ADVERTISEMENT

ಕಾಡುವ ತಾಯಿಯ ನೆನಪು; ನಿಲ್ಲದ ಅಳು

ಸುನೀತಾ ರಾವ್
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST

* ನನಗೆ 22 ವರ್ಷ, 12 ವರ್ಷವಿರುವಾಗ ನನ್ನ ತಾಯಿ ಮರಣ ಹೊಂದಿದಳು. ಆದರೆ ಅವತ್ತಿನಿಂದ ಇವತ್ತಿನವರೆಗೂ ಅವಳನ್ನ ನೆನೆಯದ ದಿನವೇ ಇಲ್ಲಾ. ತಾಯಿಯ ಬಗ್ಗೆ ಇರುವ ಹಾಡನ್ನು ಕೇಳಿದರೆ ನನಗೆ ತಕ್ಷಣ ಅಳು ಬರುತ್ತೆ, ಕೆಲವೊಂದಿಷ್ಟು ಜನ ಅದನ್ನು ನೋಡಿ ಅಪಹಾಸ್ಯ ಮಾಡಿದ್ದು ಉಂಟು. ಆದರೆ ನನಗೆ ಅಳು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಏನು ಮಾಡಲಿ?‌

ಹೆಸರು, ಊರು ಬೇಡ

ಅಳುವುದರಿಂದ ನಮ್ಮೊಳಗಿರುವ ಸೂಪ್ತಭಾವನೆಗಳು ಹೊರ ಬರುತ್ತವೆ. ಚಿಂತಿಸಬೇಡಿ. ನಿಮ್ಮೊಳಗಿನ ನೋವು ಕಾಲ ಕಳೆದಂತೆ ಕಡಿಮೆಯಾಗುತ್ತದೆ. ಮೊದಲು ನಿಮ್ಮ ಸಂತೋಷವನ್ನು ಹಾಳು ಮಾಡುವ ದೃಷ್ಟಿಕೋನ, ಶಬ್ದ ಹಾಗೂ ಪರಿಮಳವು ಅಂತಿಮವಾಗಿ ನಿಮಗೆ ಸಂತೋಷ ಸಿಗುವಂತೆ ಮಾಡುತ್ತವೆ. ನಿಮ್ಮ ಭಾವನೆ ನಿಮ್ಮದು. ನಿಮ್ಮಿಂದ ಮಾತ್ರ ನಿಮ್ಮನ್ನು ಕಾಳಜಿ ಮಾಡಿಕೊಳ್ಳಲು ಸಾಧ್ಯ. ಯಾವಾಗ ನಿಮಗೆ ನೋವು ಎನ್ನಿಸುವುದೋ ಆಗ ಅತ್ತು ಬಿಡಿ. ನಿಮ್ಮನ್ನು ಅರ್ಥ ಮಾಡಿಕೊಳ್ಳದ ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದರೆ, ನಿಮ್ಮ ಒಳ್ಳೆಯದಕ್ಕಾಗಿ ನೀವು ಇರುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಮುಂದೆ ಸಾಗಬೇಕು. ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ, ನಿಮ್ಮನ್ನು ಅಣುಕಿಸುವವರಿಗೆ ತೋರಿಸುವ ಸಲುವಾಗಿಯಾದರೂ ನಿಮ್ಮನ್ನು ನೀವು ಕೆಲವೊಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ. ಇದರಿಂದ ನಿಮ್ಮ ಮನಸ್ಸು ಹಾಗೂ ದೇಹ ಎರಡಕ್ಕೂ ಚಾಲೆಂಜ್ ಸಿಗುತ್ತದೆ. ಜೊತೆಗೆ ಇದು ನಿಮ್ಮನ್ನು ಒಂದು ಆರಾಮದ ವಲಯದಿಂದ ಹೊರ ಬರುವಂತೆ ಮಾಡುತ್ತದೆ.

ADVERTISEMENT

ಚಟುವಟಿಕೆ ಎಂದರೆ ಅದು ಬೇರೆಯವರಿಗೆ ಸಹಾಯ ಮಾಡುವ ಸಲುವಾಗಿ ಸ್ವಯಂಸೇವಕರಾಗಿ ಕೆಲಸ ಮಾಡುವುದು ಆಗಿರಬಹುದು. ಕ್ರೀಡಾ ಕ್ಲಬ್‌ಗಳಿಗೆ ಸೇರುವುದು ಆಗಿರಬಹುದು, ವಾರಕ್ಕೊಮ್ಮೆ ಸ್ನೇಹಿತರ ಜೊತೆ ಸಿನಿಮಾಗಳಿಗೆ ಹೋಗುವುದು ಆಗಿರಬಹುದು. ಈ ರೀತಿಯದ್ದು ಏನಾದರೂ ಮಾಡಿ. ಇದರಿಂದ ನೀವು ಬೇಗ ಹೊರ ಬರಬಹುದು.

*

ನನಗೆ 24 ವರ್ಷ. 10ನೇ ತರಗತಿಯಲ್ಲಿ ಫೇಲಾಗಿ ಓದು ನಿಲ್ಲಿಸಿದ್ದೇನೆ. ನನ್ನ ತಂದೆ–ತಾಯಿಗಳಿಗೆ ಸಂಬಂಧಿಕರಿಂದ ಮೋಸವಾಗಿತ್ತು. ಮನೆಯ ಆಸ್ತಿಯ ವಿಷಯಕ್ಕೆ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ನನಗೆ ಸ್ವಂತ ಮನೆ ಇದೆ. ಕೆಲಸವಿಲ್ಲ. ಹಣದ ಸಮಸ್ಯೆ ಇಲ್ಲ. ಆದರೆ ನನಗೆ ಕೆಲವು ದಿನಗಳಿಂದ ಭವಿಷ್ಯದ ಬಗ್ಗೆ ಯೋಚನೆ ಬಂದು ನೆಮ್ಮದಿ ಇಲ್ಲದಂತಾಗಿದೆ. ಜೊತೆಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ನನಗೆ ಸ್ನೇಹಿತರು ಇಲ್ಲ. ಬಂಧುಗಳು ಶತ್ರುಗಳಾಗಿದ್ದಾರೆ. ಹಾಗಾಗಿ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಪ್ರತಿದಿನ 6 ಕೀಮಿ ವಾಕ್ ಮಾಡುತ್ತೇನೆ. ನನ್ನ ಮನಸ್ಸು ಶಾಂತವಾಗಿರಲು ಏನು ಮಾಡಬೇಕು?

ಭಾಸ್ಕರ, ರಾಮನಗರ

ನಿಮ್ಮದು ಇನ್ನು ಎಳೆಯ ವಯಸ್ಸು. ಈ ವಯಸ್ಸಿನಲ್ಲಿ ನೀವು ಸುಮ್ಮನೆ ಕೂರಲು ಹೇಗೆ ಸಾಧ್ಯ? ಮೊದಲು ನೀವು ಮಾಡಬೇಕಿರುವುದು ಏನೆಂದರೆ, ನಿಮ್ಮನ್ನು ನೀವು ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ. ನಿಮಗೆ ಹಣದ ಕೊರತೆ ಇಲ್ಲದಿದ್ದರೆ ಕೆಲವು ಸಾಮಾಜಿಕ ಕೆಲಸಗಳನ್ನು ಮಾಡಿ. ಅದು ನಿಮ್ಮ ಹಳ್ಳಿಗಾಗಿಯಾದರೂ ಆಗಿರಬಹುದು. ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ನಿಮ್ಮಿಂದ ಅಂತಹ ಋಣಾತ್ಮಕ ಯೋಚನೆಗಳು ಹೊರ ಹೋಗಲು ಸಾಧ್ಯ ಹಾಗೂ ನಿಮ್ಮೊಳಗಿನ ಅಭದ್ರತೆಯ ಭಾವ ಕಡಿಮೆಯಾಗಲು ಸಾಧ್ಯ.

**

ನನಗೆ 24 ವರ್ಷ. ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಸಮಸ್ಯೆ ಎಂದರೆ ನನ್ನ ಗಂಡ ಅತಿಯಾಗಿ ಕುಡಿಯುತ್ತಾನೆ. ಕೆಲಸಕ್ಕೂ ಹೋಗುವುದಿಲ್ಲ. ಹಾಗಾಗಿ ನನಗೆ ಅವನ ಮೇಲೆ ಕೋಪ. ಅವನಿಗೆ ಅತಿಯಾಗಿ ಹೊಡೆಯುತ್ತೇನೆ. ನನ್ನ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲು ನಾನು ಏನು ಮಾಡಬೇಕು?

ಹೆಸರು, ಊರು ಬೇಡ

ನಿಮ್ಮ ಪರಿಸ್ಥಿತಿಯನ್ನು ಕೇಳಿದ ಮೇಲೆ ನಾನು ಹೇಳುವುದು ಏನೆಂದರೆ, ನೀವು ನಿಮ್ಮ ಗಂಡನನ್ನು ಡಿಅಡಿಕ್ಷನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ. ಮನೆ ಹಿರಿಯರು ಹಾಗೂ ಡಿಅಡಿಕ್ಷನ್ ಕೇಂದ್ರದ ಸಹಾಯದಿಂದ ನಿಮ್ಮ ಗಂಡನ ಕುಡಿತವನ್ನು ನಿಧಾನಕ್ಕೆ ಕಡಿಮೆ ಮಾಡಬಹುದು. ಕೊನೆಗೆ ಅವರು ಸಂಪೂರ್ಣವಾಗಿ ಕುಡಿತವನ್ನು ಬಿಡಬಹುದು. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಅವರು ಮತ್ತೆ ಕೆಲಸಕ್ಕೆ ಮರಳಬಹುದು. ಅದರೊಂದಿಗೆ ಇಂತಹ ವಿಷಯವನ್ನು ಎದುರಿಸುವಾಗ ನಿಮ್ಮಲ್ಲಿ ತುಂಬಾ ತಾಳ್ಮೆ ಇರಬೇಕು. ನೀವು ನಿಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು. ನಿಮ್ಮೊಳಗೆ ನಿಮ್ಮನ್ನು ಕೆರಳಿಸುತ್ತಿರುವ ಭಾವನೆಗಳನ್ನು ಗಮನಿಸಿ. ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಅಂತಹ ಪರಿಸ್ಥಿತಿಯಿಂದ ದೂರವಿರಿ. ಪರಿಸ್ಥಿತಿಗೆ ಪ್ರತಿಕ್ರಿಯೆ ನೀಡುವ ಮೊದಲು ಜೋರಾಗಿ ಉಸಿರಾಡಿ. ಇದರಿಂದ ನೀವು ಶಾಂತರಾಗಬಹುದು. ಇಂತಹ ಪರಿಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.