ADVERTISEMENT

ಕೊರೊನಾ ಒಂದಷ್ಟು ತಿಳಿಯೋಣ: ಮುಖಗವಸು ಸ್ವಚ್ಛತೆ ಕಡೆಗಣಿಸಿದರೆ ಅಪಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 19:08 IST
Last Updated 22 ಅಕ್ಟೋಬರ್ 2020, 19:08 IST
ಡಿ.ಎಂ. ಹೆಗಡೆ
ಡಿ.ಎಂ. ಹೆಗಡೆ   

ಬೆಂಗಳೂರು: ಮರುಬಳಕೆ ಮಾಡಬಹುದಾದ ಮುಖಗವಸನ್ನು ಪ್ರತಿನಿತ್ಯ ಸ್ವಚ್ಛ ಮಾಡಿಕೊಳ್ಳದಿದ್ದಲ್ಲಿ ಕೊರೊನಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಮಾಸ್ಕ್‌ ಎಷ್ಟೇ ಉತ್ತಮ ದರ್ಜೆಯದಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದಲ್ಲಿ ವೈರಾಣುಗಳನ್ನು ಮುಖದ ಮೇಲೆಯೇ ಹೊತ್ತುಕೊಂಡು ತಿರುಗಾಡಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್‌ಗೆ ಈವರೆಗೂ ನಿರ್ದಿಷ್ಟ ಔಷಧ ಸಂಶೋಧಿಸಲ್ಪಟ್ಟಿಲ್ಲ. ಹಾಗಾಗಿ ಕೊರೊನಾ ಸೋಂಕು ಹರಡುವಿಕೆ ತಡೆಯಲು ಕಡ್ಡಾಯವಾಗಿ ಮುಖಗವಸು ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಕೈಗಳನ್ನು ಸೋಪಿನ ನೀರು ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಇದಕ್ಕೆ ಪೂರಕವಾಗಿ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದಿದ್ದಲ್ಲಿ ಸೋಂಕು ಹರಡುವಿಕೆ ವೇಗ ಪಡೆಯಲಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

‘ಸೋಂಕಿತ ವ್ಯಕ್ತಿ ಸೀನಿದಾಗ ಹಾಗೂ ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳ ಮೂಲಕ ವೈರಾಣುಗಳು ಇನ್ನೊಬ್ಬ ವ್ಯಕ್ತಿಯ ದೇಹ ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಔಷಧ ಬರುವವರೆಗೆ ಪ್ರತಿಯೊಬ್ಬರೂ ಮಾಸ್ಕ್‌ ಅನ್ನು ಧರಿಸಬೇಕು. ಈಗ ಮಾರುಕಟ್ಟೆಯಲ್ಲಿ ವಿವಿಧ ದರ್ಜೆಯ ಮುಖಗವಸುಗಳು ಬಂದಿವೆ. ಬಳಸಿ ಎಸೆಯಬಹುದಾದ ಮಾಸ್ಕ್‌ ಅನ್ನು ಎಲ್ಲರಿಗೂ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಪ್ರತಿನಿತ್ಯ ಸೋಪಿನಿಂದ ಬಟ್ಟೆಯನ್ನು ತೊಳೆಯುವ ರೀತಿಯಲ್ಲಿಯೇ ಸ್ವಚ್ಛಮಾಡಿಕೊಳ್ಳಬೇಕು’ ಎಂದು ಆರೋಗ್ಯ ಹೋಲಿಸ್ಟಿಕ್‌ ಹೆಲ್ತ್ ಕೇರ್‌ನ ಔಷಧ ರಹಿತ ಚಿಕಿತ್ಸಕ ಡಿ.ಎಂ. ಹೆಗಡೆ ತಿಳಿಸಿದರು.

ADVERTISEMENT

ಭಯದಿಂದ ರೋಗ ಉಲ್ಭಣ: ‘ಇತ್ತೀಚಿನ ದಿನಗಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಕೋವಿಡ್‌ ಪೀಡಿತರಾಗಿದ್ದೇವೆ ಎಂದು ಭಯಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಭಾವೋದ್ವೇಗಗಳಿಂದ ಮನುಷ್ಯರಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾದಾಗ ಯಾವುದೇ ರೋಗಾಣು ಸೇರಿಕೊಂಡರೆ ರೋಗವು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಮನಸ್ಸನ್ನು ಪ್ರವೇಶಿಸಿರುವ ಭಯದಿಂದ ಮೊದಲು ಹೊರಗೆ ಬರಬೇಕು. ಬದಲಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದು ವಿವರಿಸಿದರು.

‘ಈ ವೈರಸ್‌ ಕೂಡ ಜೀವಿಯೊಂದರ ದೇಹದಲ್ಲಿ ಆಶ್ರಯ ಪಡೆದುಕೊಂಡಾಗ ಮಾತ್ರ ಬದುಕುತ್ತದೆ. ಸಾಕಷ್ಟು ರೋಗ ನಿರೋಧಕ ಶಕ್ತಿ ಇರುವ ಮನುಷ್ಯರಲ್ಲಿ ಕೆಲ ದಿನಗಳು ಇದ್ದು, ನಿಧಾನವಾಗಿ ಸಾಯುತ್ತದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಜನರು ಕಡ್ಡಾಯವಾಗಿ ಪಾಲಿಸಿದಲ್ಲಿ ಈ ವೈರಾಣುವಿನ ವಿರುದ್ಧದ ಸಮರದಲ್ಲಿ ಜಯಿಸಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.