ADVERTISEMENT

ಕ್ಷೇಮ ಕುಶಲ: ಜೀವ, ಜೀವನ ಎರಡೂ ಮುಖ್ಯ

ರಮ್ಯಾ ಶ್ರೀಹರಿ
Published 25 ಆಗಸ್ಟ್ 2025, 23:30 IST
Last Updated 25 ಆಗಸ್ಟ್ 2025, 23:30 IST
   

ಬದುಕು ತಾಳ್ಮೆಯನ್ನು ಬೇಡುತ್ತದೆ. ಇಂದು ನಡೆದ ಘಟನೆಗಳು, ಅನುಭವಿಸಿದ ಭಾವಗಳು, ತೊಳಲಾಡಿಸಿದ ಆಲೋಚನೆಗಳು, ಕಾಡುವ ಪ್ರಶ್ನೆಗಳು, ಸಂದಿಗ್ಧತೆಗಳು - ಎಲ್ಲವೂ ‘ಇಂದೇ, ಈ ಕ್ಷಣವೇ ಅರ್ಥವಾಗಿಬಿಡಬೇಕು, ಬಗೆಹರಿದುಹೋಗಬೇಕು, ಮುಂದೇನು ಮಾಡುವುದೆಂದು ಸ್ಪಷ್ಟವಾಗಿ ಕಾಣಿಸಿಬಿಡಬೇಕು’ ಎನ್ನುವ ನಮ್ಮ ಆತುರವನ್ನು ಬದುಕು ಪುರಸ್ಕರಿಸುವುದಿಲ್ಲ.
ಈ ಜೀವನಕ್ಕೆ ಅದರದೇ ಆದ ನಡೆಯಿದೆ; ಆ ನಡೆಗೆ ಅನನ್ಯ ಲಾಲಿತ್ಯವಿದೆ. ನಾವು ಊಹಿಸದ ರೀತಿಯಲ್ಲಿ ಬದುಕು ಬಿಕ್ಕಟ್ಟುಗಳನ್ನು ತಂದಿಡುತ್ತದೆ; ಒಗಟಿನಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಹಾದಿಯಲ್ಲಿ ಬೆಲೆಕಟ್ಟಲಾಗದ ಜೀವನದ ತತ್ವಗಳನ್ನು ತಿಳಿಸಿಕೊಟ್ಟು, ನಮ್ಮ ಹೃದಯವನ್ನು ಪರಿಷ್ಕರಿಸಿ, ಹೊಸ ಒಳನೋಟಗಳನ್ನಿತ್ತು ಅಷ್ಟೇ ಅನೂಹ್ಯ ರೀತಿಯಲ್ಲಿ ಸಮಸ್ಯೆಗಳಿಂದ ಬಿಡುಗಡೆಯನ್ನೂ ಒದಗಿಸುತ್ತದೆ.

ಬದುಕು ಎಂದರೆ ಈಗ ಒದಗುತ್ತಿರುವ ‘ಅನುಭವ’ವಷ್ಟೇ ಅಲ್ಲ; ಆ ಅನುಭವವನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಯೂ ಹೌದು. ಅನುಭವವನ್ನು ಅರ್ಥೈಸಿಕೊಳ್ಳುವುದು ಎಂದರೆ ಹಿಂದೆ ಆಗಿಹೋದದ್ದರ ನೆನಪುಗಳನ್ನು, ಮುಂದೆ ಹೀಗಾಗಬೇಕು ಎನ್ನುವ ಬಯಕೆಗಳನ್ನು, ಇಂದು ಮನದಲ್ಲಿ ಏಳುತ್ತಿರುವ ಭಾವನೆಗಳ, ದೇಹದಲ್ಲಾಗುತ್ತಿರುವ ಸಂವೇದನೆಗಳ ಪ್ರವಾಹವನ್ನೂ, ಲೋಕದ ವಸ್ತುಸ್ಥಿತಿಯನ್ನೂ ಎಲ್ಲವನ್ನೂ ಒಟ್ಟು ಸೇರಿಸಿ ಮನನ ಮಾಡಿ ಸಂಸ್ಕರಿಸಿ ಪಾಕಗೊಳಿಸುವ ಕಾಯಕ. ನಾವು ಸುಮ್ಮನೇ ‘ಇದ್ದುಬಿಡ’ಲಾರೆವು ಪಶು, ಪಕ್ಷಿ, ಕೀಟಗಳಂತೆ, ಮರ, ಗಿಡ, ನದಿಗಳಂತೆ; ಆ ಇರುವಿಕೆಯನ್ನು ಕ್ಷಣಕ್ಷಣವೂ ಮನಸ್ಸಿನ, ಬುದ್ಧಿಯ, ಹೃದಯದ, ಆತ್ಮದ ಅನೇಕ ಚೌಕಟ್ಟುಗಳಿಗೆ ಒಳಪಡಿಸಿ ಅರ್ಥವನ್ನು, ಮೌಲ್ಯವನ್ನು, ಸೌಂದರ್ಯವನ್ನು ಮಥಿಸಿ ತೆಗೆದಾಗಲೇ ನಮ್ಮ ಇರುವಿಕೆಗೊಂದು ಘನತೆ.

 ಸಾವು-ಬದುಕು ಕೇವಲ ಭೌತಿಕವಷ್ಟೇ ಅಲ್ಲ, ಭಾವನಾತ್ಮಕವಾದದ್ದು. ಒಬ್ಬ ಸಂವೇದನಾಶೀಲ ಮನುಷ್ಯ ಹುಟ್ಟು-ಸಾವುಗಳನ್ನು ಭೌತಿಕ ಅಸ್ತಿತ್ವದ ಆದಿ ಅಂತ್ಯಗಳೆಂದು ಮಾತ್ರ ಭಾವಿಸುವುದಿಲ್ಲ, ಹಾಗೆ ಒಂದೇ ಹುಟ್ಟು ಒಂದೇ ಸಾವು ಎನ್ನುವುದೂ ಅವನ ನಿಲುವಲ್ಲ, ಪ್ರತಿಕ್ಷಣವೂ ಹೊಸಹುಟ್ಟು ಪಡೆಯುವ, ಪ್ರತಿಕ್ಷಣವೂ ರೂಪಾಂತರ ಹೊಂದುವ ಅನೇಕ ಸಾಧ್ಯತೆಗಳಿಗೆ ಅವನು ಸದಾ ತೆರೆದುಕೊಂಡಿರುತ್ತಾನೆ. ಮನುಷ್ಯನು ಕಾಲದ ಜೊತೆಗೆ ಪರಿಪಕ್ವಗೊಳ್ಳುವುದರಲ್ಲಿ, ಕಾಲದ ಚಿಕಿತ್ಸಕ ಗುಣದಲ್ಲಿ ನಂಬಿಕೆಯಿಟ್ಟಿರುವವನು; ಕಾಲ ಸಾಧ್ಯವನ್ನು ಅಸಾಧ್ಯವಾಗಿಸಿ, ಅಸಾಧ್ಯವನ್ನು ಸಾಧ್ಯವಾಗಿಸುವ ಮಹಾಮಂತ್ರಿಕ ಎಂಬ ಅರಿವಿರುವವನು. ಕಾರಣಾಂತರಗಳಿಂದ ಇಂದು ನಮಗೆ ಬದುಕು ಅರ್ಥಹೀನ, ಬಲು ಕಠಿಣ, ನಿರ್ದಯಿ ಎಂದೆಲ್ಲಾ ಅನಿಸುತ್ತಿರಬಹುದು, ಹಾಗೆ ಎಲ್ಲರಿಗೂ ಒಂದಲ್ಲ ಒಂದು ಕ್ಷಣದಲ್ಲಿ ಅನಿಸುವುದು ಸಹಜ; ಆದರೆ ಅದು ಶಾಶ್ವತ ಸ್ಥಿತಿಯಲ್ಲ. ಇಂದು ದೊಡ್ಡ ಪರ್ವತದಂತೆ ನಮ್ಮ ಮುಂದಿರುವ ಸವಾಲುಗಳು ಇನ್ನು ಕೆಲವೇ ದಿನಗಳಲ್ಲಿ ಬಲು ಕ್ಷುಲ್ಲಕ ಎನಿಸಲೂಬಹುದು.

ADVERTISEMENT

ನಮ್ಮ ಬದುಕು ನಿಜಕ್ಕೂ ಪರಿವರ್ತನೆಯಾಗುವುದು ನಾವು ಎಣಿಸಿದ್ದೆಲ್ಲಾ ನಡೆದಾಗಲಲ್ಲ, ನಾವು ಆಸೆಪಟ್ಟಿದ್ದನ್ನೆಲ್ಲಾ ಹೊಂದಿದಾಗ, ಸಾಧಿಸಿದಾಗಲೂ ಅಲ್ಲ; ಅಥವಾ ಆಳವಾದ ಧ್ಯಾನದ ಘಳಿಗೆಗಳಲ್ಲೋ, ಆಧ್ಯಾತ್ಮಿಕ ಪ್ರವಚನ, ಪ್ರವಾಸದಲ್ಲಿದ್ದಾಗಲೂ ಅಲ್ಲ. ತೀವ್ರ ಸಂಘರ್ಷದ ಸಮ್ಮುಖದಲ್ಲಿ, ನಮ್ಮ ನಂಬಿಕೆಗಳು ಮಾನಸಿಕ ಆಸರೆಗಳೆಲ್ಲಾ ಮಣ್ಣುಪಾಲಾಗಿ, ದಿಕ್ಕೇತೋಚದಂತಹ, ಇನ್ನು ಬದುಕೇ ಮುಗಿದು ಹೋಯಿತೆನ್ನುವ ಭ್ರಮನಿರಸನದ ಸಂಕಟದ ಸಮಯದಲ್ಲೂ ಆ ಕ್ಷಣದ ಅಸಹಾಯಕತೆಗೆ ಶರಣಾಗದೆ, ಬದುಕಿನಿಂದ ಓಡಿಹೋಗದೇ, ನಮ್ಮ ಬುದ್ಧಿ–ವಿವೇಕಗಳು ಉದ್ವಿಗ್ನತೆಯ ವಶವಾಗದಂತೆ ಪ್ರೀತಿ ಮತ್ತು ಸಮತ್ವದ ಕೈಗೊಪ್ಪಿಸಿ, ಜೀವನದ ಬಗೆಗೆ ಆಶ್ಚರ್ಯ, ಕುತೂಹಲಗಳನ್ನುಳಿಸಿಕೊಂಡು ಬದುಕಿನ ಎಲ್ಲವನ್ನೂ ಸ್ವೀಕರಿಸುವ ದಿಟ್ಟ ನಿರ್ಧಾರ ಕೈಗೊಂಡಾಗ ಮಾತ್ರ ಬದುಕು ನಿಜಕ್ಕೂ ಪರಿವರ್ತನೆಯಾಗುತ್ತದೆ.

ಬದುಕು ಬದಲಾಗಲಿ ನಂತರ ಬದುಕಿನ ಬಗೆಗಿನ ಭಾವವನ್ನು ಬದಲಾಯಿಸಿಕೊಳ್ಳುವೆ – ಎನ್ನುವ ನಮ್ಮ ಹಠವನ್ನು ಸ್ವಲ್ಪ ಬದಿಗಿರಿಸಿ, ಬದುಕಿನ ಬಗೆಗಿನ ಭಾವವನ್ನು ಬದಲಾಯಿಸಿಕೊಂಡು ನೋಡಿದಾಗ ಬದುಕು ಬದಲಾಗುವುದು ಖಂಡಿತ. ಬದುಕೆಂದರೆ ಕೇವಲ ಹೊರಪ್ರಪಂಚದ ಆಗುಹೋಗುಗಳಲ್ಲ, ಆ ಆಗುಹೋಗುಗಳನ್ನು ನಾವು ಸ್ವೀಕರಿಸುವ ರೀತಿ. ನಮ್ಮ ಒಳಪ್ರಪಂಚದ ಸ್ಥಿತಿಗತಿಯೇ ನಮ್ಮ ಹೊರಪ್ರಪಂಚದ ಆಗುಹೋಗುಗಳನ್ನು ಅರ್ಥೈಸಿಕೊಳ್ಳುವ ಸಾಧನೆ ಸಲಕರಣೆಗಳನ್ನು ನೀಡುವುದು ಎಂದಾದರೆ ನಮ್ಮ ಒಳಪ್ರಪಂಚದ ಸೌಖ್ಯ–ಸಮಾಧಾನಗಳೇ ನಮ್ಮ ಹೊರಪ್ರಪಂಚದ ತಾಪವನ್ನು, ನಷ್ಟಗಳನ್ನು ಭರಿಸುವ ಶಕ್ತಿ ನೀಡುವುದಲ್ಲವೇ?

ಮುಚ್ಚಿದ ಬಾಗಿಲುಗಳನ್ನು ಬಡಿಯುತ್ತಾ, ಯಾರೋ ಅದನ್ನು ತೆರೆಯುತ್ತಿಲ್ಲವೆಂದು ಕೊರಗುತ್ತಾ ಇರುವ ಬದಲು ಕಿಟಕಿಗಳಿಂದ ಕಾಣುವ ನೋಟವನ್ನು ಆಸ್ವಾದಿಸಬಹುದು. ಮುಚ್ಚಿದ ಬಾಗಿಲು ತೆರೆಯುವುದೊಂದೇ ಬಿಡುಗಡೆಯ ದಾರಿಯಲ್ಲ; ನೆಲವನ್ನು ಬಗೆದು ತೆಗೆಯುವ ಸುರಂಗಮಾರ್ಗವೂ, ನಮ್ಮನ್ನು ಸೀಮಿತಗೊಳಿಸುವ ಗೋಡೆ–ಸೂರುಗಳನ್ನು ಒಡೆದು ಜಿಗಿದು ಹೊರ ಬರುವ ಮಾರ್ಗಗಳೂ ಬಿಡುಗಡೆಯ ಹಾದಿಗಳೇ ಹೌದು ಎನ್ನುವುದನ್ನು ಅರಿತಾಗ ಬದುಕು ಒಡ್ಡುವ ಅಸಂಖ್ಯ ಅವಕಾಶಗಳು ಬದುಕಿನ ಬಗೆಗೆ ಭರವಸೆ ಮೂಡಿಸುತ್ತವೆ. ಬದುಕು ನಮ್ಮನ್ನು ನಾವೇ ಬಂಧಿಸಿಕೊಂಡಿರುವ ಗೋಡೆಗಳನ್ನು, ಬೇಲಿಗಳನ್ನು ಒಡೆದು ಕೆಡವಲು ಸದಾ ಪ್ರೇರೇಪಿಸುತ್ತಿರುತ್ತದೆ. ನಮ್ಮ ಸುತ್ತಾ ನಾವೇ ಕಟ್ಟಿಕೊಂಡಿರುವ ಸೆರೆಮನೆಯಿಂದ, ನಮ್ಮ ಕಣ್ಣನ್ನು ಮುಚ್ಚಿರುವ ಕಟ್ಟಿನಿಂದ ಮುಕ್ತರಾಗಬೇಕಷ್ಟೇ. ಅದರ ನಂತರ ಬದುಕೆಷ್ಟು ಅನಾದಿ, ಅನಂತ ಎನ್ನುವುದರ ದರ್ಶನವಾಗುತ್ತದೆ.

ಕಡೆಗೂ ಈ ಜೀವನ ನಮ್ಮನ್ನು ನಮ್ಮ ಬಳಿಯೇ ಕರೆದುಕೊಂಡು ಹೋಗುತ್ತದೆ. ಜೀವನದ ಎಲ್ಲಾ ಮಾರ್ಗಗಳೂ ಅಂತರಂಗದ ಕಡೆಗೇ ಹೌದು. ಒಳಲೋಕವೊಂದು ಸಿಂಗಾರಗೊಂಡಿದ್ದರೆ, ಸಮೃದ್ಧವಾಗಿದ್ದರೆ ಸರಿ; ಹೊರಗಿನ ಆಡಂಬರ ಇದ್ದರೂ ಇಲ್ಲದಿದ್ದರೂ ನಡೆದೀತು. ಆಂತರ್ಯದ ಶಾಂತಿ, ಸಮಾಧಾನ ಬಾಹ್ಯದಲ್ಲಿ ಪ್ರತಿಫಲನಗೊಳ್ಳದೇ ಇರದು. ನಾವು ಆಸೆಪಡುವ ಎಲ್ಲವೂ ನಮ್ಮೊಳಗೇ ಇದೆ. ಅದು ಹಾಗೆ ನಮ್ಮೊಳಗೇ ಇರುವುದರಿಂದಲೇ ಅದರ ಮೇಲೆ ಅದಮ್ಯ ಮೋಹ ಉಂಟಾಗಿರುತ್ತದೆ. ನಾವು ಯಾವುದೋ ಸ್ಥಿತಿಯನ್ನು, ಸಾಧನೆಯನ್ನು, ಪ್ರೀತಿಯನ್ನು ಹುಡುಕಿ ಹೊರಡುತ್ತೇವೆ, ಅಲೆದು ಬಳಲುತ್ತೇವೆ, ಅದು ನಮ್ಮ ಭಾಗ್ಯದಲ್ಲಿಲ್ಲವಲ್ಲ ಎಂದು ನರಳುತ್ತೇವೆ. ನಾವು ಹುಡುಕುತ್ತಿರುವುದು ಸಿಕ್ಕಿಬಿಡಬಾರದೇ, ಆ ಪ್ರೀತಿ ಕೈಗೂಡಿಬಿಡಬಾರದೇ ಎಂದು ಹೃದಯ ಬಿರಿಯುವಂತೆ ಅತ್ತು ಪ್ರಾರ್ಥಿಸುತ್ತೇವೆ. ಆದರೆ ನಾವು ಯಾವುದಕ್ಕೆ ಆರ್ತರಾಗಿ ಮೊರೆಯಿಟ್ಟು ಕನಲುತ್ತಿರುವೆವೋ ಅದು ಮಾತ್ರ ಮೌನವಾಗಿ, ಬೆಚ್ಚಗೆ, ನಮ್ಮದೇ ನಿರೀಕ್ಷೆಯಲ್ಲಿ ನಮ್ಮೊಳಗೇ ಕುಳಿತು ಕಾಯುತ್ತಿರುತ್ತದೆ.

ನಾವು ಹುಡುಕಿ ಹೊರಟದ್ದು ಹೊರಗೆಲ್ಲೂ ನಮಗೆಂದಿಗೂ ಸಿಗದಿರುವ ಹಿಂದಿನ ಉದ್ದೇಶ ಇದೇ ಇರಬಹುದು: 'ನಮ್ಮನ್ನು ಮತ್ತೆ ನಮಗೇ ಮರಳಿಸಿ ಕೊಡುವುದು’. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.