ADVERTISEMENT

ಹಗ್ಗಾಟ ಆಡಿ ಮೈಮಾಟ ನೋಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 19:45 IST
Last Updated 11 ನವೆಂಬರ್ 2018, 19:45 IST
ಜಂಪ್ ರೋಪ್‌
ಜಂಪ್ ರೋಪ್‌   

ಚಿ ಕ್ಕಂದಿನಲ್ಲಿ ಹಗ್ಗದಾಟ (ಸ್ಕಿಪಿಂಗ್) ಆಡಿ ನಲಿದಿರುತ್ತೇವೆ. ಈಗ ಅದೇ ಮಾದರಿಯಲ್ಲಿ ಇರುವ ಆದರೆ, ಭಿನ್ನವಾಗಿ ಮಾಡುವ ಜಂಪ್‌ರೋಪ್‌ ಕ್ರೀಡೆಯಾಗಿಯೂ ಮತ್ತು ಫಿಟ್‌ನೆಸ್ ವ್ಯಾಯಾಮವಾಗಿಯೂ ಜನಪ್ರಿಯವಾಗುತ್ತಿದೆ.

ರೋಪ್‌ (ಹಗ್ಗ) ಮತ್ತು ಜಂಪ್‌ (ಜಿಗಿತ) ಸಂಗಮವೇ ಜಂಪ್‌ರೋಪ್. ಯಾವುದೇ ಕ್ರೀಡೆಯನ್ನು ಆರಂಭಿಸುವಾಗ ವ್ಯಾಯಾಮವಾಗಿ ಜಂಪ್‌ರೋಪ್ ಆಡುತ್ತಾರೆ.

ವಿವಿಧ ದೇಶಗಳಲ್ಲಿ ಜಂಪ್‌ರೋಪ್‌ ಅಕಾಡೆಮಿಗಳು ಸಹ ಆರಂಭವಾಗಿವೆ. ಫಿಟ್‌ನೆಸ್ ಕೇಂದ್ರಗಳು, ಜಿಮ್‌ಗಳಲ್ಲಿಯೂ ಜಂಪ್‌ರೋಪ್‌ಗೆ ಆದ್ಯತೆ ಇದೆ.

ADVERTISEMENT

10ನೇ ವಯಸ್ಸಿನ ಮಕ್ಕಳಿಂದ ಹಿಡಿದು ಯಾವುದೇ ವಯಸ್ಸಿನವರು ಅವರವರ ದೈಹಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಇದನ್ನು ಆಡಬಹುದಾಗಿದೆ.

ಒಂದು ಗಂಟೆ ಜಂಪ್‌ರೋಪ್ ಮಾಡಿದರೆ 1,300 ಕ್ಯಾಲೋರಿಗಳಷ್ಟು ಕೊಲೆಸ್ಟ್ರಾಲ್ ಕರಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಇದು ಹೆಚ್ಚು ಸಹಕಾರಿ. ಅಲ್ಲದೆ, ನಿಯಮಿತವಾಗಿ ಮಾಡುವುದರಿಂದ ಸ್ನಾಯುಗಳು ಬಲಿಷ್ಠವಾಗುತ್ತವೆ.

ವರ್ಲ್ಡ್ ಹಾರ್ಟ್ ಫೆಡರೇಷನ್‌ ಸಹ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಜಂಪ್‌ರೋಪ್ ಆಡಲು ಸೂಚಿಸಿದೆ. ಕ್ಷಯ (ಟಿಬಿ) ನಿಯಂತ್ರಣಕ್ಕೂ ಜಂಪ್‌ರೋಪ್ ಸಹಕಾರಿಯಾಗಿದೆ.

ಆರು ಕಿ.ಮೀ ಓಡುವುದು ಹತ್ತು ನಿಮಿಷ ಜಂಪ್‌ರೋಪ್ ಆಡುವುದಕ್ಕೆ ಸಮ ಎನ್ನುತ್ತಾರೆ ತರಬೇತುದಾರರು. ಹಗ್ಗದ ಎರಡೂ ತುದಿಗಳನ್ನು ಹಿಡಿವರು ಅದನ್ನು ತಿರುಗಿಸುತ್ತಾ ಜಿಗಿಯುವುದೇ ಈ ಜಂಪ್‌ರೋಪ್ ಆಟ. ಹೀಗೆ ಮಾಡುವಾಗ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ.

ಆರಂಭಿಸುವುದು ಹೇಗೆ:‌ ಬೆಳಿಗ್ಗೆ ಎದ್ದು ಐದರಿಂದ ಹತ್ತು ನಿಮಿಷ ಓಡಿ ವಾರ್ಮ್‌ ಅಪ್‌ ಮಾಡಿಕೊಂಡ ನಂತರ ಜಂಪ್‌ರೋಪ್ ಆರಂಭಿಸಬಹುದು. ಹೊಸದಾಗಿ ಮಾಡುವವರು ಮೊದಲು ಹತ್ತು ನಿಮಿಷ ಮಾತ್ರ ಮಾಡಬೇಕು. ನಂತರ ದಿನದಿಂದ ದಿನಕ್ಕೆ ಅದನ್ನು ಹೆಚ್ಚಿಸುತ್ತಾ ಹೋಗಬಹುದು.

ಉಸಿರಾಟದ ತೊಂದರೆ ಇರುವವರು ಮೊದಲು ಇದನ್ನು ಹೆಚ್ಚು ಮಾಡಬಾರದು. ಅಂತಹವರು ತರಬೇತುದಾರರ ಸಲಹೆ ಪಡೆದು ಆರಂಭಿಸಬಹುದು. ಗರ್ಭಿಣಿಯರು ಇದರಿಂದ ದೂರ ಇರುವುದು ಒಳ್ಳೆಯದು.

ಜಂಪ್‌ರೋಪ್ ಕುರಿತು:ಜಂಪ್‌ರೋಪ್ ಭಾರತದ ಆಟ. ಆದರೆ, ಅದಕ್ಕೆ ಆಧುನಿಕ ಸ್ವರೂಪ ನೀಡಿದ್ದು ಬೆಲ್ಜಿಯಂ. ಹಗ್ಗವನ್ನು ತಿರುಗಿಸುತ್ತಾ ಅದರೊಂದಿಗೆ ಮಾಡುವ ಕಸರತ್ತುಗಳು ರೋಮಾಂಚನ ಉಂಟು ಮಾಡುತ್ತವೆ.

ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಜಂಪ್‌ರೋಪ್‌ನಲ್ಲಿ ಎಂಡೋರೆನ್ಸ್‌ (ಮೂರು, ನಾಲ್ಕು ಅಥವಾ ಐದು ನಿಮಿಷ ಮಾಡುವುದು), ಡಬಲ್ ಅಂಡರ್ (ತಲೆ ಮೇಲಿಂದ ಎರಡು ಬಾರಿ ಹಗ್ಗವನ್ನು ದಾಟಿಸುವುದು) ಎಂಬ ಎರಡು ವಿಧಗಳಿವೆ. ಇದನ್ನು ಸಂಗೀತದೊಂದಿಗೆ ಮಾಡಿದರೆ ಹೆಚ್ಚು ಖುಷಿ ಸಿಗುತ್ತದೆ ಎನ್ನುತ್ತಾರೆ ಕರ್ನಾಟಕ ಜಂಪ್‌ರೋಪ್ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್.

30 ಸೆಕೆಂಡ್, ಡಬಲ್ ಅಂಡರ್, ಪ್ರೀಸ್ಟೈಲ್ (72 ಸೆಕೆಂಡ್), ಎಂಡೋರೆನ್ಸ್, ತ್ರಿಬಲ್ ಅಂಡರ್, 30 ಸೆಕೆಂಡ್ ರಿಲೇ (4 ಜನ), ಡಬಲ್ ಅಂಡರ್ ರಿಲೇ, ಡಬಲ್‌ಟಚ್, ಡಬಲ್‌ಟಚ್ ಫೇರ್ ರಿಲೇ, ಚೈನಿಜುವಲ್, ಡಬಲ್‌ಟಚ್‌ಫೇರ್ ಪ್ರೀಸ್ಟೈಲ್, ಡೆಮೊ ಎಂಬ 12 ವಿಧಗಳು ಸ್ಪರ್ಧೆಯಲ್ಲಿ ಇವೆ ಎಂದು ಮಾಹಿತಿ ನೀಡಿದರು.

2008–09ರಲ್ಲಿ ಕರ್ನಾಟಕ ಜಂಪ್‌ರೋಪ್ ಸಂಸ್ಥೆ ಸ್ಥಾಪನೆಯಾಯಿತು. ಕೊಪ್ಪಳ, ರಾಯಚೂರು, ಬೀದರ್, ಬಾಗಲಕೋಟೆ, ಬೆಂಗಳೂರು, ಹೊಸಪೇಟೆಗಳಲ್ಲಿ ಈ ಕ್ರೀಡೆ ಇದೆ.

30 ಸೆಕೆಂಡ್‌ಗೆ 87 ಬಾರಿ ಜಿಗಿದಿರುವುದು ರಾಜ್ಯದಲ್ಲಿ ಆಗಿರುವ ದಾಖಲೆ. ಅದೇ ರೀತಿ ದೇಶದಲ್ಲಿ 93 ಬಾರಿ ಜಿಗಿದಿರುವ ದಾಖಲೆ ಆಗಿದೆ.

ಪ್ರಯೋಜನಗಳು
lಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.

lಮೂಳೆಗಳು ಬಲಿಷ್ಠವಾಗುತ್ತವೆ.

lಎತ್ತರ ಹೆಚ್ಚುತ್ತದೆ.
lಕೊಬ್ಬಿನ ಅಂಶ ಕಡಿಮೆ ಆಗುತ್ತದೆ.

lಪಚನ ಕ್ರಿಯೆ ವೃದ್ಧಿಯಾಗುತ್ತದೆ.

lಮೈಗ್ರೇನ್ ನಿವಾರಣೆ ಆಗುತ್ತದೆ.

lಸ್ತನ ಕ್ಯಾನ‌್ಸರ್ ಬಾರದಂತೆ ತಡೆಗಟ್ಟುತ್ತದೆ.

lತಾಯಿಯ ಎದೆಹಾಲು ಹೆಚ್ಚುತ್ತದೆ

ಯಾವ ಆಹಾರ ತೆಗೆದುಕೊಳ್ಳಬೇಕು
lಬಾಳೆಹಣ್ಣು
l ಹಾಲು
l ಮೊಳಕೆಕಾಳು
l ಒಣಕೊಬ್ಬರಿ
lನೆನಸಿದ ಕಡಲೆಕಾಳು
lಹುರುಳಿಕಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.