ADVERTISEMENT

ಕ್ಷೇಮ ಕುಶಲ: ಮೂತ್ರಪಿಂಡಗಳ ದಂಡನೆ ಬೇಡ

ಡಾ.ಕುಶ್ವಂತ್ ಕೋಳಿಬೈಲು
Published 6 ಮೇ 2025, 0:22 IST
Last Updated 6 ಮೇ 2025, 0:22 IST
ಮೂತ್ರಪಿಂಡ
ಮೂತ್ರಪಿಂಡ   
ರೋಗಿಯು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದ ನೋವುನಿವಾರಕ ಔಷಧಗಳನ್ನು ಸೇವಿಸುವುದು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಹುದು.

ಮೂತ್ರಪಿಂಡಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ತ್ಯಾಜ್ಯ ಪದಾರ್ಥಗಳನ್ನು ಮೂತ್ರದ ಮೂಲಕ ಹೊರಹಾಕುವುದು ಮಾತ್ರ ಮೂತ್ರಪಿಂಡಗಳ ಕೆಲಸ ಎಂದು ಹೆಚ್ಚಿನವರು ತಿಳಿದುಕೊಂಡಿರುವುದು ಪೂರ್ಣಸತ್ಯವಲ್ಲ. ನಮ್ಮ ರಕ್ತದೊತ್ತಡದ ನಿಯಂತ್ರಣ, ಕೆಂಪುರಕ್ತಕಣಗಳ ಉತ್ಪಾದನೆ, ದೇಹದೊಳಗಿನ ನೀರಿನ ಅಂಶದ ನಿಯಂತ್ರಣ ಮತ್ತು ವಿಟಮಿನ್ ಡಿ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲೂ ಮೂತ್ರಪಿಂಡಗಳು ಆರೋಗ್ಯದಿಂದ ಇರುವುದು ಅತ್ಯಗತ್ಯ.

ನಮ್ಮ ಹೃದಯ, ಶ್ವಾಸಕೋಶ, ಮಿದುಳು ಮುಂತಾದ ಅಂಗಾಂಗಗಳ ಬಗ್ಗೆ ವಹಿಸುವಷ್ಟು ಕಾಳಜಿಯನ್ನು ನಾವು ಮೂತ್ರಪಿಂಡಗಳ ಬಗ್ಗೆ ವಹಿಸುವುದಿಲ್ಲ. ಇಂದು ಬಹಳಷ್ಟು ಜನರು ಮೂತ್ರಪಿಂಡಗಳ ವೈಫಲ್ಯದಿಂದ ಬಳಲುವುದನ್ನು ನಾವು ಕಾಣಬಹುದು. ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಅವುಗಳು ಮಾಡುವ ರಕ್ತ ಶುದ್ದೀಕರಣದ ಕೆಲಸವನ್ನು ನಾವು ಡಯಾಲಿಸಿಸ್ ಮಾಡುವ ಮೂಲಕ ಮಾಡಬಹುದು. ಆದರೆ ಮೂತ್ರಪಿಂಡಗಳು ದೇಹದೊಳಗೆ ಕಾಪಾಡುತ್ತಾ ಬರುವ ಇತರ ಸೂಕ್ಷ್ಮ ಸಮತೋಲನಗಳು ಬಿಗಡಾಯಿಸುವ ಕಾರಣ ಡಯಾಲಿಸಿಸ್ ಮೇಲಿರುವ ರೋಗಿಗಳ ಆರೋಗ್ಯವು ಯಾವುದೇ ಕ್ಷಣದಲ್ಲಿ ಹದಗೆಡಬಹುದು.

ಮೂತ್ರಪಿಂಡಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡುವ ಬಗ್ಗೆ ನಾವು ಬಾಲ್ಯದಿಂದಲೇ ನಿಗಾ ವಹಿಸಬೇಕು. ಮಗು ಹುಟ್ಟಿದ ನಲವತ್ತೆಂಟು ಗಂಟೆಯೊಳಗೆ ಮೂತ್ರವಿಸರ್ಜನೆಯನ್ನು ಮಾಡದಿದ್ದರೆ ಮಗುವಿಗೆ ಹುಟ್ಟಿನಿಂದಲೇ ಮೂತ್ರಪಿಂಡದ ಸಮಸ್ಯೆಯಿರಬಹುದು. ಮೂತ್ರಪಿಂಡ ಮತ್ತು ಮೂತ್ರಕೋಶದ ಮಾರ್ಗದಲ್ಲಿ ಯಾವುದಾದರೂ ಅಡಚಣೆಗಳಿದ್ದರೆ, ಅವನ್ನು ತಾಯಿಯ ಗರ್ಭದ ಸ್ಕ್ಯಾನಿಂಗ್‌ನಿಂದ ಪತ್ತೆ ಹಚ್ಚಬಹುದು. ಯಾವುದಾದರೂ ತೊಂದರೆಗಳಿದ್ದರೆ ಅಂಥ ಅಡಚಣೆಗಳನ್ನು ಮಗು ಜನಿಸಿದ ನಂತರ ಬಗೆಹರಿಸಲು ಸಾಧ್ಯವಾದರೆ ಆಗ ಮೂತ್ರಪಿಂಡಗಳ ಮೇಲಿನ ಒತ್ತಡವು ಕಡಿಮೆಯಾಗುವುದು. ಮಕ್ಕಳಲ್ಲಿ ಉಂಟಾಗುವ ಮೂತ್ರನಾಳದ ಸೋಂಕನ್ನು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳಲ್ಲಿ ಶೇ 90ರಷ್ಟು ಮೂತ್ರನಾಳದ ಸೋಂಕನ್ನು ‘ಈ ಕೋಲೈ’ (E Coli) ಎಂಬ ಬ್ಯಾಕ್ಟೀರಿಯಾ ಉಂಟುಮಾಡುತ್ತದೆ. ಈ ಸೋಂಕನ್ನು ಸಮರ್ಪಕವಾದ ಆ್ಯಂಟಿಬಯಾಟಿಕ್ ಮೂಲಕ ಶಮನ ಮಾಡದಿದ್ದಲ್ಲಿ ಆ ಸೋಂಕು ಮೂತ್ರಪಿಂಡಕ್ಕೆ ವ್ಯಾಪಿಸುತ್ತದೆ. ಅದು ಭವಿಷ್ಯದಲ್ಲಿ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವುದೇ ಮಗುವಿಗೆ ಮೂತ್ರನಾಳದ ಸೋಂಕು ಉಂಟಾದಲ್ಲಿ ಅದು ಗುಣವಾದ ಬಳಿಕ ಮೂತ್ರಪಿಂಡದ ಮೇಲೆ ಆ ಸೋಂಕು ಮಾಡಿರಬಹುದಾದ ಪರಿಣಾಮವನ್ನು ಪತ್ತೆ ಹಚ್ಚಬೇಕು. ನೆಫ್ರೋಟಿಕ್ (Nephrotic) ಮತ್ತು ಗ್ಲೊಮೆರುಲೊನೆಫ್ರೈಟಿಸ್ (Glomerulonephritis) ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಅದರಿಂದಲೂ ಮೂತ್ರಪಿಂಡಗಳ ವೈಫಲ್ಯ ಉಂಟಾಗಬಹುದು. ತೀವ್ರವಾದ ರಕ್ತಸ್ರಾವದ ಸಂದರ್ಭದಲ್ಲಿ ಅಥವಾ ಅತಿಯಾದ ವಾಂತಿಭೇದಿಗಳ ಸಮಯದಲ್ಲಿ ದೇಹದೊಳಗೆ ನೀರಿನ ಪ್ರಮಾಣವು ಕಡಿಮೆಯಾಗುತ್ತದೆ. ಮೂತ್ರಪಿಂಡಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ದೇಹದೊಳಗೆ ನೀರಿನ ಕೊರತೆಯುಂಟಾಗಬಾರದು. ಇಂಥ ಸಂದರ್ಭಗಳಲ್ಲಿ ರಕ್ತವರ್ಗಾವಣೆ ಮತ್ತು ಡ್ರಿಫ್ಸ್ ಚಿಕಿತ್ಸೆ ದೊರಕಲು ತಡವಾದರೆ ಅವುಗಳು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು.

ADVERTISEMENT

ನಾವುಗಳು ಸೇವಿಸುವ ಔಷಧಗಳು ಅಥವಾ ದೇಹದೊಳಗೆ ಸೇರಿಕೊಳ್ಳುವ ಯಾವುದೇ ರಾಸಾಯನಿಕ ಪದಾರ್ಥಗಳು ನಮ್ಮ ಯಕೃತ್ತು ಅಥವಾ ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ. ಹೆಚ್ಚಿನ ನೋವುನಿವಾರಕ ಔಷಧಗಳು ಮತ್ತು ಕೆಲವು ಆ್ಯಂಟಿಬಯಾಟಿಕ್ ಔಷಧಗಳು ಮೂತ್ರಪಿಂಡದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ರೋಗಿಯು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದ ನೋವುನಿವಾರಕ ಔಷಧಗಳನ್ನು ಸೇವಿಸುವುದು ಕೂಡ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಹುದು. ಮಧುಮೇಹ ಮತ್ತು ರಕ್ತದೊತ್ತಡ ದೇಹದ ಎಲ್ಲಾ ಅಂಗಾಂಗಗಳ ಮೇಲೆ ತಮ್ಮ ದುಷ್ಪರಿಣಾಮವನ್ನು ಬೀರುತ್ತವೆ. ಈ ಕಾಯಿಲೆಗಳು ಎಲ್ಲಾ ಪ್ರಮುಖ ಅಂಗಾಂಗಗಳಿಗೆ ರಕ್ತಸರಬರಾಜು ಮಾಡುವ ರಕ್ತನಾಳಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಭಾರತದಲ್ಲಿ ಕೋಟ್ಯಂತರ ಜನರು ಚಿಕ್ಕವಯಸ್ಸಿನಲ್ಲಿ ಮಧುಮೇಹ ಮತ್ತು ರಕ್ತದೊತ್ತಡದ ರೋಗಗಳಿಂದ ಬಳಲುತ್ತಿದ್ದಾರೆ. ಅಂಥ ರೋಗಿಗಳು ತಮ್ಮ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳದಿದ್ದರೆ ಕಾಲ ಕ್ರಮೇಣದಲ್ಲಿ ಅವು ಮೂತ್ರಪಿಂಡಗಳ ವೈಫಲ್ಯವನ್ನು ಉಂಟುಮಾಡಬಹುದು.

ನಮ್ಮ ದೇಹದಲ್ಲಿ ಒಂದು ಮೂತ್ರಪಿಂಡವು ವಿಫಲವಾದಲ್ಲಿ ಮತ್ತೊಂದು ಮೂತ್ರಪಿಂಡವು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಆರೋಗ್ಯವು ಹದಗೆಡುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಎರಡೂ ಮೂತ್ರಪಿಂಡಗಳು ವಿಫಲವಾದಲ್ಲಿ ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳಬಹುದು. ಅದಕ್ಕೆ ಸೂಕ್ತ ದಾನಿಯ ಮೂತ್ರಪಿಂಡಗಳು ಲಭ್ಯವಿರಬೇಕಾಗುತ್ತವೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯು ಈ ಹೊಸ ಮೂತ್ರಪಿಂಡದ ಮೇಲೆ ದಾಳಿಯನ್ನು ಮಾಡದಂತೆ ತಡೆಯಲು ರೋಗಿಯ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬೇಕಾಗುತ್ತದೆ. ಮೂತ್ರಪಿಂಡಗಳ ಕಸಿ ಮಾಡುವುದು ಅಥವಾ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ನಮ್ಮ ಜೀವನದ ಗುಣಮಟ್ಟವನ್ನು ಕುಗ್ಗಿಸಬಹುದು. ನಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಹೆಚ್ಚಿನ ಗಮನಹರಿಸುವುದು ಉತ್ತಮ. ಸೂಕ್ತ ಪ್ರಮಾಣದ ನೀರನ್ನು ಸೇವಿಸುವುದು ಮತ್ತು ಮೂತ್ರಪಿಂಡಗಳ ಸ್ಥಿತಿಗತಿಗಳನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. →→→→ v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.