾಸವಾಗಿದ್ದಾಗ, ಉದಾರಣೆಗೆ ಥಾಲಸೀಮಿಯಾ, ಸಿಕೆಲ್ ಸೆಲ್ ಅನೀಮಿಯಾ.
ರಕ್ತಹೀನತೆಯ ತೀವ್ರತೆಗೆ ತಕ್ಕಂತೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ರಕ್ತಹೀನತೆಗೆ ಕಾರಣ ಮುಖ್ಯವಾಗಿ ಪೌಷ್ಟಿಕಾಂಶಗಳ ಕೊರತೆ. ಶೇ 60–80ರಷ್ಟು ಮಂದಿಯ ರಕ್ತಹೀನತೆಗೆ ಕಾರಣ ಕಬ್ಬಿಣ ಅಂಶದ ಕೊರತೆ.
ರಕ್ತದ ಉತ್ಪತ್ತಿಗೆ ಕಬ್ಬಿಣಾಂಶ, ಪ್ರೋಟೀನ್, ವಿಟಮಿನ್ ಬಿ12, ಫೋಲಿಕ್ ಆಸಿಡ್, ವಿಟಮಿನ್ ಸಿ ಮುಖ್ಯವಾಗಿವೆ. ಹಾಗಾಗಿ ಈ ಅಂಶಗಳಿರುವ ಹಸಿರುತರಕಾರಿಗಳು, ಸೊಪ್ಪುಗಳು, ಮೊಳಕೆಕಟ್ಟಿದ ಕಾಳುಗಳು, ರಾಗಿ, ಹೆಸರುಕಾಳು, ನೆಲೆಗಡಲೆ, ಅಲಸಂದೆಬೀಜ, ಬೆಲ್ಲ, ನೆಲ್ಲಿಕಾಯಿ, ದಾಳಿಂಬೆ, ಹಣ್ಣು–ಹಂಪಲುಗಳು ಈ ಅಂಶಗಳನ್ನು ಒದಗಿಸುತ್ತವೆ.
ಕಬ್ಬಿಣ ಅಂಶದ ಮಾತ್ರೆಗಳನ್ನು ಸೇವಿಸಿದಾಗ, 7–10 ದಿನಗಳ ಬಳಿಕ ಹಿಮೋಗ್ಲೋಬಿನ್‌ನಲ್ಲಿ ಏರಿಕೆ ಕಾಣಬಹುದು. ಕಬ್ಬಿಣದ ಅಂಶದ ಮಾತ್ರೆಗಳನ್ನು ತೆಗೆದುಕೊಂಡಾಗ, ಮಲದ ಬಣ್ಣ ಕಪ್ಪಾಗುವುದು ಸಹಜ. ಹೊಟ್ಟೆನೋವು, ಎದೆಯುರಿ, ಮಲಬದ್ಧತೆ, ಕೆಲವೊಮ್ಮೆ ಭೇದಿಯೂ ಉಂಟಾಗಬಹುದು. ಮಾತ್ರೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಅಥವಾ ಜೀರ್ಣಕ್ರಿಯೆಯಲ್ಲಿ ತೊಂದರೆಯಿದ್ದಾಗ ಕಬ್ಬಿಣದ ಅಂಶದ ಚುಚ್ಚುಮದ್ದುಗಳು ಸಹಕಾರಿ. 1000 mg ಕಬ್ಬಿಣದ ಅಂಶವನ್ನು ಒಂದೇ ಬಾರಿಗೆ ಕೊಡುವ ಅವಕಾಶವಿದೆ. ಆದರೆ ಹಿಮೋಗ್ಲೋಬಿನ್‌ನ ಏರಿಕೆ ತತ್‌ಕ್ಷಣಕ್ಕೆ ಆಗುವುದಿಲ್ಲ, 7–10 ದಿನಗಳ ಸಮಯ ಬೇಕಾಗುತ್ತದೆ.
ಕೆಂಪು ರಕ್ತಕಣಗಳ ಬೆಳವಣಿಗೆಗೆ ತುಂಬಾ ಅಗತ್ಯವಾದುದು ಫೋಲಿಕ್ ಆಸಿಡ್. ಹಸಿರು ಎಲೆಗಳ ತರಕಾರಿಗಳು, ಬೆಂಡೆಕಾಯಿ ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ, ಬೀನ್ಸ್, ಬಟಾಣಿ, ಮೊಟ್ಟೆ – ಇವುಗಳಲ್ಲಿ ಸಿಗುತ್ತದೆ. ವಿಟಮಿನ್ ಬಿ 12, ಹಾಲು, ಮೊಸರು ಬಾದಾಮಿ, ಗೋಡಂಬಿ, ಮೀನು, ಮಾಂಸ ಇವುಗಳಲ್ಲಿ ಲಭ್ಯ.
ಪ್ರೋಟೀನ್‌ಯುಕ್ತ ಆಹಾರ ಎಂದರೆ, ಕಡಿಮೆ ಕೊಬ್ಬಿನ ಮಾಂಸ, ಮೀನು, ಮೊಟ್ಟೆ , ಎಲ್ಲ ತರಹದ ಬೇಳೆಕಾಳುಗಳು; ಉದಾ: ಬೀನ್ಸ್, ಬಟಾಣಿ, ಸೋಯಾ ಮತ್ತು ಹಾಲು–ಮೊಸರು, ಧಾನ್ಯಗಳು.
ಎರಿತ್ರೋಪೋಯಿಟಿನ್ ಚುಚ್ಚುಮದ್ದು: ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವರಲ್ಲಿ ಈ ರಸದೂತ ಉತ್ಪತ್ತಿಯಾಗದ ಕಾರಣ, ರಕ್ತಹೀನತೆ ಉಂಟಾದಾಗ ಈ ಇಂಜೆಕ್ಷನ್ ಕೊಡುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಕೊಡಬಹುದು.
ಹೀಗೆ ನಮ್ಮ ಆಹಾರದಲ್ಲಿ ಪ್ರೋಟೀನ್ ಹೆಚ್ಚಾಗಿರುವ ಬೇಳೆಕಾಳುಗಳು, ಮೊಟ್ಟೆ, ಕಬ್ಬಿಣದ ಅಂಶ ಹೆಚ್ಚಿರುವ ಹಸಿರು ಸೊಪ್ಪು–ತರಕಾರಿಗಳು, ಹಣ್ಣು–ಹಂಪಲುಗಳು, ವಿಟಮಿನ್‌ಗಳು ಹೆಚ್ಚಿರುವ ಹಾಲು – ಇವುಗಳ ಸೇವನೆಯಿಂದ ರಕ್ತದ ಹಿಮೋಗ್ಲೋಬಿನ್ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.