ADVERTISEMENT

ಆ್ಯಂಟಿ ಏಜಿಂಗ್ ಚಿಕಿತ್ಸೆ ತರವೇ?

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 0:06 IST
Last Updated 5 ಜುಲೈ 2025, 0:06 IST
<div class="paragraphs"><p>ಆ್ಯಂಟಿ ಏಜಿಂಗ್ ಚಿಕಿತ್ಸೆ</p></div>

ಆ್ಯಂಟಿ ಏಜಿಂಗ್ ಚಿಕಿತ್ಸೆ

   

ಸದಾ ಸುಂದರವಾಗಿ, ಯೌವನಿಗರಂತೆ ಕಾಣಿಸಿಕೊಳ್ಳಬೇಕು ಎನ್ನುವ ಧೋರಣೆ ಗ್ಲ್ಯಾಮರ್‌ ಲೋಕದಲ್ಲಷ್ಟೇ ಅಲ್ಲ ಶ್ರೀಸಾಮಾನ್ಯ ರಲ್ಲಿಯೂ ಹೆಚ್ಚುತ್ತಿದೆ. ಅದಕ್ಕಾಗಿ, ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಕ್ರೀಮ್‌ಗಳನ್ನು ಹಚ್ಚುವ, ಮಾತ್ರೆಗಳನ್ನು ನುಂಗುವ, ಇಂಜೆಕ್ಷನ್‌ ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಬಾಲಿವುಡ್‌ ನಟಿ, 42 ವರ್ಷದ ಶೆಫಾಲಿ ಜರಿವಾಲ ಇತ್ತೀಚೆಗೆ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದರು. ವರ್ಷದಿಂದಲೂ ‘ಆ್ಯಂಟಿ ಏಜಿಂಗ್‌’ ಚಿಕಿತ್ಸೆ ಪಡೆಯುತ್ತಿದ್ದ ಅವರು, ಅಂದು ಉಪವಾಸದಲ್ಲಿ ಇದ್ದರೂ ಚಿಕಿತ್ಸೆ ಮುಂದುವರಿಸಿದ್ದು ದುರಂತಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ, ಆ್ಯಂಟಿ ಏಜಿಂಗ್‌ ಚಿಕಿತ್ಸೆಯ ಸಾಧಕ– ಬಾಧಕಗಳ ಕುರಿತು ಶಿವಮೊಗ್ಗದ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಅನ್ವಿತಾ ಚಿದಾನಂದ ಅವರ ವಿಶ್ಲೇಷಣೆ ಇಲ್ಲಿದೆ: 

ಕ್ರೀಂ, ಮಾತ್ರೆ, ಇಂಟ್ರಾವೀನಸ್‌ ಇಂಜೆಕ್ಷನ್‌ ಹೀಗೆ ಮೂರು ವಿಧಾನಗಳಿಂದ ಚರ್ಮದ ಮೇಲಿನ ಸುಕ್ಕು ತೆಗೆಯಲಾಗುತ್ತದೆ ಹಾಗೂ ಕಳೆಗುಂದಿದ ಚರ್ಮವನ್ನು ಸರಿಪಡಿಸಲಾಗುತ್ತದೆ.
ಸಾಮಾನ್ಯವಾಗಿ ರೆಟಿನಾಲ್‌ ಎಂಬ ಅಂಶವಿರುವ ಕ್ರೀಂ ಸುಕ್ಕಿನ ನಿವಾರಣೆಗೆ ಸಹಾಯ ಮಾಡುತ್ತದೆ. ಪಿಗ್ಮೆಂಟೇಷನ್‌ ನಿಯಂತ್ರಣಕ್ಕೆ ಕೋಜಿಕ್‌ ಆ್ಯಸಿಡ್‌ ನೆರವಾಗುತ್ತದೆ.

ADVERTISEMENT

ಆದರೆ ವೈದ್ಯರ ಸೂಕ್ತ ಮಾರ್ಗದರ್ಶನವಿಲ್ಲದೆ ಸ್ವಚಿಕಿತ್ಸೆ ಮಾಡಿಕೊಂಡರೆ ಅಪಾಯ ತಪ್ಪಿದ್ದಲ್ಲ. ಚರ್ಮಕ್ಕೆ ಏನನ್ನೇ ಹಚ್ಚಿದರೂ ಅದು ರಕ್ತವನ್ನು ಸೇರಿಕೊಳ್ಳುತ್ತದೆ ಎಂಬುದನ್ನು ಗಮನದಲ್ಲಿ ಇಡಬೇಕು. ಹಾಗೆಯೇ ಯಾವುದೇ ಕ್ರೀಂ ಇರಲಿ, ಚರ್ಮದ ಕೋಶದೊಳಗೆ ಹೋಗುತ್ತಾ ರಕ್ತವನ್ನು ಸೇರುತ್ತದೆ. ಇದು ಸಹಜವಾದ ಪ್ರಕ್ರಿಯೆ. ಕೆಲವರು ವಿಟಮಿನ್‌ ಸಪ್ಲಿಮೆಂಟ್‌ಗಳನ್ನು ಊಟದಂತೆ ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಕೂಡ ಅಪಾಯವನ್ನು ತಂದೊಡ್ಡುತ್ತದೆ. ಎ, ಡಿ, ಇ, ಕೆ ವಿಟಮಿನ್‌ ಸಪ್ಲಿಮೆಂಟ್‌ಗಳನ್ನು ಊಟ ಆದ ಮೇಲಷ್ಟೆ ತೆಗೆದುಕೊಳ್ಳಬೇಕು. 

ಚರ್ಮದ ಮೇಲೆ ಶಿಲೀಂಧ್ರ (ಫಂಗಲ್‌) ಸೋಂಕು ಉಂಟಾಯಿತೆಂದು ಬರುತ್ತಾರೆ. ಅಷ್ಟರಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಟಿರಾಯ್ಡ್‌ ಕ್ರೀಂಗಳನ್ನು ಹಚ್ಚಿ ಆಗಿರುತ್ತದೆ. ಅಂತಹ ಕ್ರೀಂಗಳನ್ನು ವೈದ್ಯರ ಮಾರ್ಗದರ್ಶನವಿಲ್ಲದೇ ಹಚ್ಚುವಂತಿಲ್ಲ. ವೈದ್ಯರು ಕೊಟ್ಟರೂ ಅವರು ತಿಳಿಸಿದ ನಿಗದಿತ ಸಮಯದವರೆಗಷ್ಟೇ ಬಳಸಬೇಕು. ‌

ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗೊಮ್ಮೆ ಮಾಡಿದರೆ ಅದು ಪ್ರಕೃತಿಗೆ ವಿರುದ್ಧವಾದ ನಡೆಯಾಗಿರುತ್ತದೆ. ಯಾವ ವಯಸ್ಸಿನಲ್ಲಿದ್ದರೂ ‘ಪ್ರೆಸೆಂಟಬಲ್‌’ ಆಗಿ ಕಾಣುವುದು ಮುಖ್ಯ. ಚರ್ಮ ಬಿಳಿಯಾಗಿರುವುದು ಚಂದದ ಸಂಕೇತವಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಚರ್ಮದ ಬಣ್ಣ ಯಾವುದೇ ಇರಲಿ, ಅದು ಆರೋಗ್ಯದಿಂದ ನಳನಳಿಸುತ್ತಾ ಇರಬೇಕು. ಅದಕ್ಕಾಗಿ ಉತ್ತಮ ಜೀವನಶೈಲಿ, ಆಹಾರ ಪದ್ಧತಿಯನ್ನು ಅನುಸರಿಸಬೇಕು. ಸದಾ ದೇಹದಲ್ಲಿ ನೀರಿನಂಶ ಸಮಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಕಡೆಗೆ ಒತ್ತು ನೀಡಬೇಕು.

ಡಾ. ಅನ್ವಿತಾ ಚಿದಾನಂದ

ಶೆಫಾಲಿ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆ್ಯಂಟಿ ಏಜಿಂಗ್‌ ಅಷ್ಟೇ ಅಲ್ಲ ಪಿಗ್ಮೆಂಟೇಷನ್‌ಗೂ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದುದು ತಿಳಿದುಬರುತ್ತದೆ. ವಿಟಮಿನ್‌ ‘ಸಿ’ ಮತ್ತು ಗ್ಲುಟೋಥಯೋನ್‌ಗಳನ್ನು ಇಂಟ್ರಾವೀನಸ್‌ ಮೂಲಕ, ಅಂದರೆ ನರಗಳಿಗೆ ಇಂಜೆಕ್ಷನ್‌ ಕೊಟ್ಟುಕೊಳ್ಳುವ ಮೂಲಕ ನೇರವಾಗಿ ಪಡೆಯುತ್ತಿದ್ದರು.

ವೈದ್ಯರ ಮೇಲ್ವಿಚಾರಣೆ ಇಲ್ಲದೆ ಸ್ವತಃ ಇಂಜೆಕ್ಷನ್‌ ತೆಗೆದುಕೊಳ್ಳುವುದರಿಂದ ತೊಂದರೆ ಆಗಬಹುದು. ಈ ರೀತಿ ಸ್ವಚಿಕಿತ್ಸೆ ಮಾಡಿಕೊಂಡಾಗ, ಕೆಲವೊಮ್ಮೆ ಗಾಳಿಯು ನೇರವಾಗಿ ಹೃದಯಕ್ಕೆ ತಲುಪಿ, ಹೃದಯದ ಕಾರ್ಯ ಚಟುವಟಿಕೆಗ‌ಳಿಗೆ ತೀವ್ರ ತೊಂದರೆ ಉಂಟು ಮಾಡುತ್ತದೆ. ಇದರಿಂದ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.