ADVERTISEMENT

ಮಕ್ಕಳಾಗೋಣ ಮನದಲ್ಲಿ!

ರಮ್ಯಾ ಶ್ರೀಹರಿ
Published 11 ನವೆಂಬರ್ 2025, 0:39 IST
Last Updated 11 ನವೆಂಬರ್ 2025, 0:39 IST
   
ನಮ್ಮೊಳಗಿನ ಮಗುತನವನ್ನು ಉಳಿಸಿಕೊಳ್ಳದಿದ್ದರೆ ಬದುಕಿಗೆ ಅತ್ಯವಶ್ಯಕವಾದ ಬಾಂಧವ್ಯಗಳನ್ನು ಕಟ್ಟಿಕೊಳ್ಳುವುದರಲ್ಲಿ ನಾವು ವಿಫಲರಾಗುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದೊಳಗೂ ಒಂದು ಪೋಷಕ (inner parent), ಒಂದು ವಯಸ್ಕ(adult) ಒಂದು ಮಗು (inner child) ಅಡಕವಾಗಿರುತ್ತದೆ ಎನ್ನುವುದು ಮನೋವೈದ್ಯ ಎರಿಕ್ ಬರ್ನ್‌ನ ಅಭಿಪ್ರಾಯ. ಅಂದರೆ ಪ್ರೌಢಾವಸ್ಥೆ ತಲುಪಿದ ಪ್ರತಿಯೊಬ್ಬ ವ್ಯಕ್ತಿಯೊಳಗೂ ಈ ಮೂರು ದನಿಗಳು, ಮೂರು ಸ್ಥಿತಿಗಳು ಅಥವಾ ಪ್ರಪಂಚವನ್ನು ಕಾಣುವ ಈ ಮೂರು ದೃಷ್ಟಿಗಳು ಕೆಲಸ ಮಾಡುತ್ತಿರುತ್ತವೆ.

ನಮ್ಮೊಳಗಿನ ಪೋಷಕ ನಮ್ಮ ನಿಜದ ಪೋಷಕರ ವ್ಯಕ್ತಿತ್ವವನ್ನೇ ಅಂತರ್ಗತಗೊಳಿಸಿಕೊಂಡಿರುವ ಒಂದು ಪಾತ್ರ. ನಮ್ಮ ನಿಜದ ಪೋಷಕರ ಮಾತು, ಹಾವ, ಭಾವ, ದನಿ ಎಲ್ಲವೂ ನಮ್ಮ ಆಂತರ್ಯದ ಪೋಷಕನಿಗೂ ಇರುತ್ತದೆ. ರಕ್ಷಣೆ ಒದಗಿಸುವುದು, ಬೆಳೆಸುವುದು, ಪೋಷಿಸುವುದು, ಮಾರ್ಗದರ್ಶನ ಮಾಡುವುದು ಹಾಗೆಯೇ ಶಿಕ್ಷಿಸುವುದು, ಆದೇಶ ಅನುಮೋದನೆ ನೀಡುವುದು, ನಿರ್ಬಂಧಗಳನ್ನು ಹೇರುವುದು – ಎಲ್ಲವೂ ನಮ್ಮ ಪೋಷಕರ ದನಿಯನ್ನು ಅಂತರ್ಗತಗೊಳಿಸಿಕೊಂಡಿರುವ ನಮ್ಮೊಳಗಿನ ಪೋಷಕನ ಕೆಲಸವಾಗಿರುತ್ತದೆ.

ನಮ್ಮೊಳಗಿನ ವಯಸ್ಕಪಾತ್ರವು ನಾವು ತರ್ಕಬದ್ಧವಾಗಿ ಆಲೋಚಿಸಲು, ಸುಸಂಬದ್ಧವಾಗಿ ಮಾತನಾಡಲು, ಸಂಯಮದಿಂದ ವರ್ತಿಸಲು ಕಾರಣವಾಗಿರುತ್ತದೆ. ಹಾಗೆಯೇ ಪ್ರತಿಯೊಬ್ಬರ ಆಂತರ್ಯದಲ್ಲೂ ಒಂದು ಮಗುವಿನ ದನಿ ಅಥವಾ ಪಾತ್ರವಿರುತ್ತದೆ. ಆ ಮಗುವಿಗೂ ಪೋಷಕನಿಗಿರುವಂತೆಯೇ ಎರಡು ಮುಖಗಳಿರುತ್ತವೆ. ಆ ಮಗುವಿನ ಒಂದು ಮುಖ ಸೃಜನಶೀಲತೆ, ಕುತೂಹಲ, ಲವಲವಿಕೆ, ಮುಗ್ಧತೆ, ಸಂಭ್ರಮ, ಸಡಗರ, ಹಾಸ್ಯ, ನಗು ಆದರೆ, ಅದರ ಇನ್ನೊಂದು ಮುಖ ಭಯ, ಸಿಟ್ಟು, ಹಟ, ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂಬ ರಗಳೆ, ಎಲ್ಲರೂ ತನಗೆ ನೋವುಂಟುಮಾಡಲೇ ಇದ್ದಾರೆ ಎಂಬ ಭ್ರಮೆ ಹೀಗೇ.

ADVERTISEMENT

ಬೆಳೆದು ದೊಡ್ಡವರಾದ ಎಲ್ಲರಲ್ಲೂ ಬಾಲಿಶವಾದ ವರ್ತನೆಗಳೂ ಇರುತ್ತವೆ; ಮಗುವಿನ ಸಹಜ ಸಂಭ್ರಮ ಉಲ್ಲಾಸಗಳೂ ಇರುತ್ತವೆ. ಮಗುವಿಗೆ ಸರಿಯಾದ ಸಮಯದಲ್ಲಿ ಪೋಷಕರ ಪ್ರೀತಿ, ಗಮನ ಸಿಕ್ಕಿಲ್ಲದಿರುವುದೇ ಬಾಲಿಶ ವರ್ತನೆಗಳನ್ನು ರೂಢಿಸಿಕೊಳ್ಳಲು ಕಾರಣವಾಗಿರುತ್ತದೆ. ಉದಾಹರಣೆಗೆ, ಸಣ್ಣ ಸಣ್ಣ ವಿಷಯಗಳಿಗೂ ಅತಿ ಕೋಪಮಾಡಿಕೊಳ್ಳುವುದು ಬಾಲಿಶ ವರ್ತನೆಯಾದರೆ, ಅದಕ್ಕೆ ಕಾರಣ ಮಗುವಿಗೆ ಮುಖ್ಯವೆನಿಸುವ ಆದರೆ ದೊಡ್ಡವರಿಗೆ ಸಣ್ಣದು ಎನಿಸುವ ವಿಷಯಗಳಿಗೆ ಪೋಷಕರ ‘attention’ ಸಿಕ್ಕಿರುವುದಿಲ್ಲವಾದ್ದರಿಂದ ಆ ಸಣ್ಣ ಸಣ್ಣ ವಿಷಯಗಳನ್ನು ಹೇಗೆ ಮೀರಿ ಹೋಗಬೇಕೆನ್ನುವುದು ಮಗುವಿಗೆ ಗೊತ್ತಾಗದೇ ಹೋಗಿರುತ್ತದೆ. ಹೀಗಾಗಿ ಒಂದು ಕಡೆ ನಮ್ಮ ವ್ಯಕ್ತಿತ್ವದೊಳಗಿನ ಮಗು ನೈಜ ಜೀವಂತಿಕೆಯ ಪ್ರತಿರೂಪವಾದರೆ ಮತ್ತೊಂದು ಕಡೆ ಪೋಷಕರ ವರ್ತನೆಗೆ ಪ್ರತಿಸ್ಪಂದಿಯಾಗಿ ತಾನು ರೂಢಿಸಿಕೊಂಡ ನಡೆನುಡಿಗಳ ಪ್ರತಿರೂಪವಾಗಿರುತ್ತದೆ.

ನಮ್ಮೊಳಗಿನ ಮಗು ತನ್ನ ಮಗುತನವನ್ನು ಉಳಿಸಿಕೊಳ್ಳದಿದ್ದರೆ ಬದುಕಿಗೆ ಅತ್ಯಾವಶ್ಯಕವಾದ ಬಾಂಧವ್ಯಗಳನ್ನು ಕಟ್ಟಿಕೊಳ್ಳುವುದರಲ್ಲಿ ನಾವು ವಿಫಲರಾಗುತ್ತೇವೆ. ಕೇವಲ ಹೊಂದಾಣಿಕೆ, ಕರ್ತವ್ಯ, ಜವಾಬ್ದಾರಿ, ಕೆಲಸ, ಸಂಪಾದನೆ, ನಮ್ಮ ಐಡೆಂಟಿಟಿ ಇವುಗಳಿಂದಲೇ ಬಾಂಧವ್ಯವನ್ನು ಸೃಜಿಸಿಕೊಳ್ಳಲಾಗುವುದಿಲ್ಲ. ಅಂತಹ ಬಾಂಧವ್ಯ ಹೆಸರಿಗೆ ಇದ್ದರೂ ಬಲು ಸಪ್ಪೆಯಾಗಿರುತ್ತದೆ, ಬಲು ಬೇಗ ಬದುಕಿನ ಬೇಗೆಯಲ್ಲಿ ಬಾಡಿಹೋಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ, ಸಂಭ್ರಮ, ಉತ್ಸಾಹ, ಮೋಹಕತೆ, ತೀವ್ರವಾದ ಪ್ರೇಮ, ನಗು, ತುಂಟಾಟ, ಹಾಸ್ಯ, ಸದಾ ಜೊತೆಜೊತೆಗೆ ನಲಿಯುತ್ತಿರಬೇಕೆಂಬ ಹಂಬಲ, ಪರಸ್ಪರರ ಬಗೆಗೆ ಕುತೂಹಲ ತುಂಬಿದ ಆಕರ್ಷಣೆ, ಬಿಚ್ಚುಮನಸ್ಸಿನ ಮಾತುಕತೆ ಹೀಗೆ ಬದುಕು ಮತ್ತು ಬಾಂಧವ್ಯವನ್ನು ಮನಸ್ಸಿನ ಸಂತೋಷಕ್ಕಾಗಿ, ನೆಮ್ಮದಿಗಾಗಿ ಕಟ್ಟಿಕೊಳ್ಳಬೇಕಾದರೆ ನಮ್ಮೊಳಗಿನ ‘ಮಗು’ ನಲಿಯುತ್ತಿರಬೇಕು.

ಜೀವನವನ್ನು ನಿತ್ಯೋತ್ಸವವಾಗಿಸುವ ಕಲೆ, ಸಂಗೀತ, ಸಾಹಿತ್ಯ, ನೃತ್ಯ, ವಿಜ್ಞಾನ ಎಲ್ಲದಕ್ಕೂ ಮೂಲವಾದ ಸೃಜನಶೀಲತೆ, ವಿಸ್ಮಯ, ಕುತೂಹಲ, ಎಲ್ಲವನ್ನೂ ತಿಳಿಯಬೇಕೆಂಬ ಕಾತುರದ ಮೂಲಸ್ರೋತ ‘ನಮ್ಮೊಳಗಿನ ಮಗು’ತನವೇ ಆಗಿದೆ. ಜೀವನವನ್ನು ನಾಟಕವೆಂಬಂತೆ, ಆಟವೆಂಬಂತೆ, ಲೀಲೆ ಎಂಬಂತೆ ನೋಡಬೇಕೆಂದು ಕವಿಗಳೂ ಋಷಿಗಳೂ ಹೇಳುವುದನ್ನು ಮಕ್ಕಳು ಬಾಳಿ ತೋರಿಸುತ್ತಾರೆ. ಮಗು ಪ್ರಪಂಚಕ್ಕೆ ಸ್ಪಂದಿಸುವುದೇ ಆಟದ ಮೂಲಕ, ‘ಬಾ ಆಡಿ ಸಂತಸಪಟ್ಟು ನಲಿಯೋಣ’ ಎನ್ನುವುದೇ ಮಗು ಸದಾ ಪೋಷಕರಿಗೆ ಹೇಳದೆಯೂ ಹೇಳುವ ಮಾತು.

ನಮ್ಮೊಳಗಿನ ಮಗುವಿಗೆ ಪ್ರೀತಿ ಕಡಿಮೆ ದೊರೆತಷ್ಟೂ ಅದು ನಮ್ಮ ತರ್ಕಬದ್ಧ ಆಲೋಚನೆಯನ್ನು, ನಮ್ಮ ವಿವೇಕವನ್ನು ಕದಡಿ ರಾಡಿಯಾಗಿಸುತ್ತದೆ. ನಮ್ಮ ನಿರ್ಧಾರಗಳು ತಾರ್ಕಿಕವಾಗಿ ವಾಸ್ತವಕ್ಕೆ ಸರಿಹೊಂದುವಂತೆ ಇರುವ ಬದಲು ನಮ್ಮೊಳಗಿನ ಪ್ರೀತಿವಂಚಿತ ಮಗುವಿನ ಭಾವನಾತ್ಮಕ ಅವಶ್ಯಕತೆಗಳನ್ನು ತೀರಿಸುವ ನಿಟ್ಟಿನಲ್ಲಿ ತೆಗೆದುಕೊಂಡದ್ದಾಗಿರುತ್ತದೆ. ನಾವು ಪೋಷಕರಾಗಿ ನಮ್ಮ ಮಕ್ಕಳ ಜೊತೆ ಮಗುವಾಗಿ ಬೆರೆತು ಆನಂದಿಸುವುದಕ್ಕೂ ನಮ್ಮೊಳಗಿನ ಮಗು ಜೀವಂತಿಕೆಯಿಂದಿರಬೇಕು. ಬಾಲ್ಯದ ಕಾಲ ಕಳೆದುಹೋದರೂ ನಮ್ಮೊಳಗಿನ ಮಗು ಕಳೆದುಹೋಗಿರುವುದಿಲ್ಲ ಎನ್ನುವುದಾದರೆ ಆ ಆಂತರ್ಯದ ಮಗುವನ್ನು ಸಂತೋಷವಾಗಿಟ್ಟುಕೊಳ್ಳುವುದು ಮತ್ತು ಅದರ ಅಭಿವ್ಯಕ್ತಿಯನ್ನು ಪುರಸ್ಕರಿಸುವುದು ಕ್ಷೇಮವಲ್ಲವೇ? ಆ ಪ್ರಯತ್ನಕ್ಕೆ ನೀರೆರೆಯುವ ಕೆಲವು ಆಲೋಚನೆಗಳು ಇಲ್ಲಿವೆ:

  • ಮಕ್ಕಳು ತಮ್ಮ ಭಾವನೆಗಳನ್ನು ಮುಚ್ಚಿಡುವುದಿಲ್ಲ. ಆದರೆ ಕೆಲವು ಮಾತುಗಳನ್ನು, ಭಾವಗಳನ್ನು ಮುಚ್ಚಿಡುವುದು ಪ್ರೌಢಾವಸ್ಥೆಯ ನಮಗೆ ಅನಿವಾರ್ಯ; ಅದು ಲೋಕರೂಢಿ. ಹಾಗಿದ್ದರೂ ನಮ್ಮ ಮೂಲಭಾವನೆಗಳು ಯಾವುವು, ಅವನ್ನು ಮರೆಮಾಚಲು ನಾವು ಕಂಡುಕೊಂಡಿರುವ ಮುಸುಕು ಭಾವನೆಗಳು (racket feelings) ಯಾವುವು ಎನ್ನುವ ಅರಿವಿದ್ದು, ಆದಷ್ಟೂ ಮೂಲ ಭಾವನೆಗಳಿಗೆ ನಿಷ್ಠವಾಗಿ ನಮ್ಮ ಅಭಿವ್ಯಕ್ತಿ ಇದ್ದರೆ ಬಾಂಧವ್ಯಕ್ಕೆ ಅದು ಸಹಕಾರಿ. ಉದಾಹರಣೆಗೆ ದುಃಖವನ್ನು ತೋರ್ಪಡಿಸಿದಾಗ ದುರ್ಬಲರಾಗಿ ಕಾಣುವುದರಿಂದ ದುಃಖವನ್ನು ಸಿಟ್ಟಿನಿಂದ ಮರೆಮಾಚುವ ಬದಲು ದುಃಖವನ್ನೇ ಅನುಭವಿಸಿ ಅದನ್ನೇ ವಿವೇಕದಿಂದ ಅಭಿವ್ಯಕ್ತಿಸುವುದನ್ನು ಕಲಿತರೆ ಹೇಗೆ? ಆಂತರ್ಯದಲ್ಲಿನ ಮಗುವಿಗೆ ತೆರೆದ ಮನದ ಭಾವನೆಗಳನ್ನು ಅಭಿವ್ಯಕ್ತಿಸಲು ಅನುಮತಿ ಕೊಡಬೇಕು.

  • ಸದಾ ಕಲ್ಪನಾ ಲೋಕದಲ್ಲಿ ವಿಹರಿಸುವುದು ಮಕ್ಕಳ ಸ್ವಭಾವ. ಪ್ರತಿಯೊಂದು ವಸ್ತುವಿಗೂ ಒಂದು ಮನಸ್ಸಿದೆ, ಮಾತಿದೆ ಎನ್ನುವುದು ಮಕ್ಕಳ ನಂಬಿಕೆ. ಮಕ್ಕಳು ಮುರಿದ ಕೋಲನ್ನು ಕುದುರೆ ಮಾಡಿ ಆಟವಾಡಬಲ್ಲರು, ಮರಗಳನ್ನು ದೇವರು ಮಾಡಿ, ಅಜ್ಜನನ್ನು ಋಷಿ ಮಾಡಿ, ತನ್ನನ್ನು ಚಿಟ್ಟೆಯಾಗಿ, ಹಕ್ಕಿಯಾಗಿ, ಹುಳವಾಗಿ, ಮೀನಾಗಿ, ಹೂವಾಗಿ ಏನೆಲ್ಲಾ ಆಗಿ ಕಲ್ಪಿಸಿಕೊಂಡು ಅದಕ್ಕೆ ತಕ್ಕಂತೆ ಆಟವಾಡಬಲ್ಲರು. ನಾವೂ ನಮ್ಮೊಳಗಿನ ಕಲ್ಪನೆಗಳನ್ನು ಕಲೆಯ ಮೂಲಕ ಜೀವಂತವಾಗಿಟ್ಟುಕೊಳ್ಳುವುದು ನಮ್ಮೊಳಗಿನ ಮಗುವಿಗೆ ಖುಷಿ ತರುತ್ತದೆ.

  • ಎಷ್ಟೋ ಜನರು ತಮ್ಮಲ್ಲಿನ ಮಗುವನ್ನು ಸಂತೋಷವಾಗಿಟ್ಟುಕೊಳ್ಳಲೇ ಪ್ರಕೃತಿಯ ಸಹವಾಸ ಮಾಡುತ್ತಾರೆ. ಮತ್ತೆ ಮಕ್ಕಳಂತೆ ಆನೆ, ಹುಲಿ, ಸಿಂಹ, ಕರಡಿ, ಮರಗಿಡಗಳು, ಕಾಡು, ತೊರೆ, ಜಲಪಾತಗಳ ನೋಡುತ್ತಾ ಓಡಾಡುತ್ತಾ ನಮ್ಮನ್ನು ನಾವೇ ಒಂದು ಚಿಕ್ಕ ಮಗುವನ್ನು ಮಾತನಾಡಿಸುವಂತೆ ಮಾತಾಡಿಸುತ್ತಾ ಈ ಓಡಾಟವೆಲ್ಲಾ ನಿನಗಾಗಿಯೇ ಮಗು, ಖುಷಿಯಾಯಿತೆ – ಎಂದು ಹೇಳಿಕೊಂಡಾಗ ನಿಜಕ್ಕೂ ನಿಸರ್ಗದ ಮಡಿಲು ಅಮ್ಮನ ಮಡಿಲಿನಷ್ಟೇ ಜೀವದಾಯಿನಿ ಎಂದೆನಿಸದೆ ಇರದು.

  • ಬಾಂಧವ್ಯಗಳಲ್ಲಿ ತೊಡಗಿಕೊಂಡಾಗ ನಮ್ಮ ಮಗುತನವನ್ನು ಪರಸ್ಪರರು ಹೊರತಂದರೆ, ‘ನಮ್ಮೊಳಗಿನ ಮಗು’ವಿನ ಮೂಲಕ ಬಾಂಧವ್ಯವನ್ನು ಬೆಸೆದುಕೊಂಡರೆ, ಆ ಬಾಂಧವ್ಯ ಆಳವಾಗಿಯೂ, ಸಹಜವಾಗಿಯೂ, ಗಟ್ಟಿಯಾಗಿಯೂ ಇರುತ್ತದೆ. ಸಂತೋಷವೇ ಮಕ್ಕಳ ಸಹಜ ಪ್ರವೃತ್ತಿ, ಯಾವುದರಿಂದ ಸಂತೋಷ? ಸಂತೋಷವಾಗಿರುವುದರಿಂದ ಏನು? ಎಂಬ ಪ್ರಶ್ನೆಗಳೇ ಅವರಿಗಿಲ್ಲ. ನಾವೂ ಹಾಗೆಯೇ ಬಾಂಧವ್ಯವು ಸಹಜ ಸಂತೋಷವನ್ನು ಇಮ್ಮಡಿಗೊಳಿಸಲು ಇರುವಂಥದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.